300 ಕೆಜಿ ಆ್ಯಪಲ್ ಹಾರ ಹಾಕಿ ಸಿದ್ದರಾಮಯ್ಯರಿಗೆ ಭರ್ಜರಿ ಸ್ವಾಗತ; ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಸುಳಿವು

| Updated By: ಆಯೇಷಾ ಬಾನು

Updated on: Nov 13, 2022 | 12:59 PM

ಕೋಲಾರ ನಗರದ ಮೆಥೋಡಿಸ್ಟ್ ಚರ್ಚ್ ಗೆ ಸಿದ್ದರಾಮಯ್ಯ ಭೇಟಿ ನೀಡುತ್ತಿದ್ದಂತೆ ಸುಮಾರು 300 ಕೆಜಿ ಆ್ಯಪಲ್ ಹಾರ ಹಾಕಿ ಕ್ರಿಶ್ಚಿಯನ್ ಮುಖಂಡರು ಸ್ವಾಗತ ಕೋರಿದ್ದಾರೆ.

300 ಕೆಜಿ ಆ್ಯಪಲ್ ಹಾರ ಹಾಕಿ ಸಿದ್ದರಾಮಯ್ಯರಿಗೆ ಭರ್ಜರಿ ಸ್ವಾಗತ;  ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಸುಳಿವು
300 ಕೆಜಿ ಆ್ಯಪಲ್ ಹಾರ ಹಾಕಿ ಸಿದ್ದರಾಮಯ್ಯರಿಗೆ ಭರ್ಜರಿ ಸ್ವಾಗತ
Follow us on

ಕೋಲಾರ: ಮುಂಬರುವ 2023 ವಿಧಾನಸಭೆ ಚುನಾವಣೆಗೆ ಕ್ಷೇತ್ರ ಹುಡುಕಾಟದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾದಂತೆ ಕಾಣುತ್ತಿದೆ. ಸದ್ಯ ಸಿದ್ದರಾಮಯ್ಯ ಚಿನ್ನದ ಗಣಿ ನಾಡು ಕೋಲಾರದತ್ತ ಹೆಜ್ಜೆ ಹಾಕಿದ್ದಾರೆ. ವಿಶೇಷ ಬಸ್​​ನಲ್ಲಿ ಕೋಲಾರ ನಗರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದು ಬಂಗಾರಪೇಟೆ ವೃತ್ತದಲ್ಲಿ ಕೆ.ಹೆಚ್.ಮುನಿಯಪ್ಪ ಬೆಂಬಲಿಗರಿಂದ ಸಿದ್ದುಗೆ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಲಾಗಿದೆ.

ಕೋಲಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಸೇರಿದಂತೆ ಅನೇಕರು ಸಿದ್ದರಾಮಯ್ಯರಿಗೆ ಹೂ ಮಳೆ ಗೈದು, ಪಟಾಕಿ ಸಿಡಿಸಿ ಸಂಭ್ರಮದಿಂದ ಬರ ಮಾಡಿಕೊಂಡಿದ್ದಾರೆ. ಇನ್ನು ಸಿದ್ದರಾಮಯ್ಯ ಕೋಲಾರಕ್ಕೆ ಬಂದು ಇಳಿಯುತ್ತಿದ್ದಂತೆ ವಿಶೇಷ ಬಸ್​ ಇಳಿದು ಕಾರು ಹತ್ತಿ ಕೋಲಾರಮ್ಮ ದೇಗುಲದತ್ತ ಹೊರಟರು. ಬಳಿಕ ಕೋಲಾರ ದೇವಾಲಯದಲ್ಲಿ ತಾಯಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಸಿದ್ದು ನೋಡಲು ದೇಗುಲ ಬಳಿ ಜನ ಜಮಾಯಿಸಿದ್ದು ಜನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಕೋಲಾರದ ಮುಂದಿನ ಶಾಸಕ ಸಿದ್ದರಾಮಯ್ಯ ಎಂದು ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಪರ ಘೋಷಣೆ ಕೂಗಿದರು. ಕೋಲಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸಿದ್ದರಾಮಯ್ಯ ಮೆಥೋಡಿಸ್ಟ್ ಚರ್ಚ್ ನತ್ತ ಹೊರಟರು.

