ಕೋಲಾರ: ವಿಧಾನಪರಿಷತ್ ಚುನಾವಣೆ ಕಣ ರಂಗೇರಿದ್ದು ಪ್ರಮುಖ ಮೂರು ಪಕ್ಷಗಳು ಚುನಾವಣೆಯಲ್ಲಿ ಗೆಲುವನ್ನು ತಮ್ಮ ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ್ದು ಗೆಲುವಿಗಾಗಿ ತಮ್ಮದೇ ರಣತಂತ್ರಗಳನ್ನು ರೂಪಿಸುತ್ತಿದ್ದಾರೆ. ಜೊತೆಗೆ ನೀನೆಷ್ಟು ಕೊಟ್ಟರೆ ನಾನು ಅದಕ್ಕಿಂತ ಹೆಚ್ಚಿಗೆ ಕೊಡ್ತೀನಿ ಅನ್ನೋ ಲೆಕ್ಕದಲ್ಲಿ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಒಂದು ಓಟಿಗೆ ಅಬ್ಬಬ್ಬಾ ಅಂದ್ರೆ ಎಷ್ಟು ಕೊಡಬಹುದು ಒಂದು ಸಾವಿರ, ಇಲ್ಲಾ ಎರಡು ಸಾವಿರ, ಇಲ್ಲಾ ಹೆಚ್ಚೆಂದರೆ ಐದು ಸಾವಿರ ಆದರೆ ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಒಂದು ಓಟಿಗೆ ನೀವು ಊಹೆ ಮಾಡಲಾಗದಷ್ಟು ಅಂದರೆ ಒಂದು ಓಟಿಗೆ ಐವತ್ತು ಸಾವಿರ ರೂಪಾಯಿಯಿಂದ ಒಂದು ಲಕ್ಷ ರೂಪಾಯಿವರಗೆ ನಡೆಯುತ್ತಿದೆ.
ಚುನಾವಣೆಯಲ್ಲಿ ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ
ಇತ್ತೀಚಿನ ದಿನಗಳಲ್ಲಿ ಹಣವಿಲ್ಲದೆ ಚುನಾವಣೆಗಳನ್ನು ನಡೆಸೋದು ಅಸಾಧ್ಯದ ಮಾತು ಎನ್ನುವಂತಾಗಿದೆ. ಈ ಚುನಾವಣೆಗಳು ಬರೀ ಹಣದ ಚುನಾವಣೆ ಎನ್ನುವಂತಾಗಿದೆ, ಅಭ್ಯರ್ಥಿ ಯಾವ ಪಕ್ಷ ಎನ್ನುವುದಕ್ಕಿಂತ ಎಷ್ಟು ಖರ್ಚು ಮಾಡ್ತಾರೆ ಅನ್ನೋದನ್ನ ನೋಡಿಯೇ ಪಕ್ಷವೂ ಟಿಕೆಟ್ ಕೊಡುತ್ತೆ. ಅಭ್ಯರ್ಥಿಗಳು ಕೂಡಾ ಅದೇ ರೀತಿಯಾಗಿ ಚುನಾವಣೆ ಸಂದರ್ಭದಲ್ಲಿ ಖರ್ಚು ಮಾಡುತ್ತಿದ್ದಾರೆ. ಹೀಗಿರುವಾಗಲೇ ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಪರಿಷತ್ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಮೂರು ಪಕ್ಷಗಳು ಈಬಾರಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲೋದಕ್ಕೆ ತಮ್ಮದೇ ರಣತಂತ್ರಗಳನ್ನು ಮಾಡುತ್ತಿವೆ. ಹೀಗಿರುವಾಗ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಚುನಾಣೆಯಲ್ಲಿ ಹಣ ಬಾರೀ ಸದ್ದು ಮಾಡುತ್ತಿದೆ.
