Tunnel collapse: ಉತ್ತರಾಖಂಡ್ ಸುರಂಗ ನಿರ್ಮಾಣಕ್ಕೂ ನಮಗೂ ಯಾವ ಸಂಬಂಧವೂ ಇಲ್ಲ: ಅದಾನಿ ಗ್ರೂಪ್ ಸ್ಪಷ್ಟನೆ
Adani Group Clarification: ಉತ್ತರಾಖಂಡ್ನ ಚಾರ್ಧಾಮ್ ಯೋಜನೆಯ ಭಾಗವಾಗಿ ನಿರ್ಮಾಣವಾಗುತ್ತಿರುವ ಸಿಲ್ಕ್ಯಾರಾ ಸುರಂಗ ಕುಸಿತದಲ್ಲಿ ಸಿಲುಕಿರುವ 41 ಮಂದಿಯ ರಕ್ಷಣೆ ಇನ್ನೂ ಸಾಧ್ಯವಾಗಿಲ್ಲ. ಈ ಸುರಂಗ ನಿರ್ಮಾಣದಲ್ಲಿ ಅದಾನಿ ಗ್ರೂಪ್ ಭಾಗಿಯಾಗಿದೆ ಎನ್ನುವಂತಹ ಸುದ್ದಿ ಇದೆ. ಆದರೆ, ಸಂಸ್ಥೆ ಈ ಸುದ್ದಿಯನ್ನು ಬಲವಾಗಿ ತಳ್ಳಿಹಾಕಿದೆ. ತಮ್ಮ ಯಾವುದೇ ಸಂಸ್ಥೆಗೂ ಈ ಸುರಂಬ ನಿರ್ಮಾಣ ಮಾಡುತ್ತಿರುವ ಕಂಪನಿಗೂ ಯಾವ ಸಂಬಂಧ ಇಲ್ಲ ಎಂದು ಅದಾನಿ ಗ್ರೂಪ್ ಹೇಳಿದೆ.
ನವದೆಹಲಿ, ನವೆಂಬರ್ 27: ಉತ್ತರಾಖಂಡ್ ರಾಜ್ಯದ ಸಿಲ್ಕ್ಯಾರಾ ಸುರಂಗ (Silkyara tunnel) ಕುಸಿತಗೊಂಡ ಪರಿಣಾಮ ಕಳೆದ ಎರಡು ವಾರಗಳಿಂದ 41 ಮಂದಿ ಸಿಲುಕಿಕೊಂಡಿದ್ದಾರೆ. ಈ ಸುರಂಗ ನಿರ್ಮಾಣ ಕಾರ್ಯದಲ್ಲಿ ಅದಾನಿ ಗ್ರೂಪ್ಗೆ ಸೇರಿದ ಸಂಸ್ಥೆಯೊಂದು ಭಾಗಿಯಾಗಿದೆ ಎಂಬಂತಹ ಸುದ್ದಿ ಕೆಲ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಈ ಕುರಿತು ಅದಾನಿ ಗ್ರೂಪ್ ಸ್ಪಷ್ಟನೆ ನೀಡಿದ್ದು, ಸಿಲ್ಕ್ಯಾರಾ ಸುರಂಗ ನಿರ್ಮಾಣದಲ್ಲಿ ತಾನು ಪರೋಕ್ಷವಾಗಿಯಾಗಲೀ ನೇರವಾಗಿಯಾಗಲೀ ಭಾಗಿಯಾಗಿಲ್ಲ ಎಂದು ಹೇಳಿದೆ.
ಸಿಲ್ಕ್ಯಾರಾ ಟನಲ್ ನಿರ್ಮಾಣದಲ್ಲಿ ಭಾಗಿಯಾಗಿರುವ ಕಂಪನಿಯ ಮಾಲೀಕತ್ವವಾಗಲೀ, ಅದರ ಪಾಲುದಾರಿಕೆಯಾಗಲೀ ಅದಾನಿ ಗ್ರೂಪ್ ಹೊಂದಿಲ್ಲ ಎಂದು ಸಂಸ್ಥೆಯು ಹೇಳಿಕೆ ನೀಡಿದೆ.
ಇದನ್ನೂ ಓದಿ: ಉತ್ತರಕಾಶಿ: ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆ ಮಾಡುತ್ತಾ ರೋಬೋಟ್, ಡ್ರೋನ್ಮ್ಯಾನ್ ಮಿಲಿಂದ್ ರಾಜ್ ಯಾರು?
