ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಶಿಕ್ಷೆ: ಪೂರಕ ಸಾಕ್ಷ್ಯ ಕರ್ನಾಟಕದಿಂದ ಸೂರತ್​ಗೆ ಹೋದ ಬಗೆ ಹೀಗಿದೆ ನೋಡಿ

ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಪ್ರಕರಣದಲ್ಲಿ ಮುಳಬಾಗಲಿನ ಬಿಜೆಪಿ ಮುಖಂಡ ಪಿ.ಎಂ.ರಘುನಾಥ್ ಅವರು ನೀಡಿದ ಬಲವಾದ ಸಾಕ್ಷ್ಯ ರಾಹುಲ್​ ಗಾಂಧಿ ಅವರಿಗೆ ಜೈಲು ಶಿಕ್ಷೆ ಆಗುವಂತೆ ಮಾಡಿದೆ.

ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಶಿಕ್ಷೆ: ಪೂರಕ ಸಾಕ್ಷ್ಯ ಕರ್ನಾಟಕದಿಂದ ಸೂರತ್​ಗೆ ಹೋದ ಬಗೆ ಹೀಗಿದೆ ನೋಡಿ
ರಾಹುಲ್​ ಗಾಂಧಿ, ಪೂರಕ ಸಾಕ್ಷ್ಯ
Follow us
ಗಂಗಾಧರ​ ಬ. ಸಾಬೋಜಿ
|

Updated on:Mar 25, 2023 | 7:38 PM

ಕೋಲಾರ: 2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿಯವರಿಗೆ (Rahul Gandhi) ಸೂರತ್ ನ್ಯಾಯಾಲಯವು ಗುರುವಾರ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಬಳಿಕ ಅವರನ್ನು ಸಂಸದ (Member of Parliament) ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಕರ್ನಾಟಕದಿಂದ ಹೋದ ಸಾಕ್ಷ್ಯಗಳೇ ರಾಹುಲ್ ಗಾಂಧಿಗೆ ಶಿಕ್ಷೆ ಆಗುವಂತೆ ಮಾಡಿದ್ದರಲ್ಲಿ ಪ್ರಮುಖ ಪಾತ್ರವಹಿಸಿದೆ. ಬಿಜೆಪಿ ನಾಯಕ ಪಿ.ಎಂ.ರಘುನಾಥ್ (PM Raghunath) ಅವರು ನೀಡಿದ ಬಲವಾದ ಸಾಕ್ಷ್ಯಗಳು ರಾಹುಲ್​ ಗಾಂಧಿ ಅವರಿಗೆ ಶಿಕ್ಷೆಯಾಗಲು ಕಾರಣವಾಗಿದೆ. ಹಾಗಾದ್ರೆ ಕರ್ನಾಟಕದಿಂದ ಗುಜರಾತ್​ಗೆ ಸಾಕ್ಷ್ಯಗಳು ತಲುಪ್ಪಿದ್ದು ಹೇಗೆ ಎಂಬ ಕುತೂಹಲಕಾರಿ ಸಂಗತಿ ಇಲ್ಲಿದೆ. ಮುಂದೆ ಓದಿ.

ಕಳೆದ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸಿದ್ದ ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್​ ಗಾಂಧಿ ವಿರುದ್ದ ಹೂಡಲಾಗಿದ್ದ ಮಾನಹಾನಿ ಹಾಗೂ ಜಾತಿ ನಿಂಧನೆ ಪ್ರಕರಣದಲ್ಲಿ ರಾಹುಲ್​ ಗಾಂಧಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್​ ಆದೇಶ ಮಾಡಿದ ಬೆನ್ನಲ್ಲೇ ರಾಹುಲ್​ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ರಾಹುಲ್​ ಗಾಂಧಿ 2019ರ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಕೋಲಾರ, ಮುಳಬಾಗಿಲು ಹಾಗೂ ಕೆಜಿಎಫ್​ನಲ್ಲಿ ನಡೆದ ಪ್ರಚಾರದ ವೇಳೆ ಸರ್​.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡುವ ವೇಳೆಯಲ್ಲಿ ಪ್ರಧಾನಿ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಮೋದಿ ಅನ್ನೋ ಹೆಸರಲ್ಲಿ ಸಮುದಾಯವನ್ನು ನಿಂಧನೆ ಮಾಡಿದ್ದರು.

