ಕೋಲಾರ, ನವೆಂಬರ್ 11: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ್ ಗ್ರಾಮದ ಸಮೀಪ ನಿರ್ಮಾಣ ಮಾಡಿರುವ ಅಣೆಕಟ್ಟನ್ನು ಸಿಎಂ ಸಿದ್ದರಾಮಯ್ಯ (Siddaramaiah) ಇಂದು ಲೋಕಾರ್ಪಣೆ ಮಾಡಿದ್ದಾರೆ. ಜೊತೆಗೆ ಅಣೆಕಟ್ಟಿಗೆ ಬಾಗಿನವನ್ನು ಅರ್ಪಿಸಿದ್ದಾರೆ. 3 ತಾಲೂಕು, 48 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ನೀರಾವರಿ ಯೋಜನೆ ಇದಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಕೆ.ಹೆಚ್ ಮುನಿಯಪ್ಪ, ಬೈರತಿ ಸುರೇಶ್, ಕೆಜೆ ಜಾರ್ಜ, ಎಂಸಿ ಸುಧಾಕರ್ ಸೇರಿದಂತೆ ಜಿಲ್ಲೆಯ ಶಾಸಕರುಗಳು ಸಾಥ್ ನೀಡಿದ್ದಾರೆ.
ಡ್ಯಾಂ ಲೋಕಾರ್ಪಣೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೂರು ತಾಲೂಕಿನ ಜನರಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಉದ್ಘಾಟನೆ ಸಂತಸ ತಂದಿದೆ. ಈ ಮೊದಲು ಈ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇತ್ತು. ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿತ್ತು. ಇವತ್ತು 2197 ಕೋಟಿ ರೂ. ಯೋಜನೆಗೆ ಚಾಲನೆ ನೀಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಲಿಂಗಾಯತ ಸಮುದಾಯ ಶೆಟ್ಟರ್ 2013ರಲ್ಲಿ ಸಿಎಂ ಆಗಿದ್ರೂ ಬಿಜೆಪಿ ಅಧಿಕಾರ ಉಳಿಸಿಕೊಂಡಿತೇ? ಸಿದ್ದರಾಮಯ್ಯ, ಸಿಎಂ
ತಮ್ಮ ಭಾಷಣದಲ್ಲಿ ತಮ್ಮ ವಿರೋಧಿಗಳನ್ನು ಕುಟುಕಿದ ಸಿದ್ದರಾಮಯ್ಯ, ಅಭಿವೃದ್ಧಿ ಕುಂಠಿತವಾಗಿದೆ ಎನ್ನುತ್ತಾರೆ, ಅನುದನಾವೇ ಇಲ್ಲಾ ಎನ್ನುತ್ತಾರೆ, ಇದು ಕಡಿಮೆ ಹಣನಾ ಎಂದು ಚಾಟಿ ಬೀಸಿದ್ದಾರೆ. ಎತ್ತಿನಹೊಳೆ ಯೋಜನೆಯನ್ನು ಕೊಟ್ಟೆ ಕೊಡುತ್ತೇವೆ. ನಮ್ಮನ್ನು ಟೀಕೆ ಮಾಡುವವರಿಗೆ ಉತ್ತರ ಕೊಟ್ಟೆ ಕೊಡುತ್ತೇವೆ ಎಂದಿದ್ದಾರೆ.
ಹೆಚ್.ಎನ್.ವ್ಯಾಲಿ ನೀರಾವರಿ ಯೋಜನೆ ಕೊಟ್ಟಿದ್ದು ನಾನು ಸಿಎಂ ಆಗಿದ್ದಾಗ. ಕೆ.ಸಿ.ವ್ಯಾಲಿ ಮಾಡಬೇಡಿ, ಜನರಿಗೆ ವಿಷ ಕೊಡುತ್ತಾರೆಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದರು. ಕೆ.ಸಿ.ವ್ಯಾಲಿ ಯೋಜನೆಯ ನೀರು ಕುಡಿದು ಜಾನುವಾರುಗಳು ಸತ್ತಿವೆಯಾ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಚಳಿಗಾಲದ ಅಧಿವೇಶನಕ್ಕೆ ಮುನ್ನವೇ ಏತನೀರಾವರಿ ಯೋಜನೆಗಳ ಚಾಲನೆಗೆ ರೈತರ ಆಗ್ರಹ, ಪ್ರತಿಭಟನೆಯ ಎಚ್ಚರಿಕೆ
ವಿಶ್ವಸಂಸ್ಥೆ ಪ್ರತಿನಿಧಿಗಳೇ ಬಂದು ಪರೀಕ್ಷೆ ನಡೆಸಿ ಒಳ್ಳೇ ಯೋಜನೆ ಅಂದಿದ್ದಾರೆ. ಅವರನ್ನಾದರೂ ಕೇಳಿ ತಿಳಿದುಕೊಳ್ಳಿ, ರಾಜಕೀಯಕ್ಕಾಗಿ ಟೀಕೆ ಮಾಡಬೇಡಿ. ಮಿಸ್ಟರ್ ಕುಮಾರಸ್ವಾಮಿ ಕೇಳಿ ತಿಳಿದುಕೊಳ್ಳಿ. ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡಬಾರದೆಂದು ವಾಗ್ದಾಳಿ ಮಾಡಿದ್ದಾರೆ. ಇಡೀ ಕೋಲಾರ ಜಿಲ್ಲೆ ಮಲೆನಾಡು ರೀತಿ ಆಗೇ ಆಗುತ್ತದೆ ಎಂದಿದ್ದಾರೆ.
ರೈತರ ಪಂಪ್‌ಸೆಟ್‌ಗಳಿಗೆ ನಿತ್ಯ 7 ಗಂಟೆ ವಿದ್ಯುತ್ ಪೂರೈಸಲು ಹೇಳಿದ್ದೇವೆ. ಯಾವುದೇ ಕಾರಣಕ್ಕೂ ತಪ್ಪದಂತೆ ವಿದ್ಯುತ್ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೋದಿ ಬರುವ ಮೊದಲು 53 ಲಕ್ಷ 11 ಸಾವಿರ ಕೋಟಿ ರೂ. ಸಾಲ ಇತ್ತು. ಈಗ ದೇಶದ ಮೇಲೆ 125 ಲಕ್ಷ ಕೋಟಿ ರೂ. ಸಾಲ ಇದೆ. ಕರ್ನಾಟವನ್ನು ದಿವಾಳಿ ಮಾಡಿದ್ದಾರೆ ಎಂದು ಮೋದಿ ಹೇಳುತ್ತಾರೆ. ಇದೀಗ ಯಾರು ದಿವಾಳಿ ಮಾಡಿದ್ದಾರೆ. ಮಿಸ್ಟರ್ ನರೇಂದ್ರ ಮೋದಿಯವರು ದೇಶವನ್ನು ದಿವಾಳಿ ಮಾಡಿದ್ದಾರೆ. ಬೇಕಾದರೆ ಮೋದಿ ಅವರನ್ನ ಕರೆಯಿರಿ, ನಾನು ಹೇಳುತ್ತೇನೆ. ಕಾಂಗ್ರೆಸ್ ಪಕ್ಷ ಹೆಚ್ಚು ದಿನ ಇರಲ್ಲ ಅನ್ನೋದು ಮೋದಿ ಹಗಲುಗನಸು ಎಂದು ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.