ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ. ಇದರಿಂದ ಕೋಲಾರ ಜಿಲ್ಲಾ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದರ ಮಧ್ಯೆ ಕೋಲಾರದಲ್ಲಿ ಮಹಿಳೆಯೊಬ್ಬರು ಪತಿಗೆ ಬಿಜೆಪಿ ಟಿಕೆಟ್ ಸಿಗುವಂತಾಗಿ ಶಾಸಕವನಾಗುವಂತೆ ಮಾಡಮ್ಮ ಎಂದು ಮಾಲೂರಿನ ಶಕ್ತಿ ದೇವತೆ ಮಾರಿಕಾಂಬಾ ದೇವಿಗೆ ಹರಕೆ ಪತ್ರ ಬರೆದು ಗಮನಸೆಳೆದಿದ್ದಾರೆ.
ಹೌದು..ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಬಿಜೆಪಿ ಆಕಾಂಕ್ಷಿಯಾದ ಹೂಡಿ ವಿಜಯಕುಮಾರ್ ಪತ್ನಿ ಶ್ವೇತ ವಿಜಯಕುಮಾರ್ ಅವರೇ ಹರಕೆ ಪತ್ರದ ಮೂಲಕ ಬೇಡಿಕೆ ಇಟ್ಟಿದ್ದಾರೆ. ಈ ಬಾರಿ ಮಾಲೂರುನಿಂದ ಸ್ಪರ್ಧೆಸಲು ಬಿಜೆಪಿ ಅವಕಾಶ ಮಾಡಿಕೊಟ್ಟು ಅಭ್ಯರ್ಥಿಯನ್ನಾಗಿ ಮಾಡಿ ನನ್ನ ಪತಿ ಎಂಎಲ್ಎ ಆಗಬೇಕೆಂದು ಪತ್ನಿ ಶ್ವೇತ ವಿಜಯಕುಮಾರ್ ಮಾಲೂರಿನ ಶಕ್ತಿ ದೇವತೆ ಮಾರಿಕಾಂಬಾ ದೇವಿಗೆ ಹರಕೆ ಪತ್ರ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಕೋಲಾರ: ಪತಿಯನ್ನು ಎಂಎಲ್ಎ ಮಾಡುವಂತೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಪತ್ನಿಯ ಹರಕೆ ಪತ್ರ
ಕಳೆದ ನಾಲ್ಕು ವರ್ಷಗಳಿಂದ ಹೂಡಿ ವಿಜಯಕುಮಾರ್ ನಿರಂತರವಾಗಿ ಮಾಲೂರಿನಲ್ಲಿ ಸಮಾಜ ಸೇವೆ ಮಾಡಿಕೊಂಡು ಬಂದಿದ್ದಾರೆ. ಪುರಸಭೆ ಚುನಾವಣೆ, ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷವನ್ನು ಸಂಘಟನೆ ಮಾಡಿದ್ದಾರೆ. ಆದ್ರೆ ಇತ್ತೀಚಿಗೆ ಮಾಜಿ ಶಾಸಕ ಮಂಜುನಾಥ್ ಗೌಡ ಅವರು ಜೆಡಿಎಸ್ ಪಕ್ಷದಿಂದ ಬಿಜೆಪಿಗೆ ಸೇರ್ಪಡೆಯಾಗಿರುವ ಕಾರಣ ಟಿಕೆಟ್ ಫೈಟ್ ಜೋರಾಗಿದೆ. ಹಾಗಾಗಿ ಪತ್ನಿ ಶ್ವೇತಾ ವಿಜಯಕುಮಾರ್ ಬಿಜೆಪಿ ಟಿಕೆಟ್ ಸಿಕ್ಕು, ಮಾಲೂರಿನ ಜನರ ಸೇವೆ ಮಾಡುವಂತಹ ಅವಕಾಶ ದೇವರು ಕಲ್ಪಿಸಿಕೊಡಬೇಕೆಂದು ದೇವರಿಗೆ ಪತ್ರವನ್ನು ಬರೆದಿದ್ದಾರೆ. ಜೊತೆಗೆ ಮಾರಿಕಾಂಬ ದೇವರಿಗೆ ಹರಕೆ ಮಾಡಿಕೊಂಡರೆ ದೇವಿ ಈಡೇರಿಸಲಿದೆ ಎಂಬ ಪತೀತಿ ಇರುವುದರಿಂದ ಪತಿಗಾಗಿ ಶ್ವೇತಾ ವಿಜಯಕುಮಾರ್ ದೇವರ ಮುಂದೆ ಪತ್ರ ಬರೆದು ನಂತರ ಹುಂಡಿಯಲ್ಲಿ ಹಾಕಿದ್ದಾರೆ.
