ಪ್ರೀತಿಸಿಯೇ ಮದುವೆಯಾಗಿದ್ದರು: ಕಾಲಾಂತರದಲ್ಲಿ ಅವಳು ಪಕ್ಕದ ಮನೆಯವನ ಜೊತೆ ಸೇರಿ ಪ್ರೀತಿಸಿದವನನ್ನೇ ಕೊಂದುಬಿಟ್ಟಳು!

| Updated By: ಸಾಧು ಶ್ರೀನಾಥ್​

Updated on: Dec 07, 2022 | 4:07 PM

Illicit Relation: ಕಾಣೆಯಾಗಿದ್ದ ಆನಂದ್​ ಕೊಲೆಯಾಗಿ ಪತ್ತೆಯಾಗಿದ್ದ. ಕೊಲೆಯಾದ ಆನಂದನ ಅಣ್ಣ ವೆಂಕಟೇಶ್​ ಅನುಮಾನ ವ್ಯಕ್ತಪಡಿಸಿದ್ದಂತೆ ಆನಂದನ ಪತ್ನಿ ಚೈತ್ರಾ ಸೇರಿದಂತೆ ಆಕೆಯ ಮೂರು ಜನ ಸ್ನೇಹಿತರನ್ನು ವಶಕ್ಕೆ ಪಡೆದ ನಂದಗುಡಿ ಪೊಲೀಸರು ವಿಚಾರಣೆ ನಡೆಸಿದ ವೇಳೆಯಲ್ಲಿ ಆನಂದ್ ಪತ್ನಿಯೇ...

ಪ್ರೀತಿಸಿಯೇ ಮದುವೆಯಾಗಿದ್ದರು: ಕಾಲಾಂತರದಲ್ಲಿ ಅವಳು ಪಕ್ಕದ ಮನೆಯವನ ಜೊತೆ ಸೇರಿ ಪ್ರೀತಿಸಿದವನನ್ನೇ ಕೊಂದುಬಿಟ್ಟಳು!
ಪ್ರೀತಿಸಿಯೇ ಮದುವೆಯಾಗಿದ್ದವರು: ಕಾಲಾಂತರದಲ್ಲಿ ಅವಳು ಪಕ್ಕದ ಮನೆಯವನ ಜೊತೆ ಸೇರಿ ಪ್ರೀತಿಸಿದವನನ್ನೇ ಕೊಂದುಬಿಟ್ಟಳು!
Follow us on

ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದವರು, ಪ್ರೀತಿಸಿದ್ದಾರೆ ಅನ್ನೋ ಕಾರಣಕ್ಕೆ ಕುಟುಂಬಸ್ಥರು ಒಪ್ಪಿ ಮದುವೆ ಮಾಡಿದ್ದರು, ಪ್ರೀತಿಸಿ ಮದುವೆ ಮಾಡಿಕೊಂಡಿರುವವರು ಸಲುಗೆಯಿಂದಿದ್ದಾರೆ ಎಂದುಕೊಂಡು ಆಗಾಗ ನಡೆಯುತ್ತಿದ್ದ ಗಲಾಟೆ ಕಂಡು ಕುಟುಂಬಸ್ಥರು ಸುಮ್ಮನಾಗಿದ್ದರು, ಆದರೆ ಅವಳು ಪಕ್ಕದ ಮನೆಯವನ ಜೊತೆ ಸೇರಿ ಪ್ರೀತಿಸಿದವನನ್ನೇ ಕೊಲ್ಲುತ್ತಾಳೆ ಎಂದುಕೊಂಡಿರಲಿಲ್ಲ… ಅಂದು ನವೆಂಬರ್ 28 ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಮಾಸ್ತಿ ಪೊಲೀಸ್​ ಠಾಣೆಗೆ ಚಂಬೆ ಗ್ರಾಮದ ವೆಂಕಟೇಶ್​ ಎಂಬಾತ ದೂರೊಂದನ್ನು ನೀಡಿದ್ದರು. ನನ್ನ ತಮ್ಮ ಆನಂದ್​ ಎಂಬಾತ ಡ್ರೈವರ್ ಕೆಲಸ ಮಾಡಿಕೊಂಡಿದ್ದವನು ನವೆಂಬರ್​ 21 ರಿಂದ ನಾಪತ್ತೆಯಾಗಿದ್ದಾನೆ. ಅವನನ್ನು ಹುಡುಕಿಕೊಡಿ ಎಂದು ದೂರು ನೀಡಿದ್ದರು. ನಮ್ಮ ಸಂಬಂಧಿಕರು ಸ್ನೇಹಿತರು ಎಲ್ಲೆಡೆ ವಿಚಾರಿಸಿದ್ದೇವೆ. ಅವನ ಸುಳಿವು ಪತ್ತೆಯಾಗಿಲ್ಲ, ಆತನನ್ನು ಹುಡುಕಿಕೊಡಿ ಎಂದು ದೂರು ನೀಡಿದ್ದರು.

