ಕೋಲಾರದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ, ದಲಿತ ಕುಟುಂಬಕ್ಕೆ ದಂಡ ಹಾಕಿ ಬಹಿಷ್ಕಾರದ ಬೆದರಿಕೆ..!

| Updated By: ಗಂಗಾಧರ​ ಬ. ಸಾಬೋಜಿ

Updated on: Sep 22, 2022 | 8:01 PM

ಉತ್ಸವದ ಮೂರ್ತಿ ಹೊತ್ತು ತರುವ ವೇಳೆ ಕೈಜಾರಿ ಬಿದ್ದ ಉತ್ಸವ ಮೂರ್ತಿಯ ಗುಜ್ಜುಕೋಲ ಅಥವಾ ಊರುಗೋಲನ್ನು ಅದೇ ಗ್ರಾಮದ ದಲಿತ ಬಾಲಕ ಚೇತನ್​ ಎಂಬಾತ ಮುಟ್ಟಿ ಎತ್ತಿಕೊಟ್ಟಿದ್ದ.

ಕೋಲಾರದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ, ದಲಿತ ಕುಟುಂಬಕ್ಕೆ ದಂಡ ಹಾಕಿ ಬಹಿಷ್ಕಾರದ ಬೆದರಿಕೆ..!
ದಲಿತ ಕುಟುಂಬ, ಭೂತಮ್ಮ ದೇವಿ ದೇವಾಲಯ
Follow us on

ಕೋಲಾರ: ಅದೊಂದು ಪುಟ್ಟ ಗ್ರಾಮ. ಗ್ರಾಮದಲ್ಲಿ ಆಧುನಿಕತೆ ಬೆಳೆದಿರಬಹುದು ಗುಡಿಸಲು ಹೋಗಿ ದೊಡ್ಡ ದೊಡ್ಡ ಮನೆಗಳು ನಿರ್ಮಾಣವಾಗಿರಬಹುದು ಆದರೆ ಜನರ ಮನಸ್ಥಿತಿ ಮಾತ್ರ ಇನ್ನೂ ಬದಲಾಗಿಲ್ಲ. ಜಾತಿ ಅನ್ನೋ ವಿಷ ಬೀಜಕ್ಕೆ ಗ್ರಾಮದ ಕೆಲವರು ಇನ್ನೂ ನೀರೆರೆಯುತ್ತಲೇ ಇದ್ದಾರೆ. ಪರಿಣಾಮ ದಲಿತ ಬಾಲಕನೊಬ್ಬ ದೇವರ ಉತ್ಸವದ ಊರುಗೋಲು ಮುಟ್ಟಿದ್ದಕ್ಕೆ ದಲಿತ ಕುಟುಂಬದ ಮೇಲೆ ದೌರ್ಜನ್ಯ ನಡೆಸಿದ ಘಟನೆ ನಡೆದಿದೆ.

ಭೂತಮ್ಮ ದೇವಿ ಉತ್ಸವದ ವೇಳೆ ಬಿದ್ದ ಊರುಗೋಲು ಮುಟ್ಟಿದ್ದೇ ತಪ್ಪಾಯ್ತಾ..!

