ಅಡ್ಡ ಬಂದ ನಾಗರ ಹಾವು: ಬೈಕ್‌ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಚಿಕ್ಕಮಗಳೂರು ಅಜ್ಜಂಪುರದಲ್ಲಿ ವಿಚಿತ್ರ ಸರಣಿ ಅಪಘಾತ ನಡೆದಿದೆ. ನಾಗರ ಹಾವು ರಸ್ತೆಗೆ ಅಡ್ಡ ಬಂದಾಗ ಬೈಕ್ ಸವಾರರು ಏಕಾಏಕಿ ಬ್ರೇಕ್ ಹಾಕಿದರು. ಇದರಿಂದ ಹಿಂದೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟಕ್ಕೆ ನುಗ್ಗಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲ. ಬೈಕ್ ಸವಾರರಿಗೆ ಸಣ್ಣ ಗಾಯಗಳಾಗಿವೆ.
ಚಿಕ್ಕಮಗಳೂರು, ಜೂ.11: ರಸ್ತೆಗೆ ಏಕಾಏಕಿ ಅಡ್ಡ ಬಂದ ನಾಗರ ಹಾವನ್ನು ತಪ್ಪಿಸಲು ಹೋದ ಬೈಕ್ ಸವಾರನ ಎಡವಟ್ಟಿನಿಂದಾಗಿ, ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಸರಣಿ ಅಪಘಾತ ನಡೆದಿರುವ ವಿಲಕ್ಷಣ ಘಟನೆ ಚಿಕ್ಕಮಗಳೂರಿನ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ. ಅಪಘಾತದ ರಭಸಕ್ಕೆ ಕೆಎಸ್‌ಆರ್‌ಟಿಸಿ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟಕ್ಕೆ ನುಗ್ಗಿದ್ದು, ಅದೃಷ್ಟವಶಾತ್ ಭಾರಿ ಪ್ರಾಣಾಪಾಯವೊಂದು ಕೂದಲೆಳೆತದಲ್ಲಿ ತಪ್ಪಿದೆ. ಬೈಕ್ ಸವಾರರಿಬ್ಬರು ನಾರಾಯಣಪುರ ಗೇಟ್ ರಸ್ತೆಯಲ್ಲಿ ಚಲಿಸುತ್ತಿದ್ದಾಗ ಬೃಹತ್ ಗಾತ್ರದ ನಾಗರ ಹಾವೊಂದು ಏಕಾಏಕಿ ರಸ್ತೆಗೆ ಅಡ್ಡ ಬಂದಿದೆ. ಹಾವನ್ನು ಕಂಡು ಆತಂಕಗೊಂಡ ಬೈಕ್ ಚಾಲಕ ತಕ್ಷಣವೇ ರಸ್ತೆ ಮಧ್ಯದಲ್ಲೇ ಜೋರಾಗಿ ಬ್ರೇಕ್ ಹಾಕಿದ್ದಾನೆ. ಈ ವೇಳೆ ಅದೇ ಮಾರ್ಗದಲ್ಲಿ ಬೈಕ್‌ನ ಹಿಂಬದಿಯಲ್ಲೇ ಬರುತ್ತಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್ ಚಾಲಕನಿಗೆ ತಕ್ಷಣವೇ ಬ್ರೇಕ್ ಹಾಕಲು ಸಾಧ್ಯವಾಗದೆ ಮುಂದಿದ್ದ ಬೈಕ್‌ಗೆ ಜೋರಾಗಿ ಗುದ್ದಿದೆ. ಬೈಕ್‌ಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಬಸ್ ಚಾಲಕ ವಾಹನವನ್ನು ನಿಯಂತ್ರಿಸಲು ಒತ್ತಡದಲ್ಲಿ ಬ್ರೇಕ್ ಹಾಕಿದ್ದಾನೆ. ಆದರೆ, ವೇಗವಾಗಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ರಸ್ತೆ ಬದಿಯಲ್ಲಿದ್ದ ತೋಟದ ಬೇಲಿಯನ್ನು ಮುರಿದುಕೊಂಡು ಒಳಗಡೆ ನುಗ್ಗಿದೆ. ಅಪಘಾತದ ಸಮಯದಲ್ಲಿ ಬಸ್‌ನಲ್ಲಿ ಹಲವಾರು ಪ್ರಯಾಣಿಕರಿದ್ದರೂ, ಚಾಲಕನ ಸಮಯಪ್ರಜ್ಞೆಯಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸ್ ತೋಟಕ್ಕೆ ನುಗ್ಗುತ್ತಿದ್ದಂತೆ ಒಳಗಿದ್ದ ಪ್ರಯಾಣಿಕರು ಆತಂಕದಿಂದ ಕಿರುಚಾಡಿದ್ದಾರೆ. ಈ ಭೀಕರ ಅಪಘಾತದಲ್ಲಿ ಬೈಕಿನಲ್ಲಿದ್ದ ಇಬ್ಬರು ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅಜ್ಜಂಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಜ್ಜಂಪುರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

