ಕೋಲಾರ: ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಕೆಂದ್ರ ಸಚಿವ, ಹಿರಿಯ ರಾಜಕಾರಣಿ ಆರ್ ಎಲ್ ಜಾಲಪ್ಪ (96) ಇಂದು ನಿಧನರಾದರು. ಮನೆಯಲ್ಲಿರುವಾಗ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕಳೆದ 40 ದಿನಗಳಿಂದ ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕರ್ನಾಟಕದ ರಾಜಕಾರಣಿಗಳಲ್ಲಿ ಪ್ರಮುಖರಾಗಿದ್ದ ಜಾಲಪ್ಪ ಅವರು ಪತ್ನಿ ವಿಜಯಲಕ್ಷ್ಮಿ 3 ಗಂಡು ಹಾಗೂ 4 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಕರ್ನಾಟಕದ ಹಿರಿಯ ರಾಜಕಾರಣಿ ಆಗಿದ್ದ ಆರ್.ಎಲ್. ಜಾಲಪ್ಪ 19 ಅಕ್ಟೋಬರ್ 1925 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಗ್ರಾಮದಲ್ಲಿ ಜನಿಸಿದವರು. ಅವರು 4 ಬಾರಿ ಲೋಕಸಭೆಯ ಸದಸ್ಯರಾಗಿದ್ದರು ಮತ್ತು ಕೇಂದ್ರ ಸರಕಾರದ ಮಾಜಿ ಮಂತ್ರಿಯೂ ಆಗಿದ್ದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಜಾಲಪ್ಪ ಕರ್ನಾಟಕ ವಿಧಾನಸಭೆಯ ಸದಸ್ಯರು ಕೂಡಾ ಆಗಿದ್ದರು.
ಜಾಲಪ್ಪ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸದಸ್ಯರಾಗಿದ್ದು, ಬಿ.ಎ.ಪದವಿಯನ್ನು ಮಹಾರಾಜ ಕಾಲೇಜು ಮೈಸೂರಿನಲ್ಲಿ ಪಡೆದಿದ್ದರು. ಅವರ ಪೂರ್ಣ ಹೆಸರು ಅರ್.ಲಕ್ಷ್ಮಿ ನಾರಾಯಣಪ್ಪ ಜಾಲಪ್ಪ. 1996 ರಿಂದ 2009ರ ವರೆಗೆ ಚಿಕ್ಕಬಳ್ಳಾಪುರ ಲೋಕಸಭೆ ಸದಸ್ಯರಾಗಿ ಆಯ್ಕೆ ಆಗಿದ್ದರು. ನಾಲ್ಕು ಬಾರಿ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಆಯ್ಕೆ ಆಗಿದ್ದರು.
ದೇವೆಗೌಡ ಅವರ ಸಚಿವ ಸಂಪುಟದಲ್ಲಿ ಕೇಂದ್ರದ ಸಚಿವರಾಗಿ ಸೇವೆ ಸಲ್ಲಿಸಿದ್ದ ಆರ್.ಎಲ್. ಜಾಲಪ್ಪ 1996 ರಿಂದ 98ರ ವರೆಗೆ ಕೇಂದ್ರ ಜವಳಿ (ಟೆಕ್ಸ್ ಟೈಲ್) ಖಾತೆ ರಾಜ್ಯ ಸಚಿವರಾಗಿ ಕೆಲಸ ಮಾಡಿದ್ದರು. ದೇವರಾಜ ಅರಸು ಅವರೊಂದಿಗೆ ಬೆಳೆದು ಬಂದ ನಾಯಕ, 1979 ರಲ್ಲಿ ಕರ್ನಾಟಕ ಕ್ರಾಂತಿ ರಂಗ ಹಾಗೂ ಅರಸು ಅವರೊಂದಿಗೆ 1980 ರಲ್ಲಿ ಜನತಾ ಪಾರ್ಟಿಗೆ ಸೇರ್ಪಡೆ ಆಗಿದ್ದರು. 1989 ರಲ್ಲಿ ಜನತಾ ದಳಕ್ಕೆ ಸೇರ್ಪಡೆ ಆಗಿದ್ದರು.
ಈಡಿಗ ಸಮುದಾಯದವರಾಗಿದ್ದ ಜಾಲಪ್ಪ, ಮೊದಲಿಗೆ ದೊಡ್ಡಬಳ್ಳಾಪುರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ, ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪುಟದಲ್ಲಿ ರಾಜ್ಯದಲ್ಲೂ ಸಹಕಾರ ಹಾಗೂ ಕಂದಾಯ ಸಚಿವರಾಗಿ ಶ್ರಮಿಸಿದ್ದರು. ರಾಜಕಾರಣಿ, ಕೃಷಿಕ, ಶಿಕ್ಷಣ ಕ್ಷೇತ್ರದಲ್ಲೂ ಅವರು ಆಸಕ್ತಿ ಹೊಂದಿದ್ದರು. ಸಧ್ಯ ಶ್ರೀ ದೇವರಾಜ ಅರಸ್ ಮೆಡಿಕಲ್ ಕಾಲೇಜು ಹಾಗೂ ಅರ್.ಎಲ್ ಜಾಲಪ್ಪ ಅಸ್ಪತ್ರೆ ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಆರ್.ಎಲ್. ಜಾಲಪ್ಪ ಅವರು 1980ರಿಂದ 2006ರ ವರೆಗೆ ವಹಿಸಿದ ಹೊಣೆಗಾರಿಕೆಗಳ ವಿವರ ಇಲ್ಲಿದೆ.
ಇದನ್ನೂ ಓದಿ: ಮಾಜಿ ಕೇಂದ್ರ ಸಚಿವ ಆರ್ ಎಲ್ ಜಾಲಪ್ಪ ಆರೋಗ್ಯ ಸ್ಥಿತಿ ಗಂಭೀರ
Published On - 7:48 pm, Fri, 17 December 21