ಕೊಪ್ಪಳ: ನಿಷೇಧದ ನಡುವೆಯೂ ಹನುಮಮಾಲಾ ವಿಸರ್ಜನೆಗೆ ಭರ್ಜರಿ ಸಿದ್ಧತೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 15, 2021 | 10:49 PM

ಅಂಜನಾದ್ರಿ ಬೆಟ್ಟದ ಬದಲಿಗೆ ನಿಮ್ಮ ಮನೆಗಳಲ್ಲಿಯೇ, ಊರುಗಳಲ್ಲಿಯೇ ಹನುಮಮಾಲೆ ವಿಸರ್ಜನೆ ಮಾಡಿ ಎಂದು ಜಿಲ್ಲಾಡಳಿತ ಸೂಚಿಸಿದೆ.

ಕೊಪ್ಪಳ: ನಿಷೇಧದ ನಡುವೆಯೂ ಹನುಮಮಾಲಾ ವಿಸರ್ಜನೆಗೆ ಭರ್ಜರಿ ಸಿದ್ಧತೆ
ಹನುಮಮಾಲಾ ಧಾರಿಗಳ ಶೋಭಾಯಾತ್ರೆ (ಸಂಗ್ರಹ ಚಿತ್ರ)
Follow us on

ಕೊಪ್ಪಳ: ಅಂಜನಾದ್ರಿ ಬೆಟ್ಟದಲ್ಲಿ ಗುರುವಾರ (ಡಿ 13) ಹನುಮ ಮಾಲಾ ವಿಸರ್ಜನೆಗೆ ಸಂಘಟನೆಗಳು ಸಿದ್ಧತೆಗಳನ್ನು ಮಾಡಿಕೊಂಡಿವೆ. ಹನುಮಮಾಲಾ ವಿಸರ್ಜನೆ ಕಾರ್ಯಕ್ರಮವನ್ನು ಜಿಲ್ಲಾಡಳಿತ ನಿಷೇಧಿಸಿದೆ. ನಿಷೇಧದ ಮಧ್ಯೆಯೂ ಪ್ರಸಾದಕ್ಕಾಗಿ ಸಂಘಟನೆಗಳು 10 ಸಾವಿರ ಲಡ್ಡು ಸಿದ್ಧಪಡಿಸಿವೆ. ಹನುಮಮಾಲಾ ವಿಸರ್ಜನೆಗಾಗಿ ರಾಜ್ಯದ ವಿವಿಧೆಡೆಯಿಂದ ಅಂಜನಾದ್ರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಸಾಧ್ಯತೆಯಿದೆ. ಅಂಜನಾದ್ರಿ ಬೆಟ್ಟದ ಬದಲಿಗೆ ನಿಮ್ಮ ಮನೆಗಳಲ್ಲಿಯೇ, ಊರುಗಳಲ್ಲಿಯೇ ಹನುಮಮಾಲೆ ವಿಸರ್ಜನೆ ಮಾಡಿ ಎಂದು ಜಿಲ್ಲಾಡಳಿತ ಸೂಚಿಸಿದೆ. ಜಿಲ್ಲಾಡಳಿತದ ಆದೇಶದ ನಡುವೆಯೂ ಅಂಜನಾದ್ರಿಗೆ ಬರಲು ಮಾಲಾಧಾರಿಗಳು ನಿರ್ಧರಿಸಿದ್ದಾರೆ. ಅಂಜನಾದ್ರಿ ಬೆಟ್ಟದ ಆಡಳಿತ ಮಂಡಳಿ ಯಾವುದೇ ಪ್ರಸಾದ ವ್ಯವಸ್ಥೆ ಮಾಡಿಕೊಂಡಿಲ್ಲ ಎಂದು ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸ್ಪಷ್ಟಪಡಿಸಿದ್ದಾರೆ. ನಾವು ಯಾವುದೇ ಊಟೋಪಚಾರ, ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಎಲ್ಲರೂ ಕೊವಿಡ್ ನಿಯಮ ಪಾಲಿಸಬೇಕೆಂದು ಹೇಳಿದ್ದಾರೆ.

