ಸೆ 22ರಂದು ತುಂಗಭದ್ರಾ ಡ್ಯಾಮ್​ಗೆ ಸಿಎಂ ನೇತೃತ್ವದಲ್ಲಿ ಬಾಗಿನ ಅರ್ಪಣೆ, 108 ಜನರಿಗೆ ಸನ್ಮಾನ: ಡಿಕೆ ಶಿವಕುಮಾರ್​

ಸಚಿವ ಸಂಪುಟ ಸಭೆ ಬಳಿಕ ಕಲಬುರಗಿಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಸೆಪ್ಟಂಬರ್ 22ಕ್ಕೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಸಲ್ಲಿಕೆ ಮತ್ತು ಗಂಗಾ ಪೂಜೆ ನೆರವೇರಿಸಲಾಗುತ್ತಿದೆ. ಈ ವೇಳೆ ಕೊಪ್ಪಳ ತಾಲೂಕಿನ ತುಂಗಭದ್ರಾ ಡ್ಯಾಮ್​ನ ಕ್ರಸ್ಟ್ ಗೇಟ್ ದುರಸ್ಥಿ ಕಾರ್ಯದಲ್ಲಿ ಬಾಗಿಯಾದ 108 ಸಿಬ್ಬಂದಿಗಳಿಗೆ ಸನ್ಮಾನ ಮಾಡಲಾಗುವುದು ಎಂದಿದ್ದಾರೆ.

ಸೆ 22ರಂದು ತುಂಗಭದ್ರಾ ಡ್ಯಾಮ್​ಗೆ ಸಿಎಂ ನೇತೃತ್ವದಲ್ಲಿ ಬಾಗಿನ ಅರ್ಪಣೆ, 108 ಜನರಿಗೆ ಸನ್ಮಾನ: ಡಿಕೆ ಶಿವಕುಮಾರ್​
ಸೆ 22ರಂದು ತುಂಗಭದ್ರಾ ಡ್ಯಾಮ್​ಗೆ ಸಿಎಂ ನೇತೃತ್ವದಲ್ಲಿ ಬಾಗಿನ ಅರ್ಪಣೆ, 108 ಜನರಿಗೆ ಸನ್ಮಾನ: ಡಿಕೆ ಶಿವಕುಮಾರ್​
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಗಂಗಾಧರ​ ಬ. ಸಾಬೋಜಿ

Updated on: Sep 17, 2024 | 9:18 PM

ಕೊಪ್ಪಳ, ಸೆಪ್ಟೆಂಬರ್​ 17: ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯಕ್ಕೆ ಸೆಪ್ಟಂಬರ್ 22 ರಂದು ಗಂಗೆ ಪೂಜೆ ನೆರವೇರಿಸಿ, ಬಾಗಿನ ಸಲ್ಲಿಸುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ (DK Shivakumar) ಹೇಳಿದ್ದಾರೆ. ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ತುಂಗಭದ್ರಾ ಡ್ಯಾಮ್​ನ ಕ್ರಸ್ಟ್ ಗೇಟ್ ದುರಸ್ತಿ ಮಾಡಿ ನೀರುಳಿಸಿದ್ದೇವೆ. ಕೊಚ್ಚಿಹೋಗಿದ್ದ ಕ್ರಸ್ಟ್​ ಗೇಟ್​​ ದುರಸ್ತಿಗಾಗಿ 108 ಜನ ದುಡಿದಿದ್ದಾರೆ ಹಾಗಾಗಿ ಗಂಗಾ ಪೂಜೆ ಜೊತೆಗೆ 108 ಜನರಿಗೂ ಸನ್ಮಾನ ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

108 ಜನರಿಗೆ ಸನ್ಮಾನ

ದೇವರ ಅನುಗ್ರಹದಿಂದ ಗೇಟ್ ದುರಸ್ಥಿಯನ್ನು ಒಂದೇ ವಾರದಲ್ಲಿ ಮುಗಿಸಲಾಯಿತು. ಇದರಿಂದ ಸಾಕಷ್ಟು ಪ್ರಮಾಣದ ನೀರನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಗೇಟ್ ದುರಸ್ಥಿ ಕಾರ್ಯದಲ್ಲಿ 108 ಸಿಬ್ಬಂದಿ ಮತ್ತು ಕಾರ್ಮಿಕರು ಹಗಲಿರಳು ದುಡದಿದ್ದಾರೆ. ಅವರಿಗೆ ಸನ್ಮಾನಿಸಲಾಗುವುದು. ಜಲಾಶಯ ಬರ್ತಿಗೆ ಇನ್ನು ನಾಲ್ಕು ಟಿಎಂಸಿ ನೀರು ಬೇಕಾಗಿದ್ದು, ನೀರನ್ನು ನಿಲ್ಲಿಸಲಿಕ್ಕೆ ಹೇಳಿದ್ದೇನೆ ಎಂದರು.

