ಜಾನುವಾರುಗಳ ಯೋಗಕ್ಷೇಮ ಬಯಸಿ ಕಾರ್ತಿಕ ಮಾಸದಲ್ಲಿ ಮುಳಬಾಗಿಲು ಬಯಲು ಬಸವೇಶ್ವರನಿಗೆ ವಿಶೇಷ ಪೂಜೆ

| Updated By: ಸಾಧು ಶ್ರೀನಾಥ್​

Updated on: Dec 08, 2023 | 2:18 PM

Karthika Masa: ಕಡೆಯ ಕಾರ್ತಿಕ ಸೋಮವಾರ ಬಯಲು ಬಸವೇಶ್ವರ ಸ್ವಾಮಿಯ ಜಾತ್ರೆ ನಡೆಯುತ್ತದೆ. ಈ ವೇಳೆ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಇಲ್ಲಿ ‌ದೇವರಿಗೆ ಪೂಜೆ ಸಲ್ಲಿಸುತ್ತಾರೆ ಎಂದು ಇಲ್ಲಿನ ದೇವಾಲಯದ ಅರ್ಚಕರಾದ ನಾಗರಾಜ್ ಹೇಳುತ್ತಾರೆ. 

ಜಾನುವಾರುಗಳ ಯೋಗಕ್ಷೇಮ ಬಯಸಿ ಕಾರ್ತಿಕ ಮಾಸದಲ್ಲಿ ಮುಳಬಾಗಿಲು ಬಯಲು ಬಸವೇಶ್ವರನಿಗೆ ವಿಶೇಷ ಪೂಜೆ
ಮುಳಬಾಗಿಲು: ಕಾರ್ತಿಕ ಮಾಸದಲ್ಲಿ ಬಯಲು ಬಸವೇಶ್ವರನಿಗೆ ವಿಶೇಷ ಪೂಜೆ
Follow us on

ನೂರಾರು ಹಳ್ಳಿಗಳ ಜಾನುವಾರುಗಳನ್ನು (Cattle) ಕಾಯೋ ದೈವವಾಗಿ ಅಲ್ಲಿ ನಿಂತಿದೆ ಬಯಲು ಬಸವೇಶ್ವರ ಹಾಗೂ ಜಲಕಂಠೇಶ್ವರ ಸ್ವಾಮಿ. ಹೌದು, ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು (Mulbagal, Kolar) ಸೋಮರನಹಳ್ಳಿ ಗ್ರಾಮದ ಹೊರವಲಯದಲ್ಲಿ ಸಾವಿರಾರು ವರ್ಷಗಳ ಹಿಂದೆ ಡಂಕಣಾಚಾರಿಯಿಂದ ಕೆತ್ತಲ್ಪಟ್ಟಿರುವ ಒಂದು ಸುಂದರ ಬೃಹತ್ ಬಸವನ ಮೂರ್ತಿ ಹಾಗೂ ಜಲಕಂಠೇಶ್ವರ ಸ್ವಾಮಿಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಡಂಕಣಾಚಾರಿಯು ತನ್ನ ತಂದೆ ಜಕಣಾಚಾರಿಯನ್ನು ಹುಡುಕುತ್ತಾ ಬಂದಾಗ ಅದೊಂದು ರಾತ್ರಿ ಸೋಮರ್ಸನಹಳ್ಳಿ ಗ್ರಾಮದ ಬಳಿ ಬಂದು ತಂಗಿದ್ದರಂತೆ. ಈ ವೇಳೆ ಈ ಗ್ರಾಮದ ಬಳಿ ತಂಗಿದ್ದ ಡಂಕಣಾಚಾರಿಗೆ ಶಿವನ ಪ್ರೇರಣೆಯಾಗಿ ಬಸವಣ್ಣನ ಮೂರ್ತಿಯನ್ನು (Bayalu Basaveshwara) ಹಾಗೂ ಶಿವಲಿಂಗ ಕೆತ್ತನೆ ಮಾಡಿ ಪ್ರತಿಷ್ಠಾಪನೆ ಮಾಡಿದ್ದಾರೆ ಅನ್ನೋದು ಇಲ್ಲಿನ ಸ್ಥಳ ಪುರಾಣ.

ಕಲ್ಯಾಣಿ ಚಾಲುಕ್ಯರು ಹಾಗೂ ಹೊಯ್ಸಳರ ಕಾಲದ ಈ ಬಯಲು ಬಸವೇಶ್ವರ ದೇವಾಲಯ ಸಾವಿರಾರು ವರ್ಷಗಳ ಕಾಲದಿಂದಲೂ ಈ ಭಾಗದ ಸಾವಿರಾರು ಜನರ ಆರಾಧ್ಯ ದೈವವಾಗಿ ಪೂಜಿಸಿ ಕೊಳ್ಳುತ್ತಾ ಬಂದಿದೆ. ಈ ಭಾಗದ ಯಾವುದೇ ಜಾನುವಾರುಗಳಿಗೆ ಅನಾರೋಗ್ಯ ಅಂದರೆ ಮೊದಲು ಜನರು ಬಯಲು ಬಸವೇಶ್ವರನಿಗೆ ಬಂದು ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ಆ ತಕ್ಷಣವೇ ಜಾನುವಾರುಗಳ ಅನಾರೋಗ್ಯ ಸಮಸ್ಯೆ ಬಗೆಹರಿಯುತ್ತದೆ ಅನ್ನೋದು ಸ್ಥಳೀಯರ ಮಾತು ಹಾಗೂ ನಂಬಿಕೆ.

ಇದನ್ನೂ ಓದಿ: ಮುಳ್ಳುಗಳ ರಾಶಿ ಮೇಲೆ ಹನುಮನಂತೆ ಜಿಗಿದು ಹರಕೆ ತೀರಿಸುವ ಭಕ್ತರು, ಕೊಪ್ಪಳದಲ್ಲೊಂದು ವಿಶಿಷ್ಟ ಆಚರಣೆ

ಪ್ರತಿ ಸೋಮವಾರ ಈ ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ, ವಿಶೇಷವಾಗಿ ಕಾರ್ತಿಕ ಮಾಸದ ನಾಲ್ಕು ಸೋಮವಾರಗಳು ಇಲ್ಲಿಗೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ತಮ್ಮ ಜಾನುವಾರುಗಳಿಗೆ ಒಳಿತಾಗಲೆಂದು ಪೂಜೆ ಸಲ್ಲಿಸಿ ತೆರಳುತ್ತಾರೆ. ಈ ದೇವಾಲಯಕ್ಕೆ ಬರುವ ಜನರು ತಮ್ಮ ಕೈಯಲ್ಲಿ ಹಸುವಿನ ಮೇವನ್ನು ಹಿಡಿದುಕೊಂಡು ಬಂದು ಬಸವನ ವಿಗ್ರಹದ ಮೇಲಿಟ್ಟು ಪೂಜೆ ಸಲ್ಲಿಸಿ ನಂತರ ಅದನ್ನು ಪ್ರಸಾದವಾಗಿ ವಾಪಸ್ ಮನೆಗೆ ತೆಗೆದುಕೊಂಡು ಹೋಗಿ ತಮ್ಮ ಜಾನುವಾರುಗಳಿಗೆ ತಿನ್ನಿಸುತ್ತಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:13 pm, Fri, 8 December 23