ಕೋಲಾರ: ಕಳೆದ ಒಂದು ತಿಂಗಳಿಂದ ಸುರಿದ ಮಳೆಯ ಬರದ ನಾಡು ಕೋಲಾರ ಜಿಲ್ಲೆ ತತ್ತರಿಸಿದೆ (Rain Damage in Kolar). ಮಳೆಯ ಪರಿಣಾಮಗಳು ಈಗ ಗೋಚರಿಸುತ್ತಿವೆ. ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನೀರಿನಲ್ಲಿ ಕೊಚ್ಚಿಹೋಗಿದೆ. ಮನೆ ಹಾಗೂ ನೂರಾರು ಶಾಲಾ ಕಟ್ಟಡಗಳಿಗೂ ಹಾನಿಯಾಗಿದ್ದು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧಕ್ಕೆಯೊದಗಿದೆ. ಮಳೆಯಿಂದ ಆಗಿರುವ ಬೆಳೆಹಾನಿಯ ಮೊತ್ತ ಸುಮಾರು ₹ 32 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. ಮಳೆಯಿಂದ ನೂರಾರು ಶಾಲಾ ಕೊಠಡಿಗಳು ಹಾನಿಯಾಗಿವೆ.
ವರದಿ: ರಾಜೇಂದ್ರ ಸಿಂಹ
ಜಿಲ್ಲೆಯಲ್ಲಿ ಒಟ್ಟು 2,000 ಶಾಲೆಗಳಿದ್ದು 9,700 ಕೊಠಡಿಗಳಿವೆ. ಈ ಪೈಕಿ 500 ಕೊಠಡಿಗಳಿಗೆ ಸಂಪೂರ್ಣ ಹಾನಿಯಾಗಿದ್ದು, ಅವನ್ನು ಹೊಸದಾಗಿ ನಿರ್ಮಿಸಬೇಕಿದೆ. 1,500 ಕೊಠಡಿಗಳಿಗೆ ಹೆಚ್ಚಿನ ರಿಪೇರಿ ಅಗತ್ಯವಿದೆ. 1,400 ಕೊಠಡಿಗಳು ಸಣ್ಣಪುಟ್ಟ ರಿಪೇರಿಯೊಂದಿಗೆ ಸಿದ್ಧವಾಗುತ್ತವೆ. ಶಾಲೆಗಳು ಇತ್ತೀಗಷ್ಟೇ ಆರಂಭವಾಗಿರುವುದರಿಂದ ರಿಪೇರಿ ಮಾಡಲು ಮಕ್ಕಲಿಗೆ ರಜೆ ನೀಡಬೇಕಾಗುತ್ತದೆ. ಕುಸಿದು ಬಿದ್ದಿರುವ ಶಾಲಾ ಕೊಠಡಿಗಳಲ್ಲಿ ಮಕ್ಕಳು ಕುಳಿತು ಪಾಠ ಕಲಿಯೋದು ಹೇಗೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಈ ಶಾಲೆಗಳ ರಿಪೇರಿ ಕಾರ್ಯ ಸಾಧ್ಯವಿಲ್ಲ. ಹಾಗಾಗಿ ಸರ್ಕಾರದ ವಿಶೇಷ ಅನುದಾನ ಬೇಕು ಎನ್ನುತ್ತಾರೆ ಜಿಪಂ ಸಿಒ ಯುಕೇಶ್ ಕುಮಾರ್.
ಮಳೆಯಿಂದ ಶಾಲೆಗಳು ಶಾಲಾ ಕಟ್ಟಡಗಳ ಹಾನಿಯನ್ನು ಸರಿಪಡಿಸಲು ಸದ್ಯ ಜಿಲ್ಲಾ ಪಂಚಾಯಿತಿ ಬಳಿ ಇರುವ ಅನುದಾನ ಯಾವುದಕ್ಕೂ ಸಾಲದ ಸ್ಥಿತಿ ಇದೆ. ಹಾಗಾಗಿ ರಾಜ್ಯ ಸರ್ಕಾರಕ್ಕೆ ವಿಶೇಷ ಅನುದಾನ ನೀಡುವಂತೆ ವರದಿ ಸಲ್ಲಿಸಿ, ಅನುದಾನ ಬಂದ ನಂತರ ಹಾಳಾಗಿರುವ ಕೊಠಡಿಗಳನ್ನು ಸರಿಪಡಿಸಬೇಕಿದೆ. ಈಗಿನ ಪರಿಸ್ಥಿತಿಯಲ್ಲಿ ಕನಿಷ್ಠ ₹ 20 ಕೋಟಿ ಅನುಧಾನವಾದರೂ ಬೇಕು ಎಂದು ಹೇಳಲಾಗುತ್ತಿದೆ. ಸರ್ಕಾರ ಇಷ್ಟು ಅನುದಾನ ಬಿಡುಗಡೆ ಮಾಡಿ, ಹಾನಿಯಾಗಿರುವ ಶಾಲಾ ಕಟ್ಟಡಗಳನ್ನು ಸರಿಪಡಿಸುವುದು ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.
