ಕೋಲಾರ: ಏಷ್ಯಾದ ಎರಡನೇ ಅತಿದೊಡ್ಡ ಟೊಮ್ಯಾಟೊ ಮಾರುಕಟ್ಟೆಗೆ ಪೊಲೀಸ್ ಭದ್ರತೆ
ಕೆಂಪು ಸುಂದರಿ ಟೊಮ್ಯಾಟೊ ಬೆಲೆ ಭಾರೀ ಏರಿಕೆಯಾಗಿರುವ ಬೆನ್ನಲ್ಲೇ ಕಳ್ಳರ ಕಾಟ ಆರಂಭವಾಗಿದೆ. ಹೀಗಾಗಿ ರೈತರು, ವ್ಯಾಪಾರಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಟೊಮ್ಯಾಟೊ ಕಾಯುವಂತಾಗಿದೆ.
ಕೋಲಾರ: ಕೆಂಪು ಚಿನ್ನಕ್ಕೆ ಎಲ್ಲೆಡೆ ಡಿಮ್ಯಾಂಡೋ ಡಿಮ್ಯಾಂಡ್ ಎನ್ನುವಂತಾಗಿದೆ, ದಾಖಲೆಯ ದರದಲ್ಲಿ ಮಾರಾಟವಾಗುತ್ತಿರುವ ಟೊಮ್ಯಾಟೊಗೆ (Tomato) ಎಲ್ಲಡೆ ಬೇಡಿಕೆ ಹಚ್ಚಿದೆ, ಟೊಮ್ಯಾಟೊ ರಕ್ಷಣೆಗೆ ರೈತ ರಾತ್ರಿಯೆಲ್ಲ ತೋಟಕ್ಕೆ ಕಾವಲು ಕುಳಿತರೆ, ಮಾರುಕಟ್ಟೆಯಲ್ಲಿ ಟೊಮ್ಯಾಟೊ ಕಳ್ಳತನವಾಗದ ರೀತಿಯಲ್ಲಿ ಪೊಲೀಸ್ ಭದ್ರತೆ, ಸಿಸಿ ಟಿವಿ ಕಾಣ್ಗಾವಲು, ಖಾಸಗಿ ಸೆಕ್ಯೂರಿಟಿಗಳಿಂದ ರಕ್ಷಣೆ ಒದಗಿಸಲಾಗುತ್ತಿದೆ.
ಏಷ್ಯಾದ ಎರಡನೇ ಅತಿ ದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದಿರುವ ಕೋಲಾರದ ಎಪಿಎಂಸಿಯಲ್ಲಿ ದಿನೇ ದಿನೇ ಟೊಮ್ಯಾಟೊಗೆ ಬೆಲೆ ಏರುತ್ತಲೇ ಇದೆ. ಇತ್ತ ಟೊಮ್ಯಾಟೊವನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡಬೇಕಾಗಿದ ಪರಿಸ್ಥಿತಿ ಇದೆ. ರಾಜ್ಯದ ಕೆಲವಡೆ ಟೊಮ್ಯಾಟೊ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ರೈತ ಟೊಮ್ಯಾಟೊವನ್ನು ಕಾಪಾಡಿಕೊಳ್ಳಲು ಈಡೀ ರಾತ್ರಿ ತೋಟಕ್ಕೆ ಕಾವಲು ಕಾಯಬೇಕಾಗಿದೆ. ಟಾರ್ಚ್ಗಳನ್ನು ಹಿಡಿದು ಬಂಗಾರದ ಅಂಗಡಿಗಳಿಗೆ ಮತ್ತು ಬ್ಯಾಂಕ್ಗಳಿಗೆ ಕಾವಲು ಕಾಯುವಂತೆ ಇವತ್ತು ರೈತರು ತಮ್ಮ ಟೊಮ್ಯಾಟೊ ತೋಟಗಳಿಗೆ ಕಾಯುವ ಪ್ರಕರಣಗಳು ಇವೆ.
