ಭಯೋತ್ಪಾದ ಮನಸ್ಥಿತಿ ಬದಲಿಸಬೇಕಿದ್ದ ಕರ್ನಾಟಕದ ಮನೋವೈದ್ಯನೇ ಉಗ್ರನಿಗೆ ಮನಸೋತ..!

2008 ರಲ್ಲಿ ಬೆಂಗಳೂರಿನ ಸರಣಿ ಸ್ಫೋಟದ ಪ್ರಮುಖ ಆರೋಪಿ ಸದ್ಯ ಪರಪ್ಪನ ಅಗ್ರಹಾರ ಜೈಲುಪಾಲಾಗಿರುವ ಉಗ್ರ ನಾಸೀರ್ ಗೆ ನೆರವು ನೀಡಿದ ಆರೋಪದಡಿ NIA ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನ ಮೂವರನ್ನು ಬಂಧಿಸಿದ್ದು, ಕೋಲಾರದ ಓರ್ವನಿಗೆ ನೋಟೀಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ. ಜೈಲಿನಲ್ಲಿ ಉಗ್ರನ ಮನಸ್ಥಿತಿ ಬದಲಿಸಬೇಕಿದ್ದ ಮನೋವೈದ್ಯನೇ ಉಗ್ರನಿಗೆ ಮನಸೋತಿದ್ದಾನೆ. ಯಾರು ಈ ಉಗ್ರ ನಾಸೀರ್? ಉಗ್ರನ ಹಣಕ್ಕೆ ಮನಸೋತನಾ ಮನೋವೈಧ್ಯನ ಕಂಪ್ಲೀಟ್ ಡಿಟೇಲ್ಸ್.

ಭಯೋತ್ಪಾದ ಮನಸ್ಥಿತಿ ಬದಲಿಸಬೇಕಿದ್ದ ಕರ್ನಾಟಕದ ಮನೋವೈದ್ಯನೇ ಉಗ್ರನಿಗೆ ಮನಸೋತ..!
Suspected Terrorists
Updated By: ರಮೇಶ್ ಬಿ. ಜವಳಗೇರಾ

Updated on: Jul 09, 2025 | 9:03 PM

ಕೋಲಾರ, (ಜುಲೈ 09): ಅದು 2008 ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಸರಣಿ ಬಾಂಬ್​ ಸ್ಫೋಟ ಪ್ರಕರಣ ಪ್ರಮುಖ ಆರೋಪಿ, ಲಷ್ಕರ್ ಇ ತೊಯ್ಬಾ ಸಂಘಟನೆಯ ನಂಟು ಹೊಂದಿದ್ದು ನಾಸೀರ್ ಎಂಬಾತನನ್ನು ಬೆಂಗಳೂರು ಪೊಲೀಸರು ಬಂದಿಸಿದ್ದರು. ಬಂಧಿತ ಉಗ್ರ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೈಲುವಾಸ ಅನುಭವಿಸುತ್ತಿದ್ದಾನೆ. ಈ ನಡುವೆ ಪರಪ್ಪನ ಅಗ್ರಹಾರ ಜೈಲಿನ ವಾಸಿಯಾಗಿದ್ದ ನಾಸೀರ್ ಎಂಬಾತನ ಜೊತೆಗೆ ನಂಟು ಹೊಂದಿರುವ ಹಾಗೂ ಉಗ್ರಹನಿಗೆ ನೆರವು ನೀಡಿದ ಆರೋಪದಡಿಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾನಸೀಕ ವೈಧ್ಯರಾಗಿದ್ದ ಡಾ.ನಾಗರಾಜ್​,ಅಲ್ಲಿ ಎಸ್ಕಾರ್ಟ್​ ವಿಭಾಗದ ಎ.ಎಸ್​.ಐ ಚಾಂದ್ ಪಾಷಾ ಹಾಗೂ ಬಾಂಬ್​ ಬ್ಲಾಸ್ಟ್ ಸಂಘಟನೆಯ ಮತ್ತೊಬ್ಬ ಆರೋಪಿ ಜುನೇದ್ ಅವರ ತಾಯಿ ಹನೀಸ್​ ಫಾತೀಮ ಅವರನ್ನು NIA ಅಧಿಕಾರಿಗಳು ಬಂಧಿಸಿದ್ದಾರೆ.

