ಕೊಪ್ಪಳ: ವಾಂತಿ, ಭೇದಿಗೆ 5 ವರ್ಷದ ಬಾಲಕ ಬಲಿ

|

Updated on: Jun 19, 2023 | 9:55 PM

Koppal News: ವಾಂತಿ, ಭೇದಿಗೆ 5 ವರ್ಷದ ಬಾಲಕ ಬಲಿಯಾದ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ನಡೆದಿದೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಕೊಪ್ಪಳ: ವಾಂತಿ, ಭೇದಿಗೆ 5 ವರ್ಷದ ಬಾಲಕ ಬಲಿ
ಕೊಪ್ಪಳ ಜಿಲ್ಲೆಯಲ್ಲಿ ವಾಂತಿ, ಭೇದಿಗೆ ಸಾವನ್ನಪ್ಪಿದ ಕನಕಪ್ಪ ಮ್ಯಾಗೇಡಿ
Follow us on

ಕೊಪ್ಪಳ: ವಾಂತಿ, ಭೇದಿಗೆ 5 ವರ್ಷದ ಬಾಲಕ ಬಲಿಯಾದ ಘಟನೆ ಕೊಪ್ಪಳ (Koppal) ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ನಡೆದಿದೆ. ಕನಕಗಿರಿ ಪಟ್ಟಣದ ವಾರ್ಡ್ ನಂ.1ರ ನಿವಾಸಿ ಕನಕಪ್ಪ ಮ್ಯಾಗೇಡಿ (5) ಮೃತಪಟ್ಟ ಬಾಲಕ. ವಾಂತಿ ಬೇಧಿ ಹಿನ್ನೆಲೆ ಜೂನ್ 12ರಂದು ಕನಕಗಿರಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಕನಕಪ್ಪ, ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದ.

ಆಸ್ಪತ್ರೆಯಿಂದ ತೆರಳಿದ ಕೆಲ ಹೊತ್ತಲ್ಲೇ ಕನಕಪ್ಪ ಮತ್ತೆ ಅಸ್ವಸ್ಥಗೊಂಡಿದ್ದಾನೆ. ಹೀಗಾಗಿ ಇಂದು ಸಂಜೆ ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಬಾಲಕ ಕನಕಪ್ಪ ಕೊನೆಯುಸಿರೆಳೆದಿದ್ದಾನೆ. ಸದ್ಯ ಬಾಲಕನ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ನಂತರ ಮೃತದೇಹವನ್ನು ಮನೆಗೆ ರವಾನಿಸಲಾಗುತ್ತದೆ.

ಪಟ್ಟಣದಲ್ಲಿ ಯಾವುದೇ ವಾಂತಿಭೇದಿ ಪ್ರಕರಣ ಇಲ್ಲ: ಡಿಹೆಚ್​ಓ

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ಡಿಎಚ್ಓ ಡಾ. ಅಲಕನಂದಾ ಮಳಗಿ, ಮಗು ಬುದ್ಧಿಮಾಂದ್ಯವಾಗಿದ್ದು, ವಾಂತಿ ಮಾಡಿಕೊಂಡಾಗ ಶ್ವಾಸಕೋಶದಲ್ಲಿ ವಾಂತಿ ಸೇರಿದೆ‌. ಇದರಿಂದ ಉಸಿರಾಟದ ತೊಂದರೆ ಉಂಟಾಗಿ ಮಗು ಸಾವನ್ನಪ್ಪಿದೆ. ಕನಕಗಿರಿ ಪಟ್ಟಣದಲ್ಲಿ ಯಾವುದೇ ವಾಂತಿಭೇದಿ ಪ್ರಕರಣ ಇಲ್ಲ. ಕನಕಗಿರಿ ಸುತ್ತ ಮುತ್ತ ಯಾವುದೆ ಪೈಪ್ ಲೈನ್ ಲಿಕೇಜ್ ಇಲ್ಲ. ಅಲ್ಲಿ ಕುಡಿಯಲು ಯೋಗ್ಯವಾದ ನೀರಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೊಪ್ಪಳ ಕಲುಷಿತ ನೀರು ಪ್ರಕರಣ: ಅನಾಹುತ ಮರುಕಳಿಸಿದರೆ ಸಿಇಒ ಸಸ್ಪೆಂಡ್ -ಸಿಎಂ ಸಿದ್ದರಾಮಯ್ಯ ಖಡಕ್ ವಾರ್ನಿಂಗ್

ಮಗುವಿನ ಪೋಷಕರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಹೇಳಿದ ಅವರು, ಮಗು ಸಂಪೂರ್ಣ ವಾಂತಿ ಮಾಡಿಕೊಳ್ಳದೆ ಇರುವುದರಿಂದ ಸಾವನ್ನಪ್ಪಿದೆ ಎಂದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಕಲುಷಿತ ನೀರಿಗೆ ಮೂವರು ಬಲಿಯಾಗಿದ್ದರು. ಹೀಗಾಗಿ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಡಿಹೆಚ್​ಓ ಜಿಲ್ಲಾಧಿಕಾರಿಗೂ ಮಾಹಿತಿ ನೀಡಿದ್ದಾರೆ.

ಇತ್ತೀಚೆಗಷ್ಟೇ, ಕನಕಗಿರಿ ಪಟ್ಟಣದಲ್ಲೇ ಊಟ ಮಾಡುವಾಗ ಅನ್ನದ ತುತ್ತು ಗಂಟಲಲ್ಲಿ ಸಿಲುಕಿ ಆಂಜನೇಯ ಎಂಬ 14 ವರ್ಷದ ಬುದ್ಧಿಮಾಂದ್ಯ ಬಾಲಕ ಸಾವನ್ನಪ್ಪಿದ್ದ. ತಾಯಿ ರುದ್ರಮ್ಮ ಬುದ್ಧಿಮಾಂದ್ಯ ಮಗನಿಗೆ ಊಟ ಬಡಿಸಿ, ಹೊಲದಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಅನ್ನದ ತುತ್ತು ಗಂಟಲಿಗೆ ಸಿಲುಕಿಕೊಂಡು ಆಂಜನೇಯ ಸಾವನ್ನಪ್ಪಿದ್ದ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