ಸದ್ಯ ಮಳೆಯಿಂದ ಜಿಲ್ಲೆಯಲ್ಲಿ ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ. ಮಕ್ಕಳ ಶಾಲಾ ಚಟುವಟಿಕೆಗಳಿಗೆ ಯಾವುದೇ ತೊಂದರೆ ಯಾಗದ ರೀತಿಯಲ್ಲಿ ಪರ್ಯಾಯ ವ್ಯವಸ್ಥೆಯನ್ನು ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಜಿಲ್ಲೆಯ ಹಲವೆಡೆ ಸರಿಯಾದ ಕಟ್ಟಡ ಇಲ್ಲದೆ ಮಕ್ಕಳು ಮರದ ಕೆಳಗೆ ಕುಳಿತು ಪಾಠ ಕೇಳುವ, ಒಂದೇ ಕೊಠಡಿಯಲ್ಲಿ ನಾಲ್ಕೈದು ತರಗತಿ ಮಾಡುವ, ಶಾಲಾ ಆವರಣದಲ್ಲಿ, ಹಾಗೂ ಹಾಲಿನ ಡೇರಿ ಕಟ್ಟಡಗಳಲ್ಲಿ ಮಕ್ಕಳಿಗೆ ಪಾಠ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಕೊರೊನಾ ಕಾಲದಲ್ಲಿ ಕಟ್ಟಡಗಳನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ಅವು ಹಾಳಾಗಿದ್ದವು ಎನ್ನುವುದು ಅಧಿಕಾರಿಗಳಿಗೆ ಗೊತ್ತಿತ್ತು. ಹಾಗಾಗಿ ಬೇಸಿಗೆ ರಜೆ ಸಂದರ್ಭದಲ್ಲಿ ಅಧಿಕಾರಿಗಳು ಶಾಲೆಗಳನ್ನು ಗುಣಮಟ್ಟ ಪರೀಕ್ಷೆ ನಡೆಸಿ ಕಟ್ಟಡಗಳನ್ನು ದುರಸ್ಥಿ ಪಡಿಸಬೇಕಿತ್ತು. ಆದರೆ ಇಷ್ಟು ದಿನ ಸುಮ್ಮನಿದ್ದು ಈಗ ಯುದ್ದಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವಂತೆ ಶಾಲಾ ಕಟ್ಟಡಗಳನ್ನು ಸರಿಪಡಿಸುತ್ತೇವೆ ಎನ್ನುತ್ತಿರುವ ಅಧಿಕಾರಿಗಳ ಕ್ರಮಕ್ಕೆ ಪೊಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗಿದ್ದು ಅದರಲ್ಲೂ ಶಾಲಾ ಕಟ್ಟಡಗಳಿಗೆ ಹೆಚ್ಚಿನ ಹಾನಿಯಾಗಿದೆ ಕೂಡಲೇ ಸರ್ಕಾರ ಅಗ್ಯವಿರುವ ಅನುಧಾನ ಬಿಡುಗಡೆ ಮಾಡಿ ಮೊದಲ ಆದ್ಯತೆಯಲ್ಲಿ ಶಾಲೆಗಳನ್ನು ದುರಸ್ತಿ ಮಾಡಿಸಬೇಕು ಎನ್ನುವುದು ಮಕ್ಕಳು ಹಾಗೂ ಪೊಷಕರ ಆಗ್ರಹ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:29 pm, Mon, 30 May 22