ಕೋಲಾರ, ಸೆ.04: ಸತತ ಮೂರು ತಿಂಗಳ ಕಾಲ ತನ್ನ ಬೆಲೆ ಏರಿಕೆಯಿಂದ ಕಾಶ್ಮೀರಿ ಸುಂದರಿ ಆಫಲ್ನನ್ನೇ ಹಿಂದಿಕ್ಕಿದ್ದ ಕೆಂಪುಸುಂದರಿ ಟೊಮೆಟೊ(Tomato Rate), ಕಾಲಚಕ್ರದಲ್ಲಿ ಸಿಲುಕಿ ಮತ್ತೆ ತನ್ನ ಬೆಲೆ ಕಳೆದುಕೊಂಡಿದೆ. 150, 230 ರೂಪಾಯಿಗೆ ಮಾರುಕಟ್ಟೆಯಲ್ಲಿ ಹರಾಜಾಗುತ್ತಿದ್ದ ಟೊಮೆಟೊ ಈಗ ಭಾರೀ ಕುಸಿತ ಕಂಡಿದೆ. ಏಷ್ಯಾದ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆಯಾಗಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ 15-20ರೂಗೆ ಕೆಜಿ ಟೊಮೆಟೊ ಮಾರಾಟವಾಗುತ್ತಿದೆ(Kolar APMC Market). ಉತ್ತರ ಭಾರತ ಮತ್ತು ಆಂಧ್ರ ಪ್ರದೇಶದಲ್ಲಿ ಕಳೆದ ಎರಡು ವಾರಗಳಿಂದ ಟೊಮೆಟೊ ಬೇಡಿಕೆ ಕುಸಿದಿದೆ.
ಕಳೆದ ಮೂರು ತಿಂಗಳಿಂದ ನಿರಂತವಾಗಿ ಗಗನಕ್ಕೇರಿದ್ದ ಟೊಮೆಟೊ ಬೆಲೆ ಈಗ ಪಾತಾಳಕ್ಕೆ ಕುಸಿದಿದೆ. ಇತ್ತೀಚಿಗೆ ಟೊಮೆಟೊ ಬೆಲೆ ಇಡೀ ದೇಶದಲ್ಲೇ ಸದ್ದು ಮಾಡಿತ್ತು. ನಿರಂತರ ಬೆಲೆ ಏರಿಕೆಯಿಂದ ದಾಖಲೆ ಬರೆದಿದ್ದ ಟೊಮೆಟೋ ಈಗ ಅಷ್ಟೇ ವೇಗವಾಗಿ ಪಾತಾಳಕ್ಕೆ ಬಿದಿದೆ. ಜುಲೈ ಕೊನೆಯ ವಾರದಲ್ಲಿ ಹದಿನೈದು ಕೆಜಿಯ ಬಾಕ್ಸ್ ಟೊಮೆಟೋ 2,700 ರೂಪಾಯಿ ದಾಖಲೆ ಬೆಲೆಗೆ ಮಾರಾಟವಾಗಿತ್ತು. ಈಗ ಕೇವಲ 100-230 ರೂಪಾಯಿಗೆ 15 ಕೆಜಿಯ ಬಾಕ್ಸ್ ಹರಾಜಾಗುತ್ತಿದೆ. ಅಂದರೆ ಕೇವಲ 12 ರಿಂದ 15 ರೂಪಾಯಿಗೆ ಕೆಜಿ ಟೊಮೆಟೊ ಮಾರಾಟ ಮಾಡಲಾಗುತ್ತಿದೆ.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕುಮಾರಸ್ವಾಮಿ ಅವರು ‘ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ’ಗೆ ಪ್ರತಿಕ್ರಿಯಿಸಿದ್ದು, ಜಿಲ್ಲೆಗೆ ಟೊಮೆಟೊ ಆಮದು ಹೆಚ್ಚಾಗಿದೆ. ಪ್ರಸ್ತುತ 8,000 ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದ್ದು, ಇನ್ನೂ 6,000 ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಸಲಾಗುತ್ತಿದೆ ಎಂದರು.
ಇದನ್ನೂ ಓದಿ: Tomato Price: ಗಗನಕ್ಕೇರಿದ್ದ ಟೊಮೆಟೊ ದರ ದಿಢೀರ್ ಪಾತಾಳಕ್ಕೆ ಕುಸಿತ, ಈಗ ಎಷ್ಟಿದೆ ಬೆಲೆ?
