ಕೋಲಾರ ತಾಲ್ಲೂಕು ಕಚೇರಿ ಒಂದು ರೀತಿಯ ದಲ್ಲಾಳಿಗಳ ಕೂಪವಾಗಿ ಪರಿಣಮಿಸಿತ್ತು. ಲಂಚ ಕೊಡದೆ ಒಂದೇ ಒಂದು ಹುಲ್ಲುಕಡ್ಡಿ ನಾರನ್ನು ಕೂಡಾ ತಾಲ್ಲೂಕು ಕಚೇರಿಯಿಂದ ತರಲು ಸಾಧ್ಯವಿಲ್ಲ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಕೋಲಾರ ಶಾಸಕ ಶ್ರೀನಿವಾಸಗೌಡ ಸೇರಿದಂತೆ ಹಲವು ಜನರು ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದರು. ಇಂಥ ಪರಿಸ್ಥಿತಿಯಲ್ಲಿದ್ದ ತಾಲ್ಲೂಕು ಕಚೇರಿಗೆ ಕೋಲಾರ ತಹಶೀಲ್ದಾರ್ ಆಗಿ 2021 ಡಿಸೆಂಬರ್-24 ರಂದು ಅಧಿಕಾರ ಸ್ವೀಕರಿಸಿದ ತಹಶೀಲ್ದಾರ್ ನಾಗರಾಜ್ (Kolar Taluk Tahsildar Nagaraj) ಹಲವು ಸವಾಲುಗಳನ್ನು ಎದುರಿಸಿ ಸದ್ಯ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸರ್ಕಾರಿ ಭೂಮಿ ಲಪಟಾಯಿಸಲು ಜಿಲ್ಲಾಧಿಕಾರಿಗಳ ಸಹಿ ನಕಲು ಪ್ರಕರಣ ಬಯಲಿಗೆ!
ಅಕ್ರಮಗಳ ಕೂಪವಾಗಿದ್ದ ಕೋಲಾರ ತಾಲ್ಲೂಕು ಕಚೇರಿಯಲ್ಲಿ ಲಂಚ, ಭ್ರಷ್ಟಾಚಾರ ತುಂಬಿ ತುಳುಕುತಿತ್ತು. ಎಷ್ಟರ ಮಟ್ಟಿಗೆ ಎಂದರೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಸರ್ಕಾರಿ ಭೂಮಿಯನ್ನು ನುಂಗಿ ಹಾಕಲು ಜಿಲ್ಲಾಧಿಕಾರಿಗಳ ಸಹಿಯನ್ನೇ ನಕಲು ಮಾಡಿದ್ದ ಮಿಕಗಳನ್ನು ತಹಶೀಲ್ದಾರ್ ನಾಗರಾಜ್ ಬಯಲಿಗೆಳೆದರು. ಕೋಲಾರ ತಾಲ್ಲೂಕು ಆಲಹಳ್ಳಿ ಗ್ರಾಮದ ಸರ್ವೆ-ನಂ-127 ರಲ್ಲಿ 3.37 ಎಕರೆ ಜಮೀನು ಮಂಜೂರಿಗೆ ನಕಲಿ ದಾಖಲೆ ಸೃಷ್ಟಿ ಮಾಡಲಾಗಿತ್ತು. ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಸಮೀಪವಿರುವ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಮಂಜೂರು ಮಾಡಿದಂತೆ ದಾಖಲೆ ಸೃಷ್ಟಿಮಾಡಿ ಕೋಲಾರ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಸಹಿ ನಕಲು ಮಾಡಿ ದಾಖಲೆ ಸೃಷ್ಟಿಸಿದ್ರು. ಪಹಣಿಯಲ್ಲಿದ್ದ ಸರ್ಕಾರಿ ಕಟ್ಟೆಯನ್ನು ಸರ್ಕಾರಿ ಖರಾಬು ಎಂದು ತಿದ್ದಿದ್ದ ತಾಲ್ಲೂಕು ಕಚೇರಿ ಸಿಬ್ಬಂದಿಗಳು ಕಡತಗಳನ್ನ ತಿರಸ್ಕರಿಸಿದ್ದ ಪ್ರತಿಯನ್ನು ಪುರಸ್ಕರಿಸಿದೆ ಎಂದು ದಾಖಲೆ ಸೃಷ್ಟಿ ಮಾಡಿದ್ದರು. ಈ ಪ್ರಕರಣವನ್ನು ಬಯಲಿಗೆಳೆದ ತಹಶೀಲ್ದಾರ್ ನಾಗರಾಜ್ ಅಕ್ರಮದಲ್ಲಿ ಭಾಗಿಯಾಗಿದ್ದ ತಮ್ಮ ಕಚೇರಿಯ ಸಿಬ್ಬಂದಿ ಸೇರಿ ಹಲವು ಜನರ ವಿರುದ್ದ ದೂರು ದಾಖಲು ಮಾಡಿದ್ದಾರೆ.