ಇನ್ನು ಟೊಮ್ಯಾಟೊದರ ಶೇರು ಮಾರುಕಟ್ಟೆಯಲ್ಲಿ ಏರುವಂತೆ ದಿನೇದಿನೇ ಏರಿಳಿತ ಕಾಣುತ್ತಿದೆ. ಹಾಗಾಗಿ ಕಳೆದರೆಡು ದಿನಗಳಿಂದ ಪ್ರತಿ 15 ಕೆಜಿ ಟೊಮ್ಯಾಟೊ ಬಾಕ್ಸ್ 1600 ರಿಂದ 2200 ರೂ.ಗಳ ದಾಖಲೆಯ ಬೆಲೆಗೆ ಮಾರಾಟವಾಗಿದೆ. ಇದು ರೈತನಿಗೆ ಹರ್ಷದಾಯಕವಾಗಿದ್ದರೂ ಸಹ ಕಷ್ಟಪಟ್ಟು ಬೆಳೆದ ಟೊಮ್ಯಾಟೊ ವನ್ನು ಕಾಪಾಡಿಕೊಳ್ಳುವುದೇ ದೊಡ್ಡ ಕೆಲಸವಾಗಿದೆ.
ಕೋಲಾರ ಎಪಿಎಂಸಿ ಮಾರುಟಕ್ಟೆಗೆ ಹೆಚ್ಚಿದ ಪೊಲೀಸ್ ಭದ್ರತೆ
ಕೋಲಾರ ಜಿಲ್ಲಾ ಪೊಲೀಸ್ ಇಲಾಖೆ ಎಪಿಎಂಸಿ ಮಾರುಕಟ್ಟೆಯಲ್ಲೂ ಟೊಮ್ಯಾಟೊ ಕಳ್ಳತನವಾಗದಂತೆ ಬರುವ ರೈತರ ರಕ್ಷಣೆ ದೃಷ್ಟಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ, ಮದ್ಯಾಹ್ನ ಮತ್ತು ರಾತ್ರಿ ಪಾಳಯದಲ್ಲಿ ಕೆಲಸ ಮಾಡಲು ಸುಮಾರು 6 ಜನ ಪೊಲೀಸ್ ಸಿಬ್ಬಂದಿ ಮತ್ತು ಒಬ್ಬ ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಜೊತೆಗೆ ಹಳ್ಳಿ ಹಳ್ಳಿಗಳಲ್ಲೂ ಕೂಡಾ ರಾತ್ರಿ ವೇಳೆಯಲ್ಲಿ ಪೊಲೀಸರ ಬೀಟ್ ಕೂಡಾ ಹೆಚ್ಚಿಸಲಾಗಿದೆ ಎಂದು ಕೋಲಾರ ಎಸ್ಪಿ ನಾರಾಯಣ್ ಹೇಳಿದ್ದಾರೆ.
ಇದನ್ನೂ ಓದಿ: ರಾಯಚೂರಿನಲ್ಲಿ ಟೊಮ್ಯಾಟೊಗಾಗಿ ಚಾಕು ಇರಿತ; ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ
ಖಾಸಗಿ ಸೆಕ್ಯೂರಿಟಿ ಹಾಗೂ ಸಿಸಿಟಿವಿ ಕ್ಯಾಮರಾ ಮೊರೆ ಹೋದ ಎಪಿಎಂಸಿ..!
ಇನ್ನು ರಾಜ್ಯದ ಕೆಲವು ಕಡೆ ಟೊಮ್ಯಾಟೊ ಕಳ್ಳತನವಾಗುತ್ತಿರುವುದರಿಂದ ಎಪಿಎಂಸಿ ಆಡಳಿತ ಮಂಡಳಿ ಮುನ್ನಚ್ಚರಿಕೆ ಕ್ರಮವಾಗಿ ಸುಮಾರು 24 ಸಿಸಿ ಕ್ಯಾಮರಾಗಳನ್ನು ಹಾಕಿಸಿದೆ. ಜೊತೆಗೆ ಖಾಸಗಿ ಸೆಕ್ಯೂರಿಟಿ ಗಾರ್ಡಗಳನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೆ ಅಲ್ಲಿನ ಕೆಲವು ಖಾಸಗಿ ಮಂಡಿಯವರು ಕೂಡಾ ಯಾವುದಕ್ಕೂ ಇರಲಿ ಎಂದು ಟೊಮ್ಯಾಟೋಗಳಿಗೆ ಖಾಸಗಿ ಸೆಕ್ಯೂರಿಟಿ ಗಾರ್ಡ್ಗಳನ್ನು ನೇಮಕ ಮಾಡಿಕೊಂಡಿದೆ. ಇನ್ನು ಇದೇ ಬೆಲೆ ಎಷ್ಟು ದಿನ ಇರುತ್ತೋ ಗೊತ್ತಿಲ್ಲ ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಟೊಮ್ಯಾಟೋಗೆ ರಕ್ಷಣೆ ಬೇಕೆ ಬೇಕು ಎಂದು ಮಂಡಿ ಮಾಲಿಕ ಸುಧಾಕರ್ ಹೇಳಿದ್ದಾರೆ.
