ತಮಿಳುನಾಡಿನಿಂದ ಎನ್ಒಸಿ ತರಿಸಿಕೊಡಿ, ಮೇಕೆದಾಟುವಿಗೆ ಕೇಂದ್ರದಿಂದ ಅನುಮತಿ ಕೊಡಿಸುತ್ತೇವೆ: ತೇಜಸ್ವಿ ಸೂರ್ಯ
Mekedatu Project: ಹೇಗೂ ಕಾಂಗ್ರೆಸ್ನವರು ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟದಿಂದಾಗಿ ಡಿಎಂಕೆ ಜತೆ ಸ್ನೇಹ ಹೊಂದಿದ್ದಾರೆ. ಹೀಗಾಗಿ ಅದೇ ಪಕ್ಷದವರಾಗಿರುವ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರಿಂದ ಎನ್ಒಸಿ ತರುವುದು ಕಾಂಗ್ರೆಸ್ ಸರ್ಕಾರಕ್ಕೆ ಕಷ್ಟವೇನಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಎನ್ಒಸಿ ತರಿಸಿಕೊಡಲಿ. ಕೇಂದ್ರದಿಂದ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇವೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಬೆಂಗಳೂರು, ಫೆಬ್ರವರಿ 15: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಂದ ಕರ್ನಾಟಕ ಕಾಂಗ್ರೆಸ್ ಸರ್ಕಾರವು (Karnataka Government) ನಿರಾಕ್ಷೇಪಣಾ ಪ್ರಮಾಣಪತ್ರ (NOC) ಪಡೆದು ಒದಗಿಸಿದಲ್ಲಿ ಮೇಕೆದಾಟು ಅಣೆಕಟ್ಟೆ (Mekedatu Project) ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಒದಗಿಸಿಕೊಡುವುದಾಗಿ ಬೆಂಗಳೂರು ದಕ್ಷಿಣದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿದ್ದಾರೆ. ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಸದಸ್ಯ ಪಕ್ಷವಾಗಿರುವ ಡಿಎಂಕೆ ತಮಿಳುನಾಡಿನಲ್ಲಿ ಅಧಿಕಾರದಲ್ಲಿದೆ. ಕಾಂಗ್ರೆಸ್ ಪಕ್ಷದ ಸ್ನೇಹಿತರಾಗಿರುವ ಸ್ಟಾಲಿನ್ ಬಳಿ ಮೇಕೆದಾಟು ಯೋಜನೆಗೆ ಎನ್ಒಸಿ ಒದಗಿಸಿಕೊಡಲಿ ಎಂದು ಸೂರ್ಯ ಹೇಳಿದ್ದಾರೆ.
ಮೇಕೆದಾಟು ಅಣೆಕಟ್ಟೆ ನಿರ್ಮಾಣವು ಮುಖ್ಯವಾಗಿ ಕುಡಿಯುವ ನೀರಿನ ಯೋಜನೆಯಾಗಿದೆ. ಕಾವೇರಿ ಜಲಾನಯನ ಪ್ರದೇಶದಿಂದ ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರಿನ ಪೂರೈಕೆಯ ಅಗತ್ಯವನ್ನು ಪೂರೈಸುವುದಕ್ಕಾಗಿ ಕರ್ನಾಟಕ ಸರ್ಕಾರ ಈ ಯೋಜನೆ ಹಮ್ಮಿಕೊಂಡಿದೆ.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ತಮಿಳುನಾಡು ಸರ್ಕಾರದಿಂದ ಮೇಕೆದಾಟು ಯೋಜನೆಗೆ ಎನ್ಒಸಿ ಪಡೆಯಲಿ. ‘ಇಂಡಿಯಾ’ ಬ್ಲಾಕ್ ಅಡಿಯಲ್ಲಿ ಕಾಂಗ್ರೆಸ್ ಹಗೂ ಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ, ಅದರಿಂದ ಸ್ವಲ್ಪ ಸುಲಭವಾಗಬಹುದು. ಹಾಗೆ ಮಾಡಿದರೆ, ಕೇಂದ್ರ ಸರ್ಕಾರದಿಂದ ನಾವು ಯೋಜನೆಗೆ ಅನುಮತಿ ಪಡೆಯುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ಸೂರ್ಯ ಹೇಳಿದ್ದಾರೆ. ಕನ್ನಡ ಮಾಧ್ಯಮವೊಂದರ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಸೂರ್ಯ ಈ ರೀತಿ ಉತ್ತರಿಸಿದ್ದಾರೆ.
ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್: ರಾಜ್ಯ ಸರ್ಕಾರದ ಅಂಗಳದಲ್ಲಿದೆ ಎಂದ ಸೂರ್ಯ
ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್ ಕಚೇರಿ ಸ್ಥಾಪನೆಯ ಸ್ಥಿತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ತೇಜಸ್ವಿ ಸೂರ್ಯ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರ ಸಲಹೆಯಂತೆ ಅಮೆರಿಕದ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇನೆ. ಪ್ರಸ್ತಾಪವನ್ನು ಅನುಸರಿಸುತ್ತಿದ್ದೇನೆ. ಕೇಂದ್ರ ಸರ್ಕಾರದ ಕಡೆಯಿಂದ ಇರು ಎಲ್ಲ ಅಡೆತಡೆಗಳನ್ನೂ ನಿರ್ಮೂಲನೆ ಮಾಡಲಾಗಿದೆ. ಸದ್ಯ ಕಾನ್ಸುಲೇಟ್ ಸ್ಥಾಪನೆ ವಿಚಾರ ರಾಜ್ಯ ಸರ್ಕಾರದ ಅಂಗಳದಲ್ಲಿದೆ ಎಂದು ಹೇಳಿದ್ದಾರೆ.
ಎರಡು ಮೂರು ದಿನಗಳ ಹಿಂದಿನವರೆಗೂ, ರಾಜ್ಯ ಸರ್ಕಾರದಿಂದ ಅಮೆರಕದ ಅಧಿಕಾರಿಗಳಿಗೆ ಕಾನ್ಸುಲೇಟ್ ಸ್ಥಾಪನೆ ಸಂಬಂಧ ಲಿಖಿತ ಔಪಚಾರಿಕ ಸಂವಹನ ಆಗಿಲ್ಲ ಎಂದು ಸೂರ್ಯ ತಿಳಿಸಿದ್ದಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ ಮೇಲೆ ಕಣ್ಣು: ಬಜೆಟ್ನಲ್ಲಿ ಸಿಎಂ ಮಹತ್ವದ ಘೋಷಣೆ ಸಾಧ್ಯತೆ
ರಾಜ್ಯ ಸರ್ಕಾರವು ನಗರದಲ್ಲಿ ಭೂಮಿ ಮಂಜೂರು ಮಾಡಬೇಕಾಗಿದೆ. ಜತೆಗೆ ಪ್ರಸ್ತಾವನೆಯನ್ನು ಮುಂದಕ್ಕೆ ಒಯ್ಯಬೇಕಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಅನುಷ್ಠಾನಗೊಳಿಸುವ ಹೊಣೆಯನ್ನು ಕರ್ನಾಟಕ ಸರ್ಕಾರವು ಸಂಪೂರ್ಣವಾಗಿ ಭಾರತೀಯ ರೈಲ್ವೇಗೆ ಬಿಟ್ಟುಕೊಟ್ಟರೆ 40 ತಿಂಗಳೊಳಗೆ ಪೂರ್ಣಗೊಳಿಸಬಹುದು ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