ವಿಹಿಂಪ ಮನವಿ
ಅಂಜನಾದ್ರಿ ಬೆಟ್ಟದಲ್ಲಿ ನಡೆಯಲಿರುವ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದಲ್ಲಿ 40 ಸಾವಿರಕ್ಕೂ ಹೆಚ್ಚು ಭಕ್ತರು ಸೇರುವ ಸಾಧ್ಯತೆಯಿದೆ. ದೇಗುಲದಲ್ಲಿ ಅರ್ಚಕರ ವ್ಯವಸ್ಥೆಯ ಜೊತೆಗೆ ಕುಡಿಯುವ ನೀರು, ಪ್ರಸಾದ, ವಾಹನ ಪಾರ್ಕಿಂಗ್​ಗೆ ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಮುಖಂಡರು ಮನವಿ ಮಾಡಿದ್ದರು. ಕೊವಿಡ್ ಆತಂಕ ಇರುವ ಕಾರಣ ಕರ್ನಾಟಕದ ವಿವಿಧ ಜಿಲ್ಲೆ ಹಾಗೂ ಕೊಪ್ಪಳ ಜಿಲ್ಲೆಯ ಹನುಮ‌ ಭಕ್ತರು ಹನುಮ ಮಾಲಾ ವಿಸರ್ಜನೆಯನ್ನು ಸಾಂಕೇತಿಕವಾಗಿ ಮನೆಯಲ್ಲಿಯೇ ಆಚರಣೆ ಮಾಡಬೇಕು. ಇತರ ಜಿಲ್ಲೆಯ ಭಕ್ತರಿಗೆ ಪ್ರವೇಶ ನೀಡಬೇಡಿ ಎಂದು ಪೊಲೀಸರಿಗೆ ಜಿಲ್ಲಾಡಳಿತ ಸೂಚಿಸಿದೆ.

ಸಿದ್ಧತೆ
ಅಂಜನಾದ್ರಿ ಬೆಟ್ಟದ ಮೇಲೆ ಹನುಮಮಾಲಾ ವಿಸರ್ಜನೆ, ಪವಮಾನ ಹೋಮ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳಿಗೆ ಸಿದ್ಧ ಮಾಡಿಕೊಳ್ಳಲಾಗಿದೆ. ಸಂಚಾರ ಮಾರ್ಗವನ್ನು ಬದಲಿಸಲು ಪೊಲೀಸರು ಸೂಚಿಸಿದ್ದಾರೆ. ಕೊರೊನಾ ಮಾರ್ಗಸೂಚಿ ಅನುಸರಿಸಿಯೇ ಕಾರ್ಯಕ್ರಮ ನಿರ್ವಹಿಸುತ್ತೇವೆ. ನಿರ್ಬಂಧಗಳನ್ನು ಸಡಿಲಿಸಿ ಎಂದು ಜಿಲ್ಲಾಡಳಿತಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ್ ಮನವಿ ಮಾಡಿದ್ದಾರೆ. ಭಕ್ತರಿಗೆ ಅನ್ನ ಪ್ರಸಾದದ ವ್ಯವಸ್ಥೆ ಮಾಡುತ್ತೇವೆ ಎಂದು ಶಾಸಕ ಪರಣ್ಣ ಮನವಳ್ಳಿ ತಿಳಿಸಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಹನುಮ ಮಾಲಾಧಾರಿಗಳಿಂದ ಸಿದ್ಧರಬೆಟ್ಟದಲ್ಲಿ ನಿಯಮ ಉಲ್ಲಂಘನೆ: ಸ್ಥಳೀಯರ ಆರೋಪ
ಇದನ್ನೂ ಓದಿ: ಲಕ್ಷ ಲಕ್ಷ ಜನ ಧರಿಸುವ ಹನುಮ ಮಾಲೆಯ ರೋಚಕ ಇತಿಹಾಸ!

Published On - 10:48 pm, Wed, 15 December 21