ಬಾದಾಮಿಯಿಂದ ಸ್ಪರ್ಧೆ ಮಾಡಲ್ಲ: ಮೊದಲ ಬಾರಿಗೆ ಬಹಿರಂಗವಾಗಿ ಘೋಷಿಸಿದ ಸಿದ್ದರಾಮಯ್ಯ
ಮುಂದಿನ ಚುನಾವಣೆಗೆ ಬೇರೆ ಕ್ಷೇತ್ರವನ್ನು ಹುಡುಕಾಡುತ್ತಿರುವ ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ.
ಕೋಲಾರ: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ರಾಜಕೀಯ ಪಕ್ಷಗಳ ತಂತ್ರ, ಪ್ರತಿತಂತ್ರ ಜೋರಾಗುತ್ತಿದೆ. ಇಂಥಾ ಹೊತ್ತಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddarmaiah) ಈ ಬಾರಿ ಯಾವ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸ್ತಾರೆ ಅನ್ನೋದು ಸಾಕಷ್ಟು ಕುತೂಹಲ ಕೆರಳಿಸಿತ್ತು. ಸಿದ್ದು ಕ್ಷೇತ್ರ ಯಾವುದು ಅನ್ನೋದನ್ನ ಜನರೂ ಕೂಡಾ ಎದುರು ನೋಡ್ತಿದ್ರು. ಇವತ್ತು ಸಿದ್ದು ಕೋಲಾರ(Kolar) ಪ್ರವಾಸದ ಮೂಲಕ ತಮ್ಮ ಮುಂದಿನ ಕ್ಷೇತ್ರ ಯಾವುದು ಅನ್ನೋದರ ಹಿಂಟ್ ಕೊಟ್ಟಿದ್ದಾರೆ. ತುಂಬಾ ಗಟ್ಟಿಯಾಗಿ ಹೇಳದೇ ಇದ್ರೂ, ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಕೋಲಾರದಲ್ಲೇ ಸ್ಪರ್ಧಿಸೋ ಸುಳಿವು ಕೊಟ್ಟಿದ್ದಾರೆ. ಇನ್ನು ಬಾದಾಮಿ(Badami) ಕ್ಷೇತ್ರದಲ್ಲಿ ಸ್ಪರ್ಧಿಸಲ್ಲವೆಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಹೌದು…ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಆದ್ರೆ, ಚಾಮುಂಡೇಶ್ವರಿ ಸೋಲುಕಂಡ ಸಿದ್ದರಾಮಯ್ಯನವರನ್ನು ಬಾದಾಮಿ ಕ್ಷೇತ್ರದ ಮತದಾರರು ಕೈಹಿಡಿದಿದ್ರು. ಇದೀಗ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಇದೇ ಮೊದಲ ಬಾರಿಗೆ ಬಹಿರಂಗವಾಗಿ ಹೇಳಿದ್ದಾರೆ.
ಸಿದ್ದರಾಮಯ್ಯಗೆ 2 ಸಲ ಪುನರ್ಜನ್ಮ ಕೊಟ್ಟಿದ್ದೇನೆ, ಇದೇ ನಾನು ಮಾಡಿದ ದೊಡ್ಡ ತಪ್ಪು: H.D.ಕುಮಾರಸ್ವಾಮಿ
ಕೋಲಾರ ತಾಲೂಕಿನ ಗರುಡಾಪಾಳ್ಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಸಿದ್ದರಾಮಯ್ಯ,ಬಾದಾಮಿ ಕ್ಷೇತ್ರದಲ್ಲಿ ನನ್ನ ಸ್ಪರ್ಧೆ ರೂಲ್ಡ್ ಔಟ್, ಅಲ್ಲಿ ಆಗಲ್ಲ ಎಂದು ಬಹಿರಂಗವಾಗಿ ಮೊದಲ ಬಾರಿಗೆ ಹೇಳಿದರು. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ಕೋಲಾರದಲ್ಲಿ ನನಗೆ ಹೆಚ್ವಿನ ಸ್ನೇಹಿತರು ಇದ್ದಾರೆ. ಎಲ್ಲರೂ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ, ಕೆ.ಹೆಚ್ ಮುನಿಯಪ್ಪ ನವರ ಜೊತೆಗೂ ಮಾತನಾಡಿದ್ದೇವೆ. ಅವರು ಸಪೋರ್ಟ್ ಮಾಡುವುದಾಗಿ ಹೇಳಿದ್ದಾರೆ, ಹಾಲಿ ಶಾಸಕ ಶ್ರೀನಿವಾಸಗೌಡ ಅವರು ಒತ್ತಾಯ ಮಾಡುತ್ತಿದ್ದಾರೆ. ಅದಕ್ಕೆ ಇವರೆಲ್ಲರಿಗೂ ಇಲ್ಲಾ ಎಂದು ಹೇಳಲಾಗುತ್ತಿಲ್ಲ. ಕೋಲಾರ ಜಿಲ್ಲೆಯ ಎಲ್ಲಾ ನಾಯಕರ ಒತ್ತಾಸೆಗೆ ನಾನು ಚಿರಋಣಿ. ಅಂತಿಮವಾಗಿ ಹೈಕಮಾಂಡ್ ಎಲ್ಲಿ ನಿಲ್ಲಲು ಸೂಚಿಸಿದರೆ ಅಲ್ಲಿ ನಿಲ್ಲುತ್ತೇನೆ ಎಂದು ಹೇಳಿದರು.
ಮುಂದಿನ ಚುನಾವಣೆಗೆ ಬೇರೆ ಕ್ಷೇತ್ರವನ್ನು ಹುಡುಕಾಡುತ್ತಿದ್ದ ಸಿದ್ದರಾಮಯ್ಯನವರಿಗೆ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಬೇಕು ಎಂದು ಅಲ್ಲಿನ ಕಾರ್ಯಕರ್ತರು, ಅಭಿಮಾನಿಗಳು ಮನವಿ ಮಾಡಿದ್ದರು. ಅಲ್ಲದೇ ಬಾದಾಮಿಯಿಂದ ವಾಹನಗಳಲ್ಲಿ ಬೆಂಗಳೂರಿಗೆ ಬಂದು ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿದ್ದರು. ಅದರಂತೆ ಬಾದಾಮಿಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿಕೊಂಡೇ ಬಂದಿದ್ದರು. ಆದ್ರೆ, ಇದೀಗ ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆಗೆ ಮುಂದಾಗಿದ್ದು, ಬಾದಾಮಿಯಿಂದ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