ಕೋಲಾರ: ನವೆಂಬರ್ ತಿಂಗಳು ಬಂತೆಂದರೆ ಸಾಕು ಕರ್ನಾಟಕದಲ್ಲಿ ಕನ್ನಡತನ ಅನ್ನೋದು ಅತಿಹೆಚ್ಚು ಜಾಗೃತವಾಗುತ್ತದೆ. ಕನ್ನಡ ಬೇರೆ ಜನರನ್ನ ಹೇಗೆಲ್ಲಾ ತನ್ನತ್ತ ಆಕರ್ಷಿಸುತ್ತಿದೆ ಅನ್ನೋದರ ಕುರಿತು ಒಂದು ಸುತ್ತು ಅವಲೋಕನ ಮಾಡಲು ಶುರುಮಾಡುತ್ತಾರೆ. ಅದೇ ರೀತಿ ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನ ಗಡಿಭಾಗದಲ್ಲಿರುವ ಕೋಲಾರದಲ್ಲಿ ತಮಿಳು ಮಕ್ಕಳು ಪ್ರೀತಿಯಿಂದ ಕನ್ನಡ ಕಲಿಯುತ್ತಿರುವ ಕುರಿತು ಒಂದು ವರದಿ ಇಲ್ಲಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ದಿನ್ನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಡಿ ಭಾಗದಲ್ಲಿರುವ ಹೊಸಮನೆಗಳು ಗ್ರಾಮದಲ್ಲಿನ ಕರ್ನಾಟಕ ರಾಜ್ಯದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ಕೂಗಳತೆ ದೂರದ ನೆರೆಯ ತಮಿಳುನಾಡು ರಾಜ್ಯದ ಹಳ್ಳಿಯಿಂದ 4 ಮಂದಿ ವಿದ್ಯಾರ್ಥಿಗಳು ಕನ್ನಡ ಶಾಲೆಯಲ್ಲಿ ಸೇರಿ, ಕನ್ನಡ ಕಲಿಯುತ್ತಿರುವುದು ಎರಡು ರಾಜ್ಯಗಳ ಬಾಂಧವ್ಯ ಹಾಗೂ ಭಾಷಾ ಸಾಮರಸ್ಯಕ್ಕೆ ಕನ್ನಡಿ ಹಿಡಿದಂತಿದೆ.
ಕನ್ನಡ ತಮಿಳು ಭಾಷಾ ಸಾಮರಸ್ಯ:
ಕರ್ನಾಟಕ- ತಮಿಳುನಾಡು ರಾಜ್ಯಗಳ ಗಡಿಭಾಗದ ಜಿಲ್ಲೆ ಕೋಲಾರದ ಮಾಲೂರು ತಾಲ್ಲೂಕಿನ ಮಾಸ್ತಿ ಹೋಬಳಿಯ ದಿನ್ನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಿನ್ನಹಳ್ಳಿ ಹೊಸಮನೆಗಳು ಕಾಲೋನಿಯ ಶಾಲೆಗೆ ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲ್ಲೂಕಿನ “ಚಾಪರಪಲ್ಲಿ” ಗ್ರಾಮದ ನಾಲ್ಕು ಜನ ವಿದ್ಯಾರ್ಥಿಗಳು ಕನ್ನಡ ಕಲಿಯಲು ಬರುತ್ತಿದ್ದಾರೆ ಅನ್ನೋದು ವಿಶೇಷ. ನಾಲ್ಕು ಜನರು ನಿತ್ಯ ಉತ್ಸಾಹದಿಂದ ಶಾಲೆಗೆ ಬರುತ್ತಾರೆ. ಇವರು ಕನ್ನಡ ಶಾಲೆಗೆ ಬರುತ್ತಾರೆ ಅಂದರೆ ಅಲ್ಲಿ ಶಾಲೆ ಇಲ್ಲ ಎಂದಲ್ಲ. ಅಲ್ಲಿ ಶಾಲೆ ಇದ್ದರೂ ಕನ್ನಡ ಶಾಲೆಯಲ್ಲಿ ಕಲಿಯಬೇಕೆನ್ನುವ ದೃಷ್ಟಿಯಿಂದಲೇ ಇಲ್ಲಿಗೆ ಬರುತ್ತಾರೆ.
