ಕೋಲಾರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ಇಂದು (ಏಪ್ರಿಲ್ 14 ಆಚರಿಸುತ್ತಿದ್ದೇವೆ). ದೇಶ ಸ್ವತಂತ್ರವಾದಾಗ ದೇಶಕ್ಕೆ ಅಲ್ಲದೆ, ವಿಶ್ವಕ್ಕೆ ಮಾದರಿ ಆಗಬಲ್ಲ ಬೃಹತ್ ಸಂವಿಧಾನವನ್ನು ರಚಿಸಿ ಕೊಟ್ಟವರು ಅವರು. ಹಾಗಾಗಿ ಇಂದಿಗೂ ಕೂಡ ಅವರನ್ನು ಗೌರವದಿಂದ ಕಾಣುತ್ತೇವೆ. ಆರಾಧಿಸುತ್ತೇವೆ. ಅದರಲ್ಲೂ ಈ ಒಂದು ನಗರದಲ್ಲಿ ಅಂಬೇಡ್ಕರ್ ಅವರನ್ನು ದೇವರಂತೆ ಪೂಜಿಸುತ್ತಾರೆ. ಆ ನಗರದಲ್ಲಿ ಅಂಬೇಡ್ಕರ್ರ ನೂರಾರು ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ ದೇವರಂತೆ ಸ್ಮರಿಸುತ್ತಾರೆ. ಈ ಬಗ್ಗೆ ವಿಶೇಷ ವರದಿ ಇಲ್ಲಿದೆ ನೋಡಿ.
ಕೋಲಾರ ಜಿಲ್ಲೆ ಕೆಜಿಎಫ್ ನಗರದಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ದೇವರಂತೆ ಪೂಜಿಸಲಾಗುತ್ತದೆ. ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ, ದೀನ- ದಲಿತರ ಪಾಲಿನ ದೈವ, ಹಿಂದುಳಿದ ವರ್ಗದ ಜನರಿಗೆ ದೇಶದಲ್ಲಿ ಮರುಜೀವವನ್ನೇ ಕೊಟ್ಟವರು ಅಂಬೇಡ್ಕರ್. ಅದಕ್ಕಾಗಿ ಪ್ರಮುಖವಾಗಿ ಕೋಲಾರ ಜಿಲ್ಲೆಯ ಕೆಜಿಎಫ್‌ನ ಜನರು ಅಂಬೇಡ್ಕರ್ ಅವರನ್ನು ನಿಜ ದೈವದಂತೆ ಕಾಣುತ್ತಾರೆ. ಅದು ಬರೀ ಮಾತಲ್ಲಲ್ಲ ಅವರ ವಿಗ್ರಹವನ್ನು ನಗರದ ಗಲ್ಲಿ- ಗಲ್ಲಿಗಳಲ್ಲಿ ಸ್ಥಾಪನೆ ಮಾಡಿ ನಿತ್ಯ ಪೂಜಿಸಲಾಗುತ್ತದೆ. ಅದರಲ್ಲೂ ಏಪ್ರಿಲ್ 14 ಬಂದ್ರೆ ಕೆಜಿಎಫ್ ನಗರದಲ್ಲಿ ಹಬ್ಬವೋ ಹಬ್ಬ. ಈ ನಗರದೆಲ್ಲೆಡೆ ಅಂಬೇಡ್ಕರ್ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ನಗರದಲ್ಲಿರುವ ಎಲ್ಲಾ ಅಂಬೇಡ್ಕರ್ ಪ್ರತಿಮೆಗಳು ಹಾಗೂ ಅಂಬೇಡ್ಕರ್ ಗೋಡೆ ಬರಹಗಳಿಗೆ ಅಲಂಕಾರ ಮಾಡಿ ಮನೆ ಮನಗಳಲ್ಲಿ ದೇವರಂತೆ ಪೂಜೆ ಸಲ್ಲಿಸಿ ಸಂಭ್ರಮಿಸುತ್ತಾರೆ.
ಕೆಜಿಎಫ್ಗೆ ಅಂಬೇಡ್ಕರ್ ಬಂದು ಹೋಗಿದ್ದ ನೆನಪು ಇನ್ನೂ ಜೀವಂತ!
ಅಂಬೇಡ್ಕರ್ 1954 ರಲ್ಲಿ ಕೆಜಿಎಫ್ ನಗರಕ್ಕೆ ಬೇಟಿ ನೀಡಿದ್ದರು. ಕೆಜಿಎಫ್ ನಲ್ಲಿ ಮಾಡಲಾಗಿದ್ದ ಸೌತ್ ಇಂಡಿಯಾ ಬುದ್ದಿಸ್ಟ್ ಅಸೋಸಿಯೇಶನ್ಗೆ ಬೇಟಿ ನೀಡಿದ್ದರು. ಅದು ಇಂದಿಗೂ ಕೆಜಿಎಫ್ ನಲ್ಲಿದೆ. ಅಂಬೇಡ್ಕರ್ ಅಂದು ಕೆಜಿಎಫ್ಗೆ ಬಂದು ಬೌದ್ದ ದರ್ಮ ಪ್ರಚಾರಕರನ್ನು ಭೇಟಿ ಮಾಡಿಕೊಂಡು ಹೋಗಿದ್ದರಂತೆ, ಇಂದಿಗೂ ಆ ಸ್ಥಳವನ್ನು ನಾವು ನೋಡಬಹುದು.