ಇಲ್ಲಿ ಪಕ್ಷ ಎನ್ನುವುದಕ್ಕಿಂತ ಒಂದು ಓಟಿಗೆ ಎಷ್ಟು ಎನ್ನುವಂತ ಸ್ಥಿತಿ ನಿರ್ಮಾಣವಾಗಿದ್ದು ಈಗಾಗಲೇ ಒಂದು ಓಟಿಗೆ 50,000 ಯಿಂದ 1,00000 ರೂಪಾಯಿ ಹಣ ನೀಡಲಾಗುತ್ತಿದೆ. ಮೂಲಗಳ ಮಾಹಿತಿ ಪ್ರಕಾರ ಈಗಾಗಲೇ ಒಂದು ಪಕ್ಷದವರು ಕೋಲಾರ ಚಿಕ್ಕಬಳ್ಳಾಪುರದ ಹನ್ನೆರಡು ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಲ್ಲಿ ಒಂದು ಓಟಿಗೆ ತಲಾ 50 ಸಾವಿರ ಹಣ ಹಂಚಿ ಮುಗಿಸಿದ್ದು, ಇನ್ನು ಕೊನೆ ಹಂತದಲ್ಲಿ ಪೈಪೋಟಿ ಬಿದ್ದರೆ ಮತ್ತಷ್ಟು ಹಣ ಕೊಡುವುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.
ಮತದಾರರಷ್ಟೇ ಅಲ್ಲಾ ಲೋಕಲ್ ಲೀಡರ್ಸ್ಗೂ ಡಿಮ್ಯಾಂಡ್
ಕೋಲಾರದಲ್ಲಿ ತ್ರಿಕೋನ ಸ್ಪರ್ದೆ ಏರ್ಪಟ್ಟಿದ್ದು ಮೂರು ಪಕ್ಷಗಳು ಮತದಾರರಿಗೆ ಇಂತಿಷ್ಟು ಎಂದು ಹಣ ನಿಗದಿ ಮಾಡಿ ಹಣ ಹಂಚಿಕೆಗೆ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಇಲ್ಲ, ಜೊತೆಗೆ ಯಾರು ಯಾರಿಗೆ ಬೇಕಾದರೂ ಮತ ಹಾಕಬಹುದು ಹಾಗಾಗಿ ಮೂರು ಪಕ್ಷಗಳ ಅಭ್ಯರ್ಥಿಗಳು ಮೂರು ಪಕ್ಷಗಳ ಮತದಾರರಿಗೆ ಹಾಗೂ ಮುಖಂಡರಿಗೆ ಗಾಳ ಹಾಕುವ ಕೆಲಸ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಇಂತಿಷ್ಟು ಮತದಾರರನ್ನು ತಮ್ಮ ಕೈಲಿರಿಸಿಕೊಂಡಿದ್ದಾರೆ ಅನ್ನೋ ಮುಖಂಡಿರಿಗೂ ಪುಲ್ ಡಿಮ್ಯಾಂಡ್ ಬಂದಿದೆ. ಅಧಿಕೃತವಾಗಿ ಮತ ಹಾಕಿಸಿದ್ರು ಸರಿ ಇಲ್ಲಾ ಅನಧಿಕೃತವಾಗಿ ಮತ ಹಾಕಿದ್ರು ಸರಿ ನಿಮಗೆ ಏನು ಸೇರಬೇಕೋ ಅದು ಬಂದು ತಲುಪುತ್ತದೆ ಅನ್ನೋ ಲೆಕ್ಕದಲ್ಲಿ ಹಣ ಹಂಚಿಕೆ ನಡೆಯುತ್ತಿದೆ. ಸದ್ಯ ಒಂದೇ ಒಂದು ಪಕ್ಷದವರು ಮಾತ್ರ ಹಣ ಹಂಚಿಕೆ ಮಾಡುತ್ತಿದ್ದು ಉಳಿದ ಎರಡು ಪಕ್ಷಗಳು ಹಣ ಕ್ರೂಡಿಕರಣ ಮಾಡುತ್ತಿದ್ದಾರೆ. ಅಂತಿಮವಾಗಿ ಯಾರು ಎಷ್ಟು ಹಣ ಹಂಚಿಕೆ ಮಾಡುತ್ತಾರೆ ಅನ್ನೋದರ ಮೇಲೆ ನಿರ್ಧಾರವಾಗುತ್ತದೆ.