ಅಷ್ಟೇ ಅಲ್ಲದೆ ಕೋಲಾರ ತಾಲ್ಲೂಕು ಭಟ್ರಹಳ್ಳಿ ಗ್ರಾಮದ ಸತೀಶ್​ ಗೌಡ ಎಂಬುವರ ಮನೆಯನ್ನು ಹುಡುಕಾಡಿರುವ NIA ಅಧಿಕಾರಿಗಳು ನೋಟೀಸ್ ನೀಡಿದ್ದು, NIA ಬೆಂಗಳೂರಿನ ಕಚೇರಿಗೆ ಬರುವಂತೆ ನೋಟೀಸ್ ನೀಡಿ ತೆರಳಿದ್ದಾರೆ. 2023 ರಲ್ಲೇ NIA ಅಧಿಕಾರಿಗಳು ನೋಟೀಸ್ ನೀಡಿದ್ದರು ಎನ್ನಲಾಗಿದ್ದು, ಈಗಾಗಲೇ ಸತೀಶ್​ ಗೌಡ ನಿರೀಕ್ಷಣಾ ಜಾಮೀನುಗು ಅರ್ಜಿ ಸಲ್ಲಿಸಿದ್ದರು.ಸದ್ಯ NIA ಅಧಿಕಾರಿಗಳು ಬರುವ ಸುಳಿವು ಸಿಕ್ಕಿದ್ದು ಸತೀಶ್ ಗೌಡ ನಾಪತ್ತೆಯಾಗಿದ್ದಾನೆ.

ಇದನ್ನೂ ಓದಿ: ಕರ್ನಾಟಕದ ಮೂವರು ಶಂಕಿತ ಉಗ್ರರನ್ನ NIA ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

ಇನ್ನು ಮೂಲತ ಕೋಲಾರದವರು ಎನ್ನಲಾಗಿರುವ ಎ.ಎಸ್​.ಐ ಚಾಂದ್ ಪಾಷಾ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಎಸ್ಕಾರ್ಟ್​ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದ ಚಾಂದ್​ ಪಾಷಾ ಉಗ್ರ ನಾಸೀರ್​ ನೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

ಉಗ್ರನ ಹಣಕ್ಕೆ ಮನಸೋತನಾ ಮನೋವೈಧ್ಯ..!

ಇನ್ನು ಮನೋವೈದ್ಯ ಡಾ.ನಾಗರಾಜ್​ ಕೂಡಾ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಮೂಲದದವರು.ಡಾ.ನಾಗರಾಜ್ ಕೂಡಾ ಉಗ್ರ ನಸೀರ್ ಜೊತೆಗೆ ಸಂಪರ್ಕ ಹೊಂದಿದ್ದು ಆತನಿಗೆ ಬೇರೆ ಬೇರೆ ಮೂಲಗಳಿಂದ ಹಣ ಸಂಗ್ರಹ ಮಾಡಲು ಬೇಕಾದ ಫೋನ್​, ಸಿಮ್​ ಕಾರ್ಡ್ ಇನ್ನಿತರ ವಿಶೇಷ ಸೌಲಭ್ಯಗಳನ್ನು ನೀಡುತ್ತಿದ್ದರು ಅನ್ನೋ ಮಾಹಿತಿ NIA ಅಧಿಕಾರಿಗಳಿಗೆ ಸಿಕ್ಕಿದೆ. ಮನೋವೈದ್ಯ ನಾಗರಾಜ್​ ಹತ್ತು ಸಾವಿರ ಬೆಲೆಯ ಮೊಬೈಲ್​ ಫೋನ್​ ನನ್ನು ಐವತ್ತು ಸಾವಿರ ರೂಪಾಯಿಗೆ ನಾಸೀರ್​ ಗೆ ಮಾರಾಟ ಮಾಡುತ್ತಿದ್ದನಂತೆ. ಕೈದಿಗಳ ಮನಸ್ಸು ಬದಲಾಯಿಸಬೇಕಿದ್ದ ನಾಗರಾಜ್ ಖೈದಿಗಳ ಮನಸ್ಥಿತಿಗೆ ಬದಲಾಗಿದ್ದ, ಅವರಿಗೆ ಬೇಕಾದ ಸವಲತ್ತು ತಂದುಕೊಡುವ ಕೆಲಸಕ್ಕೆ ಇಳಿದು ತನ್ನ ಮನಸ್ಥಿತಿಯನ್ನೇ ಬದಲಾಯಿಸಿಕೊಂಡಿದ್ದಾನೆ.

ಇನ್ನು ಅನೀಸ್ ಫಾತೀಮಾ ಮತ್ತೊಬ್ಬ ತಲೆ ಮರೆಸಿಕೊಂಡಿರುವ ಶಂಕಿತ ಉಗ್ರ ಜುನೇದ್ ಅಹಮದನ ತಾಯಿ, ನಾಸೀರ್ ಸನೀಸ್​ ಫಾತೀಮಾಳನ್ನು ಬಳಸಿಕೊಂಡು ತನ್ನ ಉಗ್ರ ಚಟುವಟಿಕೆಗಳಿಗೆ ಹಣ ಸಂಗ್ರಹ ಮಾಡುವ ಕೆಲಸ ಮಾಡುತ್ತಿದ್ದನಂತೆ.

ಸಿಮ್​ ಕಾರ್ಡ್ ನೀಡಿದ್ದ ಸತೀಶ್ ಗೌಡ..!

