ವಿಲೇವಾರಿಯಾಗುತ್ತಿಲ್ಲ ಆಸ್ಪತ್ರೆಯ ವಿಷಪೂರಿತ ವೈದ್ಯಕೀಯ ತ್ಯಾಜ್ಯ; ಸ್ವಚ್ಛತಾ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ

| Updated By: preethi shettigar

Updated on: Oct 03, 2021 | 1:44 PM

ಜಿಲ್ಲೆಯ ಬಹುಪಾಲು ಆಸ್ಪತ್ರೆಗಳು ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಪಾವತಿಸಬೇಕಾದ ಶುಲ್ಕ ಉಳಿಸಲು ಕಳ್ಳದಾರಿ ಹಿಡಿದಿವೆ. ಮೀರಾ ಎನ್ವಿರೊಟೆಕ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯಲ್ಲಿ ನೊಂದಣಿ ಮಾಡಿಸದೆ ವೈದ್ಯಕೀಯ ತ್ಯಾಜ್ಯವನ್ನು ನಿಯಮಬಾಹಿರವಾಗಿ ಕೆರೆಗಳ ಅಂಗಳದಲ್ಲಿ ಹಾಗೂ ಖಾಲಿ ನಿವೇಶನಗಳು, ಪಾಳು ಬಾವಿಗಳಲ್ಲಿ ಸುರಿಯುತ್ತಿವೆ.

ವಿಲೇವಾರಿಯಾಗುತ್ತಿಲ್ಲ ಆಸ್ಪತ್ರೆಯ ವಿಷಪೂರಿತ ವೈದ್ಯಕೀಯ ತ್ಯಾಜ್ಯ; ಸ್ವಚ್ಛತಾ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ
ವಿಷಪೂರಿತ ವೈದ್ಯಕೀಯ ತ್ಯಾಜ್ಯ
Follow us on

ಕೋಲಾರ: ಜಿಲ್ಲಾ ಕೇಂದ್ರಗಳಲ್ಲಿ ಊಟ ಮಾಡುವುದಕ್ಕೆ ಹೋಟೆಲ್​ಗಳು ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಜಿಲ್ಲಾ ಕೇಂದ್ರದಲ್ಲಿ ನೂರಾರು ಆಸ್ಪತ್ರೆಗಳು ಹಾಗೂ ನರ್ಸಿಂಗ್‌ ಹೋಂಗಳು ಮಾತ್ರ ಇವೆ. ಇವು ಜನರಿಗೆ ಆರೋಗ್ಯ ಕೊಡುತ್ತಿವೆ ಎಂದು ನಾವು ಭಾವಿಸಿದ್ದೇವೆ. ಆದರೆ ಇದೇ ಆಸ್ಪತ್ರೆಗಳಿಂದ ಉತ್ಪತ್ತಿಯಾಗುವ ವಿಷಪೂರಿತ ವೈದ್ಯಕೀಯ ತ್ಯಾಜ್ಯವು ಸದ್ದಿಲ್ಲದೆ ಕೆರೆಗಳ ಒಡಲು ಸೇರುತ್ತಿದ್ದು, ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದನ್ನು ನಿರ್ವಹಣೆ ಮಾಡಬೇಕಾದ ಸರ್ಕಾರ ಕೂಡ ನಿರ್ಲಕ್ಷ್ಯ ವಹಿಸಿದೆ. ಇದು ಸಹಜವಾಗಿಯೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಿತ್ಯ ಟನ್ ಗಟ್ಟಲೆ ಆಸ್ಪತ್ರೆ ತ್ಯಾಜ್ಯ ವಿಲೇವಾರಿಯಾಗುತ್ತಿಲ್ಲ
ಖಾಸಗಿ ಆಸ್ಪತ್ರೆಗಳು, ನರ್ಸಿಂಗ್‌ ಹೋಂಗಳು, ಕ್ಲಿನಿಕ್‌ಗಳು, ಡಯಾಗ್ನಸ್ಟಿಕ್ ಲ್ಯಾಬೊರೇಟರಿ, ರಕ್ತನಿಧಿ ಕೇಂದ್ರಗಳು ಹಾದಿ ಬೀದಿಯಲ್ಲಿ ನಾಯಿಕೊಡೆಗಳಂತೆ ಕೋಲಾರದಲ್ಲಿ ತಲೆ ಎತ್ತುತ್ತಿದ್ದು, ವೈದ್ಯಕೀಯ ತ್ಯಾಜ್ಯದ ಉತ್ಪಾದನೆ ಏರು ಗತಿಯಲ್ಲಿ ಸಾಗಿದೆ. ನಗರದಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇರಿದಂತೆ ಸುಮಾರು 150 ಆಸ್ಪತ್ರೆಗಳಿವೆ. ಜತೆಗೆ ಪಶುಪಾಲನಾ ಮತ್ತು ಪಶು ವೈದ್ಯ ಆಸ್ಪತ್ರೆಗಳಿವೆ. ಈ ಆಸ್ಪತ್ರೆಗಳಲ್ಲಿ ಪ್ರತಿನಿತ್ಯ 800 ಕೆಜಿಗೂ ಹೆಚ್ಚು ವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ.

