Siddaramaiah: ನಾನು ಕೋಲಾರದಿಂದ ಸ್ಪರ್ಧಿಸಲು ಸಿದ್ಧ, ಆದರೆ ಹೈಕಮಾಂಡ್ ತೀರ್ಮಾನಿಸಬೇಕು: ಸಿದ್ಧರಾಮಯ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 09, 2023 | 3:53 PM

ನಿಮ್ಮ ಪ್ರೀತಿ, ಅಭಿಮಾನವನ್ನು ತಿರಸ್ಕಾರ ಮಾಡಲು ಸಾಧ್ಯವಿಲ್ಲ. ನಾನು ಕೋಲಾರದಿಂದ ಸ್ಪರ್ಧಿಸಲು ತೀರ್ಮಾನ ಮಾಡಿದ್ದು, ಹೈಕಮಾಂಡ್​ ಸೂಚಿಸಿದರೆ ಕೋಲಾರದಿಂದ ಸ್ಪರ್ಧಿಸಲು ಸಿದ್ಧ ಎಂದು ಹೇಳಿದರು.

Siddaramaiah: ನಾನು ಕೋಲಾರದಿಂದ ಸ್ಪರ್ಧಿಸಲು ಸಿದ್ಧ, ಆದರೆ ಹೈಕಮಾಂಡ್ ತೀರ್ಮಾನಿಸಬೇಕು: ಸಿದ್ಧರಾಮಯ್ಯ
ಸಿದ್ದರಾಮಯ್ಯ
Follow us on

ಕೋಲಾರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಕೋಲಾರ ಜಿಲ್ಲೆಯ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸುವುದು ಹೆಚ್ಚು ಕಡಿಮೆ ಖಚಿತವಾಗಿತ್ತು. ಈ ಕುರಿತಾಗಿ ಇಂದು (ಜ.9) ಕೋಲಾರ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಬಹಿರಂಗವಾಗಿ ಘೋಷಣೆ ಮಾಡಿದರು. ನಿಮ್ಮ ಪ್ರೀತಿ, ಅಭಿಮಾನವನ್ನು ತಿರಸ್ಕಾರ ಮಾಡಲು ಸಾಧ್ಯವಿಲ್ಲ. ನಾನು ಕೋಲಾರದಿಂದ ಸ್ಪರ್ಧಿಸಲು ತೀರ್ಮಾನ ಮಾಡಿದ್ದು, ಹೈಕಮಾಂಡ್​ ಸೂಚಿಸಿದರೆ ಕೋಲಾರದಿಂದ ಸ್ಪರ್ಧಿಸಲು ಸಿದ್ಧ. ನನ್ನ ಸ್ಪರ್ಧೆಗೆ ಹೈಕಮಾಂಡ್ ತೀರ್ಮಾನ ಕೂಡ ಬೇಕಾಗುತ್ತದೆ ಎಂದರು. ಅಹಿಂದ ಮತಗಳ ಮೇಲೆ ವಿಶ್ವಾಸವಿಟ್ಟು ಕ್ಷೇತ್ರ ಘೋಷಣೆ ಮಾಡಿದ್ರ ಸಿದ್ಧರಾಮಯ್ಯ ಎನ್ನುವ ಪ್ರಶ್ನೆಗಳು ಸಹ ಹುಟ್ಟಿಕೊಂಡಿವೆ.

ಯಾವುದೇ ತಪ್ಪು ಸಂದೇಶ ಹೋಗಬಾರದು. ನನ್ನ ಬಗ್ಗೆ ಕೆಲವರು ಅಪಪ್ರಚಾರ ಮಾಡಲು ಮುಂದಾಗುತ್ತಾರೆ. ಹೊರಗಡೆಯವರು ಜನರ ಕಷ್ಟ ಸುಖ ಕೇಳಲು ಆಗಲ್ಲ ಅಂತಾರೆ. ನಾನು ಪ್ರತಿ ವಾರ ಕೂಡ ಕೋಲಾರಕ್ಕೆ ಬರುತ್ತೇನೆ. ನೇರವಾಗಿ ಯಾರು ಬೇಕಾದರೂ ನನ್ನನ್ನು ಭೇಟಿ ಮಾಡಬಹುದು. ಚಡ್ಡಿ ಹಾಕಿದವನೂ ಕೂಡ ಬಂದು ನನ್ನನ್ನು ಭೇಟಿ ಮಾಡಬಹುದು ಎಂದು ಸಿದ್ದರಾಮಯ್ಯ ಟಾಂಗ್​ ನೀಡಿದರು.