ಗ್ರಾಮಕ್ಕೆ ಬೇಟಿ ನೀಡಿರುವ ಶಾಸಕರು ಸಂಸದರು ಹಾಗೂ ಹಲವು ನಾಯಕರುಗಳ ದಂಡು, ಗ್ರಾಮದಲ್ಲಿ ಬೀಡು ಬಿಟ್ಟಿರುವ ಪೊಲೀಸರು ಹಾಗೂ ಅಧಿಕಾರಿಗಳು, ಇನ್ನೊಂದೆಡೆ ದೇವಾಲಯದ ಬೀಗ ಒಡೆದು ದೌರ್ಜನ್ಯಕ್ಕೊಳಗಾದ ಕುಟುಂಬಕ್ಕೆ ಪೂಜೆಗೆ ಅವಕಾಶ ಕಲ್ಪಿಸುತ್ತಿರುವ ಕೋಲಾರ ಡಿಸಿ ಹಾಗೂ ಎಸ್ಪಿ, ಇಂಥಾದೊಂದು ಘಟನೆ ಕಂಡು ಬಂದಿದ್ದು, ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಹುಳ್ಳೇರಹಳ್ಳಿ ಗ್ರಾಮದಲ್ಲಿ. ಕಳೆದ ಸೆ-7 ರಂದು ಉಳ್ಳೇರಹಳ್ಳಿ ಗ್ರಾಮದ ಭೂತಮ್ಮ ದೇವರ ಉತ್ಸವ ಆಯೋಜನೆ ಮಾಡಲಾಗಿತ್ತು. ಈ ವೇಳೆ ಉತ್ಸವದ ಮೂರ್ತಿ ಹೊತ್ತು ತರುವ ವೇಳೆ ಕೈಜಾರಿ ಬಿದ್ದ ಉತ್ಸವ ಮೂರ್ತಿಯ ಗುಜ್ಜುಕೋಲ ಅಥವಾ ಊರುಗೋಲನ್ನು ಅದೇ ಗ್ರಾಮದ ದಲಿತ ಬಾಲಕ ಚೇತನ್​ ಎಂಬಾತ ಮುಟ್ಟಿ ಎತ್ತಿಕೊಟ್ಟಿದ್ದ. ಇದೇ ಕಾರಣಕ್ಕೆ ಗ್ರಾಮದ ಕೆಲವು ಹಿರಿಯರು ಆ ಬಾಲಕನನ್ನು ನಿಂದಿಸಿ ದಲಿತ ಜನಾಂಗಕ್ಕೆ ಸೇರಿದ ನೀನು ದೇವರ ಊರುಗೋಲು ಮುಟ್ಟಿ ಅಪಚಾರ ಮಾಡಿದ್ಯಾ ಎಂದು ಹೀಯಾಳಿಸಿದ್ದಾರೆ. ಜೊತೆಗೆ ಆ ಬಾಲಕ ತಂದೆ ರಮೇಶ್​ ಹಾಗೂ ತಾಯಿ ಶೋಭಾರನ್ನು ಕರೆಸಿ ಜಾತಿನಿಂದನೆ ಮಾಡಿ ಬೆದರಿಸಿದ್ದಾರೆ.

ಊರಿನಲ್ಲಿ ನ್ಯಾಯ ಪಂಚಾಯ್ತಿ 60 ಸಾವಿರ ದಂಡ, ಬಹಿಷ್ಕಾರದ ಬೆದರಿಕೆ..!

ಘಟನೆ ನಡೆದ ನಂತರ ಊರಿನ ಕೆಲವು ಹಿರಿಯರೆಲ್ಲಾ ಸೇರಿ ಇದೇ ವಿಚಾರವಾಗಿ ನ್ಯಾಯ ಪಂಚಾಯ್ತಿ ಸೇರಿದ್ದಾರೆ. ಇತ್ತೀಚೆಗಷ್ಟೇ ಗ್ರಾಮದ ಭೂತಮ್ಮ ದೇವಿಯ ದೇವಾಲಯಕ್ಕೆ ಸುಣ್ಣ ಬಣ್ಣ ಬಳಿಯಲಾಗಿತ್ತು. ಜೊತೆಗೆ 60 ಸಾವಿರ ಖರ್ಚು ಮಾಡಿ ಉತ್ಸವ ಮೂರ್ತಿಯನ್ನು ಮಾಡಿಸಲಾಗಿತ್ತು. ಇಷ್ಟೆಲ್ಲಾ ಮಾಡಿಯಾದ ಮೇಲೆ ಗ್ರಾಮದಲ್ಲಿ ಉತ್ಸವ ಮಾಡಲಾಗಿತ್ತು. ಈ ವೇಳೆ ದಲಿತ ಜನಾಂಗಕ್ಕೆ ಸೇರಿದ ಬಾಲಕ ದೇವರ ಉತ್ಸವ ಮೂರ್ತಿಯ ಊರುಕೋಲು ಮುಟ್ಟಿದ ಅನ್ನೋ ಕಾರಣಕ್ಕೆ ಆ ಕುಟುಂಬಕ್ಕೆ 60 ಸಾವಿರ ರೂಪಾಯಿ ದಂಡ ಹಾಕಿದ್ದು ಒಂದು ವೇಳೆ ದಂಡ ಕಟ್ಟದಿದ್ದರೆ ಊರು ಬಿಟ್ಟು ಹೋಗುವಂತೆ ತಿಳಿಸಿದ್ದಾರೆ. ಆಗ ಬಾಲಕ ಚೇತನ್​ ಅವರ ತಾಯಿ ಐದು ಸಾವಿರ ರೂಪಾಯಿ ಕೊಡುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಅಷ್ಟು ಹಣವನ್ನು ಹೊಂದಿಸಲಾಗದೆ ಹೋದಾಗ ಕೆಲವು ಸಂಘಟನೆಗಳ ಮುಖಂಡರಿಗೆ ವಿಷಯ ತಿಳಿದು ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದೆ.

