ಕರ್ನಾಟಕದ 12 ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ದೆಹಲಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ

| Updated By: ವಿವೇಕ ಬಿರಾದಾರ

Updated on: Jan 18, 2025 | 2:16 PM

ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ರಾಘವೇಂದ್ರ ಡಂಬಳರನ್ನು 2025ರ ಗಣರಾಜ್ಯೋತ್ಸವ ಆಚರಣೆಗೆ ದೆಹಲಿಗೆ ಆಹ್ವಾನಿಸಲಾಗಿದೆ. ಜತೆಗೆ ಕರ್ನಾಟಕದ 12 ಗ್ರಾಮ ಪಂಚಾಯತ್ ಅಧ್ಯಕ್ಷರಿಗೂ ಆಹ್ವಾನ ಬಂದಿದೆ. ಕಿನ್ನಾಳ ಗ್ರಾಮ ಪಂಚಾಯತ್ ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್ ಆಗಿ ಗುರುತಿಸಿಕೊಂಡಿದೆ ಮತ್ತು ರಾಷ್ಟ್ರೀಯ ಪಂಚಾಯತ್ ಪುರಸ್ಕಾರವನ್ನು ಪಡೆದಿರುವುದು ಗಮನಾರ್ಹ.

ಕರ್ನಾಟಕದ 12 ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ದೆಹಲಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ
ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮ ಪಂಚಾಯತಿ ಕಚೇರಿ. ಒಳಚಿತ್ರದಲ್ಲಿ ಅಧ್ಯಕ್ಷೆ ಶ್ವೇತಾ ರಾಘವೇಂದ್ರ ಡಂಬಳ
Follow us on

ಕೊಪ್ಪಳ, ಜನವರಿ 18: ಇದೇ ಜನವರಿ 26 ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳನ್ನಾಗಿ ದೇಶಾದ್ಯಂತ ಒಟ್ಟು 750 ಸ್ಥಳೀಯ ಆಡಳಿತದ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ. ಈ ಪೈಕಿ ಕರ್ನಾಟಕ 12 ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸುದೈವ ಒದಗಿ ಬಂದಿದೆ. ಅದರಲ್ಲಿ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಕೂಡಾ ಒಬ್ಬರಾಗಿದ್ದಾರೆ. ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ರಾಘವೇಂದ್ರ ಡಂಬಳ ಆಯ್ಕೆಯಾಗಿದ್ದು, ದೆಹಲಿಗೆ ಹೋಗಲು ಸಿದ್ಧರಾಗುತ್ತಿದ್ದಾರೆ.

ಕರ್ನಾಟಕದಿಂದ ದೆಹಲಿ ಗಣರಾಜ್ಯೋತ್ಸವಕ್ಕೆ ಯಾರೆಲ್ಲ?

ಕರ್ನಾಟಕದಿಂದ ಹಾವೇರಿ ಜಿಲ್ಲೆಯ ಹುನಗುಂದ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮವ್ವ ತಳವಾರ್, ಮೈಸೂರು ಜಿಲ್ಲೆಯ ಕರಿಮುದ್ದನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಮಹದೇವ್, ಹಾಸನ ಜಿಲ್ಲೆಯ ಬಿರದಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಸತಿಶ್ ಎಚ್​ಡಿ, ಮಂಡ್ಯ, ಕೊಡಗು, ಚಿತ್ರದುರ್ಗ, ಗದಗ ಜಿಲ್ಲೆಗೆ ಸೇರಿರುವ ಒಟ್ಟು 12 ಗ್ರಾಮ ಪಂಚಾಯತ್ ಅಧ್ಯಕ್ಷರು ದೆಹಲಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ.

ಗ್ರಾಮ ಪಂಚಾಯತ್ ಅಧ್ಯಕ್ಷೆ, ಅಧ್ಯಕ್ಷರ ಜೊತೆ ಅವರ ಪತಿ, ಪತ್ನಿಯನ್ನು ಕೂಡಾ ಕರೆದುಕೊಂಡು ಹೋಗಲು ಅವಕಾಶವಿದೆ. ಈ ಬಗ್ಗೆ ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆಯ ನಿರ್ದೇಶಕರು, ಆಯ್ಕೆಯಾಗಿರುವ ಜಿಲ್ಲೆಯ ಜಿಲ್ಲಾ ಪಂಚಾಯತ್ ಸಿಇಓ ಗಳಿಗೆ ಪತ್ರ ಬರೆದಿದ್ದು, ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹೋಗುವ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಅವರ ಕುಟುಂಬದ ಓರ್ವರಿಗೆ ಹೋಗಿ ಬರಲು ಮತ್ತು ತಂಗಲು ವ್ಯವಸ್ಥೆ ಕಲ್ಪಿಸಲು ಸೂಚನೆ‌ ನೀಡಿದ್ದಾರೆ.

ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್ ಕಿನ್ನಾಳ

ಕೊಪ್ಪಳ ತಾಲೂಕಿನ ಕಿನ್ನಾಳ ರಾಜ್ಯದ ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್ ಎಂಬ ಹೆಗ್ಗಳಿಕೆ ಹೊಂದಿದೆ. ಗ್ರಾಮ ಪಂಚಾಯತ್ ಅನೇಕ ಯೋಜನೆಗಳನ್ನು ಮಹಿಳೆಯರಿಗೆ ತಲುಪಿಸುವುದು, ಸಾಮಾನ್ಯ ಸಭೆಯಲ್ಲಿ ಮಹಿಳೆಯರ ಬಾಗವಹಿಸುವಿಕೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಂಚಾಯತ್ ಪುರಸ್ಕಾರವನ್ನು ಕಳೆದ ತಿಂಗಳು ರಾಷ್ಟ್ರಪತಿಗಳು ಕಿನ್ನಾಳ ಗ್ರಾಮ ಪಂಚಾಯತ್​​ಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಿನ್ನಾಳ ಗ್ರಾಮ ಪಂಚಾಯತ್ ಅಧ್ಯಕ್ಷೆಯನ್ನು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅತಿಥಿಯನ್ನಾಗಿ ಆಹ್ವಾನಿಸಲಾಗಿದೆ. ಇದೇ ರೀತಿ ಸರ್ಕಾರದ ಯೋಜನೆಗಳನ್ನು ಗಮನಾರ್ಹವಾಗಿ ಜಾರಿಗೊಳಿಸಿದ ಹನ್ನೆರಡು ಗ್ರಾಮ ಪಂಚಾಯತ್ ಅಧ್ಯಕ್ಷರುಗಳನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ: ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ

ಇನ್ನು ದೆಹಲಿಗೆ ಬರುವಂತೆ ಸೂಚನೆ ಬಂದಿದೆ. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಾಗಿಯಾಗಲು ಆಹ್ವಾನಿಸಿದ್ದು ಹೆಚ್ಚು ಖುಷಿ ನೀಡಿದೆ. ತಾನು ಮತ್ತು ತನ್ನ ಪತಿ ಹೋಗುತ್ತಿರುವುದಾಗಿ ಶ್ನೇತಾ ರಾಘವೇಂದ್ರ ಡಂಬಳ ‘ಟಿವಿ9’ ಜತೆ ಸಂತಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:05 pm, Sat, 18 January 25