ಇನ್ನು ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ಮಾತನಾಡಿ, ಎರಡು ತಿಂಗಳ ಹಿಂದೆ ಮಾರುಕಟ್ಟೆಗೆ ದಿನಕ್ಕೆ 60ರಿಂದ 70 ಸಾವಿರ ಬಾಕ್ಸ್ ಟೊಮೆಟೊ ಬರುತ್ತಿತ್ತು. ಆದರೆ ಈ ಭಾನುವಾರ 1,18,974 ಬಾಕ್ಸ್ ಟೊಮೆಟೊ ಬಂದಿದ್ದು, ಪ್ರತಿ ಕ್ರೇಟ್ ಗೆ 100-240 ರೂ ಇದೆ ಎಂದರು. ಶ್ರೀನಿವಾಸಪುರದ ಯುವ ರೈತ ಸುದರ್ಶನ್ ಮಾತನಾಡಿ, ಮಳೆ ಕೊರತೆ ಹಾಗೂ ಬಿಸಿಲಿನ ಬೇಗೆಯಿಂದ ಟೊಮೆಟೊ ನಾಲ್ಕೈದು ದಿನವೂ ಬರುವುದಿಲ್ಲ. ವ್ಯಾಪಾರಸ್ಥರು ಕೂಡ ಟೊಮೆಟೊ ಖರೀದಿಗೆ ಆಸಕ್ತಿ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೋಲಾರ ಎಪಿಎಂಸಿ ಮಾರುಕಟ್ಟೆಯಿಂದ ಉತ್ತರ ಭಾರತದ ರಾಜ್ಯಗಳಿಗೆ ಅಂಡಮಾನ್ ನಿಕೋಬಾರ್ ಹಾಗೂ ಹೊರ ದೇಶಗಳಾದ ಬಾಂಗ್ಲಾ, ಪಾಕಿಸ್ತಾನ, ದುಬೈಗೂ ಇಲ್ಲಿನ ಟೊಮೊಟೊ ರಫ್ತಾಗುತ್ತಿತ್ತು. ಆದರೆ ಮಹಾರಾಷ್ಟ್ರದ ನಾಸಿಕ್ ಸೇರಿದಂತೆ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಕೂಡಾ ಸ್ಥಳೀಯವಾಗಿ ಟೊಮೆಟೋ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಟೊಮೆಟೊಗೆ ಹೊರ ರಾಜ್ಯಗಳಿಂದ ಬೇಡಿಕೆ ಕಡಿಮೆಯಾಗಿದೆ. ಜೊತೆಗೆ ನಮ್ಮ ರಾಜ್ಯದಲ್ಲೂ ಹೆಚ್ಚಿನ ರೈತರು ಟೊಮೆಟೋ ಬೆಳೆದಿದ್ದು ಮಾರುಕಟ್ಟೆಗಳಿಗೆ ಪೂರೈಕೆ ಹೆಚ್ಚಾಗಿದೆ ಹಾಗಾಗಿ ಬೆಲೆ ಸಾಕಷ್ಟು ಕುಸಿತ ಕಂಡಿದೆ.
ಏಷ್ಯದಲ್ಲಿ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಕೋಲಾರ ಚಿಕ್ಕಬಳ್ಳಾಪುರ ಅಷ್ಟೇ ಅಲ್ಲದೆ, ಚಿತ್ರದುರ್ಗ, ಚಳ್ಳಕೆರೆ, ತುಮಕೂರು, ಪಾವಗಡ, ದಾವಣಗೆರೆ, ಚಾಮರಾಜನಗರ, ಮಂಡ್ಯ, ಜಿಲ್ಲೆಗಳ ರೈತರು ಬೆಳೆದ ಟೊಮೆಟೋವನ್ನು ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ತರುತ್ತಿದ್ದಾರೆ. ಜೊತೆಗೆ ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳ ಗಡಿಯ ರೈತರು ಕೂಡಾ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ತಾವು ಬೆಳೆದ ಟೊಮೆಟೋ ತಂದು ಮಾರಾಟ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಗೆ ಟೊಮೆಟೊ ಪೂರೈಕೆ ದಿನೇ ದಿನೇ ಹೆಚ್ಚಾಗುತ್ತಿದೆ.
ಕೋಲಾರದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:01 pm, Mon, 4 September 23