ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿಯಿಂದ ಭೂ ಒತ್ತುವರಿ? ಕೋರ್ಟ್ ಆದೇಶದಂತೆ ಸರ್ವೆ, ಆರೋಪ ನಿಜ ಎಂದ ತಹಶೀಲ್ದಾರ್
ಮೂಲತ: ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಬಂಗಾರಪೇಟೆ ಶಾಸಕ ಎಸ್. ಎನ್. ನಾರಾಯಣಸ್ವಾಮಿ 4 ವರ್ಷಗಳಿಂದ ಅನಿಗಾನಹಳ್ಳಿ ಬಳಿ ಎಸ್. ಎನ್. ಸಿಟಿ ಐಶಾರಾಮಿ ಬಡಾವಣೆ ನಿರ್ಮಾಣ ಮಾಡುತ್ತಿದ್ದಾರೆ. ಇಲ್ಲಿಗೆ ಹೋಗಿ ಬರುವ ದಾರಿಗಾಗಿ ಗುಂಡುತೋಪು ಒತ್ತುವಾರಿಯಾಗಿದೆ ಅನ್ನೋದು ಮೇಲ್ನೋಟಕ್ಕೆ ಕಂಡು ಬಂದಿದೆ.
ಬಂಗಾರಪೇಟೆ (bangarpet) ಶಾಸಕರ ಮೇಲೆ ಮತ್ತೊಮ್ಮೆ ಸರ್ಕಾರಿ ಭೂಮಿ ಒತ್ತುವರಿ ಮಾಡಿರುವ ಆರೋಪ ಕೇಳಿ ಬಂದಿದೆ. ತಮ್ಮ ಒಡೆತನದಲ್ಲಿ ಖಾಸಗಿ ಬಡಾವಣೆ ನಿರ್ಮಾಣ ಮಾಡುವ ವೇಳೆಯಲ್ಲಿ ಶಾಸಕರು ಸರ್ಕಾರಿ ಗುಂಡು ತೋಪು ಒತ್ತುವರಿ ಮಾಡಿರುವ ಆರೋಪ ಕೇಳಿಬಂದಿದ್ದು ಅಧಿಕಾರಿಗಳು ನ್ಯಾಯಾಲಯದ ಆದೇಶದ ಮೇರೆಗೆ ತಹಶೀಲ್ದಾರ್ (tahsildar) ಸ್ಥಳ ಸರ್ವೆ ಮಾಡುವ ವೇಳೆ ಶಾಸಕರು ಅಸಹಕಾರ ತೋರಿದ್ದಾರೆ. ಕೋಲಾರ ಜಿಲ್ಲೆ ಬಂಗಾರಪೇಟೆ ಅನಿಗಾನಹಳ್ಳಿ ಗ್ರಾಮದ ಬಳಿ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್. ನಾರಾಯಣಸ್ವಾಮಿ (bangarpet congress mla sn narayanaswamy) ಅವರು ತಮ್ಮ ಒಡೆತನದ ಎಸ್.ಎನ್. ಸಿಟಿ ಅನ್ನೋ ಖಾಸಗಿ ಬಡಾವಣೆ ನಿರ್ಮಾಣ ವೇಳೆಯಲ್ಲಿ ಅನಿಗಾನಹಳ್ಳಿ ಸರ್ವೆ ನಂ-36 ರಲ್ಲಿನ ಸುಮಾರು 35 ಗುಂಟೆ ಗುಂಡು ತೋಪನ್ನು ಒತ್ತುವರಿ ಮಾಡಿದ್ದಾರೆಂದು ಆರೋಪಿಸಿ ಕೋಲಾರದ ನಳಿನಿಗೌಡ ಎಂಬುವರು ದೂರು ಸರ್ಕಾರಿ ಭೂ ಕಬಳಿಕೆ ಜನಪ್ರತಿನಿಧಿಗಳ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಶೀಲನೆ ನಡೆಸಿದ ಕೋರ್ಟ್ ಅಧಿಕಾರಿಗಳಿಗೆ ಸ್ಥಳ ಸರ್ವೆ (survey) ನಡೆಸಲು ಸೂಚನೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಬಂಗಾರಪೇಟೆ ತಹಶೀಲ್ದಾರ್ ದಯಾನಂದ್ ನೇತೃತ್ವದಲ್ಲಿ ಅಧಿಕಾರಿಗಳು ಸರ್ವೆಗೆ ಸಿದ್ದತೆ ಮಾಡಿಕೊಂಡಿದ್ದರು. ಆದರೆ ಸರ್ವೆಯರ್ ಹರೀಶ್ ಅವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗದ ಕಾರಣ, ಬೇರೆ ಸರ್ವೆ ಅಧಿಕಾರಿಗಳೊಂದಿಗೆ ದಯಾನಂದ್ ಸರ್ವೆ ನಡೆಸಿದ್ದಾರೆ. ಜೊತೆಗೆ ಸರ್ವೆ ಮಾಡುವ ವೇಳೆ ಒತ್ತುವರಿದಾರರು ಹಾಗೂ ದೂರುದಾರರು ಇಬ್ಬರ ಸಮಕ್ಷಮದಲ್ಲಿ ಸರ್ವೆ ಮಾಡಬೇಕು ಅನ್ನೋ ನಿಟ್ಟಿನಲ್ಲಿ ನೋಟಿಸ್ ನೀಡುವ ವೇಳೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನೋಟಿಸ್ ಸ್ವೀಕರಿಸಿಲ್ಲ.
ಆದರೂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸರ್ವೆ ನಡೆಸಲಾಗಿದೆ. ಈ ವೇಳೆ ಮೇಲ್ನೋಟಕ್ಕೆ 35 ಗುಂಟೆ ಸರ್ಕಾರಿ ಭೂಮಿಯಲ್ಲಿ ದೇವಾಲಯ, ಅಶ್ವಥ ಕಟ್ಟೆ, ನಾಗರಕಲ್ಲು ನಿರ್ಮಾಣ ಮಾಡಲಾಗಿದೆ. ಜೊತೆಗೆ 35 ಗುಂಟೆ ಗುಂಡು ತೋಪು ಪ್ರದೇಶದಲ್ಲಿ ಒಂದಷ್ಟು ಭೂಮಿ ಒತ್ತುವರಿಯಾಗಿರುವುದು ಕಂಡು ಬಂದಿದೆ ಎಂದು ಬಂಗಾರಪೇಟೆ ತಹಶೀಲ್ದಾರ್ ದಯಾನಂದ್ ತಿಳಿಸಿದ್ದಾರೆ.
ಇನ್ನು ಮೂಲತ: ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕಳೆದ ನಾಲ್ಕು ವರ್ಷಗಳಿಂದ ಅನಿಗಾನಹಳ್ಳಿ ಬಳಿಯಲ್ಲಿ ಎಸ್.ಎನ್. ಸಿಟಿ ಅನ್ನೋ ಹೆಸರಲ್ಲಿ ಬೃಹತ್ ಐಶಾರಾಮಿ ಬಡಾವಣೆ ನಿರ್ಮಾಣ ಮಾಡುತ್ತಿದ್ದಾರೆ. ಈ ಎಸ್.ಎನ್. ಸಿಟಿಗೆ ಹೋಗಿ ಬರುವ ದಾರಿಗಾಗಿ ಗುಂಡುತೋಪು ಒತ್ತುವಾರಿಯಾಗಿದೆ ಅನ್ನೋದು ಮೇಲ್ನೋಟಕ್ಕೆ ಕಂಡು ಬಂದಿದೆ. ಜೊತೆಗೆ ಅದನ್ನು ಶಾಸಕರೂ ಒಪ್ಪಿಕೊಂಡಿದ್ದಾರೆ.
ಆದರೆ ಅದು ಕಳೆದ 100 ವರ್ಷಗಳ ಹಿಂದೆ ಗುಂಡುತೋಪು ಎಂದು ಇತ್ತು. ಆದರೆ ಅಲ್ಲೀಗ ಗುಂಡುತೋಪು ಇರಲಿಲ್ಲ. ಬದಲಾಗಿ ಅನಿಗಾನಹಳ್ಳಿ, ಹುದುಕುಳ, ಗ್ರಾಮಗಳ ರೈತರು ತಮ್ಮ ಜಮೀನುಗಳಿಗೆ ಹೋಗಲು ರಸ್ತೆ ಹಾಗೂ ದನಕರುಗಳನ್ನು ಮೇಯಿಸಿಕೊಳ್ಳಲು ಸ್ಥಳ ಮಾಡಿಕೊಂಡಿದ್ದರು. ಅದು ಅದೇ ರೀತಿ ಇದೆ, ಇತ್ತೀಚೆಗೆ ಅಲ್ಲಿ ಹೆಚ್ಚು ಅಪಘಾತವಾಗುತ್ತಿತ್ತು ಅನ್ನೋ ಕಾರಣಕ್ಕೆ ಅಲ್ಲಿ ಗ್ರಾಮಸ್ಥರೇ ಮುಂದೆ ನಿಂತು ದೇವಾಲಯ ನಿರ್ಮಾಣ ಮಾಡಿದ್ದಾರೆ ಅನ್ನೋದು ಶಾಸಕರ ಮಾತು.
ಇದರಲ್ಲಿ ಯಾವುದೇ ಕಬಳಿಕೆ, ಒತ್ತುವರಿ, ಯಾವುದೂ ಆಗಿಲ್ಲ. ಆದರೆ ಉದ್ದೇಶಪೂರ್ವಕವಾಗಿ ಬಂಗಾರಪೇಟೆ ತಹಶೀಲ್ದಾರ್ ದಯಾನಂದ್, ಸಿಎಂ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಹಾಗೂ ಹಲವರು ನನ್ನ ಮೇಲೆ ಚಿತಾವಣೆ ಮಾಡಿ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆ ಅನ್ನೋದು ಶಾಸಕ ನಾರಾಯಣ ಸ್ವಾಮಿ ಅವರು ಆರೋಪ.
ಒಟ್ಟಾರೆ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಅವರ ಮೇಲೆ ಮೇಲಿಂದ ಮೇಲೆ ಸರ್ಕಾರಿ ಭೂಮಿ ಒತ್ತುವರಿ ಆರೋಪ ಕೇಳಿ ಬರುತ್ತಿದೆ. ಜೊತೆಗೆ ಎಲ್ಲವೂ ಕೂಡಾ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು ಶಾಸಕರ ಮೇಲಿನ ಈ ಎಲ್ಲಾ ಆರೋಪಗಳು ನಿಜಕ್ಕೂ ರಾಜಕೀಯ ಪ್ರೇರಿತವಾ ಇಲ್ಲಾ ನಿಜಕ್ಕೂ ಒತ್ತುವರಿಯಾಗಿದ್ಯಾ ಅನ್ನೋದು ತನಿಖೆಯಿಂದಷ್ಟೇ ತಿಳಿಯಬೇಕಿದೆ.
ವರದಿ: ರಾಜೇಂದ್ರಸಿಂಹ, ಟಿವಿ 9, ಕೋಲಾರ
Also Read: ಇರೋದು ಒಂದು ಹುಡುಗಿ, 10 ಜನ ಗಂಡಂದಿರು ರೆಡಿಯಾಗಿದ್ದಾರೆ
Published On - 11:47 am, Mon, 19 December 22