ಕೊಪ್ಪಳ, ನವೆಂಬರ್ 1: ನೀವೆನಾದರೂ ಎಗ್ ರೈಸ್, ಆಮ್ಲೆಟ್ ಪ್ರೀಯರಾಗಿದ್ದೀರಾ? ಹಾಗಾದರೆ ನೀವು ಬಾಯಿ ಚಪ್ಪರಿಸಿಕೊಂಡು ತಿನ್ನುವ ಮೊದಲು ಸ್ವಲ್ಪ ಯೋಚಿಸಿ. ಯಾಕೆಂದರೆ, ಕೊಪ್ಪಳ ನಗರದಲ್ಲಿ ಕೆಲ ಬೀದಿ ಬದಿ ಹೋಟೆಲ್ ಮಾಲೀಕರು, ಎಗ್ ರೈಸ್ ಮತ್ತು ಆಮ್ಲೆಟ್ಗೆ ಕೊಳತೆ ಮೊಟ್ಟೆಗಳನ್ನು ಬಳಕೆ ಮಾಡುತ್ತಿದ್ದಾರೆ. ಹೆಚ್ಚು ಲಾಭ ಗಳಿಸುವ ಉದ್ದೇಶದಿಂದ ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕೊಳೆತ ಮೊಟ್ಟೆಗಳನ್ನು ಬಳಸುತ್ತಿದ್ದಾರೆ.
ಹೆಚ್ಚಿನ ಜನರು ಎಗ್ ರೈಸ್ ಮತ್ತು ಆಮ್ಲೆಟ್ಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆರೋಗ್ಯಕ್ಕೂ ಕೂಡಾ ಮೊಟ್ಟೆಗಳು ಉತ್ತಮವಾಗಿದ್ದರಿಂದ ಹೆಚ್ಚಿನ ಜನರು ಇವುಗಳನ್ನು ಸೇವಿಸುತ್ತಾರೆ. ಆದರೆ, ನೀವು ತಿನ್ನುವ ಎಗ್ ರೈಸ್, ಆಮ್ಲೆಟ್ ಎಷ್ಟು ಸುರಕ್ಷಿತ ಎಂದು ಕೇಳಿದರೆ ಬೆಚ್ಚಿಬೀಳುವ ಸರದಿ ನಿಮ್ಮದಾಗಲಿದೆ. ಕೊಪ್ಪಳ ನಗರದಲ್ಲಿ ಕೆಲ ಬೀದಿಬದಿ ಹೋಟೆಲ್ನವರು ಎಗ್ ರೈಸ್, ಆಮ್ಲೆಟ್ ಮಾಡಲು ಕೊಳೆತಿರುವ, ಒಡೆದಿರುವ ಮೊಟ್ಟೆಗಳನ್ನು ಬಳಕೆ ಮಾಡುತ್ತಿದ್ದಾರೆ.
ಯಾವುದೇ ಮೊಟ್ಟೆಯಾದರೂ ಅದು ಒಡೆದ ಮೇಲೆ ಬೇಗನೆ ಬಳಸಬೇಕು. ಮೂವತ್ತು ನಿಮಿಷ ಮೀರಿದರೆ ಅದು ಬಳಕೆಗೆ ಯೋಗ್ಯವಲ್ಲ. ಇನ್ನು ಕೊಳತೆ ಮೊಟ್ಟೆಗಳನ್ನು ಕೂಡಾ ಬಳಕೆ ಮಾಡಬಾರದು. ಆದರೆ ಗಂಟೆಗಳ ಹಿಂದೆಯೇ ಒಡೆದಿರುವುದು, ಕೆಟ್ಟಿರುವ ಮೊಟ್ಟೆಗಳನ್ನು ತಗೆದುಕೊಂಡು ಹೋಗಿ ಅನೇಕ ಹೋಟೆಲ್ನವರಿಗೆ ಮಾರಾಟ ಮಾಡುತ್ತಿರುವ ದಂಧೆ ಕೊಪ್ಪಳ ನಗರದಲ್ಲಿ ನಡೆಯುತ್ತಿದೆ.
