AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಗನಕ್ಕೇರಿದ ಟೊಮ್ಯಾಟೊ ಬೆಲೆ, ಕೋಟೀಶ್ವರರಾಗಲಿದ್ದಾರೆ ಕೋಲಾರದ ಈ ಬೆಳೆಗಾರರು

ಟೊಮ್ಯಾಟೊ ಬೆಲೆ ಏರಿಕೆ ಗ್ರಾಹಕರಿಗೆ ಹೊಡೆತ ನೀಡಿದ್ದರೂ ಬೆಳೆಗಾರರಿಗೆ ಮಾತ್ರ ವರವಾಗಿ ಪರಿಣಮಿಸಿದೆ. ಬೆಲೆ ಏರಿಕೆ ನಡುವೆ ಟೊಮ್ಯಾಟೊ ಬೆಲೆದ ಕೋಲಾರದ ಬೆಳೆಗಾರರು ಕೋಟಿ ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

ಗಗನಕ್ಕೇರಿದ ಟೊಮ್ಯಾಟೊ ಬೆಲೆ, ಕೋಟೀಶ್ವರರಾಗಲಿದ್ದಾರೆ ಕೋಲಾರದ ಈ ಬೆಳೆಗಾರರು
ಕೋಲಾರದ ಟೊಮ್ಯಾಟೊ ಬೆಳೆಗಾರ ವೆಂಕಟೇಶ್
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: Rakesh Nayak Manchi|

Updated on: Jul 16, 2023 | 8:13 PM

Share

ಕೋಲಾರ, ಜುಲೈ 16: ಬೆಲೆ ಏರಿಕೆಯಿಂದ ರಾಜ್ಯ, ದೇಶ, ಹಾಗೂ ವಿದೇಶಗಳಲ್ಲೂ ಸುದ್ದು ಮಾಡುತ್ತಿರುವ ಟೊಮ್ಯಾಟೋ ಬೆಲೆ (Tomato price) ಏರಿಕೆ ಸಂತಸ ಎಲ್ಲಾ ರೈತರಿಗೆ ತಂದು ಕೊಟ್ಟಿಲ್ಲ, ವೈರಸ್​ ಸೇರಿದಂತೆ ಹಲವು ರೋಗಗಳಿಗೆ ತುತ್ತಾಗಿರುವ ಟೊಮ್ಯಾಟೋ ಅದೃಷ್ಟದ ಬೆಲೆ ಕೆಲವು ರೈತರಿಗೆಷ್ಟೇ ಸಿಕ್ಕಿದೆ, ಅದರಲ್ಲೂ ಕೆಲವು ರೈತರಿಗೆ ಅದೃಷ್ಟ ಲಕ್ಷ್ಮಿಯೇ ಬಾಗಿಲು ತೆರೆದಂತಾಗಿ ಲಕ್ಷ ಲಕ್ಷ ಲೆಕ್ಕದಲ್ಲಿ ಹಣ ಸಂಪಾದನೆಯಾಗುತ್ತಿದೆ.

ಕಳೆದೊಂದ ತಿಂಗಳಿಂದೆ ಟೊಮ್ಯಾಟೋ ಬೆಲೆ ಗಗನಕ್ಕೇರಿದೆ. ನಾವ್ಯಾರೂ ನಿರೀಕ್ಷೆ ಮಾಡದಷ್ಟು ಬೆಲೆ ಏರಿಕೆ ಕಂಡು ಟೊಮ್ಯಾಟೋಗೆ ಚಿನ್ನದ ಬೆಲೆ ಬಂದಿದೆ. ಆದರೆ ಇಷ್ಟು ಬೆಲೆ ಟೊಮ್ಯಾಟೋ ಬೆಳೆದ ಎಲ್ಲಾ ರೈತರಿಗೆ ಸಿಕ್ಕಿಲ್ಲ, ಕಾರಣ ರೈತರು ಬೆಳೆದ ಬೆಳೆಗಳಿಗೆ ವೈರಸ್​ ಸೇರಿದಂತೆ ಎಲೆ ಸುರುಳಿ, ಬಿಂಗಿ ರೋಗ ಆವರಿಸಿ ಬೆಳೆಯೆಲ್ಲಾ ನಾಶವಾಗಿದೆ. ಆದರೆ ಕೆಲವೇ ಕೆಲವು ಉತ್ತಮವಾಗಿ ಟೊಮ್ಯಾಟೋ ತೋಟವನ್ನು ಆರೈಕೆ ಮಾಡಿದ ರೈತರಿಗೆ ಭಾಗ್ಯ ಲಕ್ಷ್ಮಿಯಂತೆ ಲಕ್ಷ ಲಕ್ಷ ಆದಾಯ ತಂದುಕೊಟ್ಟಿದೆ. ಅಂತಹವರಲ್ಲಿ ಕೋಲಾರ ತಾಲ್ಲೂಕು ಕೆಂದಟ್ಟಿ ಗ್ರಾಮದ ರೈತ ವೆಂಕಟೇಶ್​ ಅವರು ಕೂಡ ಒಬ್ಬರು.

