ಕಂದಾಯ ಅರಣ್ಯ ಭೂಮಿ ಒತ್ತುವರಿ ಆರೋಪ, ರೆಸಾರ್ಟ್ ಮಾಲೀಕರ ಜೊತೆ ಜಿಲ್ಲಾಧಿಕಾರಿ ಶಾಮೀಲು -ಸಿಬಿಐಗೆ ದೂರು

| Updated By: ಸಾಧು ಶ್ರೀನಾಥ್​

Updated on: Feb 15, 2024 | 11:26 AM

ಜನಸಾಮಾನ್ಯರು ತಪ್ಪು ಮಾಡಿದ್ದರೆ, ಅತಿಕ್ರಮಣ ಮಾಡಿದ್ದರೆ, ಅವರ ವಿರುದ್ದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುತ್ತಾರೆ. ಆದ್ರೆ ಪ್ರಭಾವಿಗಳು, ದೊಡ್ಡ ದೊಡ್ಡ ಶ್ರೀಮಂತರು ಮಾಡೋ ಅಕ್ರಮಕ್ಕೆ ಕ್ರಮ ಯಾಕಿಲ್ಲಾ ಅನ್ನೋದು ಸದಾ ಕಾಡುವ ಯಕ್ಷ ಪ್ರಶ್ನೆಯಾಗಿದೆ. ನ್ಯಾಯ ಎಲ್ಲರಿಗೂ ಒಂದೇ ಅನ್ನೋದನ್ನು ತೋರಿಸುವ ಕೆಲಸ ಕೊಪ್ಪಳ ಜಿಲ್ಲಾಧಿಕಾರಿಗಳಿಂದ ಆಗಬೇಕಿದೆ.

ಕಂದಾಯ ಅರಣ್ಯ ಭೂಮಿ ಒತ್ತುವರಿ ಆರೋಪ, ರೆಸಾರ್ಟ್ ಮಾಲೀಕರ ಜೊತೆ ಜಿಲ್ಲಾಧಿಕಾರಿ ಶಾಮೀಲು -ಸಿಬಿಐಗೆ ದೂರು
ರೆಸಾರ್ಟ್ ಮಾಲೀಕರ ಜೊತೆ ಜಿಲ್ಲಾಧಿಕಾರಿ ಶಾಮೀಲು ಆರೋಪ -ಸಿಬಿಐಗೆ ದೂರು
Follow us on

ಕೆಲ ರೆಸಾರ್ಟ್ ಗಳ ಮಾಲೀಕರು ಅಕ್ರಮವಾಗಿ ಕಂದಾಯ ಮತ್ತು ಅರಣ್ಯ ಭೂಮಿಯನ್ನು ಒತ್ತುವರಿ (Encroachment) ಮಾಡಿದ್ದಾರೆ ಎಂದು ಸ್ವತಃ ಕಂದಾಯ ಇಲಾಖೆಯ ಅಧಿಕಾರಿಗಳೇ ವರದಿ ನೀಡಿದ್ದಾರೆ. ಒತ್ತುವರಿ ತೆರವು ಮಾಡುವಂತೆ ಸ್ವತಃ ಜಿಲ್ಲಾಧಿಕಾರಿ (Koppal Deputy Commissioner) ಆದೇಶ ಕೂಡಾ ಮಾಡಿದ್ದಾರೆ. ಆದ್ರೆ ಆದೇಶವಾಗಿ ಎರಡು ತಿಂಗಳೇ ಕಳೆದರೂ ಕೂಡಾ ತೆರವು ಕಾರ್ಯಾಚರಣೆ, ಒತ್ತುವರಿದಾರರ ವಿರುದ್ದ ಕ್ರಮ ಮಾತ್ರ ಆಗಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ವಿರುದ್ದವೇ ಸಿಬಿಐ (CBI)ಗೆ ದೂರು ನೀಡಲಾಗಿದೆ. ಅಕ್ರಮಕೋರರ ವಿರುದ್ದ ಜಿಲ್ಲಾಧಿಕಾರಿ ಶಾಮೀಲಾಗಿದ್ದಾರೆ ಅಂತ ಆರೋಪಿಸಲಾಗಿದೆ.

