ಪಶು ಆಹಾರದಲ್ಲಿ ಎಂ.ಸ್ಯಾಂಡ್ ಮಿಶ್ರಣ? ಹಣಕ್ಕಾಗಿ ಮೂಕ ಜೀವಗಳಿಗೆ ಮಣ್ಣು ತಿನ್ನಿಸಿದ್ರಾ ಅಧಿಕಾರಿಗಳು?
ಕೋಲಾರದಲ್ಲಿ ಕೆಎಂಎಫ್ ಪೂರೈಸುವ ಪಶು ಆಹಾರ ಕಳಪೆಯಾಗಿದ್ದು, ಮಣ್ಣು ಮರಳು ಮಿಶ್ರಣ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕಳಪೆ ಆಹಾರ ಸೇವಿಸಿದ ಹಸುಗಳು ಭೇದಿಯಿಂದ ಬಳಲುತ್ತಿದ್ದು, ಕೆಲವು ಸಾವನ್ನಪ್ಪಿವೆ. ಕೂಡಲೇ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಶಾಸಕರು ಮತ್ತು ರೈತರು ಆಗ್ರಹಿಸಿದ್ದಾರೆ.

ಮುಖ್ಯಾಂಶಗಳು
- ಕೆಎಂಎಫ್ನಿಂದ ಕೊಡುತ್ತಿರುವ ಪಶು ಆಹಾರ ಕಳಪೆ ಆರೋಪ
- ಕ್ಯಾಟಲ್ ಪೀಡ್ ತಿಂದು ಹಸುಗಳು ಭೇದಿಯಿಂದ ಸಾವನ್ನಪ್ಪಿರುವ ಕುರಿತು ದೂರುಗಳು
- ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರು ಆಗ್ರಹ
ಕೋಲಾರ, ಅಕ್ಟೋಬರ್ 11: ಕೆಎಂಎಫ್ನಿಂದ ರೈತರಿಗೆ ಪೂರೈಕೆ ಮಾಡುತ್ತಿರುವ ಕ್ಯಾಟಲ್ ಪೀಡ್ ಅಥವಾ ಪಶು ಆಹಾರ ಕಳಪೆಯಾಗಿದೆ. ಪಶು ಆಹಾರದಲ್ಲಿ ಮರಳು ಮಿಶ್ರಣ ಮಾಡಿಕೊಡಲಾಗುತ್ತಿದೆಯಾ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಆಹಾರ ಸೇವಿಸಿದ ಕೆಲ ಹಸುಗಳು ಭೇದಿಯಿಂದ ಬಳಲುತ್ತಿವೆ. ಇನ್ನೂ ಕೆಲವು ಹಸುಗಳು ಸಾವನ್ನಪ್ಪಿರುವ ಬಗ್ಗೆ ದೂರುಗಳು ಬಂದಿದ್ದು, ತನಿಖೆಗೆ ಆಗ್ರಹಿಸಲಾಗಿದೆ.
ಪಶು ಆಹಾರದಲ್ಲಿ ಎಂ-ಸ್ಯಾಂಡ್ ಮಿಶ್ರಣ ಆರೋಪ
ಕೋಲಾರ ಜಿಲ್ಲೆಯಲ್ಲಿ ಹೈನುಗಾರಿಕೆಯನ್ನ ನಂಬಿ ಲಕ್ಷಾಂತರ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಪ್ರತಿನಿತ್ಯ ಕೋಲಾರ ಹಾಲು ಒಕ್ಕೂಟದಲ್ಲಿ ಸುಮಾರು 8 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಹೀಗಿರುವಾಗ ಕೆಎಂಎಫ್ ಪೂರೈಸುತ್ತಿರುವ ಪಶು ಆಹಾರದಲ್ಲಿ ಎಂ-ಸ್ಯಾಂಡ್ ಮಿಶ್ರಣ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ಟಿವಿ9 ವರದಿ ಬಳಿಕ ನಾಲ್ವರು ಅಧಿಕಾರಿಗಳ ಅಮಾನತು
ಅಲ್ಲದೆ ಪಶುಗಳಿಗೆ ಸರಬರಾಜು ಮಾಡುತ್ತಿರುವ ಪಶು ಆಹಾರ ತೀರ ಕಳಪೆಯಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನಲ್ಲಿ ಕಳೆದ 8ರಿಂದ 9 ದಿನಗಳಿಂದ ಕಳಪೆ ಪಶು ಆಹಾರ ಸೇವಿಸಿ ಭೇದಿಯಿಂದ ಹಸುಗಳು ನರಳತ್ತಿದ್ದು, ಕೆಲವು ಹಸುಗಳು ಮೃತಪಟ್ಟಿರುವ ವರದಿಗಳು ಕೇಳಿಬಂದಿದೆ. ಪಶು ಆಹಾರದ ಮೂಟೆಗಳಲ್ಲಿ ಸುಮಾರು 4ರಿಂದ 5 ಕೆಜಿ ಮರಳು ಮಿಶ್ರಣ ಮಾಡಿ ಕಳುಹಿಸಲಾಗಿದೆ. ಇದರಿಂದ ಮೂಕ ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.