ಒಂದನೇ ತರಗತಿಗೆ ಪ್ರಜ್ವಲ್, ಶಂಕರನ್ ದಾಖಲಾಗಿದ್ದರೆ, ಎರಡನೇ ತರಗತಿಗೆ ನಿತಿನ್ ಹಾಗೂ 4ನೇ ತರಗತಿಗೆ ದೀಪ ಎನ್ನುವ ವಿದ್ಯಾರ್ಥಿಗಳು ಕನ್ನಡ ಕಲಿಯಲು ಕನ್ನಡ ಶಾಲೆಗೆ ಬರುತ್ತಿದ್ದಾರೆ. ಕನ್ನಡವನ್ನು ಸ್ಪಷ್ಟವಾಗಿ ಬರೆಯಲು, ಓದಲು ಕಲಿತಿದ್ದಾರೆ. ಈ ಶಾಲೆಯ ಮುಖ್ಯಶಿಕ್ಷಕರಾದ ಪಿ. ಶ್ರೀನಾಥರವರು ಹೇಳುವಂತೆ ಈ ನಾಲ್ಕು ಮಂದಿ ವಿದ್ಯಾರ್ಥಿಗಳು ಬಹಳ ಚೆನ್ನಾಗಿ ನಮ್ಮ ಶಾಲೆಯಲ್ಲಿ ಕನ್ನಡ ಕಲಿಯುತ್ತಿದ್ದು, ಹುಮ್ಮಸ್ಸಿನಿಂದ ಶಾಲೆಗೆ ಬರುತ್ತಾರೆ. ಒಟ್ಟು ನಮ್ಮ ಶಾಲೆಯಲ್ಲಿ 11 ಮಂದಿ ವಿದ್ಯಾರ್ಥಿಗಳಿದ್ದು, ಈ ನಾಲ್ಕು ಮಂದಿ ನೆರೆಯ ತಮಿಳುನಾಡಿನಿಂದ ಬಂದು ನಮ್ಮ ಭಾಷೆ ಕಲಿಯುತ್ತಿದ್ದಾರೆ. ಎಲ್ಲಾ ಮಕ್ಕಳೊಡನೆ ಉತ್ತಮ ಬಾಂಧವ್ಯ ಹೊಂದಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಯಾವುದೇ ರೀತಿಯಾದ ಬೇದಭಾವವಿಲ್ಲವೆನ್ನುತ್ತಾರೆ.
ಉತ್ಸಾಹದಿಂದ ಕಲಿಯುವ ಮಕ್ಕಳಿಗೆ ಸಿಗುತ್ತಿದೆ ಎಲ್ಲಾ ಸೌಲಭ್ಯಗಳು!:
ಇನ್ನು, ಹೊರ ರಾಜ್ಯದಿಂದ ಗಡಿಯಲ್ಲಿನ ಗ್ರಾಮಗಳಿಂದ ಕನ್ನಡ ಶಾಲೆಗೆ ಬರುವ ಮಕ್ಕಳು ಉತ್ಸಾಹದಿಂದ ಕನ್ನಡ ಕಲಿಯುತ್ತಿದ್ದಾರೆ ಅನ್ನೋದೆ ನಮ್ಮ ರಾಜ್ಯದ ಹೆಮ್ಮೆ. ಹೀಗಿರುವಾಗ ಮಕ್ಕಳ ಕಲಿಕೆಗೆ ಬೇಕಾದ ಅಗತ್ಯ ಪೂರಕ ವಾತಾವರಣ ನಿರ್ಮಾಣ ಮಾಡುವುದು ನಮ್ಮ ಗುರಿ. ಹಾಗಾಗಿ ಮಕ್ಕಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು, ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಬೇಕು ಅನ್ನೋದು ನಮ್ಮ ಆಶಯ ಅನ್ನೋದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿಯರವ ಮಾತು.
(ವಿಶೇಷ ವರದಿ : ರಾಜೇಂದ್ರ ಸಿಂಹ)
ಇದನ್ನೂ ಓದಿ: Kolar Cyber Crime: ಭಾರತೀಯ ಸೇನೆ ಹೆಸರಿನಲ್ಲಿ ಕೋಲಾರ ಎಪಿಎಂಸಿ ಮಂಡಿ ಮಾಲೀಕನಿಗೆ ವಂಚನೆ!
Karnataka Rajyotsava 2021: ಕನ್ನಡ ಹಿರಿಮೆಯನ್ನು ಜಗತ್ತಿಗೆ ಸಾರಿದ ಶ್ರೇಷ್ಠರು ಇವರು