ಸಹೋದರರಾದ ವೆಂಕಟೇಶ್​, ಸುಬ್ರಮಣಿ, ಗೋವಿಂದರಾಜು, ರಾಜೇಂದ್ರ ಅವರು ತಮ್ಮ ಹತ್ತು ಎಕರೆ ಪ್ರದೇಶದಲ್ಲಿ ಟೊಮ್ಯಾಟೋ ಬೆಳೆ ಬೆಳೆದಿದ್ದಾರೆ. ಕಷ್ಟುಪಟ್ಟು ಬೆಳೆ ರೋಗಕ್ಕೆ ತುತ್ತಾಗದಂತೆ ಸಾಕಷ್ಟು ಬಾರಿ ಔಷದಿ ಸಿಂಪಡಿಸಿ, ಗೊಬ್ಬರ ಹಾಕಿ ಬೆಳೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಅದರ ಪರಿಣಾಮವಾಗಿ ಒಳ್ಳೆಯ ಫಸಲು ಬಂದಿದೆ. ಅದಕ್ಕೆ ತಕ್ಕಂತೆ ನಿರೀಕ್ಷೆ ಮಾಡದ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಟೊಮ್ಯಾಟೊಗೆ ಚಿನ್ನದ ಬೆಲೆ ಬಂದಿದೆ. ಸದ್ಯ ಹತ್ತು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗೆ ಒಂದು ಕೋಟಿಯಷ್ಟು ಆದಾಯ ಬರುವ ನಿರೀಕ್ಷೆ ಇದೆ. ಸದ್ಯ ಈವರೆಗೆ ಸುಮಾರು 40 ಲಕ್ಷದಷ್ಟು ಆದಾಯ ಬಂದಿದೆ ಎಂದು ವೆಂಕಟೇಶ್ ಹೇಳಿದ್ದಾರೆ.

ಇದನ್ನೂ ಓದಿ: Viral Video: ‘ಹುಷಾರ್​! ನಾನು ಟೊಮ್ಯಾಟೋ ಕಾವಲುಗಾರ ನಾಗರಾಜ’

ವೆಂಕಟೇಶ್​ ಸಹೋದರರು 10 ಎಕರೆ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆ ಬೆಳೆಯಲು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ್ದಾರೆ. ಸಹಜವಾಗಿ ಟೊಮ್ಯಾಟೊ ಬೆಳೆಯಲು ಎಂದು ಎಕರೆ ಪ್ರದೇಶಕ್ಕೆ ಒಂದೂವರೆ ಲಕ್ಷ ರೂಪಾಯಿ ಆದಾಯ ಬೇಕಿದ್ದರೆ ಇವರು ಸದ್ಯ ರೋಗ ಬಾದೆ ತಪ್ಪಿಸಲು, ಉತ್ತಮ ಗುಣಮಟ್ಟದ ಬೆಳೆ ಬೆಳೆಯಲು ಎಕರೆಗೆ ಎರಡು ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಔಷಧಿ, ರಸಗೊಬ್ಬರ, ಕೊಟ್ಟಿಗೆ ಗೊಬ್ಬರ, ಕೂಲಿ ಕೆಲಸದವರು ಹೀಗೆ ಎಲ್ಲಾ ಸೇರಿ ಸರಾಸರಿ 20 ಲಕ್ಷ ರೂಪಾಯಿ ಬಂಡವಾಳ ಹಾಕಿದ್ದಾರೆ.

