ಲಂಚದ ಆರೋಪ ಮಾಡಿದ ಗುತ್ತಿಗೆದಾರರ ವಿರುದ್ಧ ಮುನಿರತ್ನ ಮಾನನಷ್ಟ ಮೊಕದ್ದಮೆ: ನಾಳೆ ಬೆಳಿಗ್ಗೆ 11 ಗಂಟೆಗೆ ನೊಟೀಸ್ ರವಾನೆ
ಡಿಸಿಸಿ ಬ್ಯಾಂಕ್ ಅಕ್ರಮ ಹಾಗೂ ಕಳಪೆ ರಸ್ತೆಗಳ ವಿರುದ್ಧವೂ ತನಿಖೆ ನಡೆಸಲಾಗುವುದು ಎಂದು ಮುನಿರತ್ನ ಎಚ್ಚರಿಸಿದರು.
ಕೋಲಾರ: ತಮ್ಮ ವಿರುದ್ಧ ಲಂಚದ ಆರೋಪ ಮಾಡಿರುವ ಗುತ್ತಿಗೆದಾರರ ವಿರುದ್ಧ ಈ ಮೊದಲು ಘೋಷಿಸಿದ್ದಂತೆ ಮಾನನಷ್ಟ ಮೊಕದ್ದಮೆ ಹೂಡಲು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ (Muniratna) ಸಿದ್ಧತೆ ಪೂರ್ಣಗೊಳಿಸಿದ್ದಾರೆ. ಈ ಕುರಿತು ಕೋಲಾರದಲ್ಲಿ ಪ್ರತಿಕ್ರಿಯಿಸಿದ ಅವರು, ‘ಮೊದಲೇ ಹೇಳಿದಂತೆ ಗುತ್ತಿಗೆದಾರರ ವಿರುದ್ಧ ಮಾನನಷ್ಟ ಮೊಕದ್ದಮೆ (Defamation Case) ಹೂಡುತ್ತಿದ್ದೇನೆ. ಇಂದು ಅಂಚೆ ಕಚೇರಿಗಳು ರಜೆ. ಹೀಗಾಗಿ ನಾಳೆ ಬೆಳಿಗ್ಗೆ 11 ಗಂಟೆಗೆ ಮಾನನಷ್ಟದ ನೊಟೀಸ್ ರವಾನಿಸಲಾಗುವುದು’ ಎಂದು ಹೇಳಿದರು. ಮುಂದಿನ 8 ದಿನಗಳಲ್ಲಿ ನೊಟೀಸ್ ಪಡೆದ ಗುತ್ತಿಗೆದಾರರ ಪ್ರತಿಕ್ರಿಯೆ ಗಮನಿಸಿ ಮುಂದಿನ ನಡೆಯನ್ನು ನಿರ್ಧರಿಸಲಾಗುವುದು ಎಂದರು.
ಸಲ್ಲದ ಆರೋಪ ಮಾಡಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆಯ ಜೊತೆಗೆ ಕ್ರಿಮಿನಲ್ ಮೊಕದ್ದಮೆಯನ್ನೂ ಹೂಡಲಾಗುವುದು. ಕೋಲಾರದಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಮುಂದಿನ ವಾರದಿಂದ ಕಾಮಗಾರಿ ಪರಿಶೀಲನೆ ಚಟುವಟಿಕೆಯು ನಿರಂತರವಾಗಿ ನಡೆಯಲಿದೆ. ಇನ್ನು ಡಿಸಿಸಿ ಬ್ಯಾಂಕ್ ಅಕ್ರಮ ಹಾಗೂ ಕಳಪೆ ರಸ್ತೆಗಳ ವಿರುದ್ಧವೂ ತನಿಖೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಆರೋಪ ಮಾಡಿದವರು ಒಂದು ವೇಳೆ ಪತ್ರದ ಮೂಲಕ ಕ್ಷಮಾಪಣೆ ಕೋರಿದರೆ, ಪ್ರಧಾನಿಗೆ ನೇರವಾಗಿ ಕ್ಷಮಾಪಣೆ ಪತ್ರ ನೀಡದರೆ, ತಮ್ಮ ಬಳಿ ಇರುವ ದಾಖಲೆಗಳನ್ನು ಲೋಕಾಯುಕ್ತರಿಗೆ ಮತ್ತು ರಾಜ್ಯಪಾಲರಿಗೆ ನೀಡಿದರೆ ಮಾನನಷ್ಟ ಮೊಕದ್ದಮೆ ಹಿಂಪಡೆಯುತ್ತೇನೆ. ವಿರೋಧ ಪಕ್ಷಗಳು ಅವರ ಬಳಿ ಇರುವ ದಾಖಲೆಗಳನ್ನು ಒದಗಿಸಬೇಕು. ಅದು ಬಿಟ್ಟು ರಾಜೀನಾಮೆ ಕೇಳುವ ಹಕ್ಕು ಅವರಿಗಿಲ್ಲ ಎಂದು ಹೇಳಿದರು.
ನನ್ನ ವಿರುದ್ಧ ಆರೋಪ ಮಾಡಿರುವವರು ದಾಖಲೆ ಕೊಡಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಆಗಸ್ಟ್ 24ರಂದೇ ಮುನಿರತ್ನ ಸವಾಲು ಹಾಕಿದ್ದರು. ಮುನಿರತ್ನ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡಿದ್ದರು. ‘ಆರೋಪಕ್ಕೆ ಸಂಬಂಧಿಸಿದಂತೆ ಒಂದು ಸಣ್ಣ ಸಾಕ್ಷಿ ಕೊಡಲಿ. ನನ್ನ ಬಳಿ ಯಾರು ಬಂದಿದ್ದಾರೆ, ನಾನು ಏನು ಹೇಳಿದ್ದೇನೆ. ಎಲ್ಲವನ್ನೂ ನಾನೇ ತನಿಖೆ ಮಾಡಿಸುತ್ತೇನೆ, ಇದನ್ನ ಬಿಡಲ್ಲ. ಸರ್ಕಾರ, ಸಚಿವರ ಬಗ್ಗೆ ಆರೋಪ ಮಾಡಿದ್ರೆ ಸುಮ್ಮನಿರಲ್ಲ. ಕಾನೂನು ಹೋರಾಟ ಮಾಡುತ್ತೇನೆ. ನನ್ನ ತಪ್ಪಿದ್ದರೆ ಯಾವುದೇ ಶಿಕ್ಷೆ ಕೊಟ್ಟರೂ ಅನುಭವಿಸುತ್ತೇನೆ’ ಎಂದು ಹೇಳಿದ್ದರು.
‘ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಈ ರೀತಿ ಮಾಡುತ್ತಿದ್ದಾರೆ. ನಿಜವಾದ ಗುತ್ತಿಗೆದಾರರು ಅಧಿಕಾರಿಗಳು ಮತ್ತು ಸಚಿವರನ್ನು ಭೇಟಿಯಾಗಬೇಕು. ಅದನ್ನ ಬಿಟ್ಟು ಸಿದ್ದರಾಮಯ್ಯರನ್ನ ಭೇಟಿಯಾದರೆ ಏನರ್ಥ? ವಿರೋಧ ಪಕ್ಷದವರ ನಿರ್ದೇಶನದಂತೆ ಇದು ನಡೆಯುತ್ತಿದೆ. ಇದು ಜಮೀರ್ ಕುತಂತ್ರ’ ಎಂದು ಆರೋಪ ಮಾಡಿದ್ದರು.
Published On - 2:54 pm, Sun, 28 August 22