300 ಕೆಜಿ ಆ್ಯಪಲ್ ಹಾರ ಹಾಕಿ ಸಿದ್ದುಗೆ ಸ್ವಾಗತ

ಕೋಲಾರ ನಗರದ ಮೆಥೋಡಿಸ್ಟ್ ಚರ್ಚ್ ಗೆ ಸಿದ್ದರಾಮಯ್ಯ ಭೇಟಿ ನೀಡುತ್ತಿದ್ದಂತೆ ಸುಮಾರು 300 ಕೆಜಿ ಆ್ಯಪಲ್ ಹಾರ ಹಾಕಿ ಕ್ರಿಶ್ಚಿಯನ್ ಮುಖಂಡರು ಸ್ವಾಗತ ಕೋರಿದ್ದಾರೆ. ಈ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೃಷ್ಣಬೈರೇಗೌಡ, ಶಾಸಕ ನಂಜೇಗೌಡ, ಶಾಸಕ ಶರತ್ ಬಜ್ಜೇಗೌಡ, ಬೈರತಿ ಸುರೇಶ್, ಎಂಎಲ್​ಸಿ ಅನಿಲ್ ಕುಮಾರ್, ಚಿಂತಾಮಣಿ ಸುಧಾಕರ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿದ್ದರು. ಇನ್ನು ಸಿದ್ದರಾಮಯ್ಯ ಜೊತೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬಿದ್ದಿದ್ದಾರೆ.

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಬಹುತೇಕ ಫಿಕ್ಸ್​​​​

ಇನ್ನು ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದ್ದಾರೆ. ನಾಮಪತ್ರ ಸಲ್ಲಿಸುವುದಕ್ಕೆ ನಾನು ಮತ್ತೆ ಕೋಲಾರಕ್ಕೆ ಬರುತ್ತೇನೆ ಎಂದಿದ್ದಾರೆ. ನನಗೆ ವರುಣಾ, ಚಾಮರಾಜನಗರ, ಚಾಮರಾಜಪೇಟೆ, ಸೇರಿ ಹಲವು ಕಡೆ ಸ್ಪರ್ಧೆಗೆ ಒತ್ತಾಯ ಮಾಡುತ್ತಿದ್ದಾರೆ. ನಿಮ್ಮ ಅಭಿಮಾನಕ್ಕೆ ನಾನು ಆಭಾರಿಯಾಗಿದ್ದೇನೆ. ನನ್ನ ಅವಧಿಯಲ್ಲಿ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಬಾದಾಮಿ ಕ್ಷೇತ್ರದ ಜನ ನನ್ನನ್ನು ಗೆಲ್ಲಿಸಿದ್ದಾರೆ. ಇಂದಿನ ಸರ್ಕಾರ ಜಾತಿ, ಧರ್ಮ ಒಡೆಯುವ ಕೆಲಸ ಮಾಡ್ತಿದೆ. ನಾವು ಎಲ್ಲಾ ಜಾತಿ, ಧರ್ಮಗಳನ್ನು ಸಮನಾಗಿ ಗೌರವಿಸಿದ್ದೇವೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಭವಿಷ್ಯ ಹೇಳಿದ ಸಚಿವ ಶ್ರೀರಾಮುಲು

ಚುನಾವಣೆ ಗಿಮಿಕ್ ಗಾಗಿ ಕೋಲಾರ ಯಾತ್ರೆ ಮಾಡ್ತಾಯಿದ್ದಾರೆ. ರಾಜಕೀಯ ಪುನರ್ಜನ್ಮ ನೀಡಿದ ಬಾದಾಮಿ ಕ್ಷೇತ್ರದ ಜನರಿಗೆ ಸಿದ್ದರಾಮಯ್ಯ ಮೋಸ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅವರನ್ನ ಬಾದಾಮಿ ಜನರು ಯಾವ ಕಾರಣಕ್ಕೂ ಕ್ಷಮಿಸಲ್ಲ. ಸಿದ್ದರಾಮಯ್ಯ ಅವರು ಕೊನೆದಾಗಿ ಸ್ಪರ್ಧೆ ಮಾಡೋದು ವರುಣಾದಲ್ಲೇ. ಆದ್ರೆ ಈಗ ವರುಣಾದಲ್ಲೂ ಸಿದ್ದರಾಮಯ್ಯ ಗೆಲ್ಲೋದು ಕಷ್ಟ. ಜನರ ಅಟೆನ್ಶನ್ ಡೈವಟ್೯ ಮಾಡ್ಲಿಕ್ಕೆ ಪಾದಯಾತ್ರೆ ಮಾಡ್ತಿದ್ದಾರೆ. ಕೋಲಾರದಿಂದ ಡಿಮ್ಯಾಂಡ್ ಕ್ರಿಯೇಟ್ ಮಾಡ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಚ್ಚರಿಯ ಅಭ್ಯರ್ಥಿಯನ್ನ ಕಣಕ್ಕಿಳಿಸ್ತೀವಿ. ವರುಣಾದಿಂದ ಕೂಡಾ ಅವರನ್ನ ಸೋಲಿಸ್ಲಿಕ್ಕೆ ನಮ್ಮ ಕಾರ್ಯಕರ್ತರು ಕೆಲಸ ಮಾಡ್ತಾರೆ ಎಂದು ಕೊಪ್ಪಳದ ಗಂಗಾವತಿಯ ಪಂಪಸಾಗರದಲ್ಲಿ ಸಚಿವ ಶ್ರೀರಾಮುಲು ಹೇಳಿದರು.

Published On - 12:45 pm, Sun, 13 November 22