ಇನ್ನು ದೂರು ದಾಖಲಿಸಿಕೊಂಡಿದ್ದ ಮಾಸ್ತಿ ಪೊಲೀಸರು (Masthi Police) ತನಿಖೆ ಕೈಗೊಂಡಿದ್ದರು. ಆದರೆ ಕಾಣೆಯಾದವನ ಬಗ್ಗೆ ಯಾವುದೇ ಸುಳಿವು ಸಿಗೋದಿಲ್ಲ. ಕೆಲ ದಿನಗಳ ನಂತರ ದೂರು ನೀಡಿದ್ದ ವೆಂಕಟೇಶ್​ ಮತ್ತೆ ಠಾಣೆಗೆ ಹೋಗಿ ಕಾಣೆಯಾಗಿದ್ದ ಆನಂದ್​ ಪತ್ನಿ (Wife) ಹಾಗೂ ಆಕೆಯ ಕೆಲವು ಸ್ನೇಹಿತರ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದರು. ಅಷ್ಟೊತ್ತಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ನಂದಗುಡಿ ಪೊಲೀಸ್​ ಠಾಣಾ ವ್ಯಾಪ್ತಿಯ ಬಿ.ಮಾಕನಹಳ್ಳಿ ಗ್ರಾಮದ ಬಳಿಯ ನೀರಿನ ಹಳ್ಳದಲ್ಲಿ ಕೊಲೆ ಮಾಡಿ ಬಿಸಾಡಿದ್ದ ಅಪರಿಚಿತ ಶವವೊಂದು (Murder) ಪತ್ತೆಯಾಗಿತ್ತು (Illicit Relation).

ಈ ವೇಳೆ ಪರಿಶೀಲನೆ ನಡೆಸಲಾಗಿ, ಇಲ್ಲಿ ಕಾಣೆಯಾಗಿದ್ದ ಆನಂದ್​ ಅಲ್ಲಿ ಕೊಲೆಯಾಗಿ ಪತ್ತೆಯಾಗಿದ್ದಾನೆ ಅನ್ನೋದು ಖಚಿತವಾಗಿತ್ತು, ಕೊಲೆಯಾದ ಆನಂದನ ಅಣ್ಣ ವೆಂಕಟೇಶ್​ ಅನುಮಾನ ವ್ಯಕ್ತಪಡಿಸಿದ್ದಂತೆ ಆನಂದನ ಪತ್ನಿ ಚೈತ್ರಾ ಸೇರಿದಂತೆ ಆಕೆಯ ಮೂರು ಜನ ಸ್ನೇಹಿತರನ್ನು ವಶಕ್ಕೆ ಪಡೆದ ನಂದಗುಡಿ ಪೊಲೀಸರು ವಿಚಾರಣೆ ನಡೆಸಿದ ವೇಳೆಯಲ್ಲಿ ಆನಂದ್ ಪತ್ನಿಯೇ ತನ್ನ ಪ್ರಿಯಕನ ಜೊತೆಗೆ ಸೇರಿ ತನ್ನ ಗಂಡನನ್ನು (Husband) ಕೊಲೆ ಮಾಡಿರುವುದು ತಿಳಿದು ಬಂದಿದೆ.

ಅಷ್ಟಕ್ಕೂ ಆಗಿದ್ದೇನು ಎಂದು ನೋಡೋದಾದ್ರೆ, ಡ್ರೈವರ್ ಕೆಲಸ ಮಾಡುತ್ತಿದ್ದ ಚಂಬೆ ಗ್ರಾಮದ ಆನಂದ್​ ಕಾರಂಗುಟ್ಟೆ ಗ್ರಾಮದ ಚೈತ್ರಾ ಎಂಬ ಹುಡುಗಿಯನ್ನು ಪ್ರೀತಿಸಿ ಕಳೆದ ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮದುವೆಯಾದ ನಂತರ ಇಬ್ಬರು ಮಕ್ಕಳು ಇದ್ದರು. ಹೀಗೆ ಇರುವಾಗಲೇ ಆಗಾಗ ಸಂಸಾರದಲ್ಲಿ ಗಲಾಟೆಗಳು ನಡೆಯುತ್ತಲೇ ಇದ್ದವು.

ಆದರೆ ಪ್ರೀತಿಸಿ ಮದುವೆಯಾಗಿರುವವರು ಸಂಸಾರದಲ್ಲಿ ಇದೆಲ್ಲಾ ಕಾಮನ್​ ಎಂದು ಸುಮ್ಮನಿದ್ದರು. ಆನಂದ್ ತನ್ನ ಗಂಡ ಅನ್ನೋದನ್ನು ನೋಡದೆ ಆತ​ನನ್ನು ಚೈತ್ರಾ ಹೊಡೆದಾಗಲೂ ಯಾರೂ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಚೈತ್ರಾ ಕಳೆದ ಒಂದೂವರೆ ವರ್ಷದಿಂದ ತನ್ನ ಪಕ್ಕದ ಮನೆಯ ಚಲಪತಿ ಎಂಬುವನ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು.