ಇದನ್ನೂ ಓದಿ: ಇಂದು ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ; ಮಾನನಷ್ಟ ಮೊಕದ್ದಮೆ ಹೂಡುವ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ

ಜನರ ಆಶೀರ್ವಾದ ಇದ್ದರೆ ಮಾತ್ರ ರಾಜಕೀಯ ಮಾಡಲು ಸಾಧ್ಯ

ಜನರ ಆಶೀರ್ವಾದ ಇದ್ದರೆ ಮಾತ್ರ ರಾಜಕೀಯ ಮಾಡಲು ಸಾಧ್ಯ. ಚಾಮುಂಡೇಶ್ವರಿ ಕ್ಷೇತ್ರದಿಂದ 5 ಬಾರಿ, ವರುಣಾದಿಂದ 2 ಬಾರಿ ಸ್ಪರ್ಧಿಸಿದ್ದೇನೆ. ಸಿದ್ದರಾಮಯ್ಯಗೆ ಕ್ಷೇತ್ರ ಇಲ್ಲ ಅಂತಾ ಅಪಪ್ರಚಾರ ಮಾಡ್ತಿದ್ದಾರೆ. ವರುಣಾದಿಂದಲೂ ಸ್ಪರ್ಧಿಸಿ ಎಂದು ಜನರು ಒತ್ತಾಯ ಮಾಡ್ತಿದ್ದಾರೆ. ಬಾದಾಮಿ ಕ್ಷೇತ್ರ ಜನರು ಹೆಲಿಕಾಪ್ಟರ್​ ಕೊಡಿಸುತ್ತೇವೆ ಅಂತಿದ್ದಾರೆ. ನಾನು ಈಗಲೂ ಬಾದಾಮಿ ಕ್ಷೇತ್ರದ ಶಾಸಕ. ಕೋಲಾರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾದ ಶ್ರೀನಿವಾಸಗೌಡ ಕೂಡ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಮುನಿಯಪ್ಪ, ರಮೇಶ್ ಕುಮಾರ್​ ಕೂಡ ನನಗೆ ಆಹ್ವಾನ ನೀಡಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡಿದರೆ ಸ್ವಾಗತ: ಕೆ.ಹೆಚ್​.ಮುನಿಯಪ್ಪ

ಸಮಾವೇಶದಲ್ಲಿ ಮಾಜಿ ಸಂಸದ ಕೆ.ಹೆಚ್​.ಮುನಿಯಪ್ಪ ಮಾತನಾಡಿ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡಿದರೆ ಸ್ವಾಗತ ಮಾಡುತ್ತೇವೆ. ಅವರ ಪರ ನಾವು ಕೆಲಸ ಮಾಡುತ್ತೇವೆ. ಆದರೆ ಅಭ್ಯರ್ಥಿ ಆಯ್ಕೆ ಬಗ್ಗೆ ಕಾಂಗ್ರೆಸ್​ ಪಕ್ಷದಲ್ಲಿ ನಿಯಮ ಇದೆ. ಪಕ್ಷದಲ್ಲಿ ಎಲೆಕ್ಷನ್ ಕಮಿಟಿ, ಸ್ಕ್ರೀನಿಂಗ್ ಕಮಿಟಿ ಇದೆ.

ಕೆಪಿಸಿಸಿ ಅಧ್ಯಕ್ಷರಾಗಲಿ, ಸಿಎಲ್​ಪಿ ನಾಯಕ ಸೇರಿ ಯಾರೇ ಆಗಲಿ ಪಕ್ಷದ ನಿಯಮದ ಪ್ರಕಾರವೇ ಅಭ್ಯರ್ಥಿ ಆಯ್ಕೆ ನಡೆಯಲಿದೆ. ಮೊದಲು ಎಲೆಕ್ಷನ್, ಸ್ಕ್ರೀನಿಂಗ್ ಕಮಿಟಿಯಲ್ಲಿ ಆಯ್ಕೆ ಆಗಬೇಕು. ಅಲ್ಲಿ ಆಯ್ಕೆಯಾಗಿ ಸ್ಪರ್ಧೆ ಮಾಡಿದರೆ ನಿಮ್ಮ ಪರವಾಗಿ ಹೃದಯಪೂರ್ವಕವಾಗಿ ಕೆಲಸ ಮಾಡುವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:31 pm, Mon, 9 January 23