ಸುತ್ತಮುತ್ತ ಬೆಟ್ಟಗುಡ್ಡಗಳು. ಮತ್ತೊಂದಡೆ ಹರಿಯುತ್ತಿರುವ ನದಿ. ಇಂತಹ ಪ್ರಶಾಂತ ಸ್ಥಳದಲ್ಲಿ ನಿರ್ಮಾಣವಾಗಿರುವ ರೆಸಾರ್ಟ್ ಗಳು. ಇಂತಹ ಆಹ್ಲಾದಕರ ಸ್ಥಳಗಳನ್ನು ನೋಡಿದ್ರೆ, ಎಂತಹವರು ಕೂಡಾ ಇಲ್ಲಿ ಸಮಯ ಕಳೆಯಬೇಕು ಅಂತ ಅಂದುಕೊಳ್ಳದೇ ಇರಲು ಸಾಧ್ಯವಿಲ್ಲ. ಇಂತಹದೊಂದು ಐಷಾರಾಮಿ ರೆಸಾರ್ಟ್ ಗಳು ಇರೋದು ಕೊಪ್ಪಳ ತಾಲೂಕಿನ ನಾರಾಯಣಪೇಟ್, ರಾಜಾರಾಮಪೇಟ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ.

ಇಂತಹ ರೆಸಾರ್ಟ್ ಗಳಿಗೆ ಪ್ರತಿನಿತ್ಯ ದೇಶ ವಿದೇಶಗಳಿಂದ ಪ್ರವಾಸಿಗರು ಬರ್ತಾರೆ. ಪ್ರತಿನಿತ್ಯ ದೊಡ್ಡ ಮಟ್ಟದಲ್ಲಿ ವ್ಯವಹಾರ ಕೂಡಾ ಈ ರೆಸಾರ್ಟ್ ಗಳಲ್ಲಿ ನಡೆಯುತ್ತದೆ. ಆದ್ರೆ ಈ ರೆಸಾರ್ಟ್ ಗಳು ಕಾನೂನು ಪ್ರಕಾರ ನಡೆದಿದ್ದರೆ ಯಾವುದೇ ಸಮಸ್ಯೆ ಇರ್ತಿರಲಿಲ್ಲಾ. ಆದ್ರೆ ಕೆಲ ರೆಸಾರ್ಟ್ ಗಳು, ಸರ್ಕಾರಿ ಭೂಮಿಯನ್ನು ಅದರಲ್ಲೂ ಅರಣ್ಯ ಇಲಾಖೆಯ ಭೂಮಿ ಮತ್ತು ಕಂದಾಯ ಇಲಾಖೆಯ ಭೂಮಿಯನ್ನು ಅತಿಕ್ರಮಣ ಮಾಡಿರೋದು ಸ್ವತ ಅಧಿಕಾರಿಗಳು ನೀಡಿರುವ ವರದಿಯಿಂದ ಬಹಿರಂಗವಾಗಿದೆ.

ಹೌದು ಕೊಪ್ಪಳ ತಾಲೂಕಿನಲ್ಲಿರುವ ಹಂಪಿ ರೆಸಾರ್ಟ್, ಹಂಪಿ ಫೆದರ್ಸ್, ಹಂಪಿ ವಿಸ್ಕರ್ಸ್ ರೆಸಾರ್ಟ್ ಗಳು, ಕಂದಾಯ ಮತ್ತು ಅರಣ್ಯ ಇಲಾಖೆಯ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿರೋ ಬಗ್ಗೆ ಅನೇಕ ಸಾಮಾಜಿಕ ಹೋರಾಟಗರರು ಜಿಲ್ಲಾಡಳಿತಕ್ಕೆ, ಪ್ರಾದೇಶಿಕ ಆಯುಕ್ತರಿಗೆ, ಕಂದಾಯ ಇಲಾಖೆಗೆ ಅನೇಕ ದೂರುಗಳನ್ನು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಕೊಪ್ಪಳ ಸಹಾಯಕ ಆಯುಕ್ತರು, ಮೂರು ರೆಸಾರ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ನಂತರ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದು, ವರದಿಯಲ್ಲಿ ಮೂರು ರೆಸಾರ್ಟ್ ಗಳು, ತಮ್ಮ ನಿಗದಿತ ಸ್ಥಳವನ್ನು ಹೊರತು ಪಡಿಸಿ, ಅರಣ್ಯ ಮತ್ತು ಕಂದಾಯ ಇಲಾಖೆಯ ಭೂಮಿಯನ್ನು ಅತಿಕ್ರಮಣ ಮಾಡಿ, ಕಟ್ಟಡ ನಿರ್ಮಾಣ ಮಾಡಿದ್ದಾರೆ ಅಂತ ವರದಿ ನೀಡಿದ್ದಾರೆ.

