AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kolar APMC: ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಇದ್ದಕ್ಕಿದ್ದಂತೆ ತೀವ್ರವಾಗಿ ಕುಸಿದಿದೆ!

ಒಟ್ಟಾರೆ ಬೆಳೆ ಬೆಳೆಯಲು ಹಲವು ಸವಾಲುಗಳನ್ನು ದಿಟ್ಟವಾಗಿ ಎದುರಿಸುವ ಕೋಲಾರದ ರೈತರಿಗೆ ಬೆಳೆಯಾಧಾರಿತ, ಹವಾಮಾನ ಆಧಾರಿತ ಮಾರುಕಟ್ಟೆಯ ಮಾಹಿತಿ ಇಲ್ಲದ ಕಾರಣ ಪದೇ ಪದೇ ನಷ್ಟ ಅನುಭವಿಸುತ್ತಿದ್ದು, ಸರ್ಕಾರ ಇವರಿಗೆ ನೆರವು ನೀಡುವ ಜೊತೆಗೆ ಮಾರುಕಟ್ಟೆಯ ಕುರಿತು ಅರಿವು ಮೂಡಿಸುವ ಅಗತ್ಯವಿದೆ.

Kolar APMC: ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಇದ್ದಕ್ಕಿದ್ದಂತೆ ತೀವ್ರವಾಗಿ ಕುಸಿದಿದೆ!
ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಇದ್ದಕ್ಕಿದ್ದಂತೆ ತೀವ್ರವಾಗಿ ಕುಸಿದಿದೆ!
TV9 Web
| Updated By: ಸಾಧು ಶ್ರೀನಾಥ್​|

Updated on:Dec 03, 2022 | 1:51 PM

Share

ಮಾರುಕಟ್ಟೆಯಲ್ಲಿ ಇದ್ದಕ್ಕಿದ್ದಂತೆ ತರಕಾರಿ ಬೆಲೆ (vegetable prices) ತೀವ್ರ ಕುಸಿತ ಕಂಡಿದೆ, ತರಕಾರಿ ಬೆಳೆದ ರೈತರು ಹಲವಾರು ಬಾರಿ ಹವಾಮಾನ ವೈಪರೀತ್ಯ, ಬೆಲೆ ಏರಿಕೆ ಸೇರಿದಂತೆ ಹಲವು ಸವಾಲುಗಳಿಗೆ ಎದೆಕೊಟ್ಟು ಗೆದ್ದು ಮಾರುಕಟ್ಟೆಗೆ ಬಂದರೆ, ತಾವು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದೆ ಮಾರುಕಟ್ಟೆಯಲ್ಲಿ ರೈತರು ಕುಸಿದು ಬೀಳುತ್ತಿದ್ದಾರೆ. ಅಷ್ಟಕ್ಕೂ ಯಾಕೆ ಹೀಗಾಗ್ತಿದೆ? ವರದಿ ಇಲ್ಲಿದೆ.

ಮಾರುಕಟ್ಟೆಯಲ್ಲಿ ವ್ಯಾಪಾರವಾಗದೆ ಉಳಿದಿರುವ ತರಕಾರಿಗಳು, ಬೆಲೆ ಕುಸಿತದಿಂದ ಕಂಗಾಲಾಗಿ ತಲೆ ಮೇಲೆ ಕೈಹೊತ್ತು ಕುಳಿತಿರುವ ರೈತರು, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರದ ತರಕಾರಿ ಮಾರುಕಟ್ಟೆಯಲ್ಲಿ. ಅಂದಹಾಗೆ ಕೋಲಾರ ಜಿಲ್ಲೆ ತರಕಾರಿ ಹಾಗೂ ಹೂವು ಬೆಳೆಗಳನ್ನು ಬೆಳೆಯೋದಕ್ಕೆ ಪ್ರಸಿದ್ದ ಪಡೆದ ಜಿಲ್ಲೆ. ಇಲ್ಲಿ ಬೆಳೆದ ಬೆಳೆಗಳು ಹೆಚ್ಚಾಗಿ ನಮ್ಮ ರಾಜ್ಯದ ರಾಜಧಾನಿಯ ಜೊತೆಗೆ ದೇಶದ ಹಲವು ರಾಜ್ಯಗಳಿಗೆ ರಫ್ತೂ ಆಗುತ್ತದೆ. ಅದಕ್ಕಾಗಿಯೇ ಕೋಲಾರದ ಎಪಿಎಂಸಿ ಮಾರುಕಟ್ಟೆಗೆ (kolar apmc market) ಕೋಲಾರ, ಜೊತೆಗೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ರೈತರು ತರಕಾರಿಗಳನ್ನು ಮಾರುಕಟ್ಟೆಗೆ ಮಾರಾಟ ಮಾಡಲು ತರುತ್ತಾರೆ.