ನಮ್ಮ ಮೇಲೆ ನಡೆದುಕೊಂಡು ಹೋಗಿ ಎಂದು ಕೇಳಿದ್ದರಂತೆ ಜನ!
ಸುಮಾರು 80 ರಷ್ಟು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರಿರುವ ಕೆಜಿಎಫ್ನಲ್ಲಿ ಜನರು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ದೇವರಂತೆ ಆರಾಧಿಸುತ್ತಿದ್ದರು. ಹಿಂದುಳಿದವರ ಪರವಾಗಿ ಅವರ ಕಾಳಜಿಯನ್ನು ಕಂಡು ಜನರು ರಸ್ತೆಯಲ್ಲಿ ಮಲಗಿ ನೀವು ನಮ್ಮ ಮೇಲೆ ನಡೆದುಕೊಂಡು ಹೋಗಿ ಎಂದು ಹೇಳಿದ್ದರಂತೆ. ಆ ಮೂಲಕವಾದರೂ ನಿಮ್ಮ ಪಾದದ ದೂಳಿನಿಂದ ನಾವು ಪಾವನರಾಗುತ್ತಾರೆ ಎಂದಿದ್ದರಂತೆ. ಹಾಗಂತ ಅಂಥಾದೊಂದು ನೆನಪನ್ನು ಮಾಜಿ ಶಾಸಕ ಎಸ್. ರಾಜೇಂದ್ರನ್ ಹಂಚಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಅಂಬೇಡ್ಕರ್ ಕೆಜಿಎಫ್ ಜನರ ಮನಸ್ಸನ್ನು ಹಾಸುಹೊಕ್ಕಿದ್ದಾರೆ. ಜನರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ.
ಕೆಜಿಎಫ್ ನಗರದಲ್ಲಿ ಅಂಬೇಡ್ಕರ್ ಪ್ರತಿಮೆಗಳಿಗೆ ನಿತ್ಯ ಸ್ಮರಣೆ
ಅದಕ್ಕೆ ಸಾಕ್ಷಿಯಾಗಿ ಇಂದಿಗೂ ಅಂಬೇಡ್ಕರ್ ಅವರ ಆದರ್ಶ, ತತ್ವಗಳನ್ನು ಕೆಜಿಎಫ್ ನಗರದ ಜನರು ಚಾಚೂ ತಪ್ಪದೆ ಪಾಲನೆ ಮಾಡುತ್ತಿದ್ದಾರೆ. ಕೆಜಿಎಫ್ ನಗರದ ಆರಂಭದಿಂದ ಕೊನೆಯವರೆಗೂ ನೂರಾರು ಅಂಬೇಡ್ಕರ್ ಪ್ರತಿಮೆಗಳು, ಗೋಡೆ ಬರಹಗಳು, ಅಂಬೇಡ್ಕರ್ ಹೆಸರಿನ ರಸ್ತೆಗಳು, ಅಂಬೇಡ್ಕರ್ ಹೆಸರಿನ ಪಾರ್ಕ್ಗಳು, ಅಂಬೇಡ್ಕರ್ ಹೆಸರಿನ ವೃತ್ತಗಳು, ಎಲ್ಲೆಡೆ ಅಂಬೇಡ್ಕರ್ ಅವರ ಹೆಸರಿಟ್ಟು ಆರಾಧಿಸುತ್ತಿದ್ದಾರೆ.
ಒಟ್ಟಾರೆ ಕೆಜಿಎಫ್ನಲ್ಲಿ ಅಂಬೇಡ್ಕರ್ ಅನ್ನೋ ವ್ಯಕ್ತಿ ಕೇವಲ ಜನ ನಾಯಕನಲ್ಲ, ಜನರ ಪಾಲಿನ ದೈವದಂತೆ ಪೂಜಿಸಲ್ಪಡುತ್ತಿದ್ದು, ಅಂಬೇಡ್ಕರ್ ಹುಟ್ಟಿದ ದಿನ ಬಂದರೆ ಕೆಜಿಎಫ್ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಈ ವಿಶೇಷ ದಿನವೂ ಕೆಜಿಎಫ್ನಲ್ಲಿ ಅಂಬೇಡ್ಕರ್ ಜಯಂತಿ ಸಂಭ್ರಮ ಜೋರಾಗಿ ಇರಲಿದೆ.
ವಿಶೇಷ ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ
ಇದನ್ನೂ ಓದಿ: ತಮಿಳುನಾಡಿನಲ್ಲಿ ಅಂಬೇಡ್ಕರ್ ಜಯಂತಿಯನ್ನು ಸಮಾನತೆಯ ದಿನವನ್ನಾಗಿ ಆಚರಿಸಲಾಗುವುದು: ಎಂಕೆ ಸ್ಟಾಲಿನ್
ಇದನ್ನೂ ಓದಿ: ತುಮಕೂರು: ಏಪ್ರಿಲ್ 14ರ ಅಂಬೇಡ್ಕರ್ ಜಯಂತಿ ಪ್ರಯುಕ್ತ ಬಿಜೆಪಿ ಮುಖಂಡರಿಂದ ದಲಿತರ ಮನೆಯಲ್ಲಿ ಸಹಪಂಕ್ತಿ ಭೋಜನ
Published On - 8:59 am, Thu, 14 April 22