Also Read: ತಮಿಳುನಾಡಿನಿಂದ ಎನ್​ಒಸಿ ತರಿಸಿಕೊಡಿ, ಮೇಕೆದಾಟುವಿಗೆ ಕೇಂದ್ರದಿಂದ ಅನುಮತಿ ಕೊಡಿಸುತ್ತೇವೆ – ತೇಜಸ್ವಿ ಸೂರ್ಯ

ಹಂಪಿ ಬುಲ್ಡೋರ್ಸ್ ರೆಸಾರ್ಟ್, ತುಂಗಭದ್ರಾ ನದಿಯಿಂದ ಕೇವಲ ನೂರು ಮೀಟರ್​​​ ದೂರದಲ್ಲಿದೆ. ಆದ್ರೆ ಈ ಪ್ರದೇಶ ನೀರು ನಾಯಿ ಸಂರಕ್ಷಿತ ಪ್ರದೇಶವಾಗಿದೆ. ಆದ್ರು ಕೂಡಾ ರೆಸಾರ್ಟ್ ಗಳ ಕೆಲ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ ಅಂತ ವರದಿ ನೀಡಿದ್ದಾರೆ. ವಿಸ್ಕರ್ಸ್ ಮತ್ತು ಫೆದರ್ ರೆಸಾರ್ಟ್ ನವರು ತಮಗೆ ಪರವಾನಗಿ ನೀಡಿದ ಪ್ರದೇಶವನ್ನು ಹೊರತು ಪಡಿಸಿ ಬೇರೆ ಪ್ರದೇಶದಲ್ಲಿ ಮತ್ತು ಹಳ್ಳದಲ್ಲಿ ರೆಸಾರ್ಟ್ ನಿರ್ಮಾಣ ಮಾಡಿದ್ದಾರೆ ಅಂತ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು.

ವರದಿಯ ಅನ್ವಯ ಕೊಪ್ಪಳ ಜಿಲ್ಲಾಧಿಕಾರಿ ನಳಿನ್ ಅತುಲ್, 2023 ರ ಡಿಸೆಂಬರ್ 29 ರಂದು ಆದೇಶವನ್ನು ಹೊರಡಿಸಿದ್ದು, ಹಂಪಿ ರೆಸಾರ್ಟ್, ವಿಸ್ಕರ್ಸ್, ಫೆದರ್ಸ್ ರೆಸಾರ್ಟ್ ನವರು ಅನಧಿಕೃತವಾಗಿ ಸರಕಾರಿ, ಅರಣ್ಯ ಜಮೀನುಗಳನ್ನು ಒತ್ತುವರಿ ಮಾಡಿಕೊಂಡು ರೆಸಾರ್ಟ್ ನಡೆಸುತ್ತಿರುವ ಕ್ಷೇತ್ರವನ್ನು ಒತ್ತುವರಿಯಿಂದ ತೆರವುಗೊಳಿಸಿ, ಕರ್ನಾಟಕ ಭೂ ಕಂದಾಯ ಕಾಯ್ದೆ 1984 ರ ಕಲಂ 192 ಓ ಅನ್ವಯ ಕ್ರಮ ಕೈಗೊಂಡು, ತೆರವುಗೊಳಿಸಿದ ಬಗ್ಗೆ ಪೋಟೋ ಪ್ರತಿ ಹಾಗೂ ದಾಖಲೆಗಳೊಂದಿಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ ಅಂತ ಕೊಪ್ಪಳ ಸಹಾಯಕ ಆಯುಕ್ತರಿಗೆ ಆದೇಶ ಮಾಡಿದ್ದರು. ಆದ್ರೆ ಇಲ್ಲಿವರೆಗೆ ಒತ್ತುವರಿ ತೆರವುಗೊಳಿಸಲಾಗಿಲ್ಲ. ಇದೇ ಕಾರಣಕ್ಕೆ ಇದೀಗ ಕೊಪ್ಪಳ ಜಿಲ್ಲಾಧಿಕಾರಿ ವಿರುದ್ದವೇ, ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ, ಸಿಬಿಐಗೆ ದೂರು ನೀಡಿದ್ದಾರೆ.

