ಕೋಲಾರ: ಪುನೀತ್ ಹೆಸರಿಟ್ಟಿದ್ದ ಬಡಾವಣೆ ನಾಮಫಲಕ ಜೆಸಿಬಿಯಿಂದ ಧ್ವಂಸ; ಘಟನೆ ವಿರುದ್ಧ ಸ್ಥಳೀಯರ ಆಕ್ರೋಶ

| Updated By: preethi shettigar

Updated on: Dec 20, 2021 | 10:07 AM

ಪಂಚಾಯತಿ ಅಧಿಕಾರಿಗಳ ಮೌಖಿಕ ಒಪ್ಪಿಗೆ ಹಾಗೂ ಆಶ್ವಾಸನೆ ಮೇರೆಗೆ ನಾಮಫಲಕ ಅಳವಡಿಸಿದ್ದರು. ಆದರೆ ಕಳೆದ ರಾತ್ರಿ ಬಡಾವಣೆ ನಿರ್ಮಾಣ ಮಾಡಿದ್ದ ಮಾಜಿ ಪುರಸಭೆ ಸದಸ್ಯ ಮುರಗಯ್ಯ ಜೆಸಿಬಿ ಕಳುಹಿಸಿ ಬೋರ್ಡ್ ಧ್ವಂಸ ಮಾಡಿ ತೆರವು ಮಾಡಿಸಿದ್ದಾರೆ.

ಕೋಲಾರ: ಪುನೀತ್ ಹೆಸರಿಟ್ಟಿದ್ದ ಬಡಾವಣೆ ನಾಮಫಲಕ ಜೆಸಿಬಿಯಿಂದ ಧ್ವಂಸ; ಘಟನೆ ವಿರುದ್ಧ ಸ್ಥಳೀಯರ ಆಕ್ರೋಶ
ನಾಮಫಲಕ ಧ್ವಂಸ
Follow us on

ಕೋಲಾರ: ಪುನೀತ್​ ರಾಜ್ ​ಕುಮಾರ್​ ಹೆಸರಿಟ್ಟಿದ್ದ ಬಡಾವಣೆ ನಾಮಫಲಕವನ್ನು ಜೆಸಿಬಿಯಿಂದ ರಾತ್ರೋ ರಾತ್ರಿ ಧ್ವಂಸ ಮಾಡಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ದೇಶಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಮಾಜಿ ಪುರಸಭಾ ಸದಸ್ಯ ಮುರಗಯ್ಯ ಎಂಬುವರು ನಿರ್ಮಾಣ ಮಾಡಿದ್ದ ಬಡಾವಣೆಗೆ ಯಾವುದೇ ಹೆಸರು ಇಟ್ಟಿರಲಿಲ್ಲ. ಆದರೆ ಬಡಾವಣೆ ನಿವಾಸಿಗಳೆಲ್ಲಾ‌ ನಿರ್ಧಾರ ಮಾಡಿ ಇತ್ತೀಚೆಗೆ ಕೆಸರನಹಳ್ಳಿ ಪಂಚಾಯತಿಗೆ ಮನವಿ ಪತ್ರ ಕೊಟ್ಟು ಬಡಾವಣೆಗೆ ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಹೆಸರು ಇಡಲು ಅನುಮತಿ ಕೋರಿದ್ದರು. ನಂತರ ಪಂಚಾಯತಿ ಅಧಿಕಾರಿಗಳ ಮೌಖಿಕ ಒಪ್ಪಿಗೆ ಹಾಗೂ ಆಶ್ವಾಸನೆ ಮೇರೆಗೆ ನಾಮಫಲಕ ಅಳವಡಿಸಿದ್ದರು. ಆದರೆ ಕಳೆದ ರಾತ್ರಿ ಬಡಾವಣೆ ನಿರ್ಮಾಣ ಮಾಡಿದ್ದ ಮಾಜಿ ಪುರಸಭೆ ಸದಸ್ಯ ಮುರಗಯ್ಯ ಜೆಸಿಬಿ ಕಳುಹಿಸಿ ಬೋರ್ಡ್ ಧ್ವಂಸ ಮಾಡಿ ತೆರವು ಮಾಡಿಸಿದ್ದಾರೆ.