ಇದನ್ನೂ ಓದಿ: ಬೀದರ್, ಕಲಬುರಗಿಯಲ್ಲಿ 7,200 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ; ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ

ಆಗಸ್ಟ್ 13 ರಂದು ಅಂದುಕೊಂಡಂತೆ ಆಗಿದ್ದರೆ, ಸಿಎಂ ಸಿದ್ದರಾಮಯ್ಯನವರು ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸುತ್ತಿದ್ದರು. ಅದಕ್ಕಾಗಿ ಎಲ್ಲಾ ತಯಾರಿ ಕೂಡ ನಡೆದಿತ್ತು. ಆದರೆ ಆಗಸ್ಟ್ 10 ರಂದು ರಾತ್ರಿ ಹನ್ನೊಂದು ಗಂಟೆ ಸಮಯದಲ್ಲಿ ಜಲಾಶಯದ 19 ನೇ ಕ್ರಸ್ಟ್​ ಗೇಟ್ ಕೊಚ್ಚಿಕೊಂಡು ಹೋಗಿತ್ತು. ಇದು ತುಂಗಭದ್ರಾ ಜಲಾಶಯದ ನೀರನ್ನೇ ನಂಬಿದ್ದ ಲಕ್ಷಾಂತರ ಜನರ ಆತಂಕ ಹೆಚ್ಚಿಸಿತ್ತು. ಆದರೆ ಹೈದ್ರಾಬಾದ್ ನಿಂದ ಬಂದಿದ್ದ ಕ್ರಸ್ಟ್​ ಗೇಟ್ ತಜ್ಞ ಕನ್ನಯ್ಯನಾಯ್ಡು ಮಾರ್ಗದರ್ಶನದಲ್ಲಿ ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯ ಆರಂಭವಾಗಿತ್ತು.

ಆಗಸ್ಟ್ 17 ರಂದು ಐದು ಎಲಿಮೆಂಟ್​ಗಳನ್ನು ಯಶಸ್ವಿಯಾಗಿ ಅಳವಡಿಸಿ, ಜಲಾಶಯದ ನೀರನ್ನು ತಕ್ಕ ಮಟ್ಟಿಗೆ ಉಳಿಸುವಲ್ಲಿ ತಂಡ ಯಶಸ್ವಿಯಾಗಿತ್ತು. ಈ ಮೊದಲು ಗೇಟ್ ದುರಸ್ಥಿಯಾಗಬೇಕಾದರೆ ಜಲಾಶಯದಲ್ಲಿದ್ದ 60ಕ್ಕೂ ಹೆಚ್ಚು ಟಿಎಂಸಿ ನೀರು ಖಾಲಿ ಮಾಡಬೇಕು ಅಂತ ಹೇಳಲಾಗಿತ್ತು. ಆದರೆ ಜಲಾಶಯದಲ್ಲಿ 71 ಟಿಎಂಸಿ ನೀರು ಇದ್ದಾಗಲೇ, ಐದು ಎಲಿಮೆಂಟ್​ಗಳನ್ನು ಯಶಸ್ವಿಯಾಗಿ ಅಳವಡಿಸಿ, ಹರಿಯುವ ನೀರನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿತ್ತು.

ಇದನ್ನೂ ಓದಿ: ಪತಿ ಕೊಲೆ ಕೇಸ್​ ತನಿಖೆ ಬಗ್ಗೆ ಸಿಎಂಗೆ ಮನವಿ ಮಾಡಿದ ಪತ್ನಿ: ಪರಿಶೀಲಿಸುವಂತೆ ಎಸ್ಪಿಗೆ ಸಿದ್ದರಾಮಯ್ಯ ಸೂಚನೆ

ಇನ್ನು ಗೇಟ್ ದುರಸ್ಥಿ ನಂತರ, ಮತ್ತೆ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂತು. ಕೇವಲ ಹದಿನೈದೇ ದಿನದಲ್ಲಿ ಡ್ಯಾಂ ಮತ್ತೊಮ್ಮೆ ಭರ್ತಿಯಾಗಿದೆ. ಒಟ್ಟು 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 101.788 ಟಿಎಂಸಿ ನೀರು ಸಂಗ್ರಹ ಮಾಡಲಾಗಿದೆ. ನೀರನ ಒಳಹರಿವು ಇದ್ದರು ಕೂಡ ಸಿಬ್ಬಂದಿ ನೀರನ್ನು ನಿಲ್ಲಿಸದೇ ಹೊರ ಬಿಟ್ಟಿದ್ದರು. ಇದೀಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ನೀರನ್ನು ನಿಲ್ಲಿಸಲು ಹೇಳಿದ್ದರಿಂದ, ಉಳಿದ ನಾಲ್ಕು ಟಿಎಂಸಿ ನೀರನ್ನು ಕೂಡ ಸಂಗ್ರಹಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.