ಇನ್ನು ಉಗ್ರ ನಾಸೀರ್​ ಬಳಸುತ್ತಿದ್ದ ಮೊಬೈಲ್​ ಸಿಮ್​ ಕಾರ್ಡ್​ ನ್ನು ಕೋಲಾರ ತಾಲ್ಲೂಕು ಭಟ್ರಹಳ್ಳಿ ನಿವಾಸಿ ಸತೀಶ್​ ಗೌಡ ನೀಡಿದ್ದಾನೆ ಎಂದು ತಿಳಿದುಬಂದಿದೆ. ಕಳೆದ ಮೂರು ವರ್​ಷಗಳ ಹಿಂದೆ ಬೆಂಗಳೂರಿನ ಹೊಸೂರು ರಸ್ತೆಯ ಏರ್​ ಟೆಲ್​ ಕಂಪನಿಯಲ್ಲಿ ಕೆಲಸ ಮಾಡುವ ವೇಳೆ ಸಿಮ್​ ಕಾರ್ಡ್ ನೀಡಿರುವ ಆರೋಪದ ಹಿನ್ನೆಲೆಯಲ್ಲಿ NIA ಅಧಿಕಾರಿಗಳು ಭಟ್ರಹಳ್ಳಿಯ ಸತೀಶ್​ ಗೌಡ ಅವರ ಅತ್ತೆ ಮನೆಗೆ ಭೇಟಿ ನೀಡಿದ್ದರು. ಆದ್ರೆ, ಸತೀಶ್ ಗೌಡ, ನೋಟಿಸ್​ ನೀಡಿ ವಿಚಾರಣೆಗೆ ಬರುವಂತೆ ಹೇಳಿ ತೆರಳಿದ್ದಾರೆ.

ಕೋಲಾರ ತಾಲ್ಲೂಕು ವಾನರಾಶಿ ಗ್ರಾಮದ ಸತೀಶ್​ ಗೌಡ ತನ್ನ ತಂದೆ ತಾಯಿಯನ್ನು ಕಳೆದುಕೊಂಡ ನಂತರ ಭಟ್ರಹಳ್ಳಿಯ ತನ್ನ ಅತ್ತೆ ಮನೆಯಲ್ಲಿ ತನ್ನ ಪತ್ನಿಯೊಂದಿಗೆ ನೆಲೆಸಿದ್ದ. ಅಲ್ಲದೆ ಕಳೆದ ಮೂರು ವರ್ಷಗಳ ಹಿಂದೆಯೇ ಏರ್​ ಟೆಲ್​ ನಲ್ಲಿ ಕೆಲಸ ಬಿಟ್ಟು ಹಾಲಿನ ಡೈರಿಯಲ್ಲಿ ಕೆಲಸಕ್ಕೆ ಸೇರಿದ್ದ. ಸದ್ಯ ಅಲ್ಲೂ ಕೆಲಸ ಬಿಟ್ಟು ಕೆಲಸ ಇಲ್ಲದೆ ಕಳೆದ ಮೂರು ತಿಂಗಳಿಂದ ಸತೀಶ್​ ಗೌಡ ಮನೆಯಲ್ಲಿ ಇದ್ದ. ಹೀಗಿರುವಾಗಲೇ ನಿನ್ನೆ NIA ಅಧಿಕಾರಿಗಳು ಸತೀಶ್ ಗೌಡ ಪೋಟೋ ಹಿಡಿದು ಆತನ ಹುಡುಕಾಟ ನಡೆಸುತ್ತಿರುವ ವಿಷಯ ತಿಳಿದು ಸತೀಶ್ ಗೌಡ ನಾಪತ್ತೆಯಾಗಿದ್ದ ಹಿನ್ನೆಲೆ ನೋಟೀಸ್ ಜಾರಿ ಮಾಡಿ ವಿಚಾರಣೆಗೆ ಬರುವಂತೆ ನೋಟೀಸ್ ನೀಡಿದ್ದಾರೆ.

ಒಟ್ಟಾರೆ ಜೈಲಿನಲ್ಲಿದ್ದ ಉಗ್ರನ ಮನಪರಿವರ್ತಿಸಬೇಕಿದ್ದ ವೈದ್ಯರೇ ಉಗ್ರನ ಮನಸ್ಥಿತಿಗೆ ಬದಲಾಗಿ, ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಗಳೇ ಉಗ್ರನ ಸೇವಕರಾಗಿದ್ದಾರೆ. ಸದ್ಯ ಇವರು ಉಗ್ರ ನಾಸೀರ್ ನೊಂದಿಗೆ ಸೇರಿ ಇನ್ನು ಏನೆಲ್ಲಾ ಅನಾಹುತಗಳನ್ನ ಮಾಡಿದ್ದಾರೆ ಎನ್ನುವುದು NIA ವಿಚಾರಣೆಯಿಂದ ತಿಳಿದು ಬರಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