ಕೊಪ್ಪಳ, ಡಿಸೆಂಬರ್ 3: ಒಂದಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು ದೊಡ್ಡ ದೊಡ್ಡ ಟಾರ್ಪಲ್ಗಳನ್ನು ಹಾಕಿ ಭತ್ತವನ್ನು ಸುರಕ್ಷಿತವಾಗಿಡಲು ಹರಸಾಹಸ ಪಡುತ್ತಿದ್ದರೆ, ಇನ್ನೊಂದಡೆ ಮಳೆ ನೀರಿನಿಂದಾಗಿ ಭತ್ತ ಹಾಳಾಗಿ ಹೋಗುತ್ತಿದೆ. ಕೆಲವೆಡೆ ಭತ್ತದ ಬೆಳೆ ನೀರಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದರೆ, ಇನ್ನು ಕೆಲವಡೆ ನೀರು ನಿಂತಿದ್ದರಿಂದ ಭತ್ತ ಮೊಳಕೆಯೊಡೆಯುವ ಸ್ಥಿತಿಯಲ್ಲಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ, ಕಾರಟಗಿ ಮತ್ತು ಕೊಪ್ಪಳ ತಾಲೂಕಿನ ಹಿಟ್ನಾಳ್ ಸೇರಿದಂತೆ ಅನೇಕ ಕಡೆ ಈ ಪರಿಸ್ಥಿತಿ ಉದ್ಭವಿಸಿದೆ.
ಕರ್ನಾಟಕದ ಭತ್ತದ ಕಣಜ ಎಂದೇ ಕರೆಯಲ್ಪಡುವ ಕೊಪ್ಪಳ ಜಿಲ್ಲೆಯಲ್ಲಿ ಸರಿಸುಮಾರು 69 ಸಾವಿರ ಹೆಕ್ಟೇರ್ಗೂ ಹೆಚ್ಚಿನ ಪ್ರದೇಶದಲ್ಲಿ ರೈತರು ಭತ್ತವನ್ನು ಪ್ರಮುಖ ಬೆಳೆಯನ್ನಾಗಿ ಬೆಳೆಯುತ್ತಾರೆ. ಈ ಬಾರಿ ಮಳೆ ಮತ್ತು ತುಂಗಭದ್ರಾ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ಉತ್ತಮ ಬೆಳೆ ಕೂಡಾ ಬಂದಿದೆ. ಆದರೆ ಈಗಾಗಲೇ ಬೆಲೆ ಇಳಿಕೆಯಿಂದ ಕಂಗಾಲಾಗಿದ್ದ ಭತ್ತದ ಬೆಳೆಗಾರರಿಗೆ ಇದೀಗ ಫೆಂಗಲ್ ಚಂಡಮಾರುತದ ಮಳೆಯ ಕಾಟ ಆರಂಭವಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಭತ್ತದ ಕಟಾವು ಆಗಿದ್ದರಿಂದ, ರೈತರು ಭತ್ತವನ್ನು ಒಣಗಿಸುತ್ತಿದ್ದಾರೆ. ಕಟಾವು ಮಾಡಿದ ಭತ್ತವನ್ನು ವ್ಯಾಪರಸ್ಥರು ಹಾಗೆಯೇ ಖರೀದಿಸುವುದಿಲ್ಲ. ಕಟಾವು ಮಾಡಿದ ನಂತರ ನಾಲ್ಕೈದು ದಿನಗಳ ಕಾಲ ಒಣಗಿಸಿ ನಂತರ ಭತ್ತವನ್ನು ರೈತರು ಮಾರಾಟ ಮಾಡುತ್ತಾರೆ. ಹೀಗಾಗಿ ಭತ್ತ ಕಟಾವು ಮಾಡಿದ್ದ ರೈತರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಅನೇಕ ಕಡೆ ತಂದು ಹಾಕಿದ್ದು, ಒಣಗಿಸುತ್ತಿದ್ದರು. ಆದರೆ ಸೋಮವಾರ ಮಧ್ಯಾಹ್ನದಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಕೆಲ ರೈತರು ಟಾರ್ಪಲ್ಗಳನ್ನು ಹಾಕಿ ಭತ್ತವನ್ನು ಸಂರಕ್ಷಿಸುವ ಕೆಲಸ ಮಾಡಿದರೂ ಕೂಡಾ ಸಾಧ್ಯವಾಗುತ್ತಿಲ್ಲ. ಮಳೆ ನೀರು ಭತ್ತದ ರಾಶಿಗೆ ನುಗ್ಗುತ್ತಿದ್ದು ಭತ್ತ ಹಾಳಾಗಿ ಹೋಗುತ್ತಿದೆ.
ರಸ್ತೆಯ ಮೇಲಿನ ನೀರು ಭತ್ತದ ರಾಶಿಗೆ ಹೋಗಿದ್ದರಿಂದ ಸಾಕಷ್ಟ ಭತ್ತ ಕೊಚ್ಚಿಕೊಂಡು ಹೋಗುತ್ತಿದೆ. ಇನ್ನು ಕೆಲ ರೈತರು ಸರಿಯಾದ ಸಮಯಕ್ಕೆ ಭತ್ತವನ್ನು ಮುಚ್ಚಲಿಕ್ಕೆ ಆಗದೇ ಇದ್ದುದರಿಂದ ಹಲವಡೆ ಭತ್ತ ನೀರಿನಿಂದ ತೊಯ್ದಿದ್ದು, ಹಾಳಾಗಿ ಹೋಗುತ್ತಿದೆ. ಇನ್ನು ಎರಡು ದಿನ ಇದೇ ರೀತಿ ಮಳೆಯಾದರೆ ರಸ್ತೆಯಲ್ಲಿಯೇ ಭತ್ತ ಮೊಳಕೆಯೊಡೆಯುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ಇನ್ನೇನು ಮಾರಾಟ ಮಾಡಬೇಕು ಎಂಬ ಸಮಯಕ್ಕೆ ಮಳೆಯಾಗುತ್ತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಫೆಂಗಲ್ ಚಂಡಮಾರುತ ಮಳೆಯ ಅಬ್ಬರ: 10 ಜಿಲ್ಲೆಗಳಲ್ಲಿ ಶಾಲೆ, ಕಾಲೇಜುಗಳಿಗೆ ರಜೆ
ಕೊಪ್ಪಳ ಜಿಲ್ಲೆಯ ಭತ್ತದ ಬೆಳೆಗಾರರಿಗೆ ಮಳೆ ದೊಡ್ಡ ಮಟ್ಟದ ಆಘಾತ ನೀಡಿದೆ. ಮಳೆ ಇದೇ ರೀತಿ ಮುಂದುವರಿದರೆ ರೈತರಿಗೆ ದೊಡ್ಡ ಪ್ರಮಾಣದ ನಷ್ಟವಾಗಲಿದೆ. ಹೀಗಾಗಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