ಕೋಲಾರದಲ್ಲಿ ಕಾನೂನು ಜಾಗೃತಿ
ಕೋಲಾರ, ನ.07: ನಗರದಲ್ಲಿ ನವೆಂಬರ್ 4 ರಂದು ನಡೆದ ಅಪ್ರಾಪ್ತ ಬಾಲಕನ ಬರ್ಬರ ಹತ್ಯೆ ಪ್ರಕರಣ, ಇಡೀ ಕೋಲಾರ(
Kolar) ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ಅಷ್ಟೇ ಅಲ್ಲದೆ ಜನರು ತಮ್ಮ ಮಕ್ಕಳನ್ನು
ಶಾಲಾ-ಕಾಲೇಜಿಗೆ ಕಳಿಸಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಿ ತಮ್ಮ ಮಕ್ಕಳು ಹಾದಿ ತಪ್ಪುತ್ತಾರೋ ಎನ್ನುವ ಭಯ ಶುರುವಾಗಿದೆ. ಅದಕ್ಕೆ ತಕ್ಕಂತೆ ಸಾಮಾಜಿಕ ಜಾಲತಾಣಗಳಲ್ಲಿ ಸೇವ್ ಕೋಲಾರ(Save Kolar), ಸೇವ್ ಯೂತ್ಸ್(
Save Youths) ಅಭಿಯಾನ ಆರಂಭಿಸಲಾಗಿದೆ. ಇದರಿಂದ ಎಚ್ಚೆತ್ತಿರುವ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಇಂದು(ನ.07) ಕಾಲೇಜು ವಿದ್ಯಾರ್ಥಿಗಳಿಗೆ ಕಾನೂನು ಅರಿವು ಹಾಗೂ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.
ಅಕ್ರಮ ಚಟುವಟಿಕೆ ನಡೆಯದಂತೆ ಕ್ರಮ
ಕೋಲಾರದ ಎಸ್ಡಿಸಿ ಕಾಲೇಜು ಸೇರಿದಂತೆ ವಿವಿಧೆಡೆ ಪೊಲೀಸ್ ಅಧಿಕಾರಿಗಳು, ವಿದ್ಯಾರ್ಥಿಗಳಿಗೆ ಕಾನೂನಿನ ಪಾಠ ಹೇಳುವ ಕೆಲಸ ಮಾಡುತ್ತಿದ್ದಾರೆ. ಇನ್ನು ಮಕ್ಕಳು ಕೂಡ ಪೊಲೀಸರ ಮಾತುಗಳನ್ನು ಕೇಳಿ ಕೊಂಚ ಜಾಗೃತರಾಗುತ್ತಿದ್ದಾರೆ. ಅಲ್ಲದೆ ಕೋಲಾರದಲ್ಲಿ ನಡೆದ ಕೊಲೆಯ ಪ್ರಕರಣದ ಆತಂಕದಿಂದ ಹೊರ ಬರುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಮುಂದೆ ಕಾಲೇಜಿನಲ್ಲಿ ಯಾವುದೇ ಅಕ್ರಮ ಚಟುವಟಿಕೆ ನಡೆಯದಂತೆ ಕ್ರಮವಹಿಸಲು ಕಾಲೇಜು ಆಡಳಿತ ಮಂಡಳಿಗಳೂ ನಿಯಮ ರೂಪಿಸುತ್ತಿವೆ.
ಇನ್ನು ಕೋಲಾರದಲ್ಲಿ ಕಳೆದ ಮೂರು ತಿಂಗಳಿಂದ ನಡೆಯುತ್ತಿರುವ ಸರಣಿ ಕೊಲೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ ಕೂಡ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳಿಗೆ ಕಾರಣವೇನು ಎನ್ನುವುದನ್ನು ಕಲೆ ಹಾಕುತ್ತಿದ್ದಾರೆ. ಪ್ರಮುಖವಾಗಿ ಕೋಲಾರ ಜಿಲ್ಲೆಗೆ ಆಂಧ್ರ, ತಮಿಳುನಾಡಿನಿಂದ, ಬರುವ ಅಕ್ರಮ ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ಕಡಿವಾಣ ಹಾಕಲು ಕೋಲಾರ ಜಿಲ್ಲೆಯ ಗಡಿಭಾಗಗಳಲ್ಲಿ ಚೆಕ್ ಪೋಸ್ಟ್ಗಳನ್ನು ನಿರ್ಮಾಣ ಮಾಡಿ ತಪಾಸಣೆ ಮಾಡಲು ಸೂಚನೆ ನೀಡಿದ್ದಾರೆ. ಅಲ್ಲದೆ ಕಾಲೇಜು ಆಡಳಿತ ಮಂಡಳಿಗಳ ಸಭೆ ಕರೆದು ಜಿಲ್ಲೆಯ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹೇರ್ ಕಟ್, ಬಟ್ಟೆ ಸೇರಿದಂತೆ ಎಲ್ಲವನ್ನು ಬದಲಾಯಿಸಬೇಕು. ಜೊತೆಗೆ ಮಕ್ಕಳ ಮೇಲೆ ಕಾಲೇಜು ಆಡಳಿತ ಮಂಡಳಿ ಮತ್ತು ಉಪನ್ಯಾಸಕರು ನಿಗಾ ವಹಿಸಬೇಕು ಎಂದು ಸೂಚಿಸಿದ್ದಾರೆ.
ಅದರ ಜೊತೆಗೆ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಗೂ ಸೂಚನೆ ನೀಡಿ ಬೆಳ್ಳಂಬೆಳಿಗ್ಗೆ ಬಾರ್ ಬಾಗಿಲು ತೆರೆಯುವ ಹಾಗೂ ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವವರ ಮೇಲೆ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಒಟ್ಟಾರೆ ಕೋಲಾರ ಜಿಲ್ಲೆಯಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಕೊಲೆ ಪ್ರಕರಣಗಳು ಜಿಲ್ಲೆಯ ನಾಗರೀಕರನ್ನು ಬೆಚ್ಚಿ ಬೀಳಿಸಿದ್ದು, ಸದ್ಯ ಈ ಸರಣಿ ಕೊಲೆಗಳಿಗೆ ಕಡಿವಾಣ ಹಾಕುವುದು ಹೇಗೆ ಎಂದು ತಲೆ ಕೆಡಿಸಿಕೊಂಡಿದ್ದಾರೆ. ಈ ಹಿನ್ನಲೆ ಜಿಲ್ಲೆಯಲ್ಲಿ ಜನರಿಗೆ, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಮೂಲಕ ಎಚ್ಚರಿಕೆ ವಹಿಸುವ ಕೆಲಸಕ್ಕೆ ಮುಂದಾಗಿದ್ದು, ಇದು ಎಷ್ಟರ ಮಟ್ಟಿಗೆ ಸಾಕಾರಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.