ಹುಟ್ಟಿದ ಊರನ್ನು ಬಿಟ್ಟು ಬಂದಾ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ ಎಂದು ತಮ್ಮ ಪಾಡಿಗೆ ತಮಗೂ ತಾವು ಹುಟ್ಟಿದ ಊರಿಗೂ (native village) ಏನು ಸಂಬಂಧವೇ ಇಲ್ಲಾ ಅನ್ನೊ ರೀತಿ ಸುಮ್ಮನಾಗಿ ಬಿಡ್ತಾರೆ ಅನೇಕ ಜನ. ಆದರೆ ಇನ್ನು ಕೆಲವರಿಗೆ ಹುಟ್ಟಿದ ಊರಿಗೆ ಏನಾದರೂ ಮಾಡಲೇ ಬೇಕು ಅನ್ನೋ ತುಡಿತ ಸದಾಕಾಲ ಇರುತ್ತದೆ. ಅಂಥಾದೊಂದು ಅವಕಾಶ ಸಿಕ್ಕಾಗ ಅವರು ತನ್ನೂರಿನ ಮೇಲಿರುವ ಕಾಳಜಿಯನ್ನು ತೋರಿಸುತ್ತಾರೆ. ಇಂಥಾದೊಂದು ಮಾತಿಗೆ ಸಾಕ್ಷಿಯಾಗಿ ನಿಂತಿರುವವರು ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ತಾನು ಹುಟ್ಟಿದ ಊರಿಗೆ ಬೆಳಕು (solar lamps) ನೀಡಿದ್ದಾರೆ.
ವೀರಕಪುತ್ರ ಶ್ರೀನಿವಾಸ್ ಅವರು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಮೂಲದವರು. ಅಲ್ಲಿನ ವೀರಕಪುತ್ರ ಅನ್ನೋ ಗ್ರಾಮದವರು, 20 ವರ್ಷಗಳ ಹಿಂದೆ ವೀರಕಪುತ್ರ ಗ್ರಾಮದಿಂದ ಬೆಂಗಳೂರಿಗೆ ಬಂದ ವೀರಕಪುತ್ರ ಶ್ರೀನಿವಾಸ್ ಅವರು ತಮ್ಮ ಗ್ರಾಮದೊಂದಿಗಿನ ಸಂಬಂಧವನ್ನು ಕಡಿದುಕೊಂಡಿಲ್ಲ, ತಮ್ಮೂರಿನೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದು, ಗ್ರಾಮದ ಜನರ ಹಾಗೂ ತನ್ನ ಬಾಲ್ಯದ ಸ್ನೇಹಿತರ ಜೊತೆಗೆ ಒಡನಾಟ ಇಟ್ಟುಕೊಂಡಿದ್ದಾರೆ. ಅದರ ಜೊತೆ ಜೊತೆಗೆ ರಾಜಧಾನಿ ಬೆಂಗಳೂರಿಗೆ ಬಂದು ಹಲವು ರಂಗಗಳಲ್ಲಿ ತೊಡಗಿಸಿಕೊಂಡ ಶ್ರೀನಿವಾಸ್ ಇಂದು ಒಂದು ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.
ಬೆಂಗಳೂರಿನಲ್ಲಿ ತನ್ನದೇ ಒಂದಷ್ಟು ಬ್ಯುಸಿನೆಸ್, ವಿಷ್ಣು ಸೇನಾ ಸೇವಾ ಕಾರ್ಯಗಳು (late actor vishnuvardhan), ಸಾಹಿತ್ಯಾಸಕ್ತಿಗಾಗಿ ವೀರಲೋಕ ಅನ್ನೋ ಸಂಸ್ಥೆಯನ್ನು ಕಟ್ಟಿ ನೂರಾರು ಸಾಹಿತಿಗಳಿಗೆ ತಮ್ಮ ಪುಸ್ತಕಗಳನ್ನು ಬಿಡುಗಡೆ ಮಾಡಲು ಮತ್ತು ಓದುಗರಿಗೆ ಒಂದೊಳ್ಳೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಅದರ ಜೊತೆಗೆ ಚಿತ್ರರಂಗದ ಹಲವು ಸೇವಾ ಕಾರ್ಯಗಳಲ್ಲೂ ಕಾಣಿಸಿಕೊಳ್ಳುತ್ತಾರೆ ವೀರಕಪುತ್ರ ಶ್ರೀನಿವಾಸ್. ಬೆಂಗಳೂರಿನಲ್ಲಿ ಬಿಬಿಸಿ ಅನ್ನೋ ಒಂದು ಕೆಫೆಯ ಟ್ರೆಂಡ್ನನ್ನು ಆರಂಭಿಸಿದ್ದಾರೆ.
