
ಕೋಲಾರ, ಅಕ್ಟೋಬರ್ 28: ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ರೈತರು ಹಾಗೂ ಅರಣ್ಯ ಇಲಾಖೆ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಹೀಗಿರುವಾಗ ಇಂದು ಇಬ್ಬರ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತುವರಿದಾರರು ಹಾಗೂ ಕೆಲ ರೈತರು ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಅರಣ್ಯ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಅರಣ್ಯ ಸಿಬ್ಬಂದಿಗಳಿಗೆ ರಕ್ಷಣೆ ಇಲ್ಲವಾ ಎನ್ನುವ ಪ್ರಶ್ನೆ ಮೂಡಿದೆ. ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಕೋಲಾರ ಜಿಲ್ಲೆಯಲ್ಲಿ ರೈತರು ಹಾಗೂ ಅರಣ್ಯ ಇಲಾಖೆ ನಡುವೆ ಸಂಘರ್ಷ ನಡೆಯುತ್ತಲಿದೆ. ಅರಣ್ಯ ಇಲಾಖೆ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿರುವ ಒತ್ತುವರಿದಾರರು ಹಾಗೂ ರೈತರು, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ನಡುವೆ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಮಲ್ಲಂಪಲ್ಲಿ ಗ್ರಾಮದ ಸರ್ವೆ ನಂ 35ರಲ್ಲಿನ ಅರಣ್ಯ ಇಲಾಖೆಗೆ ಸೇರಿದ ಜಾಗ 296 ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆ ಇಂದು ಗಿಡಗಳನ್ನು ನೆಡಲು ಮುಂದಾದ ವೇಳೆ ಗ್ರಾಮದ ಚಲಪತಿ ಎಂಬುವವರು ಅರಣ್ಯ ಇಲಾಖೆ ಸಿಬ್ಬಂದಿಯ ಕೆಲಸಕ್ಕೆ ಅಡ್ಡಿಪಡಿಸಿದ್ದು, ಅಷ್ಟೇ ಅಲ್ಲದೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮಚ್ಚು ತೋರಿಸಿ ಬೆದರಿಸಿದ್ದಾರೆ.
ಇದನ್ನೂ ಓದಿ: ಪಶು ಆಹಾರದಲ್ಲಿ ಎಂ.ಸ್ಯಾಂಡ್ ಮಿಶ್ರಣ? ಹಣಕ್ಕಾಗಿ ಮೂಕ ಜೀವಗಳಿಗೆ ಮಣ್ಣು ತಿನ್ನಿಸಿದ್ರಾ ಅಧಿಕಾರಿಗಳು?
ಮಚ್ಚು ಪಡೆಯಲು ಹೋದ ವೇಳೆ ಅಲ್ಲಿದ್ದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದು, ಈ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ಸೋಮಶೇಖರ್, ಜಮೀರ್ ಮತ್ತು ನವೀನ್ ಎಂಬುವರ ಕೈಗಳಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಹಲ್ಲೆ ಮಾಡಿದ ಆರೋಪಿ ಚಲಪತಿ ಎಂಬುವನನ್ನು ಶ್ರೀನಿವಾಸಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಕಳೆದೊಂದು ವಾರದಿಂದ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ನೆಲವಂಕಿ ಹೊಬಳಿಯ ಉಪ್ಪರಪಲ್ಲಿ ಗ್ರಾಮ, ಮಲ್ಲಂಪಲ್ಲಿ ಗ್ರಾಮ, ಎ.ಎಂ.ಪಲ್ಲಿ ಸೇರಿದಂತೆ ಹಲವೆಡೆ ಅರಣ್ಯ ಇಲಾಖೆ ತಮ್ಮ ಜಾಗದಲ್ಲಿ ಗಿಡನೆಡುವ ಕೆಲಸಕ್ಕೆ ಮುಂದಾಗಿದೆ. ಜೊತೆಗೆ ಹಲವೆಡೆ ಒತ್ತುವರಿ ತೆರವು ಕಾರ್ಯಕ್ಕೂ ಮುಂದಾಗಿದೆ. ಹೀಗಿರುವಾಗ ಕೆಲ ಒತ್ತುವರಿದಾರರು ಹಾಗೂ ರೈತರು, ಅರಣ್ಯ ಇಲಾಖೆ ಕಾರ್ಯಕ್ಕೆ ಅಡ್ಡಿಪಡಿಸಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸರ ನೆರವಿನಿಂದ ಒತ್ತುವರಿ ತೆರವು ಕಾರ್ಯ ಹಾಗೂ ಗಿಡ ನೆಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಇಂದು ಬೆಳ್ಳಂಬೆಳಿಗ್ಗೆ ಮಲ್ಲಂಪಲ್ಲಿ ಗ್ರಾಮದ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಗಿಡ ನೆಡಲು ಮುಂದಾದ ವೇಳೆ ಅವರ ಕಾರ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಅವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ.
ಸದ್ಯ ಈ ವೇಳೆ ಸ್ಥಳಕ್ಕೆ ಸಿಪಿಎಂ ಮುಖಂಡರು, ದಲಿತ ಸಂಘಟನೆಯ ಕೆಲವು ಮುಖಂಡರು ಹಾಗೂ ರೈತ ಸಂಘಟನೆಯ ಕೆಲವು ಮುಖಂಡರು ಭೀಟಿ ನೀಡಿ ‘ಅರಣ್ಯ ಇಲಾಖೆ ಅಕ್ರಮವಾಗಿ ಅರಣ್ಯ ಒತ್ತವರಿ ಹೆಸರಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ಹತ್ತಾರು ವರ್ಷಗಳಿಂದ ರೈತರು ಇಲ್ಲಿ ಉಳುಮೆ ಮಾಡಿಕೊಂಡು ಬದುಕುತ್ತಿದ್ದಾರೆ. ಅವರ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ಮಾಡುತ್ತಿದೆ’ ಎಂದು ಅರೋಪಿಸಿದ್ದಾರೆ. ಅಲ್ಲದೆ ಅರಣ್ಯ ಇಲಾಖೆ ಸರ್ಕಾರದ ಆದೇಶ ಬರುವವರೆಗೂ ಜಂಟಿ ಸರ್ವೆ ಮಾಡುವವರೆಗೂ ಒತ್ತುವರಿ ತೆರವು ಮಾಡದಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕೊಲೆ, ಅನುಮಾನಾಸ್ಪದ ಸಾವುಗಳಿಂದ ಬೆಚ್ಚಿಬಿದ್ದಿದ್ದ ಕೋಲಾರ ಜನತೆಗೆ ರಿಲೀಫ್: ಅಕ್ರಮ ಕಲ್ಲುಗಣಿಗಾರಿಕೆಗೆ ತಕ್ಷಣದಿಂದಲೇ ಬ್ರೇಕ್
ರಾಜ್ಯ ಅರಣ್ಯ ಸಚಿವರ ತವರು ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಹಾಗೂ ರೈತರ ನಡುವಿನ ಸಂಘರ್ಷ ತಾರಕಕ್ಕೇರಿದೆ. ಇದಕ್ಕ ಅರಣ್ಯ ಸಚಿವರೇ ಸೂಕ್ತ ಪರಿಹಾರ ಒದಗಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.