ಕೊಪ್ಪಳ ನಗರದಲ್ಲಿ ಜಿಲಾನಿ ಎಂಬ ವ್ಯಕ್ತಿಯೋರ್ವ, ಬೈಕ್ ಮೇಲೆ ಮೊಟ್ಟೆಗಳನ್ನು ತಗೆದುಕೊಂಡು ಹೋಗುತ್ತಿದ್ದ. ಆತನ ಮೇಲೆ ಅನುಮಾನಗೊಂಡಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು, ಆತ ತಗೆದುಕೊಂಡು ಹೋಗುತ್ತಿದ್ದ ಮೊಟ್ಟೆಗಳನ್ನು ಪರಿಶೀಲಿಸಿದ್ದಾರೆ. ಅವು ಕೊಳೆತ ಮೊಟ್ಟೆಗಳಾಗಿದ್ದವು. ಹೀಗಾಗಿ ಅಧಿಕಾರಿಗಳು ಕೊಳೆತ ಮೊಟ್ಟೆಗಳನ್ನು ಎಲ್ಲಿಗೆ ತಗೆದುಕೊಂಡು ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಆತ, ಎಗ್ ರೈಸ್ ಹಾಗೂ ಆಮ್ಲೆಟ್ ಅಂಗಡಿಗಳಿಗೆ ಮಾರಾಟ ಮಾಡಲು ತಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ.
ಆತ ನಗರದ ಹೊರವಲಯದಲ್ಲಿರುವ ಪದ್ಮಜಾ ಕೋಳಿ ಫಾರ್ಮ್ನಿಂದ ಕೊಳೆತ ಮೊಟ್ಟೆಗಳನ್ನು ಕಡಿಮೆ ಬೆಲೆಗೆ ತಂದು ಅವುಗಳನ್ನು ಹೋಟೆಲ್ ಮಾಲೀಕರಿಗೆ ನೀಡುತ್ತಿದ್ದ. ಕೋಳಿ ಫಾರ್ಮ್ನವರು ಚೆನ್ನಾಗಿರುವ ಒಂದು ಮೊಟ್ಟೆಯನ್ನು ಆರು ರೂಪಾಯಿಗೆ ಮಾರಾಟ ಮಾಡಿದರೆ, ಕೊಳೆತ ಮೊಟ್ಟೆಗಳನ್ನು ಎರಡು ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಜಿಲಾನಿ ಅವುಗಳನ್ನು ಒಂದು ಮೊಟ್ಟೆಗೆ ಮೂರು ರೂಪಾಯಿಯಂತೆ ಹೋಟೆಲ್ನವರಿಗೆ ಮಾರಾಟ ಮಾಡುತ್ತಿದ್ದ. ಪ್ರತಿನಿತ್ಯ ಕೊಪ್ಪಳ ನಗರದಲ್ಲಿರುವ ಅನೇಕ ಹೋಟೆಲ್ ಮಾಲೀಕರಿಗೆ ಕೊಳೆತ ಮೊಟ್ಟೆಗಳನ್ನು ತಂದು ನೀಡುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಕೋಳಿ ಫಾರ್ಮ್ಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅಧಿಕಾರಿಗಳ ದಾಳಿ ವೇಳೆ ನೂರಾರು ಕೊಳೆತ ಮೊಟ್ಟೆಗಳನ್ನು ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಕೊಳೆತ ಮೊಟ್ಟೆಗಳನ್ನು ಹಾಕಿ ಹೋಟೆಲ್ನವರು ಎಗ್ ರೈಸ್, ಆಮ್ಲೆಟ್ ಮಾಡಿ ಗ್ರಾಹಕರಿಗೆ ನೀಡುತ್ತಿದ್ದಾರೆ. ಇದರಿಂದ ಟೈಫಾಯಿಡ್ ಸೇರಿದಂತೆ ಕೆಲ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಇದನ್ನೂ ಓದಿ: ಕೊಪ್ಪಳಕ್ಕೂ ಕಾಲಿಟ್ಟ ವಕ್ಫ್ ವಿವಾದ: ಸರ್ಕಾರಿ ಜಾಗ, ರೈತರ ಜಮೀನು ಪಹಣಿಯಲ್ಲಿ ವಕ್ಫ್ ಹೆಸರು
ಕಡಿಮೆ ಬೆಲೆಗೆ ಸಿಗುವ ಕೊಳೆತ ಮೊಟ್ಟೆಗಳನ್ನು ಬಳಸಿ ಎಗ್ ರೈಸ್, ಆಮ್ಲೇಟ್ ಮಾಡಿ ಗ್ರಾಹಕರ ಜೀವದ ಜೊತೆ ಚೆಲ್ಲಾಟವಾಡುವವರನ್ನು ಪತ್ತೆ ಮಾಡಿ ಅವರ ಮೇಲೆ ಆಹಾರ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