ಬಿಬಿಸಿ ಎಂದರೆ ಬುಕ್, ಬರ್ಗರ್, ಕಾಫಿ ಅನ್ನೋ ಮೂಲಕ ಮೊಬೈಲ್ ಗೀಳಿಗೆ ಬಿದ್ದಿರುವ ಯುವಜನತೆಯಲ್ಲಿ ಪುಸ್ತಕ ಓದುವ ಅಭಿರುಚಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಹೀಗೆ ಹತ್ತು ಹಲವು ವಿಭಿನ್ನ ಕಾರ್ಯಗಳ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿರುವ ಶ್ರೀನಿವಾಸ್ ಅವರು ಈಗ ತಮ್ಮೂರಿಗೆ ಏನಾದರೂ ಮಾಡಬೇಕು ಅನ್ನೋ ನಿಟ್ಟಿನಲ್ಲಿ ತಾನು ಹುಟ್ಟಿ ಆಡಿ ಬೆಳೆದ ಊರಿಗೆ ಬೆಳಕು ನೀಡುವ ಕೆಲಸಕ್ಕೆ ಮುಂದಾಗಿದ್ದಾರೆ.
Also read: ದಿವಾನ್ ಮಿರ್ಜಾ ಇಸ್ಮಾಯಿಲ್ ಭೇಟಿ ಕೊಟ್ಟಿದ್ದ ಸರ್ಕಾರಿ ಶಾಲೆಯನ್ನ ತೆರವುಗೊಳಿಸಿ ಸ್ನಾನಗೃಹ ನಿರ್ಮಾಣಕ್ಕೆ ಚಿಂತನೆ!
ತಮ್ಮೂರಿನೊಂದಿಗೆ ನಿರಂತರ ಸಂಪರ್ಕ ಹೊಂದಿರುವ ವೀರಕಪುತ್ರ ಶ್ರೀನಿವಾಸ್ ತಮ್ಮೂರಿಗೆ 15 ಸೋಲಾರ್ ದೀಪಗಳನ್ನು ಅಳವಡಿಸುವ ಮೂಲಕ ಗ್ರಾಮಕ್ಕೆ ಬೆಳಕಾಗಿದ್ದಾರೆ. ಬೆಟ್ಟಗುಡ್ಡಗಳ ನಡುವೆ ಇರುವ ಪುಟ್ಟ ಗ್ರಾಮ ವೀರಕಪುತ್ರ ಗ್ರಾಮ. ಗ್ರಾಮದ ಸುತ್ತಲೂ ನಿತ್ಯವೂ ಕಾಡುಪ್ರಾಣಿಗಳ ಆತಂಕ ಇದೆ, ಜೊತೆಗೆ ಹಗಲು ರಾತ್ರಿ ಗ್ರಾಮದ ಸುತ್ತಲೂ ಕಲ್ಲು ಕ್ವಾರಿ ಬ್ಲಾಸ್ಟಿಂಗ್ ನಡೆಯುತ್ತಿರುತ್ತದೆ| ಅಲ್ಲಿನ ಜನರು ರಾತ್ರಿಯಾಯಿತು ಎಂದರೆ ಸಾಕು ಆತಂಕದಲ್ಲಿ ಬದುಕುವ ಸ್ಥಿತಿ ಇದೆ. ಈ ಗ್ರಾಮದ ಪರಿಸ್ಥಿತಿ ಅರಿತಿರುವ ಶ್ರೀನಿವಾಸ್ ತಮ್ಮೂರಿನ ಎಲ್ಲಾ ಬೀದಿಗಳಿಗೆ 15 ಸೋಲಾರ್ ದೀಪಗಳನ್ನು ಅಳವಡಿಸಿದ್ದಾರೆ. ಜೊತೆಗೆ ಗ್ರಾಮದ ಶಾಲೆಗೂ ಕೂಡಾ ಜೀವ ಕೊಡುವ ಕೆಲಸ ಮಾಡಿದ್ದಾರೆ. ಈ ಮೂಲಕ ವೀರಕಪುತ್ರ ಶ್ರೀನಿವಾಸ್ ತಾನು ಹುಟ್ಟಿ, ಆಡಿ, ಬೆಳೆದ, ಊರಿಗೆ ತನ್ನದೇ ಆದ ಸೇವೆ ಮಾಡುವ ಮೂಲಕ ಧನ್ಯತೆ ಮೆರೆದಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