ಅದೆಲ್ಲದರ ಫಲವಾಗಿ ಈಗ ವೆಂಕಟೇಶ್ ಸಹೋದರರಿಗೆ ಈವರೆಗೆ 35 ಲಕ್ಷ ರೂಪಾಯಿ ಲಾಭ ಗಳಿಸಿದ್ದಾರೆ. ಇನ್ನು ಒಂದು ತಿಂಗಳ ಕಾಲ ಬೆಳೆ ಇರಲಿದ್ದು ಅವರ ನಿರೀಕ್ಷೆಯಂತೆ ಇದೇ ಬೆಲೆ ಮುಂದುವರಿದರೆ ಸರಾಸರಿ ಒಂದು ಕೋಟಿ ರೂಪಾಯಿಯಷ್ಟು ಆದಾಯ ಗಳಿಸುವ ಸಾಧ್ಯತೆ ಇದೆ ಎಂದು ವೆಂಟಕೇಶ್​ ಹಾಗೂ ಅವರ ಸಹೋದರ ಸುಬ್ರಮಣಿ ಹೇಳಿದ್ದಾರೆ.

ಸದ್ಯ ಪರಿಸ್ಥಿತಿಯಲ್ಲಿ ಗ್ರಾಮದ ಸುತ್ತಮುತ್ತಲ ಟೊಮ್ಯಾಟೊ ಬೆಳೆದಿದ್ದ ರೈತರ ಬೆಳೆ ರೋಗಕ್ಕೆ ತುತ್ತಾಗಿದೆ. ಆದರೆ ವೆಂಕಟೇಶ್​ ಸಹೋದರರ ಬೆಳೆದಿದ್ದ ಟೊಮ್ಯಾಟೊ ತೋಟ ಸ್ವಲ್ಪ ಮಟ್ಟಿಗೆ ಚೆನ್ನಾಗಿದೆ. ಅದಕ್ಕೆ ತಕ್ಕಂತೆ ಒಳ್ಳೆಯ ಬೆಲೆ ಸಿಕ್ಕಿರುವುದರಿಂದ ಊರಿನ ಜನರೆಲ್ಲಾ ಕೋಟ್ಯಾಧೀಶ್ವರರು ಎಂದು ಕರೆಯುತ್ತಾರಂತೆ. ಆದರೆ ಈ ಹಿಂದೆ ಹಲವು ಬಾರಿ ಇದೇ ಟೊಮ್ಯಾಟೊ ಬೆಳೆದ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ ನಮಗೆ ದೇವರು ಈಗ ಕೈಹಿಡಿದಿದ್ದಾನೆ, ಒಂದಷ್ಟು ಲಾಭ ಕಾಣುತ್ತಿದ್ದೇವೆ ಹಾಗಾಗಿ ಸಂತೋಷವಾಗಿದೆ ಎಂದು ಸುಬ್ರಮಣಿ ಹೇಳಿದ್ದಾರೆ.

ಒಟ್ಟಾರೆಯಾಗಿ, ಕೋಲಾರ ಜಿಲ್ಲೆಯಲ್ಲಿ ಅದೃಷ್ಟದ ಬೆಳೆ ಎಂದೇ ಕರೆಯಲಾಗುವ ಟೊಮ್ಯಾಟೊ ಬೆಳೆಗೆ, ಸದ್ಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಬಂದಿದ್ದು ಅದು ಕೂಡಾ ಅದೃಷ್ಟವಿದ್ದ ರೈತರಿಗೆ ಮಾತ್ರ ಎನ್ನುವಂತಾಗಿದೆ. ಟೊಮ್ಯಾಟೊ ಬೆಳೆಗೆ ರೋಗ ಬಾದೆ ಕಾಡುತ್ತಿದ್ದು ಸದ್ಯದ ಪರಿಸ್ಥಿತಿಯಲ್ಲಿ ಟೊಮ್ಯಾಟೊ ಬೆಳೆದವರೆಲ್ಲರೂ ಕೋಟ್ಯಧಿಪತಿಗಳಲ್ಲ, ಉತ್ತಮ ಫಸಲು ಬಂದವರು ಮಾತ್ರ ಗ್ರಾಮಗಳಲ್ಲಿ ಕೋಟ್ಯಾಧೀಶ್ವರರು ಎನ್ನುವಂತಾಗಿರುವುದು ಮಾತ್ರ ಸುಳ್ಳಲ್ಲ..

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