ಹೀಗಿರುವಾಗ ಕಳೆದೊಂದು ವಾರದಿಂದ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಸೇರಿದಂತೆ ಟೊಮ್ಯಾಟೋ ಬೆಲೆ ತೀವ್ರ ಕುಸಿತ ಕಂಡಿದೆ. ಇನ್ನು ತರಕಾರಿ ಬೆಲೆ ಕುಸಿತಕ್ಕೆ ಪ್ರಮುಖ ಕಾರಣಗಳೇನು ಅನ್ನೋದನ್ನ ನೋಡಿದ್ರೆ ಹೊರ ರಾಜ್ಯಗಳಿಂದ ಇಲ್ಲಿನ ತರಕಾರಿಗೆ ಬೇಡಿಕೆ ಕಡಿಮೆಯಾಗಿರುವುದು, ಎಲ್ಲಾ ರಾಜ್ಯಗಳಲ್ಲೂ ಸ್ಥಳೀಯ ಮಾರುಕಟ್ಟೆಗೆ ಹೆಚ್ಚಾಗಿ ಸ್ಥಳೀಯ ರೈತರು ಬೆಳೆಯುವ ತರಕಾರಿಗಳು ಮಾರುಕಟ್ಟೆಯನ್ನು ಆಕ್ರಮಿಸುತ್ತವೆ.

ಜೊತೆಗೆ ಸ್ಥಳೀಯ ಮಾರುಕಟ್ಟೆಗೆ ಅವರೇಕಾಯಿ, ತೊಗರಿಕಾಯಿ, ಹಲಸಂಡೆ ಸೇರಿದಂತೆ ವರ್ಷಕ್ಕೊಮ್ಮೆ ಬೆಳೆಯುವ ತರಕಾರಿಗಳತ್ತ ಗ್ರಾಹಕರು ಆಕರ್ಷಿತರಾಗುತ್ತಿರುವುದು ಕೂಡಾ ತರಕಾರಿಗಳು ಬೆಲೆ ಕಳೆದುಕೊಳ್ಳಲು ಕಾರಣ. ಇದರಿಂದ ಕೋಲಾರದ ತರಕಾರಿಗೆ ನವೆಂಬರ್​, ಡಿಸೆಂಬರ್ ಹಾಗೂ ಜನವರಿ ತಿಂಗಳುಗಳಲ್ಲಿ ಬೇಡಿಕೆ ಕಡಿಮೆ ಇರುತ್ತದೆ. ಅದರಲ್ಲೂ ಟೊಮ್ಯಾಟೋ ಸೇರಿದಂತೆ ಹಲವು ತರಕಾರಿ ಬೆಳೆಗಳು ರೈತರು ಹಾಕಿದ ಬಂಡವಾಳವೂ ಬಾರದ ರೀತಿಯಲ್ಲಿ ಕನಿಷ್ಠ ಬೆಲೆಗೆ ಮಾರಾಟವಾಗುತ್ತಿದೆ. ಇನ್ನು ಇದೇ ಪರಿಸ್ಥಿತಿ ಇನ್ನು ಒಂದೆರಡು ತಿಂಗಳ ಕಾಲ ಮುಂದುವರೆಯುವ ಸಾಧ್ಯತೆ ಇದೆ ಅನ್ನೋದು ವ್ಯಾಪಾರಸ್ಥರ ಮಾತು.

