ಕೊಪ್ಪಳ, ನ.22: ಇತ್ತೀಚೆಗೆ ಸರ್ಕಾರಿ ಶಾಲೆಗಳು ಬಂದಾಗುತ್ತಿದ್ದರೆ, ನಾಯಿ ಕೊಡೆಗಳಂತೆ, ಖಾಸಗಿ ಶಾಲೆಗಳು ಆರಂಭವಾಗುತ್ತಿವೆ. ಅನೇಕ ಕಡೆ ಸರ್ಕಾರಿ ಶಾಲೆಗೆ ಹೋಗಲು ಹೆಚ್ಚಿನ ಮಕ್ಕಳು ಸಿದ್ದರಿದ್ದರು ಕೂಡಾ, ಶಾಲೆಯಲ್ಲಿ ಕೂತು ಪಾಠ ಕೇಳಲು ಭಯ ಪಡುತ್ತಿದ್ದಾರೆ. ಅನೇಕ ಕಡೆ ಸರ್ಕಾರಿ ಶಾಲೆಯಲ್ಲಿ (Government Schools) ಓದುವ ಮಕ್ಕಳ ಜೀವಕ್ಕೆ ಗ್ಯಾರಂಟಿಯೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಹೌದು ಕೊಪ್ಪಳ (Koppal) ಜಿಲ್ಲೆಯ ಹಲವೆಡೆ ಸರ್ಕಾರಿ ಶಾಲೆಯ ಕಟ್ಟಡಗಳು ಬೀಳುವ ಹಂತದಲ್ಲಿವೆ. ಆದರೂ ಮಕ್ಕಳು ಅಂಗೈಯಲ್ಲಿ ಜೀವ ಹಿಡಿದುಕೊಂಡು, ಜೀವ ಭಯದಲ್ಲಿಯೇ ಪಾಠ ಕೇಳಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಕೊಪ್ಪಳ ನಗರದಿಂದ ಕೂಗಳತೆ ದೂರದಲ್ಲಿ ಬಹದ್ದೂರಬಂಡಿ ಅನ್ನೋ ಗ್ರಾಮವಿದೆ. ಗ್ರಾಮದಲ್ಲಿ ಒಂದರಿಂದ ಎಂಟನೇ ತರಗತಿವರಗೆ ಸರ್ಕಾರಿ ಶಾಲೆಯಿದೆ. ಎಂಟು ಜನ ಶಿಕ್ಷಕರು ಇದ್ದಾರೆ. ಇನ್ನು ಶಾಲೆಗೆ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ ಬರೋಬ್ಬರಿ 321 ಇದೆ. ಇನ್ನು ಶಾಲೆಯಲ್ಲಿ ಎಂಟು ಕೊಠಡಿಗಳು ಇವೆ. ಆದರೆ ಬಳಕೆಗೆ ಯೋಗ್ಯವಾಗಿರೋದು ಕೇವಲ ಮೂರೇ ಕೊಠಡಿಗಳು ಮಾತ್ರ. ಇನ್ನುಳಿದ ಕೊಠಡಿಗಳು ಯಾವಾಗ ಬೀಳುತ್ತವೆ ಅನ್ನೋದು ಯಾರಿಗೊ ಗೊತ್ತಿಲ್ಲಾ. ಆದರೆ ಬೀಳುವ ಹಂತದಲ್ಲಿ ಇರೋ ಕೊಠಡಿಯಲ್ಲಿಯೇ ಮಕ್ಕಳು ಪಾಠ ಕೇಳಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಹೌದು ಬಹದ್ದೂರಬಂಡಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂರಾರು ವಿದ್ಯಾರ್ಥಿಗಳು ಪ್ರತನಿತ್ಯ ಜೀವ ಭಯದಲ್ಲಿಯೇ ಶಾಲೆಗೆ ಬರ್ತಾರೆ. ಜೀವ ಭಯದಲ್ಲಿಯೇ ಪಾಠ ಕೇಳುತ್ತಿದ್ದಾರೆ. ಒಂದು ಸಲ ಕಟ್ಟಟದ ಮಲ್ಛಾವಣಿ, ಮತ್ತೊಂದಡೆ ಶಿಕ್ಷಕರನ್ನು ನೋಡಿ ಪಾಠ ಕೇಳುತ್ತಿದ್ದಾರೆ. ಕೆಲವೇ ವರ್ಷಗಳ ಹಿಂದೆ ನಿರ್ಮಾಣವಾಗಿರುವ ಅನೇಕ ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟಿವೆ. ಮಲ್ಛಾವಣಿಯ ಸಿಮೆಂಟ್ ಉದುರುತ್ತಿದೆ, ಕಬ್ಬಿಣದ ರಾಡ್ ಗಳು ಕಾಣ್ತಿವೆ. ಈ ಹಿಂದೆ ಅನೇಕ ಬಾರಿ ಮೇಲ್ಛಾವಣಿಯ ಸಿಮೆಂಟ್ ವಿದ್ಯಾರ್ಥಿಗಳ ಮೇಲೆ ಉದುರಿಬಿದ್ದು, ಅನೇಕ ವಿದ್ಯಾರ್ಥಿಗಳು, ಶಿಕ್ಷಕರು ಗಾಯಗೊಂಡಿರುವ ಘಟನೆಗಳು ಕೂಡಾ ನಡೆದಿವೆಯಂತೆ. ಹೀಗಾಗಿ ಕೊಠಡಿಗಳು ಯಾವಾಗ ಬೀಳುತ್ತವೆ ಅನ್ನೋ ಭಯದಲ್ಲಿಯೇ ಮಕ್ಕಳು ಶಾಲೆಯಲ್ಲಿ ಪಾಠ ಕೇಳುತ್ತಿದ್ದಾರೆ.
ಇನ್ನು ಗ್ರಾಮದಲ್ಲಿ 32 ಲಕ್ಷ ವೆಚ್ಚದಲ್ಲಿ ಮೂರು ಹೊಸ ಕೊಠಡಿಗಳ ನಿರ್ಮಾಣ ಕಾರ್ಯ 2021 ರಲ್ಲಿಯೇ ಆರಂಭವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯ ಅನುಧಾನದಲ್ಲಿ ನಿರ್ಮಿತಿ ಕೇಂದ್ರ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದೆ. ಆದರೆ ಎರಡು ವರ್ಷವಾದ್ರು ಕಟ್ಟಡ ನಿರ್ಮಾಣ ಪೂರ್ಣವಾಗಿಲ್ಲಾ. ಇನ್ನು ನಿರ್ಮಾಣ ಮಾಡುತ್ತಿರುವ ಕೊಠಡಿಗಳು ಕೂಡಾ ತುಂಬಾ ಕಳಪೆಯಾಗಿವೆ. ಯಾವುದೇ ಗುಣಮಟ್ಟದ ವಸ್ತುಗಳನ್ನು ಬಳಸುತ್ತಿಲ್ಲಾ. ಹೀಗಾಗಿ ಹೊಸ ಕಟ್ಟಡಗಳು ನಿರ್ಮಾಣವಾದ್ರು ಕೂಡಾ ಬಳಕೆಗೆ ಬರೋದು ಕೆಲವೇ ತಿಂಗಳು ಮಾತ್ರ. ಹೀಗಾಗಿ ಕಟ್ಟಡ ನಿರ್ಮಾಣ ಕಾರ್ಯ ಗುಣಮಟ್ಟದಿಂದ ಕೂಡಿರಬೇಕು. ಬೇಗನೆ ಕಟ್ಟಡವನ್ನು ನಿರ್ಮಾಣ ಮಾಡಬೇಕು ಅಂತ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇನ್ನು ಹೊಸ ಕಟ್ಟಡ ನಿರ್ಮಾಣ ಬೇಗನೆ ಪೂರ್ಣಗೊಳಿಸಬೇಕು ಅಂತ ಆಗ್ರಹಿಸಿ ನಿನ್ನೆಯಿಂದ ಬಹದ್ದೂರಬಂಡಿಯ ಜನ ಶಾಲೆಯಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ಮಕ್ಕಳು ಜೀವ ಭಯದಲ್ಲಿ ಪಾಠ ಕೇಳುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ್ ರಿಗೆ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಮಾಡಿದ್ದೇವೆ. ಆದರೆ ಮಕ್ಕಳ ಬಗ್ಗೆ ಯಾರು ಕೂಡಾ ಚಿಂತಿಸುತ್ತಿಲ್ಲ ಅಂತ ಆರೋಪಿಸಿ ಪಾಲಕರು ಮತ್ತು ಗ್ರಾಮದ ಜನರು ಶಾಲೆಯಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ತಮ್ಮ ಬೇಡಿಕೆ ಈಡೇರುವವರಗೆ ಧರಣಿ ಕೈಬಿಡೋದಿಲ್ಲಾ ಅಂತಿದ್ದಾರೆ. ಇನ್ನು ಗ್ರಾಮಸ್ಥರ ಧರಣಿ ಸತ್ಯಾಗ್ರಹಕ್ಕೆ ವಿದ್ಯಾರ್ಥಿಗಳು ಕೂಡಾ ಸಾಥ್ ನೀಡಿದ್ದಾರೆ.