ಗುಡಿಸಲಲ್ಲಿ ವಾಸ ಕೂಲಿ ಕೆಲಸ ಮಾಡುವ ಕುಟುಂಬಕ್ಕೆ ಬಾರಿ ದಂಡದ ಶಿಕ್ಷೆ..!

ಇನ್ನು ಊರ ಹೊರಗಿನ ಸರ್ಕಾರಿ ಜಾಗದಲ್ಲಿ ಸಣ್ಣದೊಂದು ಶೀಟ್​ನ ಮನೆ ಅದೊಂದು ಗುಡಿಸಲಿನಲ್ಲಿ ಜೀವನ ಮಾಡುತ್ತಿರುವ ಬಾಲಕನ ತಂದೆ ರಮೇಶ್​ ಹಾಗೂ ತಾಯಿ ಶೋಭಾ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ತಂದೆ ರಮೇಶ್​ಗೆ ಆರೋಗ್ಯ ಸರಿ ಇಲ್ಲದ ಕಾರಣದಿಂದ ತಾಯಿ ನಿತ್ಯ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡಿ ಅಪಾರ್ಟ್​ಮೆಂಟ್​ಗಳಲ್ಲಿ ಹೌಸ್​ ಕೀಪಿಂಗ್​ ಕೆಲಸ ಮಾಡಿ ನಿತ್ಯ 300 ರೂಪಾಯಿ ಸಂಪಾದನೆ ಮಾಡುತ್ತಾರೆ. ಅದರಲ್ಲಿ ಜೀವನ ನಡೆಸುತ್ತಿರುವ ಕುಟುಂಬಕ್ಕೆ ಗ್ರಾಮದ ಕೆಲವು ಮುಖಂಡರು ಹಾಕಿದ ದಂಡದ ಶಿಕ್ಷೆ ಇಲ್ಲದ ಮಾನಸೀಕ ನೋವುಂಟು ಮಾಡಿದೆ ಅಲ್ಲದೆ ಆಘಾತವನ್ನು ತಂದೊಡ್ಡಿತ್ತು.

ಸಂಘಟನೆಗಳ ಮುಖಂಡರ ನೆರವು ಪ್ರಕರಣ ದಾಖಲು..!

ಗ್ರಾಮದಲ್ಲಿ ದಲಿತ ಕುಟುಂಬದ ಮೇಲೆ ಮಾಡಲಾದ ದೌರ್ಜನ್ಯ ಕುರಿತು ಕೆಲವು ಸಂಘಟನೆಗಳ ಮುಖಂಡರಿಗೆ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಬೇಟಿ ನೀಡಿದ ಅಂಬೇಡ್ಕರ್​ ಸೇವಾ ಸಮಿತಿಯ ಸಂದೇಶ್​ ಹಾಗೂ ಅವರ ಬೆಂಬಲಿಗರು ದಲಿತ ಕುಟುಂಬಕ್ಕೆ ದೈರ್ಯ ಹೇಳಿ ಮಾಸ್ತಿ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದಾರೆ. ಗ್ರಾಮಕ್ಕೆ ಬೇಟಿ ನೀಡಿದ ಪೊಲೀಸರು ಸತ್ಯಾಸತ್ಯತೆ ಪರಿಶೀಲನೆ ನಡೆಸಿ ಕೂಡಲೇ ಜಾತಿನಿಂದಲೇ ಹಾಗೂ ದಲಿತ ದೌರ್ಜನ್ಯ ಪ್ರಕರಣ ದಾಖಲು ಮಾಡಿದ್ರು. ಅಷ್ಟೇ ಅಲ್ಲ ಊರಿನಲ್ಲಿ ಈರೀತಿ ಗ್ರಾಮದಲ್ಲಿ ನ್ಯಾಯ ಪಂಚಾಯ್ತಿ ಹೆಸರಲ್ಲಿ ಅಸ್ಪೃಷ್ಯತೆ ಮೆರೆದ ಗ್ರಾಮದ ಎಂಟು ಜನರ ವಿರುದ್ದ ದೂರು ದಾಖಲು ಮಾಡಿ ಕೂಡಲೇ ಅಷ್ಟೂ ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಕೋಲಾರ ಎಸ್ಪಿ ಡಿ.ದೇವರಾಜ್​ ಟಿವಿ9ಗೆ ಮಾಹಿತಿ ನೀಡಿದ್ದಾರೆ.

