ಬೆಳಗಾವಿ: ಚಳಿಗಾಲದ ಅಧಿವೇಶನಕ್ಕೆ ಮುನ್ನವೇ ಏತನೀರಾವರಿ ಯೋಜನೆಗಳ ಚಾಲನೆಗೆ ರೈತರ ಆಗ್ರಹ, ಪ್ರತಿಭಟನೆಯ ಎಚ್ಚರಿಕೆ
2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಮಂಜೂರು ಮಾಡಿದ್ದ ಅದೆಷ್ಟೋ ಏತನೀರಾವರಿ ಯೋಜನೆಗಳು ಇನ್ನೂ ಜಾರಿ ಆಗಿಲ್ಲ. ಉತ್ತರ ಕರ್ನಾಟಕ ಭಾಗದ ರೈತರ ಬಹುದಿನದ ಬೇಡಿಕೆಗಳ ಈಡೇರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿ ಬಂದಿದೆ.
ಬೆಳಗಾವಿ, ನವೆಂಬರ್ 11: ರಾಜ್ಯದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನಕ್ಕೆ (Winter Session) ದಿನಗಣನೆ ಆರಂಭವಾಗಿದೆ. ಈ ಮಧ್ಯೆ ಬೆಳಗಾವಿ (Belagavi) ಅಧಿವೇಶನಕ್ಕೂ ಮುನ್ನವೇ ಜಿಲ್ಲೆಯ ನೀರಾವರಿ ಯೋಜನೆಗಳ ಜಾರಿಗೆ ಆಗ್ರಹ ಕೇಳಿಬಂದಿದೆ. ಇಲ್ಲವಾದ್ರೆ ಅಧಿವೇಶನ ವೇಳೆ ಉಗ್ರ ಪ್ರತಿಭಟನೆ ನಡೆಸುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನಕ್ಕೆ ದಿನಗಣನೆ ಆರಂಭವಾಗಿದೆ. ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿ ಎಂಬ ಆಸೆಯಿಂದ ಪ್ರತಿ ಬಾರಿ ಬೆಳಗಾವಿ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಯುತ್ತದೆ. ಆದ್ರೆ ಇದು ಕೇವಲ ಮಾತಿನಲ್ಲಿಯೇ ಆಗಿದೆ ಹೊರತು ಯಾವುದೇ ಸರ್ಕಾರ ಬಂದರೂ ಇದನ್ನು ಕಾರ್ಯರೂಪಕ್ಕೆ ತರಲು ಆಗಿಲ್ಲ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮೊದಲ ಬಾರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಜನರ ನಿರೀಕ್ಷೆ ಮಾತ್ರ ಬೆಟ್ಟದಷ್ಟಿದೆ.
2013ರಲ್ಲಿ ಸಿದ್ದರಾಮಯ್ಯ ಮಂಜೂರು ಮಾಡಿದ್ದ ಯೋಜನೆಗಳೇ ಜಾರಿಯಾಗಿಲ್ಲ!
2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಮಂಜೂರು ಮಾಡಿದ್ದ ಅದೆಷ್ಟೋ ಏತನೀರಾವರಿ ಯೋಜನೆಗಳು ಇನ್ನೂ ಜಾರಿ ಆಗಿಲ್ಲ. ಉತ್ತರ ಕರ್ನಾಟಕ ಭಾಗದ ರೈತರ ಬಹುದಿನದ ಬೇಡಿಕೆಗಳ ಈಡೇರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿ ಬಂದಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯ ಖಿಳೆಗಾಂವ ಬಸವೇಶ್ವರ ಏತನೀರಾವರಿ, ಅಮ್ಮಾಜೇಶ್ವರಿ, ಕರಗಾಂವ ಏತನೀರಾವರಿ ಸೇರಿ ಹಲವು ಯೋಜನೆಗಳ ಜಾರಿಗೆ ರೈತರು ಆಗ್ರಹಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗುವ ಮುನ್ನವೇ ಯೋಜನೆಗಳಿಗೆ ಚಾಲನೆ ನೀಡುವಂತೆ ರೈತ ಮುಖಂಡರು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಯುವ ವೇಳೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ 4-15 ರವರೆಗೆ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ
ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಪಂಚನದಿಗಳು ಹರಿಯುತ್ತವೆ. ದೂಧ್‌ಗಂಗಾ, ವೇದಗಂಗಾ, ಕೃಷ್ಣಾ, ಹಿರಣ್ಯಕೇಶಿ, ಘಟಪ್ರಭಾ ಹೀಗೆ ಪಂಚನದಿಗಳು ಹರಿದರೂ ಇದು ಕೇವಲ ನದಿ ತೀರದ ಸುಮಾರು 63 ಹಳ್ಳಿಗಳಿಗೆ ಮಾತ್ರ ಅನುಕೂಲ ಆಗುತ್ತೆ. ನದಿ ತೀರದಿಂದ 25 ರಿಂದ 30 ಕಿಮೀ ಅಂತರದಲ್ಲಿ ಇರುವ ಗ್ರಾಮಗಳಲ್ಲಿ ಕುಡಿಯುವ ನೀರು ಸಹ ಸಿಗದ ಸ್ಥಿತಿ ಇದೆ. ಖಿಳೆಗಾಂವ ಬಸವೇಶ್ವರ ಏತನೀರಾವರಿ ಯೋಜನೆ ಜಾರಿ ಮಾಡಿದ್ದೇ ಆದ್ರೆ ಕಾಗವಾಡ, ಅಥಣಿ ತಾಲೂಕಿನ ರೈತರಿಗೆ ಅನುಕೂಕ ಆಗುತ್ತೆ. ಇತ್ತ ಕರಗಾಂವ ಏತನೀರಾವರಿ ಯೋಜನೆ ಜಾರಿ ಮಾಡಿದ್ರೆ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಹೋಬಳಿಯ ರೈತರಿಗೆ ಅನುಕೂಲವಾಗಲಿದೆ. ಪ್ರಸಕ್ತ ಸಾಲಿನಲ್ಲಿ ಭೀಕರ ಬರಗಾಲದಿಂದ ರೈತರು ಕಂಗಾಲಾಗಿದ್ದು ಶೀಘ್ರವೇ ಬೆಳೆ ಹಾನಿ ಸಮೀಕ್ಷೆ ನಡೆಸಿ ಮಧ್ಯಂತರ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.
ಅದೇನೇ ಇರಲಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗಲಿ. ಆದಷ್ಟು ಬೇಗ ಉತ್ತರ ಕರ್ನಾಟಕ ನೀರಾವರಿ ಯೋಜನೆಗಳು ಜಾರಿ ಆಗಿ ರೈತರ ಹಿತ ಕಾಪಾಡಲಿ ಎಂಬುದು ಸಾರ್ವಜನಿಕರ ಆಗ್ರಹ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