ಸದ್ದಿಲ್ಲದೆ ನಡೆದಿತ್ತು ಅವರಿಬ್ಬರ ಮಧ್ಯೆ ಅಕ್ರಮ ಸಂಬಂಧ…

ಅದು ಸದ್ದಿಲ್ಲದೆ ಇಬ್ಬರ ಅಕ್ರಮ ಸಂಬಂಧ ನಡೆಯುತ್ತಿತ್ತು. ಆದರೆ ಅದು ಆನಂದ್​ಗೆ ಹೇಗೋ ಇತ್ತೀಚೆಗೆ ಗೊತ್ತಾಗಿತ್ತು. ಈ ವಿಚಾರವಾಗಿ ಆನಂದ್​ ಕುಡಿದು ಬಂದು ಗಲಾಟೆ ಕೂಡಾ ಮಾಡಿದ್ದರು. ಇದರಿಂದ ಪ್ಲಾನ್ ಮಾಡಿದ ಚೈತ್ರಾ ತನ್ನ ಪ್ರಿಯತಮ ಚಲಪತಿಗೆ ಆನಂದ್​ನನ್ನು ಮುಗಿಸಿಬಿಡಲು ತಿಳಿಸಿದ್ದಾಳೆ. ಅವಳು ಕೊಟ್ಟ ಅದೊಂದು ಧೈರ್ಯ ಸಾಗಾಗಿತ್ತು.

ಪ್ಲಾನ್​ ಮಾಡಿದ ಚಲಪತಿ ತನ್ನ ಇಬ್ಬರು ಸ್ನೇಹಿತರಾದ ಪೃಥ್ವಿರಾಜ್​ ಹಾಗೂ ನವೀನ್​ ಎಂಬುವವರ ಸಹಾಯ ಪಡೆದು ನವೆಂಬರ್​ 21 ರಂದು ಆನಂದ್​ಗೆ ಕರೆ ಮಾಡಿದ್ದಾರೆ. ಈ ಮೂರು ಜನ ಕೆಲಸ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಹೋಗಿ ಚೆನ್ನಾಗಿ ಕುಡಿಸಿ ಆತನನ್ನು ಕೊಲೆ ಮಾಡಿ ನಂತರ ಆತನ ಶವವನ್ನು ಹೊಸಕೋಟೆ ತಾಲ್ಲೂಕು ಬಿ. ಮಾಕನಹಳ್ಳಿ ಬಳಿ ಕ್ವಾರಿ ಹಳ್ಳವೊಂದರಲ್ಲಿ ಶವಕ್ಕೆ ಕಲ್ಲುಕಟ್ಟಿ ಬಿಸಾಡಿ ಬಂದಿದ್ದರು.

ಕೆಲ ದಿನಗಳ ನಂತರ ಶವ ನೀರಿನಲ್ಲಿ ತೇಲಿದೆ. ಆಗ ಪರಿಶೀಲನೆ ನಡೆಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ನಂದಗುಡಿ ಪೊಲೀಸರಿಗೆ ತನಿಖೆ ವೇಳೆ ಅಲ್ಲಿ ಕೊಲೆಯಾದ ಆನಂದ್ ಎಂಬಾತ ಪತ್ನಿ ಹಾಗೂ ಪ್ರಿಯಕರ ಸೇರಿ ಕೊಲೆ ಮಾಡಿರುವುದು ಬಯಲಾಗಿದೆ. ಜೊತೆಗೆ ಕೊಲೆ ಮಾಡಿದ ಆನಂದ್ ಪತ್ನಿ ಚೈತ್ರಾ, ಪ್ರಿಯಕರ ಚಲಪತಿ ಹಾಗೂ ಆತನ ಸ್ನೇಹಿತರಾದ ನವೀನ್​ ಹಾಗೂ ಪೃಥ್ವಿರಾಜ್​ನನ್ನು ಬಂಧಿಸಲಾಗಿದೆ.

ಒಟ್ಟಾರೆ ಪ್ರೀತಿಸಿ ಮದುವೆಯಾದ ಈ ಜೋಡಿ ಪ್ರೀತಿಸುವಾಗ ಜೀವಕ್ಕೆ ಜೀವ ಕೊಡ್ತೀನಿ ಎಂದು ಹೇಳಿ, ಕೈಕೈ ಹಿಡಿದುಕೊಂಡು ಓಡಾಡಿ ಕೊನೆಗೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದವನನ್ನೇ ಪ್ರಾಣ ತೆಗೆಯುತ್ತಾಳೆ ಅಂದರೆ ಇಲ್ಲಿ ಚೈತ್ರಾ ಅದೆಷ್ಟು ಚೆನ್ನಾಗಿ ಆನಂದ್​ನನ್ನು ಪ್ರೀತಿಸಿದ್ದಳು. ಇವಳನ್ನು ಮದುವೆಯಾದ ಆನಂದ್​ನ ಸಂಸಾರ ಎಷ್ಟು ಆನಂದವಾಗಿತ್ತು!? ಅನ್ನೋದು ಕೂಡಾ ತಿಳಿಯುತ್ತದೆ. (ವರದಿ: ರಾಜೇಂದ್ರ ಸಿಂಹ, ಟಿವಿ 9, ಕೋಲಾರ)