ಈ ಕಂದಮ್ಮಗೆ ಸುಷ್ಮಾ ಸ್ವರಾಜ್ ಎಂದು ಹೆಸರಿಡಲು ನಿರ್ಧಾರ; ಕೊಪ್ಪಳದ ವ್ಯಕ್ತಿಯ ಹೀಗೊಂದು ಅಭಿಮಾನ

ಮಾಜಿ ಕೇಂದ್ರ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರ ಕೊಪ್ಪಳದ ಅಭಿಮಾನಿಯೊಬ್ಬರು ತಮ್ಮ ಮಗಳಿಗೆ ಸುಷ್ಮಾ ಸ್ವರಾಜ್ ಎಂದು ಹೆಸರಿಡಲು ಮುಂದಾಗಿದ್ದಾರೆ. ಸುಷ್ಮಾ ಸ್ವರಾಜ್ ಅವರ ಮಾನಸ ಪುತ್ರರಂತಿದ್ದ ಜನಾರ್ದನ ರೆಡ್ಡಿ, ರಾಮುಲು ಅವರು ಬಂದು ಹೆಸರು ಇಡುವಂತೆ ಮಗುವಿನ ತಂದೆ ದೇವರಾಜ್ ಪಟ್ಟುಹಿಡಿದಿದ್ದಾರೆ.

ಈ ಕಂದಮ್ಮಗೆ ಸುಷ್ಮಾ ಸ್ವರಾಜ್ ಎಂದು ಹೆಸರಿಡಲು ನಿರ್ಧಾರ; ಕೊಪ್ಪಳದ ವ್ಯಕ್ತಿಯ ಹೀಗೊಂದು ಅಭಿಮಾನ
ಸುಷ್ಮಾ ಸ್ವರಾಜ್ ಮತ್ತು ಅವರ ಅಭಿಮಾನಿ ದೇವರಾಜ್
Follow us
TV9 Web
| Updated By: Rakesh Nayak Manchi

Updated on:Aug 06, 2022 | 10:23 AM

ಕೊಪ್ಪಳ: ಬಿಜೆಪಿ ಕಾರ್ಯಕರ್ತರೂ ಆಗಿರುವ ಮಾಜಿ ಕೇಂದ್ರ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅಭಿಮಾನಿಯೊಬ್ಬರು ತಮ್ಮ ಮಗಳಿಗೆ ಸುಷ್ಮಾ ಸ್ವರಾಜ್ ಎಂದು ಹೆಸರಿಡಲು ಮುಂದಾಗಿದ್ದಾರೆ. ಜಿಲ್ಲೆಯ ಕಾರಟಗಿ ತಾಲೂಕಿನ ಮೈಲಾಪೂರ ನಿವಾಸಿ ದೇವರಾಜ್  ಅವರು ತನ್ನ ಮಗಳಿಗೆ ಸುಷ್ಮಾ ಸ್ವರಾಜ್ ಹೆಸರಿಡಲು ನಿರ್ಧರಿಸಿದ್ದು, ಮಗಳ ನಾಮಕರಣಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ, ಸಚಿವ ಶ್ರೀರಾಮುಲು ಬರಬೇಕೆಂದು ಪಟ್ಟುಹಿಡಿದಿದ್ದಾರೆ.

ದೇವರಾಜ್ ದಂಪತಿಗೆ ಕಳೆದ ಕೆಲ ದಿನಗಳ ಹಿಂದೆ ಹೆಣ್ಣು ಮಗು ಜನಿಸಿದೆ. ಇದೇ ಖುಷಿಯಲ್ಲಿರುವ ದೇವರಾಜ್ ಮಗಳಿಗೆ ಸುಷ್ಮಾ ಸ್ವರಾಜ್ ಎಂದು ಹೆಸರಡಿಡಲು ಮುಂದಾಗಿದ್ದಾರೆ. ಆದರೆ ದೇವರಾಜ್ ಅವರು ಸುಷ್ಮಾ ಸ್ವರಾಜ್ ಅವರಿಗೆ ಮಾನಸ ಪುತ್ರರಂತಿದ್ದ ಜನಾರ್ದನ ರೆಡ್ಡಿ, ರಾಮುಲು ಅವರು ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ. ರೆಡ್ಡಿ ಮತ್ತು ರಾಮುಲು ಬಂದು ಮಗಳಿಗೆ ಸುಷ್ಮಾ ಸ್ವರಾಜ್ ಎಂದು ಹೆಸರಿಡಬೇಕು. ಅವರು ಬರುವವರೆಗೂ ಮಗಳಿಗೆ ನಾಮಕರಣ ಮಾಡುವುದಿಲ್ಲ ಎಂದು ದೇವರಾಜ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ದೇವರಾಜ್ ಅವರು ತನ್ನ ಮಗಳಿಗೆ ನಾಮಕರಣ ಮಾಡುವಂತೆ ಜನಾರ್ದನ ರೆಡ್ಡಿ, ರಾಮುಲು ಅವರ ಆಪ್ತ ಸಹಾಯಕರ ಗಮನಕ್ಕೆ ತಂದಿದ್ದಾರೆ. ದೇವರಾಜ್ ಓರ್ವ ಬಿಜೆಪಿ ಕಾರ್ಯಕರ್ತನಾಗಿದ್ದು, ದಿವಂತಗ ಸುಷ್ಮಾ ಸ್ವರಾಜ್ ಅವರ ಅಪ್ಪಟ ಅಭಿಮಾನಿಯೂ ಆಗಿದ್ದಾರೆ. ಇವರು ತನಗೆ ಹೆಣ್ಣು ಮಗು ಜನಿಸಿದರೆ ಸುಷ್ಮಾ ಸ್ವರಾಜ್ ಎಂದು ಹೆಸರು ಇಡುವುದಾಗಿ ಅಂದುಕೊಂಡಿದ್ದರು.