ಜೈವಿಕ ವೈದ್ಯಕೀಯ ತ್ಯಾಜ್ಯ (ವ್ಯವಸ್ಥಾಪನಾ ಮತ್ತು ನಿರ್ವಹಣೆ) ಕಾಯಿದೆ- 2016ರ ಪ್ರಕಾರ ವೈದ್ಯಕೀಯ ತ್ಯಾಜ್ಯವನ್ನು ಉತ್ಪತ್ತಿಯಾದ 48 ಗಂಟೆಯೊಳಗೆ ವಿಲೇವಾರಿ ಮಾಡಬೇಕು. ಹೆಚ್ಚು ಹಾಸಿಗೆ ಸಾಮರ್ಥ್ಯ ಹೊಂದಿರುವ ದೊಡ್ಡ ಆಸ್ಪತ್ರೆಗಳು ವೈದ್ಯಕೀಯ ತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ನಿಯಮ ಪಾಲಿಸುತ್ತವೆ. ಆದರೆ, ಸಣ್ಣ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು ಮಾತ್ರ ನಿಯಮ ಪಾಲಿಸುತ್ತಿಲ್ಲ.

ಆಸ್ಪತ್ರೆಗಳಲ್ಲಿ ನಡೆಯುತ್ತಿಲ್ಲ ತ್ಯಾಜ್ಯ ನಿಷ್ಕ್ರಿಯ ಹಾಗೂ ವಿಲೇವಾರಿ
ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಲಕರಣೆಗಳನ್ನು ಚಿಕಿತ್ಸೆ ಅಥವಾ ವೈದ್ಯಕೀಯ ಉದ್ದೇಶಕ್ಕೆ ಬಳಸಿದ ನಂತರ ಶೇ. 1ರಷ್ಟು ಹೈಪೊಕ್ಲೋರೈಟ್‌ ರಾಸಾಯನಿಕ ಬಳಸಿ ತ್ಯಾಜ್ಯವನ್ನು ನಿಷ್ಕ್ರಿಯಗೊಳಿಸಬೇಕು. ನಂತರ ಅವುಗಳನ್ನು ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸಾಗಿಸಬೇಕೆಂಬ ನಿಯಮವಿದೆ. ಜಿಲ್ಲೆಯಲ್ಲಿ ವೈದ್ಯಕೀಯ ತ್ಯಾಜ್ಯ ನಿರ್ವಹಣೆಯ ಗುತ್ತಿಗೆ ಪಡೆದಿರುವ ಏಕೈಕ ಘಟಕ ಮೀರಾ ಎನ್ವಿರೊಟೆಕ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಕಂಪನಿಯು ನಗರದ ಹೊರವಲಯದ ಚಿಂತಾಮಣಿ ರಸ್ತೆಯ ಆಲೇರಿ ಬಳಿ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಿದೆ.

ನಗರದ ಶ್ರೀ ನರಸಿಂಹರಾಜ (ಎಸ್‌ಎನ್ಆರ್‌) ಜಿಲ್ಲಾ ಆಸ್ಪತ್ರೆ, ನರ್ಸಿಂಗ್‌ ಹೋಂ, ಕ್ಲಿನಿಕ್‌, ಡಯಾಗ್ನಿಸ್ಟಿಕ್‌ ಲ್ಯಾಬೊರೇಟರಿ ಮತ್ತು ರಕ್ತನಿಧಿ ಕೇಂದ್ರಗಳು ಈ ಕಂಪನಿಯಲ್ಲಿ ನೊಂದಣಿ ಮಾಡಿಕೊಂಡಿವೆ. ಕಂಪನಿ ಸಿಬ್ಬಂದಿಯು 2 ದಿನಕ್ಕೊಮ್ಮೆ ನೊಂದಾಯಿತ ಆಸ್ಪತ್ರೆಗಳ ಬಳಿ ಬಂದು ವೈದ್ಯಕೀಯ ತ್ಯಾಜ್ಯ ಸಂಗ್ರಹಿಸಿಕೊಂಡು ಹೋಗುತ್ತಾರೆ. ಇದಕ್ಕೆ ಪ್ರತಿಯಾಗಿ ಆಸ್ಪತ್ರೆಗಳು ಕಂಪನಿಗೆ ಶುಲ್ಕ ಪಾವತಿಸುತ್ತಿವೆ. ಆಸ್ಪತ್ರೆಯಲ್ಲಿನ ಹಾಸಿಗೆಗಳ ಸಾಮರ್ಥ್ಯ ಅಥವಾ ಉತ್ಪತ್ತಿಯಾಗುವ ವೈದ್ಯಕೀಯ ತಾಜ್ಯದ ಆಧಾರದಲ್ಲಿ ಶುಲ್ಕ ನಿಗದಿಪಡಿಸಲಾಗಿದೆ.