ಬಾಕಿ ಇದ್ದ ಕಡತಗಳ ವಿಲೇವಾರಿಗೆ ಕಡತ ವಿಲೇವಾರಿ ಅದಾಲತ್..!
ತಾಲ್ಲೂಕು ಕಚೇರಿಯಲ್ಲಿ ಹಲವು ವರ್ಷಗಳಿಂದ ವಿಲೇವಾರಿಯಾಗದೆ ಧೂಳು ಹಿಡಿದಿದ್ದ ಕಡತಗಳನ್ನು ವಿಲೇವಾರಿ ಮಾಡಲು ನಿರ್ಧಾರ ಮಾಡಿ, ಈ ಮೂಲಕ ತಾಲ್ಲೂಕು ಕಚೇರಿಗೆ ಸಾಮಾನ್ಯ ಜನರ ನಿತ್ಯ ಅಲೆದಾಟ ಹಾಗೂ ದಳ್ಳಾಳಿಗಳ ಹಾವಳಿ ತಪ್ಪಿಸಲು ತಹಶೀಲ್ದಾರ್ ನಾಗರಾಜ್ ಆಗಸ್ಟ್ ತಿಂಗಳಲ್ಲಿ ಕಡತ ವಿಲೇವಾರಿ ಅದಾಲತ್ ಮೂಲಕ ನಾಲ್ಕೈದು ವರ್ಷಗಳಿಂದ ಬಾಕಿ ಇದ್ದ ಸುಮಾರು 1600 ಕಡತಗಳನ್ನು ವಿಲೇವಾರಿ ಮಾಡಿದ್ದಾರೆ. ಪಿಂಚಣಿ, ಪಹಣಿ ತಿದ್ದುಪಡಿ, ಮುಟೇಷನ್, ಸೇರಿದಂತೆ ಹಲವು ಕಡತಗಳನ್ನು ವಿಲೇವಾರಿ ಮಾಡಿ ಜನರ ಅಲೆದಾಟವನ್ನು ತಪ್ಪಿಸಿದ್ದಾರೆ.
Also Read:
ಮನೆ ಮನೆಗೆ ತೆರಳಿ ಹಕ್ಕುಪತ್ರ, ಸಾಗುವಳಿ ಚೀಟಿ..!
ಕೋಲಾರ ಜಿಲ್ಲೆಯವರೇ ಆದ ತಹಶೀಲ್ದಾರ್ ನಾಗರಾಜ್ ಅತ್ಯಂತ ಬಡ ಕುಟುಂಬದಿಂದ ಬೆಳೆದು ಬಂದವರು, ಚಿಕ್ಕಂದಿನಿಂದನಲ್ಲೇ ತನ್ನ ಹೆತ್ತವರನ್ನು ಕಳೆದುಕೊಂಡು ಕುಟುಂಬದ ನೆರವಿಲ್ಲದೆ, ಸರ್ಕಾರದ ಹಾಸ್ಟೆಲ್ಗಳಲ್ಲಿ ಓದಿಕೊಂಡು ಬೆಳೆದು ಕಷ್ಟ ಪಟ್ಟು ಮೇಲೆ ಬಂದವರು. ತಾನೊಬ್ಬ ಅಧಿಕಾರಿಯಾಗಿ ಜನರ ಸೇವೆ ಮಾಡಬೇಕು ಎನ್ನುವ ಹಂಬಲದಿಂದ ಕೆಎಎಸ್ ಪಾಸ್ ಮಾಡಿದ ತಹಶೀಲ್ದಾರ್ ನಾಗರಾಜ್ ಬಡವರ ಕಷ್ಟ ಸುಖಗಳನ್ನು ಹತ್ತಿರದಿಂದ ಕಂಡವರು ಬಡವರ ಪರವಾಗಿ ಕೆಲಸ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಈವರೆಗೆ ನಿವೇಶನ ರಹಿತ ಸುಮಾರು 135 ಜನರಿಗೆ ಹಕ್ಕು ಪತ್ರಗಳನ್ನು ಮನೆ ಮನೆಗೆ ತೆರಳಿ ವಿತರಣೆ ಮಾಡಿದ್ದಾರೆ. ಅಲ್ಲದೆ ಸುಮಾರು 18 ಜನ ಭೂ ರಹಿತ ರೈತರಿಗೆ ಸಾಗುವಳಿ ಚೀಟಿ ವಿತರಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪಿಂಚಣಿದಾರರ ಮನೆ ಬಾಗಿಲಿಗೆ ತೆರಳಿ ಪಿಂಚಣಿ ಖಾತೆಗೆ ಆದಾರ್ ನಂಬರ್ ಲಿಂಕ್ ಮಾಡುವ ಕೆಲಸ ಮಾಡುವ ಮೂಲಕ ವಯಸ್ಸಾದವರು, ವಿಕಲಾಂಗರು ತಾಲ್ಲೂಕು ಕಚೇರಿಗೆ ಅಲೆದಾಟವನ್ನು ತಪ್ಪಿಸಿದ್ದಾರೆ. ಅಲ್ಲದೆ ಸುಮಾರು 400ಕ್ಕೂ ಹೆಚ್ಚು ಜನರಿಗೆ ಅದಾಲತ್ ಮೂಲಕ ಪಿಂಚಣಿ ಮಾಡಿಸಿಕೊಟ್ಟಿದ್ದಾರೆ.