ಗ್ರಾಮಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳ ಬೇಟಿ ದೇವಾಲಯಕ್ಕೂ ಪ್ರವೇಶ..!

ಇದಾದ ನಂತರ ಕೋಲಾರ ಜಿಲ್ಲಾಧಿಕಾರಿ ವೆಂಕಟರಾಜಾ ಹಾಗೂ ಎಸ್ಪಿ ಡಿ.ದೇವರಾಜ್ ಗ್ರಾಮಕ್ಕೆ​ ಬೇಟಿ ನೀಡಿ ಗ್ರಾಮದ ಮುಖಂಡ ಜೊತೆಗೆ ಮಾತುಕತೆ ನಡೆಸಿದ್ದಾರೆ. ಗ್ರಾಮದಲ್ಲಿ ಸೌಹಾರ್ದತೆ ಕಾಪಾಡಿಕೊಂಡು ಹೋಗುವಂತೆ ತಿಳಿ ಹೇಳಿದ್ದಾರೆ. ಅಲ್ಲದೆ ದೌರ್ಜನ್ಯಕ್ಕೊಳಗಾದ ಕುಟುಂಬದವರನ್ನು ಗ್ರಾಮದ ಭೂತಮ್ಮ ದೇವಾಲಯಕ್ಕೆ ಹಾಕಲಾಗಿದ್ದ ಬೀಗ ಒಡೆದು ದೇವಾಲಯದ ಒಳಗೆ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಿ, ಆ ಕುಟುಂಬಕ್ಕೆ ಸಾಂತ್ವನ ಹೇಳಿ ಮನೆ ಇಲ್ಲದೆ ಗುಡಿಸಲಿನಲ್ಲಿ ವಾಸವಿದ್ದ ಮಹಿಳೆಗೆ ನಿವೇಶನ ಹಾಗೂ ಜೀವನೋಪಾಯಕ್ಕೆ ಒಂದು ಕೆಲಸ ಕೊಡುವುದಾಗಿ ಭರವಸೆ ನೀಡಿದ್ದಾರೆ.

ಶಾಸಕರು ಹಾಗೂ ಸಂಸದರೂ ಬೇಟಿ ಆರ್ಥಿಕ ನೆರವು..!

ಇನ್ನು ವಿಷಯ ತಿಳಿದ ಕೂಡಲೇ ಕೋಲಾರ ಸಂಸದ ಎಸ್​.ಮುನಿಸ್ವಾಮಿ ಗ್ರಾಮಕ್ಕೆ ಬೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದ್ರು ಅವರಿಗೆ ಬೇಕಾದ ಆರ್ಥಿಕ ನೆರವು ನೀಡಿ ಮನೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದಾರೆ. ಅಲ್ಲದೆ ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಕೂಡಾ ಗ್ರಾಮಕ್ಕೆ ಬೇಟಿ ನೀಡಿ ದಲಿತ ಕುಟುಂಬಕ್ಕೆ ದೈರ್ಯ ಹೇಳಿದ್ರು. ಶಾಸಕ ನಂಜೇಗೌಡ ಅವರ ಮನೆಯಲ್ಲಿ ಊಟ ಮಾಡಿ ನಾವೆಲ್ಲಾ ಒಂದು ಅಂಬೇಡ್ಕರ್​ ಅವರು ಬರೆದ ಸಂವಿಧಾನದಿಂದ ಶಾಸಕರಾಗಿರುವವರು ಯಾವುದೇ ಕಾರಣಕ್ಕೂ ದೌರ್ಜನ್ಯ ಎಸಗಲು ಬಿಡೋದಿಲ್ಲ. ದೈರ್ಯವಾಗಿರಿ ಎಂದು ಕುಟುಂಬಕ್ಕೆ ಸಾಂತ್ವನ ಹೇಳಿ ಅವರ ಕುಟುಂಬಕ್ಕೆ ದಿನಸಿ ಕಿಟ್​ ಹಾಗೂ ವೈಯಕ್ತಿಯವಾಗಿ ಆರ್ಥಿಕ ನೆರವು ನೀಡಿದರು.

ಗ್ರಾಮದಲ್ಲಿ ಶಾಂತಿ ಕದಡದಂತೆ ಶಾಂತಿ ಸಭೆ ಪೊಲೀಸ್​ ಬಂದೋಬಸ್ತ್​..!