ಇನ್ನು ದೇವರಿಗೆ ಪತ್ರ ಬರೆಯುವ ಜೊತೆಗೆ ಹೂಡಿ ವಿಜಯ್ ಕುಮಾರ್ ಅವರ ಪತ್ನಿ ಶ್ವೇತಾ ಅವರು ಸೊಣಪನಹಟ್ಟಿಯಲ್ಲಿ ನಡೆದ ಬಸವಣ್ಣನ ಜಾತ್ರೆಗೆ ಭೇಟಿ ಕೊಟ್ಟು ದೇವರಿಗೆ ವಿಶೇಷವಾದ ಹರಕೆ ಕಟ್ಟಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಬಸವಣ್ಣನ ಜಾತ್ರಾ ಮಹೋತ್ಸವದಲ್ಲಿ ಒಂದು ವಿಶೇಷವಾದ ಪದ್ದತಿ ನಡೆದುಕೊಂಡು ಬಂದಿದೆ. ಯಾರಾದ್ರೂ ಭಕ್ತಿಯಿಂದ ತಮ್ಮ ಮನದ ಆಸೆಯನ್ನು ಬಾಳೆಹಣ್ಣಿನ ಮೇಲೆ ಬರೆದು ಅಥವಾ ಮನಸ್ಸಿನಲ್ಲಿ ಹರಕೆ ಕಟ್ಟಿಕೊಂಡು ದೇವರ ರಥದ ಮೇಲೆ ಬಾಳೆಹಣ್ಣು ಎಸೆದರೆ ಬರುವ ಜಾತ್ರೆಯ ಹೊತ್ತಿಗೆ ಹರಕೆ ಫಲಿಸುತ್ತೆ ಅನ್ನೋ ನಂಬಿಕೆ ನಡೆದುಕೊಂಡು ಬಂದಿದೆ.
ಈಗಾಗಿ ಇದೆ ದಿನಕ್ಕಾಗಿ ಕಾಯುವ ಸುತ್ತಮುತ್ತಲಿನ ಗ್ರಾಮದವರು ಹಾಗೂ ರಾಜ್ಯದ ಬೇರೆ ಬೇರೆ ಭಾಗಗದ ಜನರು ಜಾತ್ರೆಗೆ ಭೇಟಿ ಕೊಟ್ಟು ಬಸವಣ್ಣ ದೇವರ ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಬೇಡಿಕೆ ಈಡೇರಿಸಿಕೊಳ್ಳುತ್ತಾರೆ.ಇನ್ನು ವಿಷಯ ತಿಳಿದು ಜಾತ್ರೆಗೆ ಬಂದ ಹೂಡಿ ವಿಜಯ್ ಕುಮಾರ್ ಅವರ ಪತ್ನಿ ಶ್ವೇತಾ ಅವರು ಮೊದಲು ರಾಸುಗಳಿಗೆ ಉಚಿತ ಆಹಾರ ನೀಡಿ, ನಂತರ ಬಸವಣ್ಣನ ಆಶೀರ್ವಾದ ಪಡೆದು ಬಳಿಕ ನನ್ನ ಪತಿ ವಿಜಯ್ ಕುಮಾರ್‌ರನ್ನು ಈ ಬಾರಿ ಶಾಸಕರನ್ನಾಗಿ ಮಾಡು ಎಂದು ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ಎಸೆದು ಹರಕೆ ಕಟ್ಟಿಕೊಂಡಿದ್ದಾರೆ.
ಒಟ್ಟಾರೆ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆಣೆ ಪ್ರಮಾಣ, ಆಮಿಷಗಳ ಜೊತೆಗೆ ಪತಿಗೆ ಟಿಕೆಟ್ ಸಿಗಬೇಕೆಂದು ದೇವರಿಗೆ ಹರಕೆ ಮಾಡಿಕೊಂಡಿರುವುದು ಕೋಲಾರದಲ್ಲಿ ವಿಶೇಷವಾಗಿದ್ದು, ಚುನಾವಣೆ ಹೊಸ್ತಿಲಲ್ಲಿ ಮತ್ತಷ್ಟು ವಿಸ್ಮಯಗಳು ಈ ರೀತಿಯ ವಿಶೇಷ ಸಂಗತಿಗಳು ಗಮನ ಸೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ.
ವರದಿ : ರಾಜೇಂದ್ರ ಸಿಂಹ, ಟಿವಿ9 ಕೋಲಾರ
Published On - 8:27 pm, Mon, 30 January 23