ಸ್ಮಶಾನ ಹಾಗೂ ಸರ್ಕಾರಿ ಭೂಮಿ ಒತ್ತುವರಿ ತೆರವು..!
ಇನ್ನು ಕೋಲಾರ ತಾಲ್ಲೂಕಿನಾಧ್ಯಂತ ಹಲವು ಗ್ರಾಮಗಳಲ್ಲಿ ಸ್ಮಶಾನ ಒತ್ತುವರಿ ಸಮಸ್ಯೆ ಇತ್ತು ಇದನ್ನು ಗಂಭೀರವಾಗಿ ಪರಿಗಣಿಸಿದ ತಹಶೀಲ್ದಾರ್ ನಾಗರಾಜ್ ತಾಲ್ಲೂಕಿನಾಧ್ಯಂತ ಒತ್ತುವರಿಯಾಗಿದ್ದ ಸುಮಾರು 100 ಸ್ಮಶಾಣ ಹಾಗೂ ಸರ್ಕಾರಿ ಭೂಮಿ, ಕೆರೆ, ಒತ್ತುವರಿಯನ್ನು ತೆರವು ಮಾಡಿದ್ದಾರೆ. ಈ ಮೂಲಕ ಗ್ರಾಮದಲ್ಲಿದ್ದ ಆತಂಕಕಾರಿ ವಾತಾವರಣವನ್ನು ನಿವಾರಣೆ ಮಾಡಿದ್ದಾರೆ.
Also Read:
philosophy of government work is gods work ಸರ್ಕಾರಿ ಕೆಲಸ ಅಂದರೆ ದೇವರ ಕೆಲಸ!
ಇನ್ನ ಕೋಲಾರ ಜಿಲ್ಲೆಯಲ್ಲಿ ಕಂದಾಯ ಅದಾಲತ್ ಹಾಗೂ ಪೋಡಿ ಅದಾಲತ್ ಮೂಲಕ ಸಖತ್ ಹೆಸರು ಮಾಡಿದ್ದ ಜಿಲ್ಲಾಧಿಕಾರಿ ದಿವಂಗತ ಡಿ.ಕೆ. ರವಿ ಯವರ ಪ್ರೇರಣೆಯಿಂದ ತಹಶೀಲ್ದಾರ್ ನಾಗರಾಜ್ ಪೋಡಿ ಅದಾಲತ್ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ವ್ಯಾಪ್ತಿಯಲ್ಲಿರುವ ರೈತರ ಜಮೀನುಗಳ ಪಿ. ನಂಬರ್ ಸಮಸ್ಯೆ ನಿವಾರಣೆ ಮಾಡಲು ನಿರ್ಧಾರ ಮಾಡಿ ಡಿಸೆಂಬರ್-26 ರಿಂದ ಒಂದು ತಿಂಗಳ ಕಾಲ ಪೋಡಿ ಅದಾಲತ್ ಮಾಡುವ ಮೂಲಕ ತಹಶೀಲ್ದಾರ್ ನಾಗರಾಜ್ ತಾವು ಕೋಲಾರ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡ ನಂತರದಲ್ಲಿ ಸದ್ದಿಲ್ಲದೆ ಹಲವು ಕಾರ್ಯಗಳ ಮೂಲಕ ಸಾಕಷ್ಟು ಸುಧಾರಣೆ ತಂದಿದ್ದಾರೆ, ಅಷ್ಟೇ ಅಲ್ಲದೆ ಜನರ ಮೆಚ್ಚುಗೆಯನ್ನು ಪಡೆದಿದ್ದಾರೆ.
ವರದಿ: ರಾಜೇಂದ್ರ ಸಿಂಹ, ಟಿವಿ 9, ಕೋಲಾರ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:21 am, Sat, 24 December 22