ಟೊಮ್ಯಾಟೋಗೆ ಕಡಿಮೆಯಾಗುತ್ತಿಲ್ಲ ಬೇಡಿಕೆ
ಇನ್ನು ಎಪಿಎಂಸಿ ಮಾರುಕಟ್ಟೆಗೆ ಜೂನ್, ಜುಲೈ, ಆಗಸ್ಟ್, ತಿಂಗಳಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಸುಮಾರು 2.23ಲಕ್ಷ ಬಾಕ್ಸ್ ಟೊಮ್ಯಾಡೋ ಬರುತ್ತಿತ್ತು. ಆದರೆ ಇವತ್ತು ಕೇವಲ 73 ಸಾವಿರ ಬಾಕ್ಸ್ಗಳು ಬರುತ್ತಿವೆ. ಇನ್ನು ಟೊಮ್ಯಾಟೊ ವೈರಸ್ ಕಾಯಿಲೆ, ಎಲೆಸುರುಳಿ ರೋಗ, ಊಜಿ ರೋಗದ ಕಾಟದಿಂದ ಬೆಳೆದಿರುವ ಟೊಮ್ಯಾಟೊ ಸಂಪೂರ್ಣವಾಗಿ ಗುಣಮಟ್ಟ ಕಳೆದುಕೊಳ್ಳುತ್ತಿದೆ. ಹಾಗಾಗಿ ಇಲ್ಲಿ ಬೆಳೆಯುತ್ತಿರುವ ಟೊಮ್ಯಾಟೋ ಹೊರ ರಾಜ್ಯ ಹಾಗೂ ಹೊರ ದೇಶಕ್ಕೆ ರಪ್ತು ಮಾಡಲು ಆಗುತ್ತಿಲ್ಲ. ಇನ್ನು ಟೊಮ್ಯಾಟೊ ಸಿಜನ್ ಆರಂಭವಾಗಿರುವುದರಿಂದ ಪಶ್ಚಿಮ ಬಂಗಾಳ, ಗುಜರಾತ್, ದೆಹಲಿ, ನಾಸಿಕ್, ಸೇರಿದಂತೆ ಬಾಂಗ್ಲಾ, ಅಂಡಮಾನ್ ನಿಕೋಬಾರ್ಗಳಿಗೆ ಟೊಮ್ಯಾಟೊವನ್ನು ಹೆಚ್ಚಿನ ಪ್ರಮಾಣದಲ್ಲಿ ರಪ್ತು ಮಾಡಲಾಗುತ್ತದೆ. ಆದರೆ ಈಗ ಮಾರುಕಟ್ಟೆಗೆ ಬರುತ್ತಿರುವ ಟೊಮ್ಯಾಟೊ ಕಡಿಮೆಯಾಗಿರುವುದರಿಂದ ಕೆಂಪು ಚಿನ್ನಕ್ಕೆ ಡಿಮ್ಯಾಂಡಪೋ ಡಿಮ್ಯಾಂಡ್ ಎನ್ನುವಂತಾಗಿದೆ.
ಒಟ್ಟಾರೆ ಟೊಮ್ಯಾಟೊ ಮಾರುಕಟ್ಟೆಯಲ್ಲಿ ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದು, ಟೊಮ್ಯಾಟೊ ಬೆಳೆ ಈಗ ರೈತನಿಗೆ ಚಿನ್ನವಾಗಿ ರುವುದರಿಂದ ಟೊಮ್ಯಾಟೊ ವನ್ನು ಕಾಪಾಡಿಕೊಳ್ಳಲು ಪೊಲೀಸ್ ಬಂದೋಬಸ್ತ್ ಜೊತೆಗೆ ಸಿಸಿ ಟಿವಿ ಅಳವಡಿಸಿರುವುದು ನೋಡಿದರೆ ಮುಂದೆ ಟೊಮ್ಯಾಟೊ ಬೆಳೆ ಬೆಳೆಯುವ ರೈತರಿಗೆ ಬಾಡಿಗಾರ್ಡ್ ತೆಗೆದುಕೊಂಡರೂ ಆಶ್ಚರ್ಯವಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