ಇದನ್ನೂ ಓದಿ: ಮೋದಿ ಸರ್​​ನೇಮ್ ಮಾತ್ರವಲ್ಲ ರಾಹುಲ್ ಗಾಂಧಿ ನೀಡಿದ ವಿವಾದಿತ ಹೇಳಿಕೆಗಳು ಇನ್ನೂ ಇವೆ

ಈ ಸಂಬಂಧ ಬಿಜೆಪಿ ಶಾಸಕ ಪೂರ್ಣೇಶ್​ ಮೋದಿ ಅವರು ರಾಹುಲ್ ಗಾಂಧಿ ವಿರುದ್ದ ಕ್ರಮಿನಲ್​ ಮೊಕದ್ದಮೆ ಹೂಡಿದ್ದರು. ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಪ್ರಕರಣದಲ್ಲಿ ಮುಳಬಾಗಲಿನ ಬಿಜೆಪಿ ಮುಖಂಡ ಪಿ.ಎಂ.ರಘುನಾಥ್ ಅವರು ನೀಡಿದ ಬಲವಾದ ಸಾಕ್ಷ್ಯ ರಾಹುಲ್​ ಗಾಂಧಿ ಅವರಿಗೆ ಜೈಲು ಶಿಕ್ಷೆ ಆಗುವಂತೆ ಮಾಡಿದೆ.

ನೀರವ್, ಲಲಿತ್, ನರೇಂದ್ರ ಮೋದಿ ಇವರೆಲ್ಲ ಒಂದೇ: ರಾಹುಲ್​ ಗಾಂಧಿ

2019ರ ಲೋಕಸಭಾ ಚುನಾವಣೆಯಲ್ಲಿ ಕೋಲಾರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ರಾಹುಲ್​ ಗಾಂಧಿ ಅಂದಿನ ಎಐಸಿಸಿ ಅಧ್ಯಕ್ಷರಾಗಿದ್ದರು. ಅವರು ತಮ್ಮ ಭಾಷಣದ ವೇಳೆಯಲ್ಲಿ, ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಇವರೆಲ್ಲರ ಸರ್ ನೇಮ್ ಒಂದೇ ಆಗಿದ್ದು, ಈ ಹೆಸರಿನವರು ಎಲ್ಲರೂ ಕಳ್ಳರು. ಈ ಎಲ್ಲಾ ಕಳ್ಳರು ಸೇರಿ ದೇಶವನ್ನು ಲೂಟಿ ಮಾಡಿದ್ದಾರೆ ಎಂದು ಹೇಳಿದ್ದರು. ಕೋಲಾರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ, ಮುಳಬಾಗಿಲಿನ ರೋಡ್​ ಶೋ ವೇಳೆಯಲ್ಲಿ ಹಾಗೂ ಕೆಜಿಎಫ್​ನ ನಗರಸಭೆ ಮೈದಾನದಲ್ಲಿ ಆಯೋಜನೆ ಮಾಡಿದ್ದ ಬಹಿರಂಗ ಸಮಾವೇಶದ ವೇಳೆಯಲ್ಲೂ ರಾಹುಲ್​ ಗಾಂಧಿ ಇದೇ ವಿಚಾರವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದರು.

ಕಳೆದ ಲೋಕಸಭಾ ಚುನಾವಣೆಯ ಕಾಂಗ್ರೆಸ್​ ಅಭ್ಯರ್ಥಿಯಾಗಿದ್ದ ಕೆ.ಹೆಚ್​.ಮುನಿಯಪ್ಪ ಪರ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಆಗಮಿಸಿದ್ದರು. ಪದೇ ಪದೇ ರಾಹುಲ್​ ಗಾಂಧಿಯವರು ನರೇಂದ್ರ ಮೋದಿ ಅವರ ಹೆಸರನ್ನು ನೀರವ್​ ಮೋದಿ ಹಾಗೂ ಲಲಿತ್​ ಮೋದಿ ಹೆಸರೊಂದಿಗೆ ಸೇರಿಸಿ ಮಾತನಾಡಿದ್ದರು. ಈ ವಿಚಾರವಾಗಿ ಗುಜರಾತ್​ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಸೂರತ್‌ನ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಕ್ರಿಮಿನಲ್ ಮಾನಹಾನಿ ದೂರು ದಾಖಲಿಸಿದ್ದರು.

