ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ಟಿವಿ9 ವರದಿ ಬಳಿಕ ನಾಲ್ವರು ಅಧಿಕಾರಿಗಳ ಅಮಾನತು
ಟಿವಿ9 ವರದಿಯ ಪರಿಣಾಮವಾಗಿ ಕೆಎಂಎಫ್ ಪಶು ಆಹಾರ ಕಲಬೆರಕೆ ಪ್ರಕರಣದಲ್ಲಿ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಕಳಪೆ ಗುಣಮಟ್ಟದ ಮೊಲಾಸಿಸ್ ಬಳಸಿ, ಹಸುಗಳ ಆರೋಗ್ಯ ಹಾಗೂ ಹಾಲು ಉತ್ಪಾದನೆಗೆ ಧಕ್ಕೆ ತಂದ ಈ ಅವ್ಯವಹಾರವು, ಸಾವಿರಾರು ಹಸುಗಳ ಸಾವಿಗೆ ಕಾರಣವಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಆ ಬೆನ್ನಲ್ಲೇ ಅಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು, ಆಗಸ್ಟ್ 20: ಕೆಎಂಎಫ್ ಪಶು ಆಹಾರ ಘಟಕದಲ್ಲಿ ನಡೆದಿದೆ ಎನ್ನಲಾದ ಕಲಬೆರಕೆ ಹಗರಣಕ್ಕೆ ಸಂಬಂಧಿಸಿದಂತೆ ಟಿವಿ9 ಸುದ್ದಿವಾಹಿನಿಯ ವರದಿಯ ಬಳಿಕ ನಾಲ್ವರು ಕೆಎಂಎಫ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ರಾಜಾನುಕುಂಟೆ ಪಶು ಆಹಾರ ಘಟಕದಲ್ಲಿ ಕಡಿಮೆ ಟಿಆರ್‌ಎಸ್ ಇರುವಂತಹ ಕಳಪೆ ಗುಣಮಟ್ಟದ ಮೊಲಾಸಿಸ್ ಬಳಸಿ ಪಶು ಆಹಾರ ತಯಾರಿಸಲಾಗುತ್ತಿತ್ತು. ಈ ಕಳಪೆ ಆಹಾರದಿಂದಾಗಿ ಈಗಾಗಲೇ ಸಾವಿರಾರು ಹಸುಗಳು ಸಾವನ್ನಪ್ಪಿವೆ ಹಾಗೂ ಸಂತಾನೋತ್ಪತ್ತಿಯಲ್ಲೂ ಸಮಸ್ಯೆಗಳು ಎದುರಾಗಿವೆ ಎಂಬ ಆರೋಪಗಳು ಕೇಳಿಬಂದಿದ್ದವು. ಪ್ರಕರಣ ಸಂಬಂಧ ಕೆಎಂಎಫ್ನ ಪಶು ಆಹಾರ ಘಟಕ ನಿರ್ದೇಶಕ ಜೆ.ಜಯಕುಮಾರ್, ಪಶು ಆಹಾರ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಸಿ.ಮಲ್ಲಿಕಾರ್ಜುನ, ಪಶು ಆಹಾರ ಘಟಕದ ಹಿರಿಯ ಉಪ ನಿರ್ದೇಶಕ ಜಿ.ಎಸ್.ನಾಗೇಶ್ ಮತ್ತು ಪಶು ಆಹಾರ ಘಟಕದ ಉಪ ನಿರ್ದೇಶಕ ಸೋಮನಾಥ ಅವರನ್ನು ಅಮಾನತು ಮಾಡಿ ಕೆಎಂಎಫ್ ಎಂಡಿ ಡಾ.ಎಸ್.ಟಿ.ಸುರೇಶ್ ಆದೇಶಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