ಹೌದು ಕೊಪ್ಪಳ ಜಿಲ್ಲಾಧಿಕಾರಿ ನಳಿನ್ ಅತುಲ್ ವಿರುದ್ದ ಮೊನ್ನೆ ಮಂಗಳವಾರ ಬೆಂಗಳೂರಿನಲ್ಲಿರುವ ಸಿಬಿಐ ಕಚೇರಿಗೆ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದು, ಜಿಲ್ಲಾಧಿಕಾರಿ ವಿರುದ್ದ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹಿಸಿದ್ದಾರೆ. ಇದಕ್ಕೆ ಕಾರಣ, ಸ್ವತಃ ತಾವೇ ಆದೇಶ ಹೊರಡಿಸಿದ್ದರು ಕೂಡಾ ಇಲ್ಲಿವರಗೆ ಅಕ್ರಮ ಭೂಮಿಯ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿಲ್ಲ. ಅಕ್ರಮ ಮಾಡಿರೋ ರೆಸಾರ್ಟ್ ಮಾಲೀಕರ ವಿರುದ್ದ ಯಾವುದೇ ಕ್ರಮವನ್ನು ಜಿಲ್ಲಾಧಿಕಾರಿ ಕೈಗೊಂಡಿಲ್ಲ. ಬದಲಾಗಿ ರೆಸಾರ್ಟ್ ಮಾಲೀಕರ ಜೊತೆ ಶಾಮೀಲಾಗಿರುವ ಸಂಶಯ ವ್ಯಕ್ತವಾಗುತ್ತಿದೆ ಅಂತ ದಿನೇಶ್ ಕಲ್ಲಹಳ್ಳಿ ಆರೋಪಿಸಿದ್ದಾರೆ.

ಆದ್ರೆ ಈ ಆರೋಪದ ಬಗ್ಗೆ ನಮ್ಮ ಕೊಪ್ಪಳ ಟಿವಿ9 ಪ್ರತಿನಿಧಿ ಸಂಜಯ್, ಜಿಲ್ಲಾಧಿಕಾರಿ ನಳಿನ್ ಅತುಲ್ ಅವರನ್ನು ಸಂಪರ್ಕಿಸಿದಾಗ ಭೂಮಿ ಒತ್ತುವರಿ ಸರ್ವೇಯಲ್ಲಿ ಕೆಲ ಲೋಪದೋಷಗಳು ಆಗಿವೆ ಅಂತ ರೆಸಾರ್ಟ್ ಮಾಲೀಕರು ಹೇಳಿದ್ದಾರೆ. ಜೊತೆಗೆ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ನ್ಯಾಯಲಯದ ಆದೇಶ ಕೂಡಾ ಇದೆ. ಆದ್ರೆ ನ್ಯಾಯಾಲಯದ ಆದೇಶದ ಬಗ್ಗೆ ನಮ್ಮ ಅಧಿಕಾರಿಗಳು ಸರಿಯಾಗಿ ಮಾಹಿತಿಯನ್ನು ಈ ಹಿಂದೆ ನೀಡಿರಲಿಲ್ಲ. ಇದೀಗ ಸರ್ವೇ ಬಗ್ಗೆ ರೆಸಾರ್ಟ್ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿರೋದರಿಂದ ಮತ್ತೊಮ್ಮೆ ಸರ್ವೇ ನಡೆಸಿ, ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. ಇನ್ನು ನನ್ನ ವಿರುದ್ದ ದೂರು ನೀಡಿದ್ದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ದೂರು ನೀಡಿದ್ದರೆ ನೀಡಲಿ ಅಂತ ಪ್ರತಿಕ್ರಿಯೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