ಸಾಮಾನ್ಯ ವ್ಯಕ್ತಿಯಾಗಿದ್ದುಕೊಂಡು ದೇಶದ ಕೋಟ್ಯಾಂತರ ಜನರ ಮನಸ್ಸನ್ನು ಗೆದ್ದು ಇಹಲೋಕ ತ್ಯಜಿಸಿದ ಸುಷ್ಮಾ ಸ್ವರಾಜ್ ಅವರ ಮೇಲೆ ಈಗಲೂ ಜನರಿಗೆ ಅಪಾರ ಅಭಿಮಾನ. ಇದಕ್ಕೆ ಕಾರಣ ಅವರು ನಿಭಾತಯಿಸುತ್ತಿದ್ದ ಕರ್ತವ್ಯ ಮತ್ತು ಜನರಿಗೆ ಸ್ಪಂದಿಸುತ್ತಿದ್ದ ರೀತಿ. ವಿದೇಶಾಂಗ ಸಚಿವೆ ಆದ ನಂತರ ಇವರ ಹೆಸರು ದೇಶಾದ್ಯಂತ ಖ್ಯಾತಿ ಪಡೆಯಿತು. ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿಸಿದ ಅನೇಕ ಭಾರತೀಯರನ್ನು ರಾಜನೀತಿ ಮೂಲಕ ಸುರಕ್ಷಿತವಾಗಿ ರಕ್ಷಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಯೆಮೆನ್ ಸರ್ಕಾರ ಮತ್ತು ಬಂಡುಕೋರರ ನಡುವೆ ಯುದ್ಧ ಪ್ರಾರಂಭವಾದಾಗ ಭಾರತದಲ್ಲಿ ವಿದೇಶಾಂಗ ಸಚಿವೆಯಾಗಿ ಸುಷ್ಮಾ ಸ್ವರಾಜ್ ಇದ್ದರು. ಇವರು ಕೂಡಲೇ ಕಾರ್ಯಪ್ರವೃತ್ತರಾಗಿ ಭಾರತೀಯ ವಾಯುಪಡೆಯ ವಿಮಾನಗಳ ಮೂಲಕ 4640 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲದೆ 48 ದೇಶಗಳ ಎರಡು ಸಾವಿರ ನಾಗರಿಕರು ಕೂಡ ಅಲ್ಲಿ ಸಿಲುಕಿಕೊಂಡಿದ್ದರು, ಅವರನ್ನು ಕೂಡ ಭಾರತೀಯ ವಾಯುಪಡೆಯ ಸಹಾಯದಿಂದ ಏರ್ ಲಿಫ್ಟ್ ಮಾಡಲಾಯಿತು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಾಡಿದ ರಕ್ಷಣಾ ಕಾರ್ಯಾಚರಣೆಯನ್ನು ವಿಶ್ವದಾದ್ಯಂತ ಸ್ಮರಿಸಲಾಗುತ್ತಿದೆ.

ಮುಂಬೈ ನಿವಾಸಿ ಹಮೀದ್ ಅನ್ಸಾರಿ ಎಂಬಾತ ಆನ್​​ಲೈನ್ ಸ್ನೇಹಿತೆಯನ್ನು ಭೇಟಿ ಮಾಡಲು 2012 ರಲ್ಲಿ ಅಫ್ಘಾನಿಸ್ತಾನದ ಮೂಲಕ ಪಾಕಿಸ್ತಾನಕ್ಕೆ ಹೋಗಿ ಬಂಧನಕ್ಕೆ ಒಳಗಾಗಿದ್ದನು. ಬಂಧನದಿಂದ ಬಿಡುಗಡೆ ಮಾಡಲು ಕುಟುಂಬಸ್ಥರು ಪ್ರಯತ್ನ  ನಡೆಸಿದರೂ ಸಾಧ್ಯವಾಗಿಲ್ಲ. ಕೊನೆಯದಾಗಿ ಆತನ ತಾಯಿ ಮೇರ ಮೇಡಂ ಮಹಾನ್ ಎಂದು ಕರೆದು ಸುಷ್ಮಾ ಸ್ವರಾಜ್ ಬಳಿ ಹೋಗಿ ವಿಷಯವನ್ನು ಗಮನಕ್ಕೆ ತಂದರು. ಅದರಂತೆ ಸುಷ್ಮಾ ಸ್ವರಾಜ್ ಕಾರ್ಯ ಪ್ರವೃತ್ತರಾದರು. ಪರಿಣಾಮವಾಗಿ ಅನ್ಸಾರಿ ಬಂಧಮುಕ್ತನಾದನು. ಹೀಗೆ ಅನೇಕ ರೀತಿಯ ಜನಸ್ಪಂದನಾ ಕಾರ್ಯಗಳನ್ನು ಮಾಡಿ ಜನಮೆಚ್ಚುಗೆಗೆ ಪಾತ್ರರಾಗಿದ್ದರು.

Published On - 10:23 am, Sat, 6 August 22