‘ಅದಾನಿ ಗ್ರೂಪ್ ಆಗಲೀ ಅಥವಾ ಅದರ ಯಾವುದೇ ಅಂಗ ಸಂಸ್ಥೆಯಾಗಲೀ ಸುರಂಗದ (ಸಿಲ್ಕ್ಯಾರಾ ಟನಲ್) ನಿರ್ಮಾಣದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ರೀತಿಯಲ್ಲೂ ಭಾಗಿಯಾಗಿಲ್ಲ ಎಂದು ಒತ್ತಿಹೇಳಲು ಇಚ್ಛಿಸುತ್ತೇವೆ. ಹಾಗೆಯೇ, ಸುರಂಗ ನಿರ್ಮಾಣದಲ್ಲಿ ಭಾಗಿಯಾದ ಕಂಪನಿಯ ಮಾಲೀಕತ್ವವಾಗಲೀ ಅಥವಾ ಅದರ ಯಾವುದೇ ಪಾಲನ್ನಾಗಲೀ ನಾವು ಹೊಂದಿಲ್ಲ ಎಂದೂ ಸ್ಪಷ್ಟಪಡಿಸುತ್ತಿದ್ದೇವೆ,’ ಎಂದು ಅದಾನಿ ಗ್ರೂಪ್ ಹೇಳಿಕೆಯಲ್ಲಿ ತಿಳಿಸಿದೆ.
ಸುರಂಗ ಕುಸಿತ ಘಟನೆಗೆ ತಮ್ಮ ಕಂಪನಿಯ ಹೆಸರನ್ನು ತಳುಕು ಹಾಕುತ್ತಿರುವುದನ್ನು ಬಲವಾಗಿ ಖಂಡಿಸಿರುವ ಅದಾನಿ ಗ್ರೂಪ್, ಅದೇ ವೇಳೆ ದುರಂತ ಘಟನೆಯಲ್ಲಿ ಸಿಲುಕಿರುವ ಕಾರ್ಮಿಕರು ಮತ್ತು ಅವರ ಕುಟುಂಬಗಳ ಸುರಕ್ಷತೆಗೆ ಪ್ರಾರ್ಥನೆ ಮಾಡುವುದಾಗಿ ಹೇಳಿದೆ.
ಇದನ್ನೂ ಓದಿ: ಅದಾನಿ-ಹಿಂಡನ್ಬರ್ಗ್ ರಿಪೋರ್ಟ್, ಚೀನಾ ಬೆಂಬಲಿಗರ ಕರ್ಮಕಾಂಡ: ರಾಜ್ಯಸಭಾ ಸಂಸದ ಮಹೇಶ್ ಜೇಠ್ಮಲಾನಿ ಅರೋಪ
ಉತ್ತರಾಖಂಡ್ನ ಚಾರ್ ಧಾಮ್ ಯೋಜನೆಯ ಭಾಗವಾಗಿ ಸಿಲ್ಕ್ಯಾರಾ – ಬಾರಕೋಟ್ ಸುರಂಗ ನಿರ್ಮಾಣ ಕಾರ್ಯ ನಡೆಯುತ್ತಿದೆ. ಹೈದರಾಬಾದ್ನ ನವಯುಗ ಎಂಜಿನಿಯರಿಂಗ್ ಕಂಪನಿ ಈ ಸುರಂಗ ನಿರ್ಮಿಸುತ್ತಿದೆ. ನವೆಂಬರ್ 12ರಂದು ಭೂಕುಸಿತ ಸಂಭವಿಸಿದ ಪರಿಣಾಮ ಈ ಸುರಂಗದ ಒಂದು ಭಾಗ ಮಣ್ಣಲ್ಲಿ ಮುಚ್ಚಿಹೋಯಿತು. 260 ಮೀಟರ್ ಕೆಳಗೆ ಸುರಂಗದಲ್ಲಿದ್ದ 41 ಮಂದಿ ಕಾರ್ಮಿಕರು ಹೊರಬರಲಾಗದೇ ಸಿಲುಕಿಕೊಂಡಿದ್ದಾರೆ. 15 ದಿನಗಳಾದರೂ ಅವರನ್ನು ಸುರಕ್ಷಿತವಾಗಿ ಹೊರತರಲು ಸಾಧ್ಯವಾಗುತ್ತಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