ಕೋಲಾರದಲ್ಲಿ RTO ಅಧಿಕಾರಿಗಳ ಭರ್ಜರಿ ಬೇಟೆ; 32 ಖಾಸಗಿ ಬಸ್​ಗಳು ಸೀಜ್

ಕೋಲಾರದಲ್ಲಿ ಅಂತಾರಾಜ್ಯ ಖಾಸಗಿ ಬಸ್‌ಗಳಿಗೆ ಸಾರಿಗೆ ಇಲಾಖೆ ಶಾಕ್ ನೀಡಿದ್ದು, RTO ಅಧಿಕಾರಿಗಳು 32 ಖಾಸಗಿ ಬಸ್‌ಗಳನ್ನು ಜಪ್ತಿ ಮಾಡಿದ್ದಾರೆ. ತೆರಿಗೆ ವಂಚನೆ, ಸುರಕ್ಷತಾ ಸಾಧನಗಳ ಕೊರತೆ, FC ಇಲ್ಲದಿರುವುದು ಹಾಗೂ ತುರ್ತು ನಿರ್ಗಮನ ದ್ವಾರಗಳಿಲ್ಲದಿರುವಿಕೆ ಸೇರಿದಂತೆ ಹಲವು ನಿಯಮ ಉಲ್ಲಂಘನೆಗಳು ಪತ್ತೆಯಾಗಿವೆ. ಒಂದು ಕೋಟಿಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ.

ಕೋಲಾರದಲ್ಲಿ RTO ಅಧಿಕಾರಿಗಳ ಭರ್ಜರಿ ಬೇಟೆ; 32 ಖಾಸಗಿ ಬಸ್​ಗಳು ಸೀಜ್
ಕೋಲಾರದಲ್ಲಿ RTO ಅಧಿಕಾರಿಗಳ ಭರ್ಜರಿ ಬೇಟೆ; 32 ಖಾಸಗಿ ಬಸ್​ಗಳು ಸೀಜ್
Updated By: ಭಾವನಾ ಹೆಗಡೆ

Updated on: Nov 27, 2025 | 8:30 AM

ಕೋಲಾರ, ನವೆಂಬರ್ 27: 20 ಜೀವ ಬಲಿ ಪಡೆದ ಆಂಧ್ರದ ಕರ್ನೂಲು ಬಸ್‌ ದುರಂತದ (Andhra Pradesh bus tragedy) ಬಳಿಕ ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಅಂತಾರಾಜ್ಯ ಖಾಸಗಿ ಬಸ್‌ಗಳಿಗೆ ಕೋಲಾರದಲ್ಲಿ RTO ಅಧಿಕಾರಿಗಳು ಶಾಕ್‌ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಆಂಧ್ರ, ತಮಿಳುನಾಡು ಸೇರಿ ವಿವಿಧ ರಾಜ್ಯಗಳಿಗೆ ಸಂಚರಿಸುತ್ತಿದ್ದ ಹಲವು ಖಾಸಗಿ ಟ್ರಾವಲ್ಸ್‌ಗಳ ಬಸ್‌ಗಳನ್ನು ಸೀಜ್ ಮಾಡಿದ್ದಾರೆ.

ಕೋಟಿಗಟ್ಟಲೆ ದಂಡ ವಸೂಲಿ

RTO ಅಧಿಕಾರಿಗಳು ಕೋಲಾರದಲ್ಲಿ ಬುಧವಾರ (ನ.26) ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದು, 32 ಖಾಸಗಿ ಬಸ್​ಗಳನ್ನು ಜಪ್ತಿ ಮಾಡಿದ್ದಾರೆ. ರಾಜ್ಯದ ತೆರಿಗೆ ಪಾವತಿಸದಿರುವುದು, ಸುರಕ್ಷತಾ ಸಾಧನಗಳ ಕೊರತೆ, ಎಫ್‌ಸಿ ಇಲ್ಲದಿರುವುದು, ತುರ್ತು ನಿರ್ಗಮ ದ್ವಾರಗಳು ಇಲ್ಲದಿರುವುದು ಸೇರಿ ಬಸ್​​ಗಳು ಪರವಾನಿಗೆ ಇರದೆ ನಿಯಮ ಉಲ್ಲಂಘಿಸಿರುವುದು ದಾಳಿ ವೇಳೆ ಕಂಡು ಬಂದವು. 32 ವಿವಿಧ ಕಂಪನಿಗೆ ಸೇರಿದ ಮಲ್ಟಿಎಕ್ಸೆಲ್, ಸ್ಲೀಪರ್‌ ಕೋಚ್, ಐಷಾರಾಮಿ ಎಸಿ ಟ್ರಾವಲ್ಸ್‌ ಬಸ್‌ಗಳನ್ನ ಜಪ್ತಿ ಮಾಡಲಾಗಿದ್ದು, ಜಂಟಿ ಸಾರಿಗೆ ಆಯುಕ್ತರಾದ ಗಾಯತ್ರಿದೇವಿ ನೇತೃತ್ವದಲ್ಲಿ 15 ಅಧಿಕಾರಿಗಳ 4 ತಂಡ ನಿಯಮ ಉಲ್ಲಂಘಿಸಿದವರಿಂದ 1ಕೋಟಿಗೂ ಅಧಿಕ ದಂಡ ವಸೂಲಿ ಮಾಡಿದ್ದಾರೆ.

ಇದನ್ನೂ ಓದಿ ಕರ್ನೂಲ್ ಬಸ್ ದುರಂತ: ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ಹೇಗೆ? ಅಸಲಿ ಕಾರಣವೇನು?

ಖಾಸಗಿ ಬಸ್‌ಗಳ ಪರಿಶೀಲನೆ ವೇಳೆ ಸಾಕಷ್ಟು ಲೋಪಗಳು ಕಂಡು ಬಂದಿದ್ದು, ಪ್ರಯಾಣಿಕರು ಅಸಮಾಧಾನದಿಂದಲೇ KSRTC ಬಸ್‌ಗಳಿಗೆ ವರ್ಗಾವಣೆಯಾಗಿದ್ದಾರೆ. ಮತ್ತೊಂದೆಡೆ ಅಧಿಕಾರಿಗಳ ದಾಳಿಗೆ ಖಾಸಗಿ ಟ್ರಾವೆಲ್ಸ್‌ ಕಿಡಿಕಾರಿದ್ದು, ದಾಳಿ ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.