ಕೋಲಾರದಲ್ಲಿ ಭಾಷಣ ಗುಜರಾತ್​ನಲ್ಲೇಕೆ ದೂರು?

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರಲ್ಲೇ ಮಾನಹಾನಿ ಕೇಸ್​ ದಾಖಲು ಮಾಡಬಹುದಾಗಿತ್ತು. ಆದರೆ ಮೋದಿ ಅನ್ನೋದು ಒಂದು ಸಮುದಾಯದ ಹೆಸರು. ಕರ್ನಾಟಕದಲ್ಲಿ ಗಾಣಿಗ ಸಮುದಾಯ ಎಂದು ಕರೆಯಲಾಗುತ್ತದೆ. ಅದೇ ರೀತಿ ಅದೇ ಸಮುದಾಯವರು ಗುಜರಾತ್​ನಲ್ಲಿ ಮೋದಿ ಹೆಸರಿಟ್ಟುಕೊಂಡಿರುತ್ತಾರೆ. ಹಾಗಾಗಿ ಅವರು ನಿಂದನೆ ಮಾಡಿದ್ದು ಕೇವಲ ಮೋದಿ ಎನ್ನುವ ಹೆಸರನ್ನಷ್ಟೇ ಅಲ್ಲ. ಒಂದು ಸಮುದಾಯವನ್ನು ಅನ್ನೋದು ಅರ್ಥವಾಗಲೀ ಅನ್ನೋ ಕಾರಣಕ್ಕೆ ಗುಜರಾತ್​ನಲ್ಲಿ ಮಾನಹಾನಿ ಜೊತೆಗೆ ಜಾತಿ ನಿಂದನೆ ಕೇಸ್ ಕೂಡ ದಾಖಲು ಮಾಡಲಾಗಿತ್ತು.

ಎಂ.ಪಿ.ರಘುನಾಥ್​ ಜೊತೆಗೆ ಸರ್ಕಾರದ ಸಾಕ್ಷ್ಯವನ್ನೂ ಪರಿಗಣಿಸಲಾಗಿತ್ತು:

ಶಾಸಕ ಪೂರ್ಣೇಶ್ ಮೋದಿ ಅವರು ಹಾಕಲಾಗಿದ್ದ ಮಾನಹಾನಿ ಹಾಗೂ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಗಳನ್ನು ಎಂ.ಪಿ.ರಘುನಾಥ್ ಅವರು ಒದಗಿಸಿಕೊಡುವಲ್ಲಿ ಸಹಾಯ ಮಾಡಿದ್ದರು. ಅದರ ಜೊತೆಗೆ ಎಂ.ಪಿ.ರಘುನಾಥ್ ಕೋರ್ಟ್​ನ ಕಟಕಟೆಯಲ್ಲಿ ನಿಂತು ರಾಹುಲ್​ ಗಾಂಧಿಯವರನ್ನು ಗುರುತಿಸುವ ಮೂಲಕ ಪ್ರತ್ಯಕ್ಷ ಸಾಕ್ಷಿದಾರರಾಗಿ ಕೋರ್ಟ್​ನಲ್ಲಿ ಸಾಕ್ಷಿ ಹೇಳಿದ್ದರು. ಆದರೆ ಇದಕ್ಕೂ ಮುಖ್ಯವಾಗಿ ಚುನಾವಣಾ ಆಯೋಗ ನೀಡಿದ್ದ ಆಡಿಯೋ ವಿಡಿಯೋ ಸಹಿತದ ಚುನಾವಣಾಧಿಕಾರಿಗಳಿಂದ ದೃಡೀಕರಿಸಲಾಗಿದ್ದ ಮುಚ್ಚಿದ ಲಕೋಟೆಯಲ್ಲಿದ್ದ ಸಿಡಿಯನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿತ್ತು.

