ಅದು ಗುಂಡಿಗಳಿಂದಲೇ (Potholes) ನಿರ್ಮಾಣವಾಗಿರುವ ರಸ್ತೆ, ಅಲ್ಲಿ ಸಂಚಾರ ಮಾಡಬೇಕು ಅಂದ್ರೆ ಪುನರ್ಜನ್ಮ ನಮ್ಮ ಬೆನ್ನಿಗೆ ಕಟ್ಟಿಕೊಂಡೇ/ಗಾಡಿಯಲ್ಲಿಟ್ಟುಕೊಂಡೇ ಸಂಚಾರ ಮಾಡಬೇಕು. ಇಲ್ಲವಾದರೆ ಯಾರು, ಯಾವ ವಾಹನ ನಮ್ಮ ಮೇಲೆ ಯಮನಾಗಿ ಬಂದು ನಮ್ಮ ಜೀವ ತೆಗೆಯುತ್ತೋ ಗೊತ್ತಿಲ್ಲ. ಅಂಥಾ ಪರಿಸ್ಥಿತಿಯಲ್ಲಿನ ರಸ್ತೆಯಲ್ಲಿ ಹತ್ತಾರು ಕನಸುಗಳನ್ನು ಹೊತ್ತು ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳು (nursing student) ದುರ್ಮರಣಕ್ಕೀಡಾಗಿದ್ದಾಳೆ . ಅಪಘಾತದ ಹೊಡೆತಕ್ಕೆ (Road Accident) ಸಿಲುಕಿ ವಿದ್ಯಾರ್ಥಿನಿಯ ದೇಹ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಮಗಳನ್ನು ಕಳೆದುಕೊಂಡ ಹೆತ್ತವರು ಗರಬಡಿದವರಂತಾದರು. ಇನ್ನೊಂದೆಡೆ ಪೊಲೀಸ್ ಠಾಣೆಯ ಬಳಿ ನಿಂತಿರುವ ವಿದ್ಯಾರ್ಥಿಯನ್ನು ಬಲಿ ಪಡೆದ ಲಾರಿಯು (Lorry) ಛೇ! ನನ್ನಿಂದ ಆ ಮಗು ಮೃತಪಟ್ಟಿತಾ? ಅಥವಾ ರಸ್ತೆ ಸರಿಯಿದ್ದಿದ್ದರೆ ನಾನು ಯಮರೂಪಿಯಾಗದೆ ನನ್ನ ಪಾಡಿಗೆ ನಾನು ಸಾಗುತ್ತಿದೆನಾ ಎಂದು ಮೂಕರೋದನೆಯಲ್ಲಿತ್ತು.
ಇದೆಲ್ಲಾ ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆ ಮಾಲೂರಿನಲ್ಲಿ (Malur). ಅಷ್ಟಕ್ಕೂ ಇಲ್ಲಿ ಆಗಿದ್ದೇನು ಎಂದು ನೋಡೋದಾದ್ರೆ, ಮಾಲೂರು ತಾಲ್ಲೂಕಿನ ಮಾಕನಹಳ್ಳಿ ಗ್ರಾಮದ ಮಂಜುನಾಥಚಾರಿ ಎಂಬುವರ ಒಬ್ಬಳೇ ಮಗಳು ಪುಷ್ಪ ಮಾಲೂರು ಪಟ್ಟಣದ ಮಾನಸ ವಿದ್ಯಾ ಸಂಸ್ಥೆಯಲ್ಲಿ ಕೊನೆಯ ವರ್ಷದ ನರ್ಸಿಂಗ್ ಓದುತ್ತಿದ್ದಳು. ಪುಷ್ಪಾ ಎಂದಿನಂತೆ ಇಂದು ತನ್ನ ಹೋಂಡಾ ಆಕ್ಟೀವಾ ಗಾಡಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದಳು.
ಈ ವೇಳೆ ಯಶವಂತಪುರ ಗೇಟ್ ಬಳಿಯಲ್ಲಿ ಏಕಾಏಕಿ ಯಮನಂತೆ ಬಂದ ಲಾರಿಯೊಂದು ಪುಷ್ಪಾ ಬೈಕ್ಗೆ ಡಿಕ್ಕಿ ಹೊಡೆದಿದೆ. ಆಗ ಕೆಳಗೆ ಬಿದ್ದ ಪುಷ್ಪಾ ತಲೆಯ ಮೇಲೆ ಲಾರಿಯ ಚಕ್ರಗಳು ಹರಿದಿವೆ. ಚಕ್ರಕ್ಕೆ ಸಿಲುಕಿದ ಪುಷ್ಪಾ ತಲೆ ಛಿದ್ರ ಛಿದ್ರವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ದೃಶ್ಯಗಳನ್ನು ನೋಡಿದ ಸ್ಥಳೀಯರಂತೂ ದಿಗ್ಭ್ರಾಂತರಾಗಿದ್ದಾರೆ.
