ಉತ್ತರಾಖಂಡ್‌ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣೆಯಲ್ಲಿ ಕೋಲಾರದ ಎಂಜಿನಿಯರ್​ ಭಾಗಿ

ಉತ್ತರಾಖಂಡ್ ರಾಜ್ಯದ ಸಿಲ್​ಕ್ಯಾರಾ ಸುರಂಗ ಕುಸಿತಗೊಂಡ ಪರಿಣಾಮ ಕಳೆದ ಎರಡು ವಾರಗಳಿಂದ 41 ಮಂದಿ ಸಿಲುಕಿಕೊಂಡಿದ್ದರು. ಸತತ 17 ದಿನಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಎಲ್ಲರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಎಂಜಿನಿಯರ್​ ಸಹ ಭಾಗಿಯಾಗಿದ್ದರು.

ಉತ್ತರಾಖಂಡ್‌ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣೆಯಲ್ಲಿ ಕೋಲಾರದ ಎಂಜಿನಿಯರ್​ ಭಾಗಿ
ಎಂಜಿನಿಯರ್​ ಹೆಚ್​​.ಎಸ್​ ವೆಂಕಟೇಶ್​ ಪ್ರಸಾದ್​
Edited By:

Updated on: Dec 01, 2023 | 10:30 AM

ಕೋಲಾರ ಡಿ.01: ಉತ್ತರಾಖಂಡ್ ರಾಜ್ಯದ ಉತ್ತರಕಾಶಿ ಬಳಿ ಸಿಲ್​ಕ್ಯಾರಾ ಸುರಂಗ (Silkyara tunnel)ದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಕೋಲಾರ ಜಿಲ್ಲೆಯ ಓರ್ವ ಎಂಜಿನಿಯರ್ (Engineer)​ ಕೂಡ ಭಾಗಿಯಾಗಿದ್ದರು. ಹೌದು ಬಂಗಾರಪೇಟೆ (Bangarpete) ಪಟ್ಟಣದ ಹೆಚ್.ಎಲ್.ಸುರೇಶ್ ಮತ್ತು ಕಲಾವತಿ ದಂಪತಿಯ ಪುತ್ರ ಹೆಚ್. ಎಸ್​ ವೆಂಕಟೇಶ್​​ ಪ್ರಸಾದ್ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು.

ವೆಂಕಟೇಶ್ ಪ್ರಸಾದ್ 2015 ರಲ್ಲಿ ಮೈನಿಂಗ್ ಇಂಜನಿಯರ್ ಆಗಿ ಉತ್ತೀರ್ಣರಾಗಿದ್ದಾರೆ. ನಂತರ‌ ಗುಜರಾತಿನ ಹಿಂದೂಸ್ಥಾನ್ ಜಿಂಕ್ ಲಿಮಿಟೆಡ್​ನಲ್ಲಿ 6 ವರ್ಷ ಸೇವೆ ಸಲ್ಲಿಸಿದ್ದಾರೆ. ಸದ್ಯ ಬೆಂಗಳೂರಿನ ಸ್ಕ್ವಾಡ್ರೋನ್ ಇನ್ಫ್ರಾ ಅಂಡ್ ಮೈನಿಂಗ್ ಪ್ರೈವೇಟ್ ಲಿಮಿಟೆಡ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಉತ್ತರಕಾಶಿ ಸುರಂಗ ಕುಸಿತ; ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ, ರಕ್ಷಣಾ ಕಾರ್ಯಾಚರಣೆಯ ಟೈಮ್​​​ಲೈನ್

ಉತ್ತರಕಾಶಿ ಬಳಿ ಸುರಂಗದಲ್ಲಿ 41 ಜನ ಕಾರ್ಮಿಕರು ಸಿಲುಕಿಕೊಂಡ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗುತ್ತದೆ. ಈ ವೇಳೆ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ ಹಾಗೂ ಭಾರತೀಯ ಸೇನಾ ಪಡೆಯ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಮೈನಿಂಗ್ ಇಂಜನಿಯರ್ ವೆಂಕಟೇಶ್ ಪ್ರಸಾದ್ ಸಹ ಕಾರ್ಯಾಚರಣೆಯಲ್ಲಿ ‌ಭಾಗಿಯಾಗಿ ಕಾರ್ಮಿಕರನ್ನು ಹೊರತರಲು ಶ್ರಮಿಸಿದ್ದಾರೆ.

ನವೆಂಬರ್​ 12 ರಂದು ಸಿಲುಕಿದ್ದ ಕಾರ್ಮಿಕರು

ನವೆಂಬರ್ 12 ರಂದು ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಭೂಕುಸಿತ ಸಂಭವಿಸಿ ಸುರಂಗದ ಒಂದು ಭಾಗ ಕುಸಿದು ನಲವತ್ತೊಂದು ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡಿದ್ದರು. ರಕ್ಷಣಾ ಕಾರ್ಯಾಚರಣೆ ತಕ್ಷಣವೇ ಪ್ರಾರಂಭವಾಗಿತ್ತು. ಈ ರಕ್ಷಣಾ ಕಾರ್ಯಾಚರಣೆಗೆ ಅಂತರಾಷ್ಟ್ರೀಯ ಸುರಂಗ ತಜ್ಞನನ್ನು ಕರೆಸಲಾಗಿತ್ತು. ಸತತ 17 ದಿನಗಳ ಕಾಲ ಕಾರ್ಯಾಚರಣೆ  ನಡೆಸಿದ ಬಳಿಕ ನವೆಂಬರ್​​ 28ರ ಸಂಜೆ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆ ತರಲಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