ಇದನ್ನೂ ಓದಿ: Rahul Gandhi Press Conference: ಅದಾನಿ ಜತೆ ಮೋದಿಗಿರುವ ಸಂಬಂಧ ಏನು? ನಾನು ಒಂದೇ ಪ್ರಶ್ನೆ ಕೇಳುತ್ತಿದ್ದೇನೆ, ಉತ್ತರಬೇಕು: ರಾಹುಲ್ ಗಾಂಧಿ

ಅದರ ಜೊತೆಗೆ ಚುನಾವಣಾ ಪ್ರಚಾರದ ವೇಳೆ ಅದನ್ನು ಚಿತ್ರೀಕರಿಸಿದ್ದ ವಿಡಿಯೋ ಗ್ರಾಫರ್​, ಅಂದು ಚುನಾವಣಾಧಿಕಾರಿಯಾಗಿದ್ದ ಅಧಿಕಾರಿಗಳ ಹೇಳಿಕೆಯನ್ನು ಕೂಡ ಇಲ್ಲಿ ದಾಖಲು ಮಾಡಲಾಗಿತ್ತು. ಈ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಕೋರ್ಟ್​ ರಾಹುಲ್​ ಗಾಂಧಿ ವಿರುದ್ದ ತೀರ್ಪು ನೀಡಿದೆ.

ಯಾರಿದು ಎಂ.ಪಿ.ರಘುನಾಥ್​?

ಮೂಲತ: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನವರಾಗಿರುವ ಎಂ.ಪಿ.ರಘುನಾಥ್ ಅವರು ಆರ್​​ಎಸ್​ಎಸ್​​ನಲ್ಲಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ ಹಲವು ವರ್ಷಗಳ ಕಾಲ ಪತ್ರಕರ್ತರಾಗಿಯೂ ಕೆಲಸ ಮಾಡಿದ್ದಾರೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಕೋಲಾರ ಜಿಲ್ಲಾ ಬಿಜೆಪಿಯ ಅಧ್ಯಕ್ಷರಾಗಿ ಹಾಗೂ ಬಿಜೆಪಿಯ ವಿವಿಧ ಹಂತಗಳಲ್ಲಿ ಹಲವು ಜವಾಬ್ದಾರಿಗಳನ್ನ ನಿಭಾಯಿಸಿದ್ದಾರೆ. ಇದರ ಜೊತೆಗೆ ರಘುನಾಥ್ ಅವರು ಗಾಣಿಗ ಸಮುದಾಯದ ಆಲ್ ಇಂಡಿಯಾ ಗಾಣಿಗ ಸಮಾಜದ ಕಾರ್ಯಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದಾರೆ.

ಈ ಎಲ್ಲಾ ಕಾರಣದಿಂದಲೇ ಅವರು ರಾಹುಲ್​ ಗಾಂಧಿ ಅವರಿಗೆ ತಮ್ಮ ತಪ್ಪಿನ ಅರಿವಾಗಬೇಕು, ಅವರು ಕೇವಲ ಮೋದಿ ಅವರನ್ನು ಟೀಕೆ ಮಾಡುತ್ತಿಲ್ಲ, ಒಂದು ಸಮುದಾಯವನ್ನು ಟೀಕೆ ಮಾಡಿ ಸಮುದಾಯವನ್ನು ನಿಂದನೆ ಮಾಡಿದ್ದಾರೆ ಅನ್ನೋದು ಅರ್ಥವಾಗಲಿ ಅನ್ನೋ ಕಾರಣಕ್ಕೆ ಹೋರಾಟ ಮಾಡಿದ್ದಾಗಿ ಅವರು ಟಿವಿ9 ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲ ಇದು ಕೇವಲ ರಾಹುಲ್​ ಗಾಂಧಿಗಷ್ಟೇ ಅಲ್ಲ ಎಲ್ಲಾ ಪಕ್ಷಗಳ ರಾಜಕಾರಣಿಗಳಿಗೂ ಕೂಡಾ ಇದು ಪಾಠ ಆಗಬೇಕು, ರಾಜಕೀಯ ನಾಯಕರು ರಾಜಕೀಯ ಭಾಷಣ ಮಾಡುವ ಭರದಲ್ಲಿ ಯಾರ ಮನಸ್ಸಿಗೂ ಯಾವುದೇ ಸಮುದಾಯಕ್ಕೂ ನೋವಾಗದ ರೀತಿಯಲ್ಲಿ ಮಾತನಾಡುವುದನ್ನು ಕಲಿಯಬೇಕು ಅನ್ನೋದು ನಮ್ಮ ಉದ್ದೇಶ ಎಂದರು.

ವರದಿ: ರಾಜೇಂದ್ರ ಸಿಂಹ, ಟಿವಿ9, ಕೋಲಾರ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:02 pm, Sat, 25 March 23