ವಯಸ್ಸಾದ ತಂದೆ ತಾಯಿಯರನ್ನು ನೋಡಿಕೊಳ್ಳುವವರ ಸಂಖ್ಯೆ ತುಂಬಾ ಕಡಿಮೆ, ವಯಸ್ಸಾದವರ ಕಥೆ ನಮಗ್ಯಾಕೆ ಎಂದು ಯಾವುದೋ ವೃದ್ಧಾಶ್ರಮಕ್ಕೆ ಸೇರಿಸಿ ಒಂದಷ್ಟು ದುಡ್ಡು ಕೊಟ್ಟು ಕೈತೊಳೆದುಕೊಳ್ಳುವ ಮಕ್ಕಳ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಇಂಥ ಸಮಾಜದಲ್ಲಿ ಕಾಣೆಯಾದ ತನ್ನ ವಯಸ್ಸಾದ ತಾಯಿಗಾಗಿ ಮಗಳು (daughter) ಮತ್ತು ಅಳಿಯ ಕಳೆದ ಏಳು ತಿಂಗಳಿಂದ ನಿರಂತರ ಹುಡುಕಾಟ ಮಾಡುತ್ತಿರುವ ಮನಕಲಕುವ ಅಪರೂಪದ ಘಟನೆಯೊಂದು ಕೋಲಾರದಲ್ಲಿ ಕಂಡು ಬಂದಿದೆ. ಮಾತು ಬಾರದ ತನ್ನ ತಾಯಿ ಅಚಾನಕ್ಕಾಗಿ ನಾಪತ್ತೆಯಾಗಿದ್ದು ತಾಯಿಗಾಗಿ (missing mother) ಮಗಳು ಕಳೆದ ಏಳು ತಿಂಗಳಿಂದ ಹುಡುಕಾಡುತ್ತಿದ್ದಾರೆ. ಹೆತ್ತಮ್ಮನಿಗೆ ಮಾತು ಬರೋದಿಲ್ಲ, ಅಪಘಾತದಿಂದ ತಲೆಗೆ ಪೆಟ್ಟು ಬಿದ್ದು ಬುದ್ದಿಯೂ ಇಲ್ಲ, ಹೀಗಿರುವಾಗ ಮನೆಯಿಂದ ಹೊರಗೆ ಕೂತಿದ್ದವರು ಏಕಾಏಕಿ ನಾಪತ್ತೆಯಾಗಿಗಿದ್ದಾರೆ, ಎಲ್ಲಿ ಹೋಗಿದ್ದಾರೋ ಗೊತ್ತಿಲ್ಲ, ಎಂದು ಆಕೆಯ ಮಗಳು ಮತ್ತು ಅಳಿಯ ಅಮ್ಮನಿಗಾಗಿ ಹತ್ತಾರು ಪೊಲೀಸ್ ಠಾಣೆಗಳನ್ನು ಸುತ್ತುತ್ತಾ, ಹಲವು ಊರುಗಳನ್ನು ಸುತ್ತಾಡಿ ತಾಯಿಗಾಗಿ ಹುಡುಕಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ತನ್ನ ತಾಯಿಯನ್ನು ಹುಡುಕಿಕೊಟ್ಟವರಿಗೆ 50 ಸಾವಿರ ಹಣವನ್ನು ಕೊಡುವುದಾಗಿ (reward) ಹೇಳಿದ್ದಾರೆ.
ಕೋಲಾರ ಜಿಲ್ಲೆ ( Kolar) ಮುಳಬಾಗಿಲು ದೋಭಿಘಾಟ್ ಬಳಿಯಲ್ಲಿ ವಾಸವಿದ್ದ 62 ವರ್ಷ ವಯಸ್ಸಿನ ಲಕ್ಷ್ಮಮ್ಮ ನಾಪತ್ತೆಯಾಗಿದ್ದಾರೆ. ಲಕ್ಷ್ಮಮ್ಮ ಪತಿ ಮೃತ ಪಟ್ಟು ಹಲವು ವರ್ಷಗಳೇ ಕಳೆದಿದೆ, ತಾಯಿ ಲಕ್ಷ್ಮಮ್ಮ ಅವರಿಗೆ ಒಬ್ಬಳೇ ಮಗಳು ಪ್ರಮೀಳಾ. ಆಕೆಯನ್ನು ಚಿಂತಾಮಣಿ ಮೂಲದ ಲವ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಆದರೆ ತನ್ನ ತಾಯಿಗೆ ಮಾತು ಬರೋದಿಲ್ಲ, ಬುದ್ದಿಯೂ ಸರಿ ಇಲ್ಲಾ ಅನ್ನೋ ಕಾರಣಕ್ಕೆ ಮಗಳು ಪ್ರಮೀಳಾ ಹಾಗೂ ಅಳಿಯ ಲವ ಇಬ್ಬರು ಲಕ್ಷ್ಮಮ್ಮರನ್ನು ತಮ್ಮ ಮನೆಯಲ್ಲಿ ನೋಡಿಕೊಳ್ಳುತ್ತಿದ್ದರು.
Also Read: ಮನೆ ಮಗನಂತೆ ಸಾಕಿದ್ದ ಮೂಕ ಪ್ರಾಣಿ ಹೋರಿ ಪರಾರಿ! ಕುಟುಂಬ ಹಗಲಿರುಳು ಪರಿತಪಿಸುತಿದೆ
ಹೀಗಿರುವಾಗ ಕಳೆದ ಮೇ 24 ರಂದು ರೇಷನ್ ಕಾರ್ಡ್ ಮಾಡಿಸಲು ಮುಳಬಾಗಿಲಿಗೆ ಕರೆದುಕೊಂಡು ಬಂದಾಗ ಲಕ್ಷ್ಮಮ್ಮ ಅವರು ಇದ್ದಕ್ಕಿದಂತೆ ನಾಪತ್ತೆಯಾಗಿದ್ದಾರೆ. ಕೂಡಲೇ ಅವರ ತಾಯಿಗಾಗಿ ಸಾಕಷ್ಟು ಹುಡುಕಾಟ ಮಾಡಿದ್ದಾರೆ. ಆದರೆ ತಾಯಿಯ ಸುಳಿವು ಸಿಕ್ಕಿಲ್ಲ, ಮುಳಬಾಗಿಲು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ, ಅಲ್ಲದೆ ಅವರಿಗಾಗಿ ಮುಳಬಾಗಿಲು, ಶ್ರೀನಿವಾಸಪುರ, ಕೋಲಾರ, ಚಿಂತಾಮಣಿ, ಬಂಗಾರಪೇಟೆ, ಮಾಲೂರು, ಶಿಡ್ಲಘಟ್ಟ ಸೇರಿದಂತೆ ಹಲವು ಊರುಗಳಲ್ಲಿ ಹುಡುಕಾಡಿದ್ದಾರೆ. ಅನಾಥಶ್ರಮಗಳು, ನಿರಾಶ್ರಿತರ ಕೇಂದ್ರ ಸೇರಿ ಹಲವು ವೃದ್ಧಾಶ್ರಮಗಳಲ್ಲಿಯೂ ಹುಡುಕಾಡಿದ್ದಾರೆ.
ಆದರೆ ನಾಪತ್ತೆಯಾಗಿರುವ ತಾಯಿ ಲಕ್ಷ್ಮಮ್ಮರ ಸುಳಿವು ಮಾತ್ರ ಸಿಕ್ಕಿಲ್ಲ. ಸದ್ಯ ಕಣ್ಣೀರು ಹಾಕುತ್ತಾ ತಾಯಿಗಾಗಿ ಹುಡುಕಾಟ ಮಾಡುತ್ತಿರುವ ಮಗಳು ಅಳಿಯ ಹತ್ತಾರು ಬಾರಿ ಪೊಲೀಸ್ ಠಾಣೆಗಳಿಗೆ ತೆರಳಿ, ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಅಂಗಲಾಚಿದ್ದಾರೆ. ಆದರೆ ಅವರ ಸುಳಿವು ಮಾತ್ರ ಸಿಕ್ಕಿಲ್ಲ. ಸದ್ಯ ಬೇರೆ ದಾರಿ ಕಾಣದಾಗಿರುವ ದಂಪತಿ ಈಗ ತನ್ನ ತಾಯಿಯನ್ನು ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ ಕೊಡುವುದಾಗಿ ಪೋಸ್ಟರ್ಗಳನ್ನು ಮಾಡಿಸಿ ಹಂಚುತ್ತಿದ್ದಾರೆ.
ನಮ್ಮ ಬಳಿ ಕೊಡಲು ಹಣ ಇಲ್ಲ, ಆದರೂ ತಿಂಗಳಿಗೆ ಸಾವಿರ ರೂಪಾಯಿಯಂತೆ ಹಣ ಕೊಡುತ್ತೇನೆ ಎಂದು ಮಗಳು ತಾಯಿಗಾಗಿ ಅಂಗಲಾಚುತ್ತಿದ್ದಾರೆ. ಯಾರಾದ್ರು ನಮ್ಮ ತಾಯಿಯನ್ನು ನೋಡಿದ್ರೆ ಅವರ ಸುಳಿವು ಕೊಡಿ ಅನ್ನೋದು ಮಗಳ ಮನವಿ. ತನ್ನ ತಾಯಿಗೆ ಮಾತು ಬರೋದಿಲ್ಲ, ಬುದ್ದಿಯೂ ಸರಿ ಇಲ್ಲ, ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯೂ ಕೊಡಿಸುತ್ತಿದ್ದೆವು. ಆದರೆ ಈಗ ಆಕೆಯ ನಾಪತ್ತೆಯಾಗಿ ಏಳು ತಿಂಗಳೇ ಕಳೆದಿದೆ. ಅಮ್ಮ ಹೇಗಿದ್ದಾರೋ ಏನ್ ಮಾಡ್ತಿದ್ದಾರೋ ಎಂದು ಕಣ್ಣೀರು ಹಾಕುತ್ತಿರುವ ಮಗಳು ಮತ್ತು ಅಳಿಯ ನಮ್ಮ ತಾಯಿಯ ಸುಳಿವು ಸಿಕ್ಕರೆ ನಮಗೆ ಮಾಹಿತಿ ಕೊಡಿ ಎಂದು ಮನವಿ ಮಾಡಿದ್ದಾರೆ. ಮಾಹಿತಿ ಸಿಕ್ಕರೆ – ಪ್ರಮೀಳಾ/ ಲವ ಅವರು ತಮ್ಮ 9945035072, 7892898552 ಮೊಬೈಲ್ಗೆ ಸಂಪರ್ಕಿಸಬೇಕಾಗಿ ಕೋರಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