ಕೊಪ್ಪಳ, ಸೆಪ್ಟೆಂಬರ್ 17: ಪ್ರಚೋದನಕಾರಿ ಭಾಷಣ ಮಾಡಿದ್ದ ಎಸ್ಡಿಪಿಐ (SDPI) ಜಿಲ್ಲಾ ಕಾರ್ಯದರ್ಶಿ ಇಮ್ರಾನ್ ಸೇರಿದಂತೆ ಮೂವರ ವಿರುದ್ಧ ಕಾರಟಗಿ ಪೊಲೀಸ್ ಠಾಣೆಯಲ್ಲಿ (Kartagi Police Station) ಎಫ್ಐಆರ್ ದಾಖಲಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತರಲು ನಿರ್ಧರಿಸಿರುವ ವಕ್ಫ್ ಬಿಲ್-2024 ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಸೆಪ್ಟೆಂಬರ್ 13ರಂದು ಕಾರಟಗಿ ಪಟ್ಟಣದಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು.
ಈ ಪ್ರತಿಭಟನೆಯಲ್ಲಿ ಭಾಷಣ ಮಾಡಿದ್ದ ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಮ್ರಾನ್ ಎಂಬಾತ ಪ್ರಚೋದನಕಾರಿ ಮಾತುಗಳನ್ನು ಆಡಿದ್ದರು. ವಕ್ಫ್ ತಂಟೆಗೆ ಬಂದರೆ ನಿಮ್ಮನ್ನು ಮುಸ್ಲಿಂ ಸಮಾಜ ಮುಗಿಸುತ್ತೆ. ನೀವು ಯಾವ ಸಂತತಿಯಿಂದ ಬಂದಿದ್ದಿರೋ, ಯಾವ ದೇಶದಿಂದ ಬಂದಿದ್ದೀರೋ ಗೊತ್ತಿಲ್ಲ. ಆದರೆ, ನಿಮ್ಮ ಸಂತತಿಯನ್ನು ಮುಗಿಸಲಿಕ್ಕೆ ಮುಸ್ಲಿಂ ಸಮಾಜ ಇರುವುದು ಎನ್ನುವ ಸಂದೇಶ ಬಿಜೆಪಿಯವರಿಗೆ ನೀಡುತ್ತೇವೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಈದ್ ಮಿಲಾದ್ ಬ್ಯಾನರ್ನಲ್ಲಿ ಫ್ರೀ ಪ್ಯಾಲೆಸ್ತೇನ್ ಬರಹ: ಹಿಂದೂ ಸಂಘಟನೆಗಳ ಆಕ್ರೋಶದ ಬಳಿಕ ತೆರವು
ಸಾವರ್ಕರ ಸಂತತಿಯವರು ಬಂದರೂ ಕೂಡ ಮುಸ್ಲಿಮರ ಆಸ್ತಿಯನ್ನು ಮುಟ್ಟಲಿಕ್ಕೆ ಆಗಲ್ಲ. ನೀವು ಯಾವ ಸಂತತಿಯಿಂದ ಬಂದಿದ್ದೀರೋ ಆ ಸಂತತಿಗಳನ್ನು ಮುಗಿಸಲಿಕ್ಕೆ ಈ ಮುಸ್ಲಿಂ ಸಮುದಾಯ ಇರುವುದು. ಈ ಸ್ಪಷ್ಟ ಸಂದೇಶವನ್ನು ಬಿಜೆಪಿ ಮತ್ತು ಆರ್ಎಸ್ಎಸ್ಗೆ ನೀಡಲಿಕ್ಕೆ ಇಷ್ಟಪಡುತ್ತೇನೆ ಎಂದು ಹೇಳಿದ್ದರು.
ಎಸ್ಡಿಪಿಐ ಮುಖಂಡನ ಪ್ರಚೋಧನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ಆತನ ವಿರುದ್ಧ ಬಿಜೆಪಿ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಕಾರಟಗಿ ಮಂಡಲದ ಬಿಜೆಪಿ ಅಧ್ಯಕ್ಷ ಮಂಜುನಾಥ್ ಮಸ್ಕಿಯವರು ಇಮ್ರಾನ್ ಮತ್ತು ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:41 am, Tue, 17 September 24