ಜನ ಪ್ರತಿನಿಧಿಗಳನ್ನು ಸೆಳೆದು ಜನ ಪ್ರತಿನಿಧಿಯಾಗಲು ಸರ್ಕಸ್
ಇನ್ನು ಇದು ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ಗೆ ನಡೆಯುವ ಚುನಾವಣೆಯಾಗಿರುವುದರಿಂದ ಇದರಲ್ಲಿ ಮತದಾರರು ಕೂಡಾ ಜನಪ್ರತಿನಿಧಿಗಳು, ಈಗಾಗಲೇ ಗ್ರಾಮ ಪಂಚಾಯ್ತಿ ಸೇರಿದಂತೆ ಹಲವಾರು ಸ್ಥಳೀಯ ಸಂಸ್ಥೆಗಳಲ್ಲಿ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಮತದಾನ ಮಾಡುವುದರಿಂದ. ತಾನು ಜನಪ್ರತಿನಿಧಿಯಾಗಲು ಹೇಗೆ ಹಣ ಖರ್ಚು ಮಾಡಿದ್ದರೂ ಅದೇ ರೀತಿ ಇನ್ನೊಬ್ಬರನ್ನು ಜನಪ್ರತಿನಿಧಿಯನ್ನಾಗಿ ಮಾಡಲು ಮಾಡುವ ಮತದಾನಕ್ಕೆ ಡಿಮ್ಯಾಂಡ್ ಜೋರಾಗಿರುತ್ತದೆ. ಮೊದಲೆಲ್ಲಾ ಈ ಚುನಾವಣೆಗಳು ಕೇವಲ ಪಕ್ಷಗಳ ಹೊಂದಾಣಿಕೆಯಲ್ಲಿ ನಡೆಯುತ್ತಿತ್ತು ಆದರೆ ಈಗ ಅದೆಲ್ಲದಕ್ಕಿಂತ ಹೆಚ್ಚಾಗಿ ಮತದಾರರನ್ನು ತೃಪ್ಪಿಪಡಿಸಬೇಕು ಆಗಲೇ ಗೆಲ್ಲೋದಕ್ಕೆ ಸಾಧ್ಯ ಎನ್ನುವಂತಾಗಿದೆ.
ಒಟ್ಟಾರೆ ವಿಧಾನಪರಿಷತ್ ಚುನಾವಣೆಯಲ್ಲಿ ಅದರಲ್ಲೂ ಕೋಲಾರ ಜಿಲ್ಲೆಯಲ್ಲಿ ಮತ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಕೆಲವು ಪಕ್ಷಗಳು ನೇರವಾಗಿ ಹರಾಜು ಕೂಗಿದರೆ ಕೆಲವರು ತೆರೆಮರೆಯಲ್ಲಿ ಹರಾಜು ಕೂಗುವ ಕೆಲಸ ಮಾಡುತ್ತಿದ್ದು ಅಂತಿಮವಾಗಿ ಚುನಾವಣೆಯಲ್ಲಿ ಗೆಲುವು ಯಾರ ಪಾಲಾಗುತ್ತದೆ ಅನ್ನೋದೆ ಕುತೂಹಲ.
ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ
ಇದನ್ನೂ ಓದಿ: ಸಾಂಕ್ರಾಮಿಕ ರೋಗ ಮುಗಿದಿಲ್ಲ, ಅಗತ್ಯ ಬೆಂಬಲ ಒದಗಿಸಲು ಸರ್ಕಾರದ ಪ್ರಯತ್ನಗಳಲ್ಲಿ ಸೇನಾಪಡೆ ಜತೆಗಿದೆ: ಸೇನಾ ಮುಖ್ಯಸ್ಥ ನರವಾಣೆ