ಸರ್ಕಾರಿ ಶಾಲೆಗೆ ಹೆಚ್ಚಿನ ಮಕ್ಕಳನ್ನು ಪಾಲಕರು ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ನಮ್ಮೂರಲ್ಲಿ ಶಾಲೆಗೆ ಹೋಗಲು ಅನೇಕ ಮಕ್ಕಳು ಸಿದ್ದರಿದ್ದರು ಕೂಡಾ ಶಾಲೆಗೆ ಹೋಗಲು ಭಯ ಪಡುತ್ತಿದ್ದಾರೆ. ಈಗಾಗಲೇ ಅನೇಕ ಮಕ್ಕಳು ಸರ್ಕಾರಿ ಶಾಲೆ ಬಿಟ್ಟು ಖಾಸಗಿ ಶಾಲೆಗೆ ಹೋಗುತ್ತಿದ್ದಾರೆ. ನಮ್ಮೂರು ಸರ್ಕಾರಿ ಶಾಲೆಯ ಮಕ್ಕಳು ಜೀವ ಭಯದಲ್ಲಿ ಪಾಠ ಕೇಳುತ್ತಿದ್ದಾರೆ. ಹೀಗಾಗಿ ಕೂಡಲೇ ಗುಣಮಟ್ಟದ ಕೊಠಡಿಗಳ ನಿರ್ಮಾಣ ಕಾರ್ಯ ಪೂರ್ಣವಾಗಬೇಕು ಅಂತಿದ್ದಾರೆ ಧರಣಿ ನಡೆಸುತ್ತಿರುವ ಗ್ರಾಮ ಪಂಚಾಯತ್ ಸದಸ್ಯ ಯೋಗಾನಂದ್ ಲೆಬಗೇರಿ.
ಇನ್ನು ಈ ಬಗ್ಗೆ ಪ್ರತಿಕ್ರಿಯೇ ನೀಡಿರುವ ಕೊಪ್ಪಳ ಡಿಡಿಪಿಐ ಶ್ರೀಶೈಲ್ ಬಿರಾದರ್, ಈಗಾಗಲೇ ಕೊಠಡಿಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ನಿರ್ಮಿತಿ ಕೇಂದ್ರಕ್ಕೆ ಹಣ ಕೂಡಾ ನೀಡಿದ್ದೇವೆ. ಆದ್ರೆ ನಿರ್ಮಿತಿ ಕೇಂದ್ರದವರು ಕಟ್ಟಡ ನಿರ್ಮಾಣ ಕಾರ್ಯವನ್ನು ಸರಿಯಾಗಿ ಮಾಡುತ್ತಿಲ್ಲಾ. ಹೀಗಾಗಿ ಅವರ ವಿರುದ್ದ ಕ್ರಮಕ್ಕೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವದು ಅಂತ ಹೇಳಿದ್ದಾರೆ.
ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಅನೇಕ ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಆದರೆ ಅನೇಕ ಕಡೆ ಸರ್ಕಾರಿ ಶಾಲೆಗೆ ಹೋಗಲು ಹೆಚ್ಚಿನ ಮಕ್ಕಳು ಸಿದ್ದರಿದ್ದರು ಕೂಡಾ ಮೂಲಭೂತ ಸೌಲಭ್ಯಗಳು, ಪಾಠ ಕೇಳಲು ಬೇಕಾದ ವಾತಾವರಣ ಇಲ್ಲದೇ ಇರೋದರಿಂದ ಶಾಲೆಗೆ ಹೋಗಲು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದರು ಅಧಿಕಾರಿಗಳು, ಜನಪ್ರತನಿಧಿಗಳು, ಶಿಕ್ಷಣ ಇಲಾಖೆ ಈ ರೀತಿಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