ಎಚ್ಚರಿಕೆ ನೀಡಿದ ಶಾಸಕ ಸಮೃದ್ದಿ ಮಂಜುನಾಥ್
‘ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರು ಕೂಡಲೇ ಮಧ್ಯಪ್ರವೇಶಿಸಿ ಪರಿಶೀಲನೆ ನಡೆಸಬೇಕು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳದಿದ್ದರೆ, ರೈತರು ಕಳಪೆ ಪಶು ಆಹಾರದ ಮೂಟೆಗಳನ್ನು ಡೈರಿಗಳ ಮುಂದೆ ತಂದು ಹಾಕಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಮುಳಬಾಗಲು ಶಾಸಕ ಸಮೃದ್ದಿ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
ಇನ್ನು ಸಾದಲಿ ಹೋಬಳಿಯಲ್ಲಿರುವ ಪಶು ಆಹಾರ ತಯಾರಿಕಾ ಘಟಕದಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟಗಳಿಗೆ ಪೂರೈಕೆಯಾಗುತ್ತಿರುವ ಪಶು ಆಹಾರದ ಗುಣಮಟ್ಟದ ಬಗ್ಗೆಯೂ ದೂರುಗಳು ಈಗಾಗಲೇ ಕೇಳಿಬಂದಿವೆ. ಪಶು ಆಹಾರದಲ್ಲಿ ಇರಬೇಕಾದ ಪೋಷಕಾಂಶಗಳ ಪ್ರಮಾಣ ನಿಗದಿತ ಮಟ್ಟದಲ್ಲಿ ಇಲ್ಲ, ಈ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ.
ಕೋಮುಲ್ ಅಧ್ಯಕ್ಷ ನಂಜೇಗೌಡ ಹೇಳಿದ್ದಿಷ್ಟು
ಅಧಿಕಾರಿಗಳ ತಂಡವು ಕೆಎಂಎಫ್ ಘಟಕಕ್ಕೆ ಭೇಟಿ ನೀಡಿ ಪಶು ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿದೆ. ಕೋಲಾರ ಮಾತ್ರವಲ್ಲದೆ ಬೇರೆ ಪ್ರದೇಶಗಳಿಂದಲೂ ಪಶು ಆಹಾರ ಸೇವಿಸಿದ ಹಸುಗಳು ಅನಾರೋಗ್ಯಕ್ಕೆ ತುತ್ತಾಗಿರುವ ಹಾಗೂ ಹಸುಗಳು ಸಾವನ್ನಪ್ಪಿರುವ ಕುರಿತು ದೂರುಗಳು ಬಂದಿವೆ. ಪಶು ಆಹಾರ ಉತ್ಪಾದನೆಯಲ್ಲಿ ಜಾರಿಯಲ್ಲಿರುವ ಪಿಪಿಪಿ ಮಾದರಿಯಿಂದ ಇಂತಹ ಸಮಸ್ಯೆಗಳು ಉಂಟಾಗುತ್ತಿದ್ದು, ಈ ಮಾದರಿಯನ್ನು ತಕ್ಷಣ ರದ್ದುಗೊಳಿಸಿ ಕೆಎಂಎಫ್ ನೇರವಾಗಿ ಪಶು ಆಹಾರ ಉತ್ಪಾದನೆಯ ಜವಾಬ್ದಾರಿ ವಹಿಸಿಕೊಳ್ಳಬೇಕಾಗಿದೆ. ಈ ಪ್ರಕರಣದ ಕುರಿತು ಕೆಎಂಎಫ್‌ಗೆ ವರದಿ ಸಲ್ಲಿಸಿ, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಆಡಳಿತಾಧಿಕಾರಿಗಳೊಂದಿಗೆ ಚರ್ಚಿಸಿ ಗಂಭೀರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವು ಎಂದು ಕೋಮುಲ್ ಅಧ್ಯಕ್ಷ ನಂಜೇಗೌಡ ತಿಳಿಸಿದ್ದಾರೆ.
ಇದನ್ನೂ ಓದಿ: ಹಸುಗಳಿಗೆ ವಿಷವುಣಿಸುತ್ತಿದೆಯಾ KMF? ಆಹಾರ ಘಟಕದಲ್ಲಿ ಗೋಲ್ಮಾಲ್ ಶಂಕೆ: ಆಡಿಯೋದಿಂದ ಬಯಲಾಯ್ತು ಸ್ಫೋಟಕ ವಿಚಾರ
ಒಟ್ಟಾರೆ ಮೂಕ ಜೀವಿಗಳಿಗೆ ಆಹಾರದಲ್ಲಿ ಎಂ-ಸ್ಯಾಂಡ್ ಮಿಶ್ರಣ ಮಾಡಿ ನೀಡಲಾಗುತ್ತಿದೆ. ಜೊತೆಗೆ ಸರಿಯಾದ ರೀತಿಯಲ್ಲಿ ಆಹಾರ ತಯಾರು ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದು, ಹಸುಗಳು ಪಶು ಆಹಾರ ಸೇವಿಸಿ ದೊಡ್ಡ ಅನಾಹುತ ಸಂಭವಿಸುವ ಮೊದಲು ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




