ಕರ್ನಾಟಕದ ಮೂವರು ಶಂಕಿತ ಉಗ್ರರನ್ನ NIA ಕಸ್ಟಡಿಗೆ ನೀಡಿ ಕೋರ್ಟ್ ಆದೇಶ
ಎಲ್‌ಇಟಿ ಭಯೋತ್ಪಾದಕ ಟಿ ನಾಸೀರ್‌ಗೆ ನೆರವು ನೀಡಿದ ಆರೋಪದಡಿ ಮೂವರು ಶಂಕಿತ ಉಗ್ರರನ್ನ ಎನ್‌ಐಎ (NIA) ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ. ಬೆಂಗಳೂರು ಮತ್ತು ಕೋಲಾರದಲ್ಲಿ 5 ಕಡೆ ದಾಳಿ ನಡೆಸಿ ಮೂವರನ್ನ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಹೀಗಾಗಿ ಇನ್ನಷ್ಟು ಹೆಚ್ಚಿನ ತನಿಖೆಗಾಗಿ ಮೂವರನ್ನು ಕೋರ್ಟ್ ಗೆ ಹಾಜರುಪಡಿಸಿ ವಶಕ್ಕೆ ನೀಡುವಂತೆ ಎನ್‌ಐಎ ಮನವಿ ಮಾಡಿದ್ದು, ಕೋರ್ಟ್ ಸಹ ಮೂವರನ್ನ ಎನ್‌ಐಎ ವಶಕ್ಕೆ ನೀಡಿದೆ.

ಬೆಂಗಳೂರು, (ಜುಲೈ 09): ಎನ್‌ಐಎ ಅಧಿಕಾರಿಗಳು ನಿನ್ನೆ(ಜುಲೈ 08) ಬೆಂಗಳೂರು (Bengaluru) ಹಾಗೂ ಕೋಲಾರದಲ್ಲಿ (Kolar) ದಾಳಿ ನಡೆಸಿದ್ದು, ಉಗ್ರರಿಗೆ ನೆರವು ನೀಡಿದ ಆರೋಪದಡಿ ಮೂವರು ಶಂಕಿತ ಉಗ್ರರನ್ನ (suspected terrorists) ಬಂಧಿಸಿದ್ದಾರೆ. ಇದೀಗ ಕೋರ್ಟ್, ಸಹ ಬಂಧಿತ ಮನೋವೈದ್ಯ ನಾಗರಾಜ್, ಚಾಂದ್ ಪಾಷಾ ಹಾಗೂ ಅನೀಸ್ ಫಾತೀಮಾಳನ್ನು 6 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಜುಲೈ 14ರವರೆಗೆ ಕಸ್ಟಡಿಗೆ ನೀಡಿ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ NIA ವಿಶೇಷ ಕೋರ್ಟ್ ಆದೇಶಿಸಿದ್ದು, ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ತನಿಖೆ ಇನ್ನಷ್ಟು ತೀವ್ರಗೊಳಿಸಲಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ನಾಗರಾಜ್, ಎಎಸ್ಐ ಚಾಂದ್ ಪಾಷಾ ಮತ್ತು ಶಂಕಿತ ಉಗ್ರನ ತಾಯಿ ಫಾತೀಮಾಳನ್ನು ಎನ್‌ಐಎ ಅಧಿಕಾರಿಗಳು ನಿನ್ನೆ(ಜುಲೈ 09) ಬಂಧಿಸಿದ್ದರು. ಇವರೆಲ್ಲರೂ ದಕ್ಷಿಣ ಭಾರತದ ಹಲವು ಸ್ಫೋಟಗಳ ಮಾಸ್ಟರ್‌ಮೈಂಡ್ ನಾಸೀರ್ ಜೊತೆ ಸಂಪರ್ಕ ಹೊಂದಿದ್ದರು ಎಂದು ಸುಳಿವು ಸಿಕ್ಕಿದ್ದು, ಈ ಸಂಬಂಧ ಎನ್‌ಐಎ, ಕೋರ್ಟ್ ಅನುಮತಿ ಮೇರೆಗೆ ವಶಕ್ಕೆ ಪಡೆದುಕೊಂಡು ಹೆಚ್ಚಿನ ತನಿಖೆ ನಡೆಸಲಿದ್ದಾರೆ.
ಇದನ್ನೂ ಓದಿ: ಬೆಂಗಳೂರು, ಕೋಲಾರದಲ್ಲಿ NIA ದಾಳಿ: ಒಟ್ಟು ಮೂವರು ಶಂಕಿತ ಉಗ್ರರ ಬಂಧನ..!
ಉಗ್ರ ನಾಸೀರ್, ಕೊಲೆ ಕೇಸ್ನಲ್ಲಿ ಶಾಮೀಲಾಗಿದ್ದ ಯುವಕರ ತಂಡ ಕಟ್ಟಿದ್ದ. ಜುನೈದ್, ಮೊಹಮ್ಮದ್ ಹರ್ಷದ್ ಖಾನ್, ಸುಹೈಲ್, ಫೈಜಲ್, ಜಾಹಿದ್ ತಬ್ರೇಜ್, ಮುದಾಸಿರ್ ಇರುವ ತಂಡ ರೆಡಿ ಮಾಡಿದ್ದ. ಈ ತಂಡ ಗ್ರೆನೇಡ್, ಪಿಸ್ತೂಲ್, ಸ್ಫೋಟಕ ವಸ್ತುಗಳ ಸಮೇತ ಬೆಂಗಳೂರಿನ ಆರ್.ಟಿ.ನಗರ, ಹೆಬ್ಬಾಳದಲ್ಲಿ ಸಿಕ್ಕಿ ಬಿದ್ದಿತ್ತು. ಇದೀಗ ಪ್ರಮುಖ ಆರೋಪಿ ಜುನೈದ್ಗಾಗಿ ಎನ್‌ಐಎ ಹುಡುಕಾಟ ನಡೆಸುತ್ತಿದೆ. ಈ ವಿಚಾರ ಸಂಬಂಧ ದಾಳಿ ನಡೆಸಿದಾಗ ಡಾ. ನಾಗರಾಜ್, ಚಂದ್ ಪಾಷಾ ಹಾಗೂ ಅನೀಸ್ ಫಾತೀಮಾ ಸಿಕ್ಕಿಬಿದ್ದಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:14 pm, Wed, 9 July 25