ಆಸ್ಪತ್ರೆಗಳಿಂದ ತ್ಯಾಜ್ಯ ವಿಲೇವಾರಿ ವೆಚ್ಚ ಉಳಿಸಲು ಅಡ್ಡದಾರಿ, ಕೆರೆಗಳಲ್ಲಿ ವಿಷ ಹಾಕುತ್ತಿರುವ ಆಸ್ಪತ್ರೆಗಳು!
ಜಿಲ್ಲೆಯ ಬಹುಪಾಲು ಆಸ್ಪತ್ರೆಗಳು ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಪಾವತಿಸಬೇಕಾದ ಶುಲ್ಕ ಉಳಿಸಲು ಕಳ್ಳದಾರಿ ಹಿಡಿದಿವೆ. ಮೀರಾ ಎನ್ವಿರೊಟೆಕ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯಲ್ಲಿ ನೊಂದಣಿ ಮಾಡಿಸದೆ ವೈದ್ಯಕೀಯ ತ್ಯಾಜ್ಯವನ್ನು ನಿಯಮಬಾಹಿರವಾಗಿ ಕೆರೆಗಳ ಅಂಗಳದಲ್ಲಿ ಹಾಗೂ ಖಾಲಿ ನಿವೇಶನಗಳು, ಪಾಳು ಬಾವಿಗಳಲ್ಲಿ ಸುರಿಯುತ್ತಿವೆ.

ನಿತ್ಯ ಟನ್ ಗಟ್ಟಲೆ ಆಸ್ಪತ್ರೆ ತ್ಯಾಜ್ಯ ವಿಲೇವಾರಿಯಾಗುತ್ತಿಲ್ಲ

ಸಣ್ಣ ಆಸ್ಪತ್ರೆಗಳಿಗೆ ಸ್ಥಳದ ಅಭಾವ ಇರುವುದರಿಂದ ಘನ, ದ್ರವ ವೈದ್ಯಕೀಯ ತ್ಯಾಜ್ಯ ಪ್ರತ್ಯೇಕಿಸಿ ವಿಲೇವಾರಿ ಮಾಡುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ದ್ರವ ತ್ಯಾಜ್ಯವನ್ನು ನೇರವಾಗಿ ಚರಂಡಿಗೆ ಹರಿಸುತ್ತಿವೆ. ಈ ತ್ಯಾಜ್ಯವು ರಾಜಕಾಲುವೆ ಮೂಲಕ ಕೋಲಾರಮ್ಮ ಕೆರೆಯನ್ನು ಸೇರುತ್ತಿದ್ದು, ಜಲ ಮೂಲಗಳು ಕಲುಷಿತಗೊಳ್ಳುತ್ತಿವೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನಗರಸಭೆಯ ಆರೋಗ್ಯ ಶಾಖೆ ಅಧಿಕಾರಿಗಳ ಕಣ್ತಪ್ಪಿಸಿ ನಡೆಯುತ್ತಿರುವ ತ್ಯಾಜ್ಯ ವಿಲೇವಾರಿಯಿಂದ ಕೆರೆಯೊಡಲು ವಿಷಮಯವಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈದ್ಯಕೀಯ ತ್ಯಾಜ್ಯದ ಅವೈಜ್ಞಾನಿಕ ವಿಲೇವಾರಿಯಿಂದ ಕೋಲಾರಮ್ಮ ಕೆರೆಯ ಅಕ್ಕಪಕ್ಕದ ಬಡಾವಣೆಗಳ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ. ಮಳೆ ನೀರಿನಿಂದ ತ್ಯಾಜ್ಯ ಕೊಳೆತು ದುರ್ನಾತ ಬೀರುತ್ತಿದೆ. ತ್ಯಾಜ್ಯದ ರಾಶಿಯಿಂದ ಸೊಳ್ಳೆ, ನೊಣ, ಹಂದಿ, ನಾಯಿಗಳ ಕಾಟ ಹೆಚ್ಚಿದ್ದು, ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಭೀತಿ ಕಾಡಲಾರಂಭಿಸಿದೆ.

ಇನ್ನು ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್ ಮಾತನಾಡಿದ್ದು, ಆಸ್ಪತ್ರೆಗಳು ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ ಎಂಬ ದೂರು ಬಂದಿದ್ದ ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ವರದಿ: ರಾಜೇಂದ್ರಸಿಂಹ

ಇದನ್ನು ಓದಿ:
ಮಂಗಳೂರು: ತ್ಯಾಜ್ಯ ಸಂಗ್ರಹದಿಂದ ನದಿ ನೀರು ಕಲುಷಿತ; ಪಾಲಿಕೆ ನಿರ್ಲಕ್ಷ್ಯಕ್ಕೆ ಹೈಕೋರ್ಟ್ ಅಸಮಾಧಾನ

ತ್ಯಾಜ್ಯ ವಿಲೇವಾರಿ ಮಾಡದಿದ್ದಕ್ಕೆ ಆಕ್ರೋಶ; ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಮಹಾನಗರ ಪಾಲಿಕೆ ಆಯುಕ್ತರ ಮನೆ ಮುಂದೆ ಸುರಿದ ಬಿಜೆಪಿ ಶಾಸಕ ಅಭಯ್ ಪಾಟೀಲ್