ನೋಡ ನೋಡುತ್ತಿದ್ದಂತೆ ನಡೆದ ಅದೊಂದು ಅಪಘಾತ ಪ್ರತ್ಯಕ್ಷದರ್ಶಿಗಳಿಗೆ ಆಘಾತವನ್ನುಂಟು ಮಾಡಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಂದು ಮಾಲೂರು ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಮೃತ ವಿದ್ಯಾರ್ಥಿನಿಯ ಶವವನ್ನು ಮಾಲೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪುಷ್ಪಾ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು. ಇದ್ದ ಒಬ್ಬಳೇ ಮಗಳನ್ನು ಕಳೆದು ಕೊಂಡು ಕುಟುಂಬಸ್ಥರು ಗರಬಡಿದವರಂತಾಗಿದ್ದರು. ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ತಂದೆಗೆ ನಾನು ಚೆನ್ನಾಗಿ ಓದಿ ನಿಮ್ಮನ್ನು ಸಾಕುತ್ತೇನೆ ಎಂದು ಹೇಳುತ್ತಿದ್ದ ಮಗಳನ್ನು ಕಳೆದುಕೊಂಡು ಕಣ್ಣೀರು ಹಾಕುವಂತಾಗಿದೆ.
ಮಾಲೂರು ಪಟ್ಟಣ ಕಳೆದ ಕೆಲವು ತಿಂಗಳಿಂದ ಯಮಲೋಕವಾಗಿ ಪರಿಣಮಿಸಿದೆ. ಕಾರಣ ಮಾಲೂರು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ರಸ್ತೆಯಲ್ಲಿ ಗುಂಡಿ ಇದೆಯೋ, ಇಲ್ಲಾ ಗುಂಡಿಗಳ ಮಧ್ಯೆ ರಸ್ತೆ ಮಾಡಲಾಗಿದೆಯೋ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇಂಥ ಹಾಳಾಗಿರುವ ರಸ್ತೆಯಲ್ಲಿ ಜನರು ತಮ್ಮ ಪ್ರಾಣವನ್ನು ಕೈಯಲಿ ಹಿಡಿದುಕೊಂಡು ಪ್ರಯಾಣ ಮಾಡೋದು ದುಸ್ಥರವಾಗಿದೆ.
ಮನೆಯಿಂದ ಹೊರಗೆ ಹೋದವರು ಮನೆಗೆ ವಾಪಸ್ ಬರ್ತಾರೆ ಅನ್ನೋ ನಂಬಿಕೆಯೇ ಇಲ್ಲವಾಗಿದೆ. ರಸ್ತೆಯ ತುಂಬೆಲ್ಲಾ ಗುಂಡಿಗಳು ತುಂಬಿದ್ದು ಸ್ವಲ್ಪವೇ ಯಾಮಾರಿದರೂ ಯಮಲೋಕ ಸೇರೋದು ಗ್ಯಾರಂಟಿ. ಅದಕ್ಕೆ ತಕ್ಕಂತೆ ಮಾಲೂರು ಪಟ್ಟಣದ ಎರಡು ಕೈಗಾರಿಕಾ ಪ್ರದೇಶಗಳಿಗೆ ಬರುವ ಬೃಹತ್ ವಾಹನಗಳ ಸಂಖ್ಯೆ ಹೆಚ್ಚಿದೆ. ಅದಕ್ಕೆ ತಕ್ಕಂತೆ ಮಾಲೂರಿನಲ್ಲಿ ಜೆಲ್ಲಿ ಕ್ರಶರ್ಗಳು ಹೆಚ್ಚಾಗಿದ್ದು ಹತ್ತಿರದ ಬೆಂಗಳೂರಿಗೆ ಜೆಲ್ಲಿ, ಕೃತಕ ಮರಳು ಸಾಗಣೆ ಮಾಡಲು ನಿತ್ಯ ಸಾವಿರಾರು ಟಿಪ್ಪರ್ಗಳು ಓಡಾಡುತ್ತವೆ. ಇಂಥ ಪರಿಸ್ಥಿತಿಯಲ್ಲಿ ಪ್ರತಿನಿತ್ಯ ಅಮಾಯಕ ಜೀವಗಳು ಸಾಯುತ್ತಲೇ ಇವೆ. ಆದರೂ ಕೂಡಾ ಇಲ್ಲಿನ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ರಸ್ತೆಗಳನ್ನು ಸರಿಮಾಡುವ ಗೋಜಿಗೆ ಹೋಗುತ್ತಿಲ್ಲ ಅನ್ನೋದು ಸ್ಥಳೀಯರ ಆಕ್ರೋಶ.
ವರದಿ: ರಾಜೇಂದ್ರಸಿಂಹ, ಟಿವಿ 9, ಕೋಲಾರ