ಇನ್ನು ಮಾರುಕಟ್ಟೆಯಲ್ಲಿ ರೈತರು ಬೆಳೆದ ತರಕಾರಿಗಳ ಏರಿಳಿತ ಸರ್ವೇ ಸಾಮಾನ್ಯ, ಆದರೆ ಯಾವ ಸಮಯದಲ್ಲಿ ಯಾವ ಬೆಳೆಗೆ ಬೆಲೆ ಬರುತ್ತದೆ, ಯಾವಾಗ ಬೆಲೆ ಕಳೆದುಕೊಳ್ಳುತ್ತದೆ ಅನ್ನೋ ವಿಚಾರವಾಗಿ ಮಾರುಕಟ್ಟೆ ಅಧ್ಯಯನ ಮಾಡೋ ವಿಚಾರವಾಗಿ ರೈತರು ವಿಫಲರಾಗುತ್ತಿದ್ದಾರೆ. ಆ ಕಾರಣದಿಂದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ, ವಾತಾವರಣದ ಏರುಪೇರು, ಕೂಲಿಕಾರರ ಸಮಸ್ಯ ಈ ಎಲ್ಲಾ ಸವಾಲುಗಳನ್ನು ಎದುರಿಸುವ ರೈತರಿಗೆ ಮಾರುಕಟ್ಟೆ ಕೈಕೊಡುತ್ತಿದೆ. ಇದರಿಂದ ರೈತರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಸದ್ಯ ಕಳೆದೊಂದು ವಾರದಿಂದ ಮಾರುಕಟ್ಟೆಯಲ್ಲಿ ತರಕಾರಿಗಳು ತೀವ್ರ ಬೆಲೆ ಕುಸಿತ ಕಂಡಿದ್ದು ಸದ್ಯ ಕೋಲಾರ ಮಾರುಕಟ್ಟೆಯಲ್ಲಿ ರೈತರಿಂದ ಖರೀದಿ ಮಾಡುತ್ತಿರುವ ತರಕಾರಿ ಬೆಲೆ ಇಷ್ಟಿದೆ.

ಕ್ಯಾರೆಟ್ -30, ಬೀನ್ಸ್​- 10, ಬದನೆಕಾಯಿ-5, ಮೂಲಂಗಿ-7, ಹೀರೆಕಾಯಿ-10, ಕ್ಯಾಬೇಜ್​-2 ರೂ, ಟೊಮ್ಯೋಟೋ- 4, ಸಿಮೆಬದನೆಕಾಯಿ-10, ನವಿಲುಕೋಸು-5, ಕ್ಯಾಪ್ಸಿಕಂ-15

ಹೀಗೆ ಎಲ್ಲಾ ತರಕಾರಿಗಳು ಬೆಲೆ ಕುಸಿತ ಕಂಡಿದ್ದು ರೈತರು ನಷ್ಟದ ಮೇಲೆ ನಷ್ಟ ಅನುಭವಿಸಿದ್ದು ಸರ್ಕಾರ ರೈತರ ನೆರವಿಗೆ ಬರಬೇಕು ಅನ್ನೋದು ರೈತರ ಬೇಡಿಕೆ. ಒಟ್ಟಾರೆ ಬೆಳೆ ಬೆಳೆಯಲು ಹಲವು ಸವಾಲುಗಳನ್ನು ದಿಟ್ಟವಾಗಿ ಎದುರಿಸುವ ರೈತರಿಗೆ ಬೆಳೆಯಾಧಾರಿತ, ಹವಾಮಾನ ಆಧಾರಿತ ಮಾರುಕಟ್ಟೆಯ ಮಾಹಿತಿ ಇಲ್ಲದ ಕಾರಣ ಪದೇ ಪದೇ ನಷ್ಟ ಅನುಭವಿಸುತ್ತಿದ್ದು, ಸರ್ಕಾರ ರೈತರಿಗೆ ನೆರವು ನೀಡುವ ಜೊತೆಗೆ ಮಾರುಕಟ್ಟೆಯ ಕುರಿತು ಅರಿವು ಮೂಡಿಸುವುದು ಅಗತ್ಯವಿದೆ. (ವರದಿ: ರಾಜೇಂದ್ರ ಸಿಂಹ, ಟಿವಿ 9, ಕೋಲಾರ)

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:49 pm, Sat, 3 December 22