ಕೋಲಾರ, ಆಗಸ್ಟ್ 11: ದೇಶದ ಸಮಸ್ತ ಗೃಹಿಣಿಯರ ಕೆಂಗಣ್ಣಿಗೆ ಗುರಿಯಾಗಿದ್ದ ಕೆಂಪು ಸುಂದರಿ ಟೊಮ್ಯಾಟೋ (Kolar Tomato) ತನ್ನ ಹೊಳಪು ಕಳೆದುಕೊಳ್ಳುತ್ತಿದೆ. ರಾಷ್ಟ್ರದ ರಾಜಧಾನಿ ದಿಲ್ಲಿಯಲ್ಲಿ ಬಹುತೇಕ ತ್ರಿಬಲ್ ಸೆಂಚುರಿ ಬಾರಿಸುವ ಹವಣಿಕೆಯಲ್ಲಿದ್ದ ಟೊಮ್ಯಾಟೋ, ಬೆಲೆ ಕಳೆದುಕೊಳ್ಳುತ್ತಿದೆ. ಇದರಿಂದ ಮಹಿಳೆಯರು ಅಬ್ಬ ಸದ್ಯ ಎಂದು ಸ್ವಲ್ಪಮಟ್ಟಿಗೆ ನಿಟ್ಟುಸಿರುಬಿಟ್ಟಿದ್ದಾರೆ. ಟೊಮ್ಯಾಟೋ ತವರೂರು ಕೋಲಾರದ ಎಪಿಎಂಸಿ (Kolar APMC) ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ (Tomato Price) ಇಂದು ಲಕ್ಷ್ಮಿ ದೇವಿಯ ವಾರವಾದ ಶುಕ್ರವಾರ ಮತ್ತೆ ಕುಸಿತ ಕಂಡಿದೆ.
ಇತ್ತೀಚಿನ ದಿನಗಳಲ್ಲಿ ಟೊಮ್ಯಾಟೋ ಬೆಲೆ ನೆಲಕಚ್ಚುತ್ತಿದ್ದು ಇಂದೂ ಮತ್ತೆ ಕುಸಿತ ಕಂಡಿದೆ. 15 ಕೆಜಿ ಟೊಮ್ಯಾಟೋ ಬಾಕ್ಸ್ 500 ರಿಂದ 800 ರೂ. ಗೆ ಹರಾಜು ಆಗುತ್ತಿದೆ. ಜಸ್ಟ್ ವಾರದ ಹಿಂದೆ 15 ಕೆಜಿ ಬಾಕ್ಸ್ ಟೊಮ್ಯಾಟೊ ದರ 2,500 ರೂಪಾಯಿಯ ಗಡಿ ದಾಟಿತ್ತು.
ಇದನ್ನೂ ಓದಿ: ಪೆಟ್ರೋಲ್ಗಿಂತ ದುಬಾರಿಯಾದ ಟೊಮೆಟೋ ಬೆಲೆ ಯಾವಾಗ ಇಳಿಯುತ್ತೆ? ತಜ್ಞರು ಹೇಳೋದೇನು? ಇಲ್ಲಿದೆ ಡೀಟೇಲ್ಸ್
ಈಗ ಮತ್ತೆ ಮಳೆ ಕಡಿಮೆಯಾಗಿದ್ದು ಹಾಗೂ ಟೊಮ್ಯಾಟೊ ಪೂರೈಕೆ ಹೆಚ್ಚಾದ ಹಿನ್ನೆಲೆ ಬೆಲೆ ಕುಸಿಯುತ್ತಿದೆ. ದುಬಾರಿ ಕೆಂಪು ಸುಂದರಿಯನ್ನು ಅಡುಗೆ ಮನೆಯೊಳಕ್ಕೆ ಬಿಟ್ಟುಕೊಳ್ಳಲು ಹಿಂದುಮುಂದು ನೋಡುತ್ತಿದ್ದ ಗೃಹಿಣಿಯರು ಈಗ ನಿಧಾನಕ್ಕೆ ಟೊಮ್ಯಾಟೋ ತರುವುದಕ್ಕೆ ಮನಸು ಮಾಡುತ್ತಿದ್ದಾರೆ. ಅದಕು ಇದುಕು ಎಲ್ಲದಕೂ ಟೊಮ್ಯಾಟೊ ಬಳಸುವ ಮನಸು ಮಾಡುತ್ತಿದ್ದಾರೆ! ಇನ್ನೂ ಸಮಾಧಾನಕಾರ ಸಂಗತಿ ಏನೆಂದರೆ, ಇನ್ನೆರಡು ದಿನದಲ್ಲಿ ಟೊಮ್ಯಾಟೊ ಬೆಲೆ ಮತ್ತಷ್ಟು ಕುಸಿತ ಕಾಣಲಿದೆ ಎಂದು ವರ್ತಕರು ಅಂದಾಜಿಸಿದ್ದಾರೆ.
ಕೋಲಾರ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:58 am, Fri, 11 August 23