ಕರ್ನೂಲ್ ಬಸ್ ದುರಂತ: ಎಚ್ಚೆತ್ತ ರಾಜ್ಯ ಸರ್ಕಾರ; 4 ನಿಗಮಗಳಿಗೆ ಮಹತ್ವದ ಸೂಚನೆ
ಆಂಧ್ರ ಪ್ರದೇಶದ ಕರ್ನೂಲ್ ಸಮೀಪ ಬಸ್ ದುರಂತದ ಬೆನ್ನಲ್ಲೇ ಕರ್ನಾಟಕ ಸರ್ಕಾರವೂ ಎಚ್ಚೆತ್ತುಕೊಂಡಿದೆ. ರಾಜ್ಯದ ಎಲ್ಲಾ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿರುವ ಸುರಕ್ಷತಾ ಕ್ರಮಗಳ ಕುರಿತು ಪರಿಶೀಲಿಸುವಂತೆ ನಾಲ್ಕೂ ನಿಗಮಗಳ ಎಂಡಿಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದಿದ್ದಾರೆ. ಪ್ರಯಾಣಿಕರ ಸುರಕ್ಷತೆ ನಮ್ಮ ಪ್ರಥಮ ಆದ್ಯತೆ ಎಂದು ಸಚಿವರು ತಿಳಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 26: ಆಂಧ್ರ ಪ್ರದೇಶದ ಕರ್ನೂಲ್ ಸಮೀಪ ಅಗ್ನಿ ದುರಂತದಿಂದ ಖಾಸಗಿ ಬಸ್ ಸುಟ್ಟು ಕರಕಲಾಗಿ ಹಲವರು ಸಾವನ್ನಪ್ಪಿರುವ ಬೆನ್ನಲ್ಲೇ, ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದೆ. ಸಾರಿಗೆ ಬಸ್ಗಳಲ್ಲಿನ ಸುರಕ್ಷತಾ ಕ್ರಮದ ಪರಿಶೀಲನೆಗೆ ಮುಂದಾಗಿದ್ದು, ಈ ಬಗ್ಗೆ ನಾಲ್ಕೂ ನಿಗಮಗಳ ಎಂಡಿಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಪತ್ರ ಬರೆದಿದ್ದಾರೆ. ರಾಜ್ಯದ ಎಲ್ಲಾ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿರುವ ಸುರಕ್ಷತಾ ಕ್ರಮಗಳ ಕುರಿತು ಪರಿಶೀಲಿಸುವಂತೆ ಸೂಚಿಸಿದ್ದಾರೆ.
ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಮುಖ್ಯಸ್ಥರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರದ ಮೂಲಕ ಒಂದಿಷ್ಟು ಸಲಹೆ, ಸೂಚನೆ ನೀಡಿದ್ದಾರೆ. ಪ್ರಯಾಣಿಕರ ಸುರಕ್ಷತೆ ನಮ್ಮ ಪ್ರಥಮ ಆದ್ಯತೆ ಎಂದು ಸಚಿವರು ತಿಳಿಸಿದ್ದು, ಪ್ರಾಣ ಹಾನಿಗೆ ಯಾವುದೇ ರೀತಿಯಿಂದಲೂ ನಷ್ಟ ಭರಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಕೂಡಲೇ ಬಸ್ಸುಗಳಲ್ಲಿನ ಸುರಕ್ಷತಾ ಆಡಿಟ್ ಪರಿಶೀಲನೆಗೆ ತಂಡಗಳನ್ನು ರಚಿಸಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನೂಲ್ ಬಸ್ ದುರಂತದಲ್ಲಿ 20 ಜನರ ಸಜೀವದಹನ; ಬೈಕ್ನ ಕಿಡಿಯೇ ಬೆಂಕಿ ಅವಘಡಕ್ಕೆ ಕಾರಣ
ಸಾರಿಗೆ ಸಚಿವರ ಸೂಚನೆ ಏನು?
- ಬಸ್ಸುಗಳಲ್ಲಿ ಯಾವುದೇ ವಾಣಿಜ್ಯ ಸರಕು ಅಥವಾ ಲಗೇಜ್ ಸಾಗಿಸುವ ಸಂದರ್ಭದಲ್ಲಿ ಬೆಂಕಿ ಸ್ಪರ್ಶಕ್ಕೆ ಸರಳವಾಗಿ ಉರಿಯುವ ಅಥವಾ ಇತರೆ ಸ್ಫೋಟಕ ವಸ್ತುಗಳನ್ನು ಸಾಗಿಸದಂತೆ ನಿಗಾವಹಿಸಬೇಕು.
- ಎಲ್ಲಾ ಎಸಿ ಬಸ್‌ಗಳಲ್ಲಿ ತುರ್ತು ಸಂದರ್ಭಗಳಲ್ಲಿ ಕಿಟಕಿಗಳನ್ನು ಒಡೆಯಲು ಸುತ್ತಿಗೆಗಳು ಕಡ್ಡಾಯವಾಗಿರಬೇಕು.
- ಲಗೇಜ್ ಸಾಗಿಸುವ ಜಾಗದಲ್ಲಿ ಯಾವುದೇ ವ್ಯಕ್ತಿ ಮಲಗಲು ಅವಕಾಶ ನೀಡಬಾರದು.
- ಬಸ್ಸುಗಳ ನವೀಕರಣದ ಬಗ್ಗೆ ಪರಿಶೀಲನೆ ನಡೆಸಬೇಕು.
- ಈ ಮೇಲಿನ ಯಾವುದೇ ನೂನ್ಯತೆ ಕಂಡು ಬಂದರೂ ನಿರ್ದಾಕ್ಷಿಣ್ಯವಾಗಿ ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು.
ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಅಕ್ಟೋಬರ್ 24ರಂದು ನಸುಕಿನ ಜಾವ ಆಂಧ್ರಪ್ರದೇಶದ ಕರ್ನೂಲು ಬಳಿ ಸುಟ್ಟು ಭಸ್ಮವಾಗಿತ್ತು. ಬೈಕ್ಗೆ ಡಿಕ್ಕಿಯಾದ ಬಳಿಕ ಏಕಾಏಕಿ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆ ಇಡೀ ಬಸ್ಗೆ ವಾಪಿಸಿತ್ತು. ಬಸ್ನಲ್ಲಿಪ್ರಯಾಣಿಸುತ್ತಿದ್ದ ಒಟ್ಟು 46 ಮಂದಿ ಪ್ರಯಾಣಿಕರ ಪೈಕಿ, 19 ಪ್ರಯಾಣಿಕರು ಮತ್ತು ಬೈಕ್ ಸವಾರ ಸಜೀವ ದಹನವಾಗಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:25 pm, Sun, 26 October 25