ಈ ವಿಷಯ ತಿಳಿದ ಬಡಾವಣೆ ನಿವಾಸಿಗಳು ರಾತ್ರಿಯೇ ನಾಮಫಲಕವನ್ನು ತೆರೆವು ಮಾಡದಂತೆ ಪ್ರತಿರೋಧ ಒಡ್ಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಬಂಗಾರಪೇಟೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ಜೆಸಿಬಿ ಹಾಗೂ ಚಾಲಕನನ್ನು ವಶಕ್ಕೆ ಪಡೆದು, ರಾತ್ರೋರಾತ್ರಿ ತೆರವು ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಬಡಾವಣೆ ನಿವಾಸಿಗಳು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲು ಮಾಡಿ, ವಿಚಾರಣೆ ನಡೆಸುತ್ತಿದ್ದಾರೆ.

ಬಡಾವಣೆ ನಿವಾಸಿಗಳು ಬಡಾವಣೆಗೆ ಪುನೀತ್​ ಹೆಸರು ಇಡಲು ಮನವಿ ಮಾಡಿದ್ದಾರೆ. ಅದನ್ನು ನಾವು ನಿಯಮಾನುಸಾರ ಕ್ರಮ ಕೈಗೊಂಡು ಅನುಮತಿ ನೀಡುತ್ತೇವೆ. ಆದರೆ ರಾತ್ರೋರಾತ್ರಿ ನಾಮಫಲಕ ತೆರವು ಮಾಡಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ ಎಂದು ಕೆಸರನಹಳ್ಳಿ ಪಿಡಿಓ ನಾರಾಯಣಪ್ಪ ತಿಳಿಸಿದ್ದಾರೆ.

ಬಡಾವಣೆಯ ನಿವಾಸಿ ಹಾಗೂ ಡಾ.ಪುನೀತ್​ ರಾಜ್ ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ರಾಮ್ ಪ್ರಸಾದ್ ಟಿವಿ9 ಡಿಜಿಟಲ್​ಗೆ ಮಾಹಿತಿ ನೀಡಿದ್ದು, ಮಾಜಿ ಪುರಸಭಾ ಸದಸ್ಯ ಮುರುಗಯ್ಯ ಎಂಬುವವರು ಉದ್ದೇಶ ಪೂರ್ವಕವಾಗಿ ನಾಮಫಲಕ ತೆರವು ಮಾಡಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಸದ್ಯ ಪರಿಸ್ಥಿತಿ ಶಾಂತಿಯುತವಾಗಿದ್ದು, ಜೆಸಿಬಿ ಹಾಗೂ ಜೆಸಿಬಿ ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಬಂಗಾರಪೇಟೆ ವೃತ್ತನಿರೀಕ್ಷಕ ಸುನಿಲ್ ಕುಮಾರ್ ತಿಳಿಸಿದ್ದಾರೆ.

ವರದಿ: ರಾಜೇಂದ್ರಸಿಂಹ

ಇದನ್ನೂ ಓದಿ:
ಪುನೀತ್​ ರಾಜ್​ಕುಮಾರ್​ಗಾಗಿ ಫ್ಯಾನ್ಸ್​ ನಿರ್ಮಿಸಿದ ಮಿನಿ ಸ್ಮಾರಕ; ಹೊಸೂರು ಗ್ರಾಮಸ್ಥರ ಅಭಿಮಾನದ ಕಾರ್ಯ

ಪುನೀತ್​ ರಾಜ್​ಕುಮಾರ್​ ಭಾವಚಿತ್ರ ಹಿಡಿದುಕೊಂಡು ಶಬರಿಮಲೆ ಯಾತ್ರೆ ಮಾಡಿದ ಅಭಿಮಾನಿಗಳು