ಇನ್ನು ಗ್ರಾಮದಲ್ಲಿ ಈರೀತಿ ಘಟನೆಯಾದ ನಂತರ ಸಾಮರಸ್ಯ ಕದಡುವ ಆತಂಕ ಇದ್ದ ಹಿನ್ನೆಲೆ ಗ್ರಾಮದಲ್ಲಿ ಎರಡು ಮೂರು ಶಾಂತಿ ಸಭೆಗಳನ್ನು ಮಾಡಿ ಜನರಿಗೆ ಕಾನೂನಿನ ಅರಿವು ಮಾಡಿಕೊಡಲಾಗಿದೆ. ಅಲ್ಲದೆ ಸಮಾಜಕಲ್ಯಾಣ ಇಲಾಖೆಯಿಂದ ದೌರ್ಜನ್ಯಕ್ಕೊಳಗಾದ ದಲಿತ ಕುಟುಂಬಕ್ಕೆ ನಿವೇಶನ ನೀಡಿ ಸರ್ಕಾರದಿಂದ ಆದಷ್ಟು ಬೇಗ ಮನೆ ನಿರ್ಮಾಣ ಮಾಡಿಕೊಟ್ಟು, ಒಂದು ಕೆಲಸವನ್ನು ನೀಡಲು ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ. ಗ್ರಾಮದಲ್ಲಿ ಯಾವುದೇ ಅಹಿತರಕ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್​ ಬಂದೋಬಸ್ತ್​ ಕೂಡಾ ಮಾಡಲಾಗಿದೆ.

ಭೂತಮ್ಮ ದೇವಾಲಯದ ಅರ್ಚಕರೂ ದಲಿತರೇ ಆದರೂ ದೌರ್ಜನ್ಯ..!

ಇನ್ನು ಇಡೀ ಪ್ರಕರಣ ನಡೆದ ನಂತರ ಗ್ರಾಮಕ್ಕೆ ಅಧಿಕಾರಿಗಳು ಜನಪ್ರತಿನಿಧಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಇಷ್ಟಾದ ನಂತರ ವಿಶೇಷವಾಗಿ ಕಂಡು ಬಂದ ಅಂಶ ಅಂದರೆ ಈ ಭೂತಮ್ಮ ದೇವಿಯ ದೇವಾಲಯಕ್ಕೆ ಪೂಜೆ ಮಾಡುವ ಅರ್ಚಕರೂ ದಲಿತಸಮುದಾಯಕ್ಕೆ ಸೇರಿದವರು. ಹಲವು ವರ್ಷಗಳಿಂದಲೂ ಈ ದೇವಾಲಯಕ್ಕೆ ದಲಿತ ಸಮುದಾಯದವರೇ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಹೀಗಿದ್ದರೂ, ಈರೀತಿಯ ದೌರ್ಜನ್ಯ ನಡೆದದ್ದು ಮಾತ್ರ ಸಮಾಜ ತಲೆತಗ್ಗಿಸುವಂತದ್ದು ಅನ್ನೋದೇ ಬೇಸರದ ಸಂಗತಿ. 21ನೇ ಶತಮಾನ ಕಳೆದರೂ ಕೂಡಾ ದೇಶದಲ್ಲಿ ಇನ್ನೂ ಅಸ್ಪೃಷ್ಯತೆ ಅನ್ನೋ ಇಂಥ ಜಾತಿ ಪಿಡುಗು ಸಮಾಜದಲ್ಲಿನ ಸ್ವಾಥ್ಯ ಹಾಳು ಮಾಡುತ್ತಿದೆ. ಜನರು ಬದಲಾದಂತೆ ಸಮಾಜ ಬದಲಾದಂತೆ ಜನರ ಮನಸ್ಥಿತಿಗಳು ಕೂಡಾ ಬದಲಾಗಿಲ್ಲ. ಜಾತಿ ಅನ್ನೋ ಪಿಡುಗನ್ನು ತೊಡೆದು ಹಾಕವಲ್ಲಿ ಜನರೇ ಮಾನಸೀಕವಾಗಿ ಸಿದ್ದರಾಗುತ್ತಿಲ್ಲ ಅನ್ನೋದೆ ಬೇಸರದ ಸಂಗತಿ.

ವರದಿ: ರಾಜೇಂದ್ರ ಸಿಂಹ ಟಿವಿ 9